ವಿಶ್ವ ಫುಟ್ಬಾಲ್‌ನಲ್ಲಿ ಅಚ್ಚಳಿಯದೇ ಉಳಿದಿರುವ ಕೆಲವು ಮಹತ್ವದ ಘಟನೆಗಳನ್ನು ಈ ಲೇಖನವು ನೆನಪಿಸುತ್ತದೆ. ಮಾರಡೋನಾ 'ಹ್ಯಾಂಡ್ ಆಫ್ ಗಾಡ್', ಜಿಡಾನ್ ಹೆಡ್‌ಬಟ್, ಮೆಸ್ಸಿ ಏಕಾಂಗಿ ಹೋರಾಟ, ರೊನಾಲ್ಡೊ ಬೈಸಿಕಲ್ ಕಿಕ್ - ಇವೆಲ್ಲವೂ ಫುಟ್ಬಾಲ್ ಇತಿಹಾಸದಲ್ಲಿ ಸ್ಮರಣೀಯ ಕ್ಷಣಗಳಾಗಿವೆ.

ಬೆಂಗಳೂರು: ಫುಟ್‌ಬಾಲ್ ಒಂದು ಕ್ರೀಡೆಯಷ್ಟೇ ಅಲ್ಲ, ಅದು ಭಾವನೆಗಳ ಸಮ್ಮಿಲನ, ಹಲವಾರು ಅವಿಸ್ಮರಣೀಯ ಕ್ಷಣಗಳಿಗೆ ಈ ಕ್ರೀಡೆ ಸಾಕ್ಷಿಯಾಗಿದೆ. ವಿಶ್ವದಾದ್ಯಂತ ಕೋಟ್ಯಾಂತರ ಜನರನ್ನು ಒಗ್ಗೂಡಿಸುವ ಈ ಕ್ರೀಡೆಯು ಅಭಿಮಾನಿಗಳ ಎದೆಯಲ್ಲಿ ಅಚ್ಚಳಿಯದೇ ಉಳಿಯುವಂತ ಸನ್ನಿವೇಶಗಳನ್ನು ಉಣಬಡಿಸಿದೆ. ಅವು ಶಾಶ್ವತವಾಗಿ ಫುಟ್‌ಬಾಲ್ ಅಭಿಮಾನಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿವೆ. ಬನ್ನಿ, ನಾವಿಂದು ವಿಶ್ವವು ಎಂದಿಗೂ ಮರೆಯದ ಕೆಲವು ಎವರ್‌ಗ್ರೀನ್ ಫುಟ್‌ಬಾಲ್ ಕ್ಷಣಗಳನ್ನು ನೆನಪಿಸಿಕೊಳ್ಳೋಣ.

1. ಡಿಯಾಗೋ ಮಾರಡೋನಾದ "ಹ್ಯಾಂಡ್ ಆಫ್ ಗಾಡ್":

1986ರ ಫಿಫಾ ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜೆಂಟೀನಾದ ಡಿಯಾಗೋ ಮಾರಡೋನಾ ಇಂಗ್ಲೆಂಡ್ ವಿರುದ್ಧ ತಮ್ಮ ಕೈಯಿಂದ ಗೋಲು ಹೊಡೆದ ಕ್ಷಣವು ಫುಟ್‌ಬಾಲ್ ಇತಿಹಾಸದಲ್ಲಿ ಅತ್ಯಂತ ವಿವಾದಾಸ್ಪದ ಮತ್ತು ಮರೆಯಲಾಗದ ಕ್ಷಣಗಳಲ್ಲಿ ಒಂದಾಗಿಸಿದೆ. ಈ ಗೋಲನ್ನು "ಹ್ಯಾಂಡ್ ಆಫ್ ಗಾಡ್" ಎಂದು ಕರೆದ ಮಾರಡೋನಾ, ಆ ಪಂದ್ಯದಲ್ಲೇ ತಮ್ಮ ಎರಡನೇ ಗೋಲಿನ ಮೂಲಕ "ಗೋಲ್ ಆಫ್ ದಿ ಸೆಂಚುರಿ"ಯನ್ನು ಗಳಿಸಿದರು. ಒಂಟಿಯಾಗಿ ಐದು ಆಟಗಾರರನ್ನು ತಪ್ಪಿಸಿ ಗೋಲು ಹೊಡೆದ ಆ ಕ್ಷಣವು ಇಂದಿಗೂ ಫುಟ್‌ಬಾಲ್ ಮ್ಯಾಜಿಕ್ ಸಿಂಬಲ್ ಎನಿಸಿಕೊಂಡಿದೆ.

