ಅಂತರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಲಿಯೋನೆಲ್ ಮೆಸ್ಸಿ ಅತಿ ಹೆಚ್ಚು ಅಸಿಸ್ಟ್‌ಗಳ (60) ವಿಶ್ವದಾಖಲೆ ನಿರ್ಮಿಸಿದ್ದಾರೆ. ಇದೇ ವೇಳೆ, ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅತಿ ಹೆಚ್ಚು ಗೋಲು (41) ಗಳಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ನ್ಯೂಜೆರ್ಸಿ: ಅಂತರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತಿ ಹೆಚ್ಚು ಅಸಿಸ್ಟ್‌ಗಳನ್ನು ನೀಡಿದ ಆಟಗಾರ ಎಂಬ ದಾಖಲೆಯನ್ನು ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ತಮ್ಮದಾಗಿಸಿಕೊಂಡಿದ್ದಾರೆ. ಪೋರ್ಟೊರಿಕೊ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಅರ್ಜೆಂಟೀನಾ 6-0 ಅಂತರದಲ್ಲಿ ಗೆದ್ದಾಗ, ಎರಡು ಅಸಿಸ್ಟ್‌ಗಳನ್ನು ನೀಡಿ ಮೆಸ್ಸಿ ವಿಶ್ವದಾಖಲೆ ನಿರ್ಮಿಸಿದರು. ಇದರೊಂದಿಗೆ ಅಂತರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಮೆಸ್ಸಿ ನೀಡಿದ ಅಸಿಸ್ಟ್‌ಗಳ ಸಂಖ್ಯೆ 60ಕ್ಕೆ ಏರಿದೆ. 58 ಅಸಿಸ್ಟ್‌ಗಳನ್ನು ನೀಡಿರುವ ಬ್ರೆಜಿಲ್ ಆಟಗಾರ ನೇಮರ್ ಮತ್ತು ಮಾಜಿ ಅಮೆರಿಕನ್ ಆಟಗಾರ ಲ್ಯಾಂಡನ್ ಡೊನೊವನ್ ಅವರನ್ನು ಲಿಯೋನೆಲ್ ಮೆಸ್ಸಿ ಹಿಂದಿಕ್ಕಿದ್ದಾರೆ.
ರೊನಾಲ್ಡೊ ಕೂಡ ದಾಖಲೆ
ಹಂಗೇರಿ ವಿರುದ್ಧದ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಪೋರ್ಚುಗಲ್ 2-2 ಗೋಲುಗಳಿಂದ ಡ್ರಾ ಮಾಡಿಕೊಂಡರೂ, ಎರಡು ಗೋಲು ಗಳಿಸಿದ ಸೂಪರ್‌ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಹಂಗೇರಿ ವಿರುದ್ಧ ಎರಡು ಗೋಲು ಗಳಿಸಿದ ರೊನಾಲ್ಡೊ, ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ತಮ್ಮ ಗೋಲುಗಳ ಸಂಖ್ಯೆಯನ್ನು 41ಕ್ಕೆ ಏರಿಸಿದರು. 39 ಗೋಲುಗಳನ್ನು ಗಳಿಸಿದ್ದ ಗ್ವಾಟೆಮಾಲಾದ ಕಾರ್ಲೋಸ್ ರೂಯಿಜ್ ಅವರನ್ನು ರೊನಾಲ್ಡೊ ಇಂದು ಹಿಂದಿಕ್ಕಿದರು. ಪೋರ್ಚುಗಲ್ ಪರ 51 ವಿಶ್ವಕಪ್ ಅರ್ಹತಾ ಪಂದ್ಯಗಳಿಂದ ರೊನಾಲ್ಡೊ 41 ಗೋಲುಗಳನ್ನು ಗಳಿಸಿದ್ದಾರೆ. ರೂಯಿಜ್ 47 ಪಂದ್ಯಗಳಿಂದ 39 ಗೋಲುಗಳನ್ನು ಗಳಿಸಿದ್ದರು. ಅರ್ಜೆಂಟೀನಾ ಪರ 72 ವಿಶ್ವಕಪ್ ಅರ್ಹತಾ ಪಂದ್ಯಗಳಿಂದ 36 ಗೋಲುಗಳನ್ನು ಗಳಿಸಿರುವ ಲಿಯೋನೆಲ್ ಮೆಸ್ಸಿ ಮೂರನೇ ಸ್ಥಾನದಲ್ಲಿದ್ದಾರೆ.
