ವಿನೀತ್‌ ವೆಂಕಟೇಶ್‌. ‘ಆಸ್ಟಿನ್‌ ಟೌನ್‌ ಹುಡುಗ’ ಎಂದೇ ಫೇಮಸ್‌. ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯ ಬೆಂಗಳೂರು ಎಫ್‌ಸಿ ತಂಡದಲ್ಲಿ ಆಡುತ್ತಿರುವ 19 ವರ್ಷದ ವಿನೀತ್‌, ಆಡಿದ ನಾಲ್ಕೇ ಪಂದ್ಯದಲ್ಲಿ ದೊಡ್ಡ ಸದ್ದು ಮಾಡಿ, ಸುದ್ದಿಯಲ್ಲಿದ್ದಾರೆ.

- ನಾಸಿರ್‌ ಸಜಿಪ, ಕನ್ನಡಪ್ರಭ

ಬೆಂಗಳೂರು: ಆ ಹುಡುಗ ಕಂಡ ಕನಸೆಲ್ಲವೂ ಫುಟ್ಬಾಲ್‌. ಬಾಲ್ಯದಲ್ಲೇ ಚೆಂಡು ಹಿಡಿದು ಮೈದಾನಕ್ಕಿಳಿಯುತ್ತಿದ್ದ ಹುಡುಗ, ಈಗ ಕಂಡ ಕನಸುಗಳ ಬೆನ್ನೇರಿ ಹೊರಟಿದ್ದಾನೆ. ಫುಟ್ಬಾಲ್‌ನಲ್ಲಿ ಬೆಳೆಯಬೇಕು, ಕರ್ನಾಟಕವನ್ನು ಪ್ರತಿನಿಧಿಸಬೇಕು, ಸುನಿಲ್‌ ಚೆಟ್ರಿ ಜೊತೆ ಆಡಬೇಕು, ಬೆಂಗಳೂರು ಎಫ್‌ಸಿ ತಂಡದಲ್ಲಿ ತನಗೂ ಸ್ಥಾನ ಸಿಗಬೇಕು ಎಂದು ಕನಸು ಕಂಡಿದ್ದ ಹುಡುಗ ತನ್ನ ಕನಸುಗಳನ್ನೂ ಮೀರಿ ಬೆಳೆಯುತ್ತಿದ್ದಾನೆ.

ಹುಡುಗನ ಹೆಸರು ವಿನೀತ್‌ ವೆಂಕಟೇಶ್‌. ‘ಆಸ್ಟಿನ್‌ ಟೌನ್‌ ಹುಡುಗ’ ಎಂದೇ ಫೇಮಸ್‌. ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯ ಬೆಂಗಳೂರು ಎಫ್‌ಸಿ ತಂಡದಲ್ಲಿ ಆಡುತ್ತಿರುವ 19 ವರ್ಷದ ವಿನೀತ್‌, ಆಡಿದ ನಾಲ್ಕೇ ಪಂದ್ಯದಲ್ಲಿ ದೊಡ್ಡ ಸದ್ದು ಮಾಡಿ, ಸುದ್ದಿಯಲ್ಲಿದ್ದಾರೆ.

ಬೆಂಗಳೂರಿನ ಆಸ್ಟಿನ್‌ ಟೌನ್‌ನ ವಿನೀತ್‌ 2013ರಲ್ಲೇ ಬಿಎಫ್‌ಸಿ ತಂಡ ಸೇರ್ಪಡೆಗೊಂಡಿದ್ದರು. ತಮ್ಮ 7ನೇ ವಯಸ್ಸಿನಲ್ಲಿ ಅಂಡರ್‌-10 ತಂಡದ ಪರ ಆಡಿದ್ದ ವಿನೀತ್‌, ಬಳಿಕ ಬಿಎಫ್‌ಸಿ ವಿವಿಧ ವಯೋಮಾನದ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಇತ್ತೀಚೆಗಷ್ಟೇ ಸುನಿಲ್‌ ಚೆಟ್ರಿ ನಾಯಕತ್ವದ ಬಿಎಫ್‌ಸಿ ಹಿರಿಯರ ತಂಡ ಸೇರ್ಪಡೆಗೊಂಡಿದ್ದ ಮಿಡ್‌ಫೀಲ್ಡರ್‌ ವಿನೀತ್‌, ಚೊಚ್ಚಲ ಪಂದ್ಯದಲ್ಲೇ ಆಕರ್ಷಕ ಗೋಲು ಬಾರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಅಲ್ಲದೇ, ಐಎಸ್‌ಎಲ್‌ನ ಪಾದಾರ್ಪಣೆ ಪಂದ್ಯದಲ್ಲೇ ಗೋಲು ಬಾರಿಸಿದ ಅತಿ ಕಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಇಂಗ್ಲೆಂಡ್‌ ತಂಡದಲ್ಲೀಗ ಸಾಲ್ಟ್‌ ಮತ್ತು ಪೆಪ್ಪರ್‌ ಓಪನ್ನರ್!

