Asianet Suvarna News Asianet Suvarna News

SAFF Cup Final: ಪದಕ ಸ್ವೀಕರಿಸುವಾಗ ಮಣಿಪುರ ಫ್ಲಾಗ್‌ನೊಂದಿಗೆ ಬಂದ ಫುಟ್ಬಾಲಿಗ ಜೇಕ್ಸನ್‌ ಸಿಂಗ್‌..!

ಸ್ಯಾಫ್ ಕಪ್ ಟೂರ್ನಿಯಲ್ಲಿ ಭಾರತ ಫುಟ್ಬಾಲ್ ಚಾಂಪಿಯನ್‌
ಪ್ರಶಸ್ತಿ ಸ್ವೀಕರಿಸುವ ವೇಳೆ ಮಣಿಪುರಿ ಧ್ವಜ ಹೊದ್ದು ಬಂದ ಜೇಕ್ಸನ್‌ ಸಿಂಗ್
ಚರ್ಚೆಗೆ ಗ್ರಾಸವಾದ ಮಿಡ್‌ಫೀಲ್ಡರ್‌ ನಡೆ

SAFF Final Indian Footballer Jeakson Singh Carries Meitei Flag While Collecting Medal kvn
Author
First Published Jul 5, 2023, 12:11 PM IST

ಬೆಂಗಳೂರು(ಜು.05): 14ನೇ ಆವೃತ್ತಿಯ ಸ್ಯಾಫ್‌ ಕಪ್‌ ಫುಟ್ಬಾಲ್ ಟೂರ್ನಿಯಲ್ಲಿ ಸುನಿಲ್ ಚೆಟ್ರಿ ನೇತೃತ್ವದ ಭಾರತ ತಂಡವು ದಾಖಲೆಯ 9ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇಲ್ಲಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಸ್ಯಾಫ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಕುವೈತ್ ಎದುರು ಪೆನಾಲ್ಟಿ ಶೂಟೌಟ್‌ನ ಸಡನ್‌ ಡೆತ್‌ನಲ್ಲಿ ಗೆಲುವಿನ ನಗೆ ಬೀರುವಲ್ಲಿ ಭಾರತ ಯಶಸ್ವಿಯಾಗಿದೆ. ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದ ಬಳಿಕ ನಡೆದ ಅದ್ದೂರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತ ಫುಟ್ಬಾಲ್ ತಂಡದ ಮಿಡ್‌ ಫೀಲ್ಡರ್ ಜೇಕ್ಸನ್‌ ಸಿಂಗ್‌, 7 ಬಣ್ಣಗಳನ್ನೊಳಗೊಂಡ ಮಣಿಪುರದ ಫ್ಲಾಗ್‌ ಹೊದ್ದುಕೊಂಡು ಪದಕ ಸ್ವೀಕರಿಸಿದ್ದು ಹಲವರ ಹುಬ್ಬೇರಿಸುವಂತೆ ಮಾಡಿದೆ.

ಜೇಕ್ಸನ್ ಸಿಂಗ್ ಅವರು ಬೆನ್ನಿನ ಮೇಲೆ ಹಾಕಿಕೊಂಡಿದ್ದ ಧ್ವಜವು ಕಂಗ್ಲೀಪಾಕ್‌ ಅಥವಾ ಸಲೈ ಟ್ಯಾರೆಟ್ ಧ್ವಜವಾಗಿದೆ. ಜೇಕ್ಸನ್‌ ಸಿಂಗ್ ಧರಿಸಿದ ಆಯತಾಕಾರದ ಧ್ವಜವು 7 ಬಣ್ಣಗಳಿಂದ ಕೂಡಿದ್ದು, ಇದು ಪ್ರಾಚೀನ ಮಣಿಪುರದ ಮೈತೆಯ್‌ ಜನಾಂಗದ ಏಳು ರಾಜವಂಶಗಳ ಕುಲವನ್ನು ಪ್ರತಿನಿಧಿಸುತ್ತದೆ.  ಸದ್ಯ ಕಳೆದ 2 ತಿಂಗಳಿನಿಂದ ಮೈತೇಯ್ ಹಾಗೂ ಕುಕೀಸ್ ಸಮುದಾಯದ ನಡುವೆ ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿರುವ ಬೆನ್ನಲ್ಲೇ ಜೇಕ್ಸನ್ ಸಿಂಗ್ ಅವರ ಈ ನಡೆ ಹಲವರ ಹುಬ್ಬೇರಿಸುವಂತೆ ಮಾಡಿದೆ. ಕೆಲವರು ಜೇಕ್ಸನ್ ಸಿಂಗ್ ಅವರನ್ನು ಪ್ರತ್ಯೇಕತಾವಾದಿ ಎಂದು ಜರಿದಿದ್ದರೇ, ಮತ್ತೆ ಕೆಲವರು ಇದು ವೃತ್ತಿಬದ್ದತೆಯಲ್ಲ ಎಂದು ಟೀಕಿಸಿದ್ದಾರೆ.

