ಸ್ಯಾಫ್ ಕಪ್ ಗೆಲುವಿನ ಬೆನ್ನಲ್ಲೇ ಕಂಠೀರವ ಸ್ಟೇಡಿಯಂನಲ್ಲಿ ಮೊಳಗಿನ ವಂದೇ ಮಾತರಂ ಗೀತೆ..! ವಿಡಿಯೋ ವೈರಲ್
9ನೇ ಬಾರಿಗೆ ಸ್ಯಾಫ್ ಕಪ್ ಚಾಂಪಿಯನ್ ಅಲಂಕರಿಸಿದ ಭಾರತ
ಭಾರತ ತಂಡವನ್ನು ಹುರಿದುಂಬಿಸಿದ ಬೆಂಗಳೂರಿನ ಫುಟ್ಬಾಲ್ ಫ್ಯಾನ್ಸ್
ಕಂಠೀರವ ಸ್ಟೇಡಿಯಂನಲ್ಲಿ ಮೊಳಗಿದ ವಂದೇ ಮಾತರಂ, ಮಾ ತುಜೆ ಸಲಾಂ ಗೀತೆ
ಬೆಂಗಳೂರು(ಜು.05): 14ನೇ ಆವೃತ್ತಿಯ ಸ್ಯಾಫ್ ಚಾಂಪಿಯನ್ ಟೂರ್ನಿ ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ಯಶಸ್ವಿಯಾಗಿ ಆಯೋಜನೆಗೊಂಡು ಮುಕ್ತಾಯವಾಗಿದೆ. ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ಸ್ಯಾಫ್ ಕಪ್ ಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತ ಫುಟ್ಬಾಲ್ ತಂಡವು ಕುವೈತ್ ತಂಡವನ್ನು ಪೆನಾಲ್ಟಿ ಶೂಟೌಟ್‌ನ ಸಡನ್ ಡೆತ್‌ನಲ್ಲಿ ಮಣಿಸುವ ಮೂಲಕ 9ನೇ ಬಾರಿಗೆ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಇನ್ನು ಪಂದ್ಯದ ಆರಂಭದಿಂದಲೂ ಭಾರತೀಯ ಫುಟ್ಬಾಲ್ ಅಭಿಮಾನಿಗಳು ಸುನಿಲ್ ಚೆಟ್ರಿ ನೇತೃತ್ವದ ಭಾರತ ತಂಡವನ್ನು ಬೆಂಬಲಿಸುತ್ತಲೇ ಬಂದರು. ಅದರಲ್ಲೂ ಕುವೈತ್ ತಂಡದ ನಾಯಕ ಖಾಲೀದ್ ಹಾಜಿಯ್ ಗೋಲು ಬಾರಿಸುವ ಯತ್ನವನ್ನು ಭಾರತದ ಗೋಲ್ ಕೀಪರ್ ಗುರ್ಪ್ರೀತ್ ಸಿಂಗ್ ತಡೆಹಿಡಿಯುತ್ತಿದ್ದಂತೆಯೇ ಭಾರತದ ಫುಟ್ಬಾಲ್ ಅಭಿಮಾನಿಗಳ ಸಂಭ್ರಮಾಚರಣೆ ಕಟ್ಟೆಯೊಡೆಯುವಂತೆ ಮಾಡಿತು.
ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಒತ್ತುಕೊಟ್ಟ ಉಭಯ ತಂಡಗಳು ನೆರೆದಿದ್ದ ಅಪಾರ ಪ್ರೇಕ್ಷಕರಿಗೆ ಫೈನಲ್ ಪಂದ್ಯದ ಕಿಕ್ ನೀಡಿದವು. 14ನೇ ನಿಮಿಷದಲ್ಲಿ ಅಲ್ ಬ್ಲೌಶಿ ನೀಡಿದ ಪಾಸ್ ಅನ್ನು ಗೋಲು ಶಬೈಬ್ ಪೆಟ್ಟಿಗೆಗೆ ಸೇರಿಸುವುದರೊಂದಿಗೆ ಕುವೈತ್‌ಗೆ ಆರಂಭಿಕ ಮುನ್ನಡೆ ನೀಡಿದರು. ಬಳಿಕ ಮೂರೇ ನಿಮಿಷದ ಅಂತರದಲ್ಲಿ ಪಂದ್ಯ ಸಮಬಲ ಸಾಧಿಸುವ ಉತ್ತಮ ಅವಕಾಶ ಭಾರತಕ್ಕೆ ಸಿಕ್ಕರೂ ಸುನಿಲ್ ಚೆಟ್ರಿ-ಚಾಂಗ್ಟೆ ಜೋಡಿ ಗೋಲು ಗಳಿಸುವ ಅವಕಾಶ ಕೈಚೆಲ್ಲಿತು. ಬಳಿಕ 39ನೇ ನಿಮಿಷದಲ್ಲಿ ಸಹಲ್ ಅಬ್ದುಲ್ ಸಮದ್ ತನ್ನತ್ತ ನೀಡಿದ ಚೆಂಡನ್ನು ಚಾಂಗ್ಟೆ ಗೋಲು ಪೆಟ್ಟಿಗೆಗೆ ಸೇರಿಸುವುದರೊಂದಿಗೆ ಭಾರತ ಪುಟಿದೆದ್ದಿತು.