8ನೇ ನಿಮಿಷದಲ್ಲಿ ಗೋಲು ಬಿಟ್ಟುಕೊಟ್ಟ ಪೋರ್ಚುಗಲ್, 22ನೇ ನಿಮಿಷದಲ್ಲಿ ರೊನಾಲ್ಡೊ ಅವರ ಗೋಲಿನಿಂದ ಸಮಬಲ ಸಾಧಿಸಿತು. ಮೊದಲಾರ್ಧದ ಇಂಜುರಿ ಟೈಮ್‌ನಲ್ಲಿ ಎರಡನೇ ಗೋಲು ಗಳಿಸಿ ರೊನಾಲ್ಡೊ ಪೋರ್ಚುಗಲ್‌ಗೆ ಮುನ್ನಡೆ ತಂದುಕೊಟ್ಟರು. ಇದು ರೊನಾಲ್ಡೊ ಅವರ ವೃತ್ತಿಪರ ವೃತ್ತಿಜೀವನದ 948ನೇ ಗೋಲು. ಆದರೆ, ದ್ವಿತೀಯಾರ್ಧದ ಇಂಜುರಿ ಟೈಮ್‌ನಲ್ಲಿ ಗೋಲು ಗಳಿಸಿದ ಹಂಗೇರಿ, ಪೋರ್ಚುಗಲ್ ಗೆಲುವಿನ ಅಸೆಗೆ ತಣ್ಣೀರೆರಚಿತು.
ರೆಜಿಲ್ ಅನ್ನು ಮಣಿಸಿ ಇತಿಹಾಸ ಬರೆದ ಜಪಾನ್
ಫುಟ್ಬಾಲ್ ಜಗತ್ತನ್ನು ಬೆಚ್ಚಿಬೀಳಿಸುವಂತೆ ಏಷ್ಯಾದ ಪವರ್‌ಹೌಸ್ ಜಪಾನ್ ಐತಿಹಾಸಿಕ ಸಾಧನೆ ಮಾಡಿದೆ. ವಿಶ್ವ ಫುಟ್ಬಾಲ್‌ನ ಬಲಿಷ್ಠ ತಂಡ ಬ್ರೆಜಿಲ್ ಅನ್ನು ಸೋಲಿಸಿ ಜಪಾನ್ ಮೊದಲ ಬಾರಿಗೆ ಜಯಭೇರಿ ಬಾರಿಸಿದೆ. ಮೊದಲಾರ್ಧದಲ್ಲಿ ಸುಲಭ ಜಯದತ್ತ ಸಾಗುತ್ತಿದ್ದ ಬ್ರೆಜಿಲ್ ತಂಡವನ್ನು ದ್ವಿತೀಯಾರ್ಧದಲ್ಲಿ ತನ್ನ ಹೋರಾಟದ ಮನೋಭಾವದಿಂದ ಮಣಿಸಿ ಜಪಾನ್ ಅದ್ಭುತ ಜಯ ಸಾಧಿಸಿತು. ಅಂತರರಾಷ್ಟ್ರೀಯ ಸೌಹಾರ್ದ ಫುಟ್ಬಾಲ್ ಪಂದ್ಯದಲ್ಲಿ ಜಪಾನ್, ಬ್ರೆಜಿಲ್ ವಿರುದ್ಧ 3-2 ಗೋಲುಗಳಿಂದ ಗೆಲುವು ಸಾಧಿಸಿತು. ಐದು ಬಾರಿ ವಿಶ್ವ ಚಾಂಪಿಯನ್ ಆದ ಬ್ರೆಜಿಲ್ ಮೊದಲಾರ್ಧದಲ್ಲಿ ಎರಡು ಗೋಲುಗಳಿಂದ ಮುನ್ನಡೆ ಸಾಧಿಸಿದಾಗ, ಸುಲಭ ಜಯ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ದ್ವಿತೀಯಾರ್ಧದಲ್ಲಿ 3 ಭರ್ಜರಿ ಗೋಲುಗಳೊಂದಿಗೆ ಬ್ರೆಜಿಲ್ ಪಡೆಗೆ ಶಾಕ್ ನೀಡಿತು. ಈ ರೋಚಕ ಗೆಲುವು ಜಪಾನ್‌ನಾದ್ಯಂತ ಭಾರಿ ಸಂಭ್ರಮಾಚರಣೆಗೆ ಕಾರಣವಾಗಿದೆ.