2. ಜಿನೆದಿನ್ ಜಿಡಾನ್‌ರ ಹೆಡ್‌ಬಟ್ :

2006ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಫ್ರಾನ್ಸ್‌ನ ಜಿನೆದಿನ್ ಜಿಡಾನ್ ಇಟಲಿಯ ಮಾರ್ಕೊ ಮೇಟರಾಜಿಗೆ ಎದೆಗೆ ತಲೆಯಿಂದ ಹೊಡೆದ ಕ್ಷಣವು ಫುಟ್‌ಬಾಲ್ ಇತಿಹಾಸದಲ್ಲಿ ಒಂದು ದುರಂತ ಕ್ಷಣ ಎನಿಸಿಕೊಂಡಿದೆ. ಜಿಡಾನ್‌ರ ಕೊನೆಯ ವಿಶ್ವಕಪ್ ಪಂದ್ಯದಲ್ಲಿ ಈ ಘಟನೆಯು ಫ್ರಾನ್ಸ್‌ಗೆ ಸೋಲಿಗೆ ಕಾರಣವಾಯಿತಾದರೂ, ಇದು ಜಿಡಾನ್‌ರ ಭಾವನಾತ್ಮಕ ಸ್ವಭಾವವನ್ನು ತೋರಿಸಿತು. ಈ ಕ್ಷಣವು ಇಂದಿಗೂ ಫುಟ್‌ಬಾಲ್ ಅಭಿಮಾನಿಗಳ ನೆನಪಿನಲ್ಲಿ ಉಳಿದಿದೆ.

3. ಲಿವರ್‌ಪೂಲ್‌ನ ಗ್ರೇಟ್‌ ಕಮ್‌ಬ್ಯಾಕ್

2005ರ UEFA ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ ಲಿವರ್‌ಪೂಲ್ ಎಸಿ ಮಿಲಾನ್ ವಿರುದ್ಧ 3-0 ಗೋಲುಗಳಿಂದ ಹಿಂದೆ ಇದ್ದರೂ, ದ್ವಿತಿಯಾರ್ಧದಲ್ಲಿ ಅದ್ಭುತವಾಗಿ ಮೂರು ಗೋಲುಗಳನ್ನು ಬಾರಿಸಿ ಪಂದ್ಯವನ್ನು ಟೈ ಮಾಡಿತು. ಇದನ್ನು "ಮಿರಾಕಲ್ ಆಫ್ ಇಸ್ತಾಂಬುಲ್" ಎಂದು ಕರೆಯಲಾಯಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಲಿವರ್‌ಪೂಲ್‌ನ ಗೆಲುವು ಫುಟ್‌ಬಾಲ್‌ನಲ್ಲಿ ಕೊನೆಯ ಕ್ಷಣದವರೆಗೂ ಛಲಬಿಡದೇ ಹೋರಾಡಬೇಕು ಎನ್ನುವ ಚೈತನ್ಯವನ್ನು ತೋರಿಸಿತು. ಈ ಕ್ಷಣವು ಫುಟ್‌ಬಾಲ್ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯುವ ಕ್ಷಣಗಳಲ್ಲಿ ಒಂದೆನಿಸಿದೆ.