ಸ್ಯಾಫ್‌ ಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ತಂಡವು ಚಾಂಪಿಯನ್ ಆಗಿ ಸಂಭ್ರಮಾಚರಣೆ ಮಾಡುವ ವೇಳೆ ಜೇಕ್ಸನ್ ಸಿಂಗ್ ರಾಜಕೀಯ ಸಂದೇಶ ರವಾನಿಸಿದ್ದಾರೆ. ಇಡೀ ದೇಶವನ್ನು ಪ್ರತಿನಿಧಿಸುವಾಗ ಈ ರೀತಿಯ ನಡೆ ವೃತ್ತಿಪರವಾದುದಲ್ಲ ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ. 

ದಾಖಲೆಯ 9ನೇ ಬಾರಿಗೆ ಸ್ಯಾಫ್‌ ಫುಟ್‌ಬಾಲ್‌ ಟೂರ್ನಿಯಲ್ಲ ಭಾರತ ಚಾಂಪಿಯನ್‌

ಇನ್ನು ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜೇಕ್ಸನ್ ಸಿಂಗ್, "ಇದು ಮಣಿಪುರದ ಫ್ಲಾಗ್‌. ನಾನು ಮಣಿಪುರದಲ್ಲಿ ಏನಾಗುತ್ತಿದೆ ಎಂದು ಇಡೀ ದೇಶಕ್ಕೆ ಹೇಳಲು ಬಯಸಲು ಇದನ್ನು ತೊಟ್ಟಿದ್ದೇನೆ. ಮಣಿಪುರ ಯಾವಾಗಲೂ ಶಾಂತಿಯಿಂದ ಕೂಡಿರಲಿ ಎಂದು ಬಯಸುತ್ತೇನೆಯೇ ಹೊರತು ಘರ್ಷಣೆಯಾಗಲಿ ಎಂದಲ್ಲ. ನಮಗೆ ಶಾಂತಿ ಬೇಕು ಎಂದು ESPN India ವೆಬ್‌ಸೈಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮಣಿಪುರದಲ್ಲಿ ಜನಾಂಗೀಯ ಘರ್ಷಣೆ ಶುರುವಾಗಿ ಎರಡು ತಿಂಗಳಾಯಿತು. ಈಗಲೂ ಅಲ್ಲಿ ಬಡಿದಾಡಿಕೊಳ್ಳುತ್ತಿದ್ದಾರೆ. ಅಲ್ಲಿ ಈ ರೀತಿಯ ಘಟನೆಗಳು ಮುಂದುವರೆಯಬಾರದು ಎಂದು ಬಯಸುತ್ತೇನೆ. ನಾನು ಈ ಸಂದರ್ಭದಲ್ಲಿ ಸರ್ಕಾರ ಹಾಗೂ ಇನ್ನಿತರ ವ್ಯಕ್ತಿಗಳು ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಗಮನ ಸೆಳೆಯಲು ಬಯಸುತ್ತಿದ್ದೇನೆ ಎಂದು ಜೇಕ್ಸನ್ ಸಿಂಗ್ ಹೇಳಿದ್ದಾರೆ.

ಹೇಗಿತ್ತು ಸ್ಯಾಫ್ ಕಪ್ ಫೈನಲ್..?

14ನೇ ಆವೃತ್ತಿಯ ಟೂರ್ನಿಯ ಫೈನಲ್‌ನಲ್ಲಿ ಬಲಿಷ್ಠ ಕುವೈತ್ ತಂಡವನ್ನು ಪೆನಾಲ್ಟಿ ಶೂಟೌಟ್‌ನ ಸಡನ್‌ ಡೆತ್‌ನಲ್ಲಿ (5-4) ಮಣಿಸಿದ ಭಾರತ, ದಾಖಲೆಯ 9ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಒತ್ತುಕೊಟ್ಟ ಉಭಯ ತಂಡಗಳು ನೆರೆದಿದ್ದ ಅಪಾರ ಪ್ರೇಕ್ಷಕರಿಗೆ ಫೈನಲ್ ಪಂದ್ಯದ ಕಿಕ್ ನೀಡಿದವು. 14ನೇ ನಿಮಿಷದಲ್ಲಿ ಅಲ್ ಬ್ಲೌಶಿ ನೀಡಿದ ಪಾಸ್‌ ಅನ್ನು ಗೋಲು ಶಬೈಬ್‌ ಪೆಟ್ಟಿಗೆಗೆ ಸೇರಿಸುವುದರೊಂದಿಗೆ ಕುವೈತ್‌ಗೆ ಆರಂಭಿಕ ಮುನ್ನಡೆ ನೀಡಿದರು. ಬಳಿಕ ಮೂರೇ ನಿಮಿಷದ ಅಂತರದಲ್ಲಿ ಪಂದ್ಯ ಸಮಬಲ ಸಾಧಿಸುವ ಉತ್ತಮ ಅವಕಾಶ ಭಾರತಕ್ಕೆ ಸಿಕ್ಕರೂ ಸುನಿಲ್ ಚೆಟ್ರಿ-ಚಾಂಗ್ಟೆ ಜೋಡಿ ಗೋಲು ಗಳಿಸುವ ಅವಕಾಶ ಕೈಚೆಲ್ಲಿತು. ಬಳಿಕ 39ನೇ ನಿಮಿಷದಲ್ಲಿ ಸಹಲ್ ಅಬ್ದುಲ್ ಸಮದ್ ತನ್ನತ್ತ ನೀಡಿದ ಚೆಂಡನ್ನು ಚಾಂಗ್ಟೆ ಗೋಲು ಪೆಟ್ಟಿಗೆಗೆ ಸೇರಿಸುವುದರೊಂದಿಗೆ ಭಾರತ ಪುಟಿದೆದ್ದಿತು.