ಮೊದಲಾರ್ಧದಲ್ಲಿ ಬ್ರೆಜಿಲ್‌ನ ಸಂಪೂರ್ಣ ಪ್ರಾಬಲ್ಯ
ಜಪಾನ್ ರಾಜಧಾನಿ ಟೋಕಿಯೊದ ಅಜಿನೊಮೊಟೊ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲಾರ್ಧವು ಬ್ರೆಜಿಲ್‌ನ ಸಂಪೂರ್ಣ ಪ್ರಾಬಲ್ಯಕ್ಕೆ ಸಾಕ್ಷಿಯಾಯಿತು. 6 ನಿಮಿಷಗಳ ಅಂತರದಲ್ಲಿ 2 ಬಾರಿ ಜಪಾನ್ ಗೋಲ್‌ಪೋಸ್ಟ್‌ಗೆ ಚೆಂಡನ್ನು ಕಳುಹಿಸಿದ ಬ್ರೆಜಿಲ್, ಸುಲಭ ಜಯ ಗಳಿಸುವ ನಿರೀಕ್ಷೆಯಲ್ಲಿತ್ತು. 26ನೇ ನಿಮಿಷದಲ್ಲಿ ಹೆನ್ರಿಕ್ ಮತ್ತು 32ನೇ ನಿಮಿಷದಲ್ಲಿ ಗೇಬ್ರಿಯಲ್ ಮಾರ್ಟಿನೆಲ್ಲಿ ಗೋಲು ಗಳಿಸಿ ಸಾಂಬಾ ತಾಳಕ್ಕೆ ಮೆರುಗು ನೀಡಿದರು. ನಂತರದ 13 ನಿಮಿಷಗಳ ಕಾಲವೂ ಬ್ರೆಜಿಲ್‌ನ ಆಕ್ರಮಣಕಾರಿ ಆಟವೇ ಮೈದಾನದಲ್ಲಿ ಕಂಡುಬಂತು.
ಕಥೆ ಬದಲಾದ ದ್ವಿತೀಯಾರ್ಧ
ಆದರೆ, ದ್ವಿತೀಯಾರ್ಧದಲ್ಲಿ ಕಥೆಯೇ ಬದಲಾಯಿತು. ಜಪಾನ್‌ನ ಸರ್ವಶಕ್ತಿಯ ಪ್ರತಿದಾಳಿಗೆ ಬ್ರೆಜಿಲ್ ದಿಗ್ಭ್ರಮೆಗೊಂಡಿತು. 52ನೇ ನಿಮಿಷದಲ್ಲಿ ತಕುಮಿ ಮಿನಾಮಿನೊ ಮೊದಲ ಗೋಲು ಗಳಿಸಿ ಬ್ರೆಜಿಲ್‌ಗೆ ಆಘಾತ ನೀಡಿದರು. 10 ನಿಮಿಷಗಳ ನಂತರ, 62ನೇ ನಿಮಿಷದಲ್ಲಿ ಕೈಟೊ ನಕಾಮುರಾ ಸಮಬಲದ ಗೋಲು ಗಳಿಸಿದಾಗ ಪಂದ್ಯವು ರೋಚಕವಾಯಿತು. ಫೆಯೆನೂರ್ಡ್ ಆಟಗಾರ ಅಯಾಸೆ ಉಯೆದಾ ಅವರು ಸಾಂಬಾ ತಾಳಕ್ಕೆ ಕೊನೆಯ ಮೊಳೆ ಹೊಡೆದರು. 71ನೇ ನಿಮಿಷದಲ್ಲಿ ಅಯಾಸೆ ಉಯೆದಾ ಗೋಲು ಗಳಿಸಿ ಕ್ರೀಡಾಂಗಣವನ್ನು ಹುಚ್ಚೆಬ್ಬಿಸಿ ಜಪಾನ್‌ನ ಐತಿಹಾಸಿಕ ಗೆಲುವಿಗೆ ಕಾರಣರಾದರು.
