ಮಹಿಳಾ ಅಂಡರ್-17 ಫಿಫಾ ವಿಶ್ವಕಪ್ ಮುಂದೂಡಿಕೆ?
ಕೊರೋನಾ ಭೀತಿ ಭಾರತವನ್ನೂ ಕಂಗೆಡಿಸಿದ್ದು, ಈಗಾಗಲೇ ಸೋಂಕಿತರ ಸಂಖ್ಯೆ ನಾನೂರು ದಾಟಿದೆ. ಹೀಗಿರುವಾಗಲೇ ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಟೂರ್ನಿ ಆಯೋಜನೆ ಇದೀಗ ಅನುಮಾನ ಎನಿಸಿದೆ. ಐಪಿಎಲ್ ಟೂರ್ನಿ ಸಹಾ ಅನುಮಾನ ಎನಿಸಿರುವಾಗಲೇ ಇದೀಗ ಫುಟ್ಬಾಲ್ ಟೂರ್ನಿ ಸಹಾ ರದ್ದಾಗುವ ಭೀತಿಯಲ್ಲಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.
ನವದೆಹಲಿ(ಮಾ.24): 2017ರಲ್ಲಿ ಅಂಡರ್ 17 ಬಾಲಕರ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದ ಭಾರತ, 2020ರಲ್ಲಿ ಅಂಡರ್ 17 ಬಾಲಕಿಯರ ವಿಶ್ವಕಪ್ ಆಯೋಜಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಟೂರ್ನಿಗೆ ಆತಿಥ್ಯ ವಹಿಸಲಿರುವ ಎಲ್ಲಾ 5 ಕ್ರೀಡಾಂಗಣಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಫಿಫಾದಿಂದ ಒಪ್ಪಿಗೆ ಸಹ ಸಿಕ್ಕಿದೆ. ಆದರೆ ಕೊರೋನಾ ಸೋಂಕು ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಟೂರ್ನಿಯನ್ನು ಮುಂದೂಡಬೇಕಾದ ಅನಿವಾರ್ಯತೆ ಎದುರಾಗಲಿದೆ.
ಫಿಫಾ ಕಿರಿಯರ ವಿಶ್ವಕಪ್: ಅಹಮದಾಬಾದ್ ಆತಿಥ್ಯ
ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸಲಿವೆ. ಆದರೆ ಭಾರತ, ಜಪಾನ್ ಹಾಗೂ ದಕ್ಷಿಣ ಕೊರಿಯಾ ತಂಡಗಳು ಮಾತ್ರ ಈ ವರೆಗೂ ಅರ್ಹತೆ ಪಡೆದುಕೊಂಡಿವೆ. ಆತಿಥ್ಯ ವಹಿಸುವ ರಾಷ್ಟ್ರವಾಗಿರುವ ಕಾರಣ ಭಾರತಕ್ಕೆ ನೇರ ಪ್ರವೇಶ ಸಿಕ್ಕಿದೆ. 2019ರ ಅಂಡರ್-16 ಬಾಲಕಿಯರ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಅಗ್ರ 2 ಸ್ಥಾನ ಪಡೆದ ಕಾರಣ ಜಪಾನ್ ಹಾಗೂ ದ.ಕೊರಿಯಾಗೆ ಅರ್ಹತೆ ದೊರೆತಿತ್ತು.
ಇನ್ನೂ 13 ತಂಡಗಳು ಪ್ರವೇಶ ಪಡೆಯಬೇಕಿದೆ. ಕೊರೋನಾ ಸೋಂಕಿನ ಭೀತಿಯಿಂದಾಗಿ ಅರ್ಹತಾ ಟೂರ್ನಿಗಳನ್ನು ಮುಂದೂಡಲಾಗಿದೆ. ಏ.18ರಿಂದ ಮೇ 3 ವರೆಗೂ ಉತ್ತರ, ಕೇಂದ್ರ ಹಾಗೂ ಕೆರಿಬಿಯನ್ ಫುಟ್ಬಾಲ್ ಸಂಸ್ಥೆಗಳ ಅರ್ಹತಾ ಟೂರ್ನಿ ನಡೆಯಬೇಕಿತ್ತು. ಏ.15ರಿಂದ ಮೇ 3ರ ವರೆಗೂ ದಕ್ಷಿಣ ಅಮೆರಿಕ, ಏ.6ರಿಂದ 19ರ ವರೆಗೂ ಓಷಿಯಾನಿಯಾ, ಮೇ 9ರಿಂದ ನಡೆಯಬೇಕಿದ್ದ ಯುರೋಪಿಯನ್ ರಾಷ್ಟ್ರಗಳ ಅರ್ಹತಾ ಟೂರ್ನಿಯನ್ನು ಮುಂದೂಡಲಾಗಿದೆ.
U 17 ಮಹಿಳಾ ಫುಟ್ಬಾಲ್ ವಿಶ್ವಕಪ್ ಲೋಗೋ ಬಿಡುಗಡೆ
ಟೂರ್ನಿಯಲ್ಲಿ ಆಡುವ ತಂಡಗಳು ಯಾವುವು ಎನ್ನುವುದೇ ಇನ್ನೂ ನಿರ್ಧಾರವಾಗದ ಕಾರಣ, ನ.2ರಿಂದ 21ರ ವರೆಗೂ ನಡೆಯಬೇಕಿರುವ ವಿಶ್ವಕಪ್ ಪಂದ್ಯಾವಳಿಯನ್ನು ಮುಂದೂಡಬೇಕಾದ ಅನಿವಾರ್ಯತೆಗೆ ವಿಶ್ವ ಫುಟ್ಬಾಲ್ ಫೆಡರೇಷನ್ (ಫಿಫಾ) ಸಿಲುಕಬಹುದು.
ಸಮಸ್ಯೆ ಏನು?: ಟೂರ್ನಿಯನ್ನು ಮುಂದೂಡಿದರೆ ಆಟಗಾರ್ತಿಯರು ವಯೋಮಿತಿ ದಾಟಲಿದ್ದಾರೆ. ಎಲ್ಲಾ ರಾಷ್ಟ್ರಗಳು ತನ್ನ ಅಂಡರ್-16 ತಂಡಗಳನ್ನು ಕಳೆದ ಒಂದೂವರೆ ಎರಡು ವರ್ಷಗಳಿಂದ ಅಂಡರ್-17 ವಿಶ್ವಕಪ್‌ಗೆ ಸಿದ್ಧಗೊಳಿಸುತ್ತವೆ. ಹೀಗಾಗಿ ಮುಂದಿನ ವರ್ಷಕ್ಕೆ ಟೂರ್ನಿ ಮುಂದೂಡಿದರೆ ಬಹುತೇಕ ಆಟಗಾರ್ತಿಯರ ವಯಸ್ಸು ನಿಗದಿತ ವಯಸ್ಸನ್ನು ಮೀರಿರಲಿದೆ. ಹೊಸದಾಗಿ ತಂಡ ಸಿದ್ಧಪಡಿಸಿವುದು ಪ್ರತಿ ರಾಷ್ಟ್ರಕ್ಕೂ ಕಠಿಣ ಸವಾಲಾಗಿ ಪರಿಣಮಿಸಲಿದೆ ಎಂದು ವಿಶ್ಲೇಷಿಸಲಾಗಿದೆ.