Wimbledon 2023: ಆಲ್ಕರಜ್‌, ರಬೈಕೆನಾ 2ನೇ ಸುತ್ತಿಗ್ಗೆ ಲಗ್ಗೆ; ವೀನಸ್‌ಗೆ ಮೊದಲ ಸುತ್ತಲ್ಲೇ ಶಾಕ್

ದ್ವಿತೀಯಾರ್ಧದಲ್ಲಿ ಮತ್ತಷ್ಟು ಪೈಪೋಟಿ ಕಂಡುಬಂದರೂ ಎರಡೂ ತಂಡಗಳಿಗೆ ಗೋಲು ಗಳಿಸುವ ಅವಕಾಶ ಸುಲಭದಲ್ಲಿ ಸಿಗಲಿಲ್ಲ. ಫ್ರೀ ಕಿಕ್, ಕಾರ್ನರ್ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳದ ಇತ್ತಂಡಗಳು ಪಂದ್ಯವನ್ನು ಹೆಚ್ಚುವರಿ ಸಮಯಕ್ಕೆ ಕೊಂಡೊಯ್ದವು.

ಹೆಚ್ವುವರಿ ಸಮಯದಲ್ಲಿ ಭಾರತಕ್ಕೆ ಕೆಲ ಅವಕಾಶಗಳು ಸಿಕ್ಕರೂ ಗೋಲು ಗಳಿಸಲಾಗಲಿಲ್ಲ.‌ ಚೆಂಡನ್ನು ಪಾಸ್ ಮಾಡುವಲ್ಲಿ ಮತ್ತೆ ಎಡವಟ್ಟು ಮಾಡಿಕೊಂಡ ಚೆಟ್ರಿ ಪಡೆ ಶೂಟೌಟ್‌ಗೂ ಮೊದಲೇ ಪಂದ್ಯ ಗೆಲ್ಲುವ ಅವಕಾಶ ಕೈಚೆಲ್ಲಿತು. 120 ನಿಮಿಷಗಳ ಆಟ ಮುಕ್ತಾಯಗೊಂಡರೂ ಫಲಿತಾಂಶ ಹೊರಬೀಳದಿದ್ದಾಗ ಶೂಟೌಟ್ ಮೊರೆಹೋಗಬೇಕಾಯಿತು.

ಹೇಗಿತ್ತು ಶೂಟೌಟ್?

ಭಾರತದ ಪರ ಚೆಟ್ರಿ ಗೋಲಿನ ಖಾತೆ ತೆರೆದರು. ಆದರೆ ಕುವೈತ್‌ನ ಮೊದಲ ಅವಕಾಶವನ್ನು ಅಬ್ದುಲ್ಲಾ ವ್ಯರ್ಥ ಮಾಡಿದರು. ಬಳಿಕ ಭಾರತದ ಪರ ಸಂದೇಶ್ ಜಿಂಗನ್, ಚಾಂಗ್ಟೆ ಗೋಲು ಹೊಡೆದರೆ, ಕುವೈತ್‌ ಪರ ಫವಾಜ್, ಅಹ್ಮದ್ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. ಆದರೆ ಭಾರತದ 4ನೇ ಪ್ರಯತ್ನದಲ್ಲಿ ಉದಾಂತ್ ಸಿಂಗ್ ಗೋಲು ಗಳಿಸಲು ವಿಫಲರಾದರೆ, ಕುವೈತ್‌ನ ಅಬ್ದುಲ್ ಅಜೀಜ್ ಗೋಲು ಹೊಡೆದರು. 5ನೇ ಪ್ರಯತ್ನದಲ್ಲಿ ಭಾರತದ ಸುಭಾಷಿಶ್, ಕುವೈತ್‌ನ ಶಬೀಬ್ ಗೋಲು ಬಾರಿಸಿದರು. ಹೀಗಾಗಿ ಫಲಿತಾಂಶಕ್ಕಾಗಿ ಸಡನ್‌ ಡೆತ್‌ ಮೊರೆ ಹೋಗಬೇಕಾಯಿತು. ಭಾರತದ ಮಹೇಶ್ ಗೋಲು ಬಾರಿಸಿದರೆ, ಕುವೈತ್‌ನ ನಾಯಕ ಖಾಲಿದ್‌ ಒದ್ದ ಚೆಂಡನ್ನು ತಡೆದ ಗೋಲ್‌ಕೀಪರ್‌ ಗುರ್‌ಪ್ರೀತ್‌ ಸಿಂಗ್‌ ಭಾರತವನ್ನು ಗೆಲ್ಲಿಸಿದರು.
 

Follow Us:
Download App:
  • android
  • ios