2026ರ ಫಿಫಾ ವಿಶ್ವಕಪ್‌ನಲ್ಲಿ ಆಡಲ್ಲ: ಶಾಕ್ ಕೊಟ್ಟ ಲಿಯೋನೆಲ್ ಮೆಸ್ಸಿ..!