‘ನಾನೀಗ ಕನಸಿನ ಓಟದಲ್ಲಿದ್ದೇನೆ. ನಾನೇನು ಕನಸು ಕಂಡಿದ್ದೆನೋ ಅದೆಲ್ಲವೂ ನನಸಾಗುತ್ತಿದೆ. ಬಿಎಫ್‌ಸಿ ಪರ, ಸುನಿಲ್‌ ಚೆಟ್ರಿ ಜೊತೆ ಆಡುವುದು ದೊಡ್ಡ ಭಾಗ್ಯ. ಬಿಎಫ್‌ಸಿಯಲ್ಲಿ ನನ್ನ ಗೋಲನ್ನು ಮೊದಲು ಸಂಭ್ರಮಿಸಿದ್ದು ಸುನಿಲ್‌ ಚೆಟ್ರಿ. ಆ ಕ್ಷಣವನ್ನು ವಿವರಿಸಲು ಸಾಧ್ಯವಿಲ್ಲ’ ಎಂದು ‘ಕನ್ನಡಪ್ರಭ’ ಜೊತೆ ವಿನೀತ್‌ ಮನಬಿಚ್ಚಿ ಮಾತನಾಡಿದ್ದಾರೆ.

ಈ ಬಾರಿ ಬಿಎಫ್‌ಸಿ ಪರ 4 ಪಂದ್ಯಗಳನ್ನಾಡಿರುವ ವಿನೀತ್‌, ಈಸ್ಟ್‌ ಬೆಂಗಾಲ್‌ ವಿರುದ್ಧ ಗೋಲು ಬಾರಿಸಿದ್ದರು. ಬಳಿಕ ಹೈದರಾಬಾದ್‌ ವಿರುದ್ಧ ಪಂದ್ಯದಲ್ಲಿ ಗೋಲು ಬಾರಿಸಲು ಸಹಕರಿಸಿರುವ ಅವರು, ಚೆಂಡನ್ನು ಪಾಸ್‌ ಮಾಡುವ ಕೌಶಲ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಬಿಎಫ್‌ಸಿಯ ಅಭಿಮಾನಿಗಳ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ಅವರು, ಐಎಸ್‌ಎಲ್‌ ಸೆಪ್ಟೆಂಬರ್ ತಿಂಗಳ ಉದಯೋನ್ಮುಖ ಆಟಗಾರ ಗೌರವಕ್ಕೂ ಪಾತ್ರರಾಗಿದ್ದಾರೆ.

ವಿನೀತ್‌ಗೆ ಮನಸೋತ ಚೆಟ್ರಿ, ಅಭಿಮಾನಿಗಳು

ಬಿಎಫ್‌ಸಿ ತಂಡದ ಯುವ ಪ್ರತಿಭೆ ವಿನೀತ್‌ ಆಟಕ್ಕೆ ಸ್ವತಃ ಸುನಿಲ್‌ ಚೆಟ್ರಿ ಮನಸೋತಿದ್ದಾರೆ. ತಮ್ಮ ಆಟದ ಬಗ್ಗೆ ಚೆಟ್ರಿಯೇ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ, ಸಲಹೆ ನೀಡುತ್ತಿದ್ದಾರೆ ಎಂಬುದು ವಿನೀತ್‌ ಸಂತಸಕ್ಕೆ ಕಾರಣ. ಇನ್ನು ಬೆಂಗಳೂರಿನ ಫುಟ್ಬಾಲ್‌ ಅಭಿಮಾನಿಗಳಿಗಂತೂ ವಿನೀತ್‌ ಈಗ ಫೇವರಿಟ್‌. ಈಗಾಗಲೇ ಆಸ್ಟಿನ್‌ ಟೌನ್‌ ಸೇರಿ ವಿವಿಧ ಕಡೆಗಳನ್ನು ವಿನೀತ್‌ ಬ್ಯಾನರ್‌ಗಳನ್ನು ಹಾಕಿರುವ ಅಭಿಮಾನಿಗಳು, ಪಂದ್ಯದ ವೇಳೆಯೂ ವಿನೀತ್‌ ಪೋಸ್ಟರ್‌ಗಳನ್ನು ಹಿಡಿದು ಬೆಂಬಲಿಸುತ್ತಿದ್ದಾರೆ.