ಹೆಚ್ವುವರಿ ಸಮಯದಲ್ಲಿ ಭಾರತಕ್ಕೆ ಕೆಲ ಅವಕಾಶಗಳು ಸಿಕ್ಕರೂ ಗೋಲು ಗಳಿಸಲಾಗಲಿಲ್ಲ. ಚೆಂಡನ್ನು ಪಾಸ್ ಮಾಡುವಲ್ಲಿ ಮತ್ತೆ ಎಡವಟ್ಟು ಮಾಡಿಕೊಂಡ ಚೆಟ್ರಿ ಪಡೆ ಶೂಟೌಟ್‌ಗೂ ಮೊದಲೇ ಪಂದ್ಯ ಗೆಲ್ಲುವ ಅವಕಾಶ ಕೈಚೆಲ್ಲಿತು. 120 ನಿಮಿಷಗಳ ಆಟ ಮುಕ್ತಾಯಗೊಂಡರೂ ಫಲಿತಾಂಶ ಹೊರಬೀಳದಿದ್ದಾಗ ಶೂಟೌಟ್ ಮೊರೆಹೋಗಬೇಕಾಯಿತು.
ಹೇಗಿತ್ತು ಶೂಟೌಟ್?
ಭಾರತದ ಪರ ಚೆಟ್ರಿ ಗೋಲಿನ ಖಾತೆ ತೆರೆದರು. ಆದರೆ ಕುವೈತ್‌ನ ಮೊದಲ ಅವಕಾಶವನ್ನು ಅಬ್ದುಲ್ಲಾ ವ್ಯರ್ಥ ಮಾಡಿದರು. ಬಳಿಕ ಭಾರತದ ಪರ ಸಂದೇಶ್ ಜಿಂಗನ್, ಚಾಂಗ್ಟೆ ಗೋಲು ಹೊಡೆದರೆ, ಕುವೈತ್ ಪರ ಫವಾಜ್, ಅಹ್ಮದ್ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. ಆದರೆ ಭಾರತದ 4ನೇ ಪ್ರಯತ್ನದಲ್ಲಿ ಉದಾಂತ್ ಸಿಂಗ್ ಗೋಲು ಗಳಿಸಲು ವಿಫಲರಾದರೆ, ಕುವೈತ್‌ನ ಅಬ್ದುಲ್ ಅಜೀಜ್ ಗೋಲು ಹೊಡೆದರು. 5ನೇ ಪ್ರಯತ್ನದಲ್ಲಿ ಭಾರತದ ಸುಭಾಷಿಶ್, ಕುವೈತ್‌ನ ಶಬೀಬ್ ಗೋಲು ಬಾರಿಸಿದರು. ಹೀಗಾಗಿ ಫಲಿತಾಂಶಕ್ಕಾಗಿ ಸಡನ್ ಡೆತ್ ಮೊರೆ ಹೋಗಬೇಕಾಯಿತು. ಭಾರತದ ಮಹೇಶ್ ಗೋಲು ಬಾರಿಸಿದರೆ, ಕುವೈತ್‌ನ ನಾಯಕ ಖಾಲಿದ್ ಒದ್ದ ಚೆಂಡನ್ನು ತಡೆದ ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಭಾರತವನ್ನು ಗೆಲ್ಲಿಸಿದರು.
SAFF Cup Final: ಪದಕ ಸ್ವೀಕರಿಸುವಾಗ ಮಣಿಪುರ ಫ್ಲಾಗ್‌ನೊಂದಿಗೆ ಬಂದ ಫುಟ್ಬಾಲಿಗ ಜೇಕ್ಸನ್ ಸಿಂಗ್..!
ಭಾರತ ಫುಟ್ಬಾಲ್ ತಂಡವು ಸ್ಯಾಫ್ ಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗುತ್ತಿದ್ದಂತೆಯೇ ಕಂಠೀರವ ಸ್ಟೇಡಿಯಂನಲ್ಲಿ ಕಿಕ್ಕಿರಿದು ನೆರೆದಿದ್ದ ಫುಟ್ಬಾಲ್ ಅಭಿಮಾನಿಗಳು ಒಟ್ಟಾಗಿ ವಂದೇ ಮಾತರಂ ಹಾಗೂ ಮಾ ತುಜೆ ಸಲಾಂ ಹಾಡು ಹೇಳಿ ಸಂಭ್ರಮಿಸಿದರು, ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.
ಈ ಆವೃತ್ತಿಯ ಸ್ಯಾಫ್ ಕಪ್ ಟೂರ್ನಿಯಲ್ಲಿ ಭಾರತ ತಂಡವು ಎರಡನೇ ಬಾರಿಗೆ ಪೆನಾಲ್ಟಿ ಶೂಟೌಟ್‌ನಲ್ಲಿ ಗೆಲುವಿನ ನಗೆ ಬೀರುವಲ್ಲಿ ಸಫಲವಾಗಿದೆ. ಈ ಮೊದಲು ಲೆಬನಾನ್ ಎದುರಿನ ಸೆಮಿಫೈನಲ್ ಕದನದಲ್ಲಿ ಭಾರತ ಫುಟ್ಬಾಲ್ ತಂಡವು 4-2 ಅಂತರದಲ್ಲಿ ಗೆಲುವು ದಾಖಲಿಸಿ ಫೈನಲ್‌ಗೆ ಲಗ್ಗೆಯಿಟ್ಟಿತ್ತು.