100+ ಗೋಲು ಬಾರಿಸಿ ಅಪರೂಪದ ದಾಖಲೆ ಬರೆದ ಕ್ರಿಸ್ಟಿಯಾನೋ ರೋನಾಲ್ಡೋ
ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೋ ರೋನಾಲ್ಡೋ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳಲ್ಲಿ 100+ ಗೋಲು ಬಾರಿಸಿ ಅಪರೂಪದ ದಾಖಲೆ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಸ್ಟಾಕ್ಹೋಮ್(ಸೆ.11): ಪೋರ್ಚುಗಲ್‌ನ ತಾರಾ ಫುಟ್ಬಾಲಿಗ ಕ್ರಿಸ್ಟಿಯಾನೋ ರೋನಾಲ್ಡೋ ಅಪರೂಪದ ದಾಖಲೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ 100ಕ್ಕೂ ಹೆಚ್ಚು ಗೋಲುಗಳಿಸಿದ ವಿಶ್ವದ 2ನೇ ಹಾಗೂ ಯುರೋಪ್‌ನ ಮೊದಲ ಫುಟ್ಬಾಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯುಇಎಫ್‌ಎ ರಾಷ್ಟ್ರೀಯ ಲೀಗ್ ಪಂದ್ಯದಲ್ಲಿ ರೋನಾಲ್ಡೋ ಈ ಸಾಧನೆ ಮಾಡಿದ್ದಾರೆ.
ಯುಇಎಫ್‌ಎ ರಾಷ್ಟ್ರೀಯ ಲೀಗ್‌ನ ಪೋರ್ಚುಗಲ್ ಮತ್ತು ಸ್ವೀಡನ್ ನಡುವಿನ ಪಂದ್ಯದಲ್ಲಿ ಪೋರ್ಚುಗಲ್ 2-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. ಪೋರ್ಚುಗಲ್ ಪರ ರೋನಾಲ್ಡೋ (45 ಹಾಗೂ 72 ನೇ ನಿಮಿಷದಲ್ಲಿ) ಗೋಲು ಬಾರಿಸಿದರು. ಇದರೊಂದಿಗೆ ಅಂ.ರಾ. ಫುಟ್ಬಾಲ್‌ನಲ್ಲಿ ರೋನಾಲ್ಡೋ 101 ಗೋಲುಗಳಿಸಿದ ಸಾಧನೆ ಮಾಡಿದರು.
35 ವರ್ಷದ ಕ್ರಿಸ್ಟಿಯಾನೋ ರೋನಾಲ್ಡೋ ಈ ತನಕ 165 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಯುವೆಂಟಸ್ ತಂಡದ ಸ್ಟಾರ್ ಆಟಗಾರ ಹಾಗೂ ಪೋರ್ಚುಗಲ್ ತಂಡದ ನಾಯಕರಾಗಿರುವ ರೋನಾಲ್ಡೋ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದೀಗ ರೋನಾಲ್ಡೋ ಇರಾನಿನ ದಿಗ್ಗಜ ಫುಟ್ಬಾಲಿಗ ಅಲಿ ದೇಯಿ ಅವರಿಗಿಂತ 8 ಗೋಲು ಹಿಂದಿದ್ದಾರೆ. ಅಲಿ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ 109 ಗೋಲು ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ.
ಬಾರ್ಸಿಲೋನಾ ಕ್ಲಬ್ ಬಿಡಲು ಲಿಯೋನೆಲ್ ಮೆಸ್ಸಿ ಸಿದ್ಧ
2003ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಪಾದಾರ್ಪಣೆ ಮಾಡಿದ ಕ್ರಿಸ್ಟಿಯಾನೋ ರೋನಾಲ್ಡೋ ಜಗತ್ತಿನ ಶ್ರೇಷ್ಠ ಫುಟ್ಬಾಲ್ ಆಟಗಾರರಾಗಿ ಬೆಳೆದು ನಿಂತಿದ್ದಾರೆ. ರೋನಾಲ್ಡೋ ತಮ್ಮ 19ನೇ ವಯಸ್ಸಿನಲ್ಲಿ ಮೊಟ್ಟಮೊದಲ ಅಂತಾರಾಷ್ಟ್ರೀಯ ಗೋಲು ಬಾರಿಸಿದ್ದರು. ಇದೀಗ ಪೋರ್ಚುಗಲ್ ನಾಯಕನಿಗೆ 35 ವರ್ಷ ವಯಸ್ಸು.