ಬಜರಂಗ್-ವಿನೇಶ್ ಎದುರು ಸಾಕ್ಷಿ ಮಲಿಕ್ ಗಂಭೀರ ಆರೋಪ: ತುಟಿಬಿಚ್ಚಿದ ಕಾಂಗ್ರೆಸ್ ಶಾಸಕಿ ಫೋಗಟ್!

ಬಿಎಫ್‌ಸಿ ಹಿರಿಯರ ತಂಡ, ಸುನಿಲ್‌ ಚೆಟ್ರಿ ಜೊತೆ ಆಡುವ ಭಾಗ್ಯ ಸಿಕ್ಕಿದೆ. ಕಠಿಣ ಪ್ರಯತ್ನ ಪಟ್ಟು, ಭಾರತ ತಂಡವನ್ನು ಪ್ರತಿನಿಧಿಸುವುದು ನನ್ನ ಮುಂದಿರುವ ಗುರಿ. ಭಾರತದ ಜೆರ್ಸಿ ಧರಿಸಿ ಆಡುವುದು ದೊಡ್ಡ ಗೌರವ. ಅದನ್ನು ಸಾಧಿಸುವ ವಿಶ್ವಾಸವಿದೆ - ವಿನೀತ್‌ ವೆಂಕಟೇಶ್‌

ವಿನೀತ್‌ ಬದುಕಿನ ಹೈಲೈಟ್ಸ್

- 2013ರಲ್ಲಿ ಬಿಎಫ್‌ಸಿ ಅಂಡರ್‌-10 ತಂಡಕ್ಕೆ ಸೇರ್ಪಡೆ

- ಬಳಿಕ ಬಿಎಫ್‌ಸಿ ವಿವಿಧ ವಯೋಮಾನದ ತಂಡದಲ್ಲಿ ಆಟ.

- 2023ರ ಸೂಪರ್‌ ಡಿವಿಶನ್‌ನಲ್ಲಿ ಬಿಎಫ್‌ಸಿ ಕಿರಿಯರ ತಂಡಕ್ಕೆ ನಾಯಕತ್ವ. ತಂಡ ಚಾಂಪಿಯನ್‌

- 2024ರಲ್ಲಿ ಚೆಟ್ರಿ ನಾಯಕತ್ವದ ಎಫ್‌ಸಿ ಹಿರಿಯರ ತಂಡಕ್ಕೆ ಸೇರ್ಪಡೆ.

- ಚೊಚ್ಚಲ ಪಂದ್ಯದಲ್ಲೇ ಗೋಲು ಬಾರಿಸಿದ ಅತಿ ಕಿರಿಯ ಆಟಗಾರ ಎಂಬ ಖ್ಯಾತಿ.

- ಐಎಸ್‌ಎಲ್‌ ಸೆಪ್ಟೆಂಬರ್ ತಿಂಗಳ ಉದಯೋನ್ಮುಖ ಆಟಗಾರ ಪ್ರಶಸ್ತಿ.

ಕನ್ನಡಪ್ರಭ ಪ್ರತಿಭಾನ್ವೇಷಣೆ

ಕರ್ನಾಟಕ ಸಬ್‌ ಜೂನಿಯರ್‌, ಬಿಎಫ್‌ಸಿ ಕಿರಿಯ ಹಾಗೂ ಮೀಸಲು ತಂಡದಲ್ಲಿದ್ದಾಗಲೇ ವಿನೀತ್‌ ವೆಂಕಟೇಶ್‌ರನ್ನು ಗುರುತಿಸಿದ್ದ ‘ಕನ್ನಡಪ್ರಭ’ 2023ರ ನವೆಂಬರ್‌ನಲ್ಲೇ ವಿಶೇಷ ವರದಿ ಪ್ರಕಟಿಸಿತ್ತು.