4. ಪೀಲೆ ಮೊದಲ ವಿಶ್ವಕಪ್ ಗೆಲುವು:

17 ವರ್ಷದ ಪೀಲೆ 1958ರ ಫಿಫಾ ವಿಶ್ವಕಪ್‌ನಲ್ಲಿ ಬ್ರೆಜಿಲ್‌ಗೆ ತಮ್ಮ ಮೊದಲ ವಿಶ್ವಕಪ್ ಗೆಲುವನ್ನು ತಂದುಕೊಟ್ಟ ಕ್ಷಣವು ಶಾಶ್ವತವಾಗಿದೆ. ಫೈನಲ್‌ನಲ್ಲಿ ಸ್ವೀಡನ್ ವಿರುದ್ಧ ಎರಡು ಗೋಲುಗಳನ್ನು ಹೊಡೆದ ಪೀಲೆಯ ಆಟವು ಫುಟ್‌ಬಾಲ್‌ಗೆ ಒಂದು ಹೊಸ ತಾರೆಯ ಉಗಮವನ್ನು ಸೂಚಿಸಿತು. ಆ ಕ್ಷಣದಿಂದ ಪೀಲೆ ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದರು.

5. ಕೋಪಾ ಡೆಲ್ ರೇನಲ್ಲಿ ಮೆಸ್ಸಿಯ ಏಕಾಂಗಿ ಹೋರಾಟ:

2007ರ ಕೋಪಾ ಡೆಲ್ ರೇ ಸೆಮಿಫೈನಲ್‌ನಲ್ಲಿ ಬಾರ್ಸಿಲೋನಾದ ಲಿಯೋನೆಲ್ ಮೆಸ್ಸಿ ಗೆಟಾಫೆ ವಿರುದ್ಧ ಒಂಟಿಯಾಗಿ ಆಡಿದ ಆಟವು ಮಾರಡೋನಾರ "ಗೋಲ್ ಆಫ್ ದಿ ಸೆಂಚುರಿ"ಯನ್ನು ನೆನಪಿಸುವಂತಿತ್ತು. ಅರ್ಧದ ಕೋರ್ಟ್‌ನಿಂದ ಚೆಂಡನ್ನು ಒಯ್ದು, ಐದು ಆಟಗಾರರನ್ನು ವಂಚಿಸಿ ಗೋಲು ಹೊಡೆದ ಮೆಸ್ಸಿಯ ಈ ಕ್ಷಣವು ಅವರ ಪ್ರತಿಭೆಯನ್ನು ಅನಾವರಣ ಮಾಡಿತು. ಇದರ ಜತೆಗೆ ಫುಟ್ಬಾಲ್ ಇತಿಹಾಸದ ಎವರ್‌ಗ್ರೀನ್ ಕ್ಷಣಗಳಲ್ಲಿ ಒಂದು ಎನಿಸಿಕೊಂಡಿತು.

6. ಕ್ರಿಸ್ಟಿಯಾನೋ ರೊನಾಲ್ಡೊರ ಬೈಸಿಕಲ್ ಕಿಕ್:

2018ರ UEFA ಚಾಂಪಿಯನ್ಸ್ ಲೀಗ್ ಕ್ವಾರ್ಟರ್ ಫೈನಲ್‌ನಲ್ಲಿ ರಿಯಲ್ ಮ್ಯಾಡ್ರಿಡ್‌ನ ಕ್ರಿಸ್ಟಿಯಾನೋ ರೊನಾಲ್ಡೊ ಯುವೆಂಟಸ್ ವಿರುದ್ಧ ಬೈಸಿಕಲ್ ಕಿಕ್‌ನಿಂದ ಗೋಲು ಹೊಡೆದ ಕ್ಷಣವು ಫುಟ್‌ಬಾಲ್‌ನ ಸೌಂದರ್ಯವನ್ನು ತೋರಿಸಿತು. ಈ ಗೋಲು ಯುವೆಂಟಸ್ ಅಭಿಮಾನಿಗಳಿಂದಲೂ ಸ್ಟ್ಯಾಂಡಿಂಗ್ ಒವೇಶನ್ ಪಡೆಯಿತು.