ಎಎಫ್‌ಸಿ ಚಾಂಪಿಯನ್ಸ್ ಲೀಗ್-2ರಲ್ಲಿ ಎಫ್‌ಸಿ ಗೋವಾ ವಿರುದ್ಧ ಆಡಬೇಕಿದ್ದ ಅಲ್-ನಸ್ರ್ ತಂಡದ ಖ್ಯಾತ ಫುಟ್ಬಾಲ್ ಪಟು ಕ್ರಿಸ್ಟಿಯಾನೋ ರೊನಾಲ್ಡ್ ಅವರ ಭಾರತ ಭೇಟಿ ರದ್ದಾಗಿದೆ. ಕಾರ್ಯದೊತ್ತಡ ತಗ್ಗಿಸುವ ಮತ್ತು ಫಿಟ್ನೆಸ್ ಕಡೆಗಿನ ಗಮನದಿಂದ ಅವರು ಈ ಪಂದ್ಯದಿಂದ ದೂರ ಉಳಿದಿದ್ದಾರೆ.
ಮಡಗಾವ್: ಎಎಫ್‌ಸಿ ಚಾಂಪಿಯನ್ಸ್ ಲೀಗ್ -2 ಫುಟ್ಬಾಲ್ ಟೂರ್ನಿಯಲ್ಲಿ ಮಂಗಳವಾರ ಎಫ್‌ಸಿ ಗೋವಾ ಫುಟ್ಬಾಲ್ ತಂಡದ ವಿರುದ್ದ ಸೌದಿ ಅರೇಬಿಯಾದ ಅಲ್-ನಸ್ರ್ ಕ್ಲಬ್ ಪರ ಆಡಬೇಕಿದ್ದ ಖ್ಯಾತ ಫುಟ್ಬಾಲ್ ಪಟು ಕ್ರಿಸ್ಟಿಯಾನೋ ರೊನಾಲ್ಡ್ ಅವರ ಭಾರತ ಭೇಟಿ ರದ್ದುಗೊಂಡಿದೆ. ಸೋಮವಾರ ಭಾರತಕ್ಕೆ ಆಗಮಿಸಿದ ಅಲ್ ನಸ್ರ್ ತಂಡದಲ್ಲಿ ರೊನಾಲ್ಡ್ ಇರಲಿಲ್ಲ.
ಪೋರ್ಚುಗಲ್‌ನ ರೊನಾಲ್ಡ್ ಅವರು ತಮ್ಮ ಸೌದಿ ಕ್ಲಬ್ ತಂಡದೊಂದಿಗೆ ಭಾರತಕ್ಕೆ ಪ್ರವಾಸ ಕೈಗೊಳ್ಳಬೇಕಿತ್ತು.ಆದರೆ ಒಪ್ಪಂದದ ಪ್ರಕಾರ ಪಂದ್ಯ ಆಯ್ಕೆ ಮಾಡಿ ಕೊಳ್ಳುವ ಅಧಿಕಾರ ರೊನಾಲ್ಡೊ ಅವರಿಗಿರುವ ಕಾರಣ, ಅವರು ಗೋವಾ ವಿರುದ್ಧ ಪಂದ್ಯ ಆಡಲು ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಮು೦ದಿನ ವರ್ಷ ನಡೆಯಲಿರುವ ಫಿಫಾ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ 40 ವರ್ಷದ ರೊನಾಲ್ಡ್ ಫಿಟ್ನೆಸ್‌ಗೆ ಹೆಚ್ಚಿನ ಒತ್ತು ಕೊಡುತ್ತಿದ್ದು ಕಾರ್ಯದೊತ್ತಡ ತಗ್ಗಿಸುವ ನಿಟ್ಟಿನಲ್ಲಿ ಕೆಲ ಪಂದ್ಯಗಳಿಂದ ದೂರ ಉಳಿಯುತ್ತಿದ್ದಾರೆ.
ಪೋರ್ಚುಗಲ್ ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೊ ಅವರನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬೇಕು ಎಂದು ಕಾತರದಿಂದ ಕಾಯುತ್ತಿದ್ದ ಭಾರತದ ಫುಟ್ಬಾಲ್ ಅಭಿಮಾನಿಗಳಿಗೆ ಇದೀಗ ನಿರಾಸೆ ಎದುರಾಗಿದೆ.
ಅಂಡರ್-20 ಫಿಫಾ ವಿಶ್ವಕಪ್ ಗೆದ್ದ ಮೊರಾಕ್ಕೊ
ಸ್ಯಾಂಟಿಯಾಗೊ: ಅಂಡರ್ -20 ಫಿಫಾ ಫುಟ್ಬಾಲ್ ವಿಶ್ವಕಪ್‌ನ ಫೈನಲ್‌ನಲ್ಲಿ ಅರ್ಜೆಂಟೀನಾವನ್ನು ಸೋಲಿಸುವ ಮೂಲಕ ಮೊರಾಕ್ಕೊ ಚೊಚ್ಚಲ ಬಾರಿ ಚಾಂಪಿ ಯನ್ ಆಗಿ ಹೊರಹೊಮ್ಮಿದೆ. ಪಂದ್ಯದಲ್ಲಿ ಮೊರಾಕ್ಕೊ 2-0 ಗೋಲುಗಳ ಅಂತರದಲ್ಲಿ ಜಯಗಳಿಸಿತು. ಮೊರಾಕ್ಕೋ ಪರ ಸ್ಟ್ರೈಕರ್ ಯಾಸಿರ್ ಝಬ್ರಿನಿ ಪಂದ್ಯದ 12 ಮತ್ತು 29ನೇ ನಿಮಿಷಗಳಲ್ಲಿ 2 ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಈ ಮೂಲಕ ಘಾನಾ ಬಳಿಕ ಅಂಡರ್ -20 ವಿಶ್ವಕಪ್ ಗೆದ್ದ ಆಫ್ರಿಕಾದ 2ನೇ ದೇಶವಾಗಿ ಮೊರಕ್ಕೊ ಹೊರಹೊಮ್ಮಿದೆ.
ಟೂರ್ನಿಯಲ್ಲಿ ಮೊರಾಕ್ಕೊ ತಂಡವು ಸ್ಪೇನ್, ಬ್ರೆಜಿಲ್, ಮೆಕ್ಸಿಕೋ ತಂಡಗಳನ್ನು ಹಿಂದಿಕ್ಕಿ ಫೈನಲ್‌ಗೇರಿತ್ತು. ಮತ್ತೊಂದೆಡೆ 7ನೇ ಟ್ರೋಫಿ ಮೇಲೆ ಕಣ್ಣಿಟ್ಟಿದ ಅರ್ಜೆಂಟೀನಾ, ಟೂರ್ನಿಯಲ್ಲಿ ಮೊದಲ ಸೋಲು ಕಂಡಿತು.
ಇಸ್ರೇಲ್: ಫುಟ್ಬಾಲ್ ಪಂದ್ಯದ ವೇಳೆ ಹೊಗೆ ಗ್ರೆನೇಡ್ ಸ್ಫೋಟ
ಟೆಲ್ ಅವಿವ್: ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿ ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳು ಹೊಗೆ ಗ್ರೆನೇಡ್‌ಗಳನ್ನು ಸಿಡಿಸಿದ ಘಟನೆ ಭಾನುವಾರ ನಡೆದಿದೆ. ಘಟನೆಯಲ್ಲಿ 40ಕ್ಕೂ ಹೆಚ್ಚು ಅಭಿಮಾನಿಗಳು ಗಾಯಗೊಂಡಿದ್ದು, 12ಕ್ಕೂ ಹೆಚ್ಚಿನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಟೆಲ್ ಅವಿವ್ ಫುಟ್ಬಾಲ್‌ನ ಬದ್ಧ ವೈರಿಗಳಾದ ಮಕ್ಕಾಬಿ ಮತ್ತು ಹಪೋಝ್ ಕ್ಲಬ್‌ಗಳ ನಡುವೆ ಬ್ಲೂ ಫೀಲ್ಡ್ ಕ್ರೀಡಾಂಗಣದಲ್ಲಿ ಪಂದ್ಯದ ವೇಳೆ ಅಭಿಮಾನಿಗಳು ಮೈದಾನದ ಮೇಲೆ ಗುಲಾಬಿ ಮತ್ತು ಬೂದು ಬಣ್ಣದ ಹೊಗೆ ಗ್ರೆನೇಡ್‌ಗಳು ಬಿಸಾಡಿದ್ದಾರೆ. ಜೊತೆಗೆ ಸ್ಫೋಟಕಗಳನ್ನು ಸಿಡಿಸಿದ್ದಾರೆ. ಈ ವೇಳೆ ಮಾರಾಮಾರಿ ಸಂಭವಿಸಿದೆ. ಇದರಿಂದ ಹಲವು ಅಭಿಮಾನಿಗಳು ಗಾಯಗೊಂಡಿದ್ದರು. ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪಂದ್ಯವನ್ನು ಅರ್ಧದಲ್ಲಿಯೇ ನಿಲ್ಲಿಸಿದ್ದಾರೆ.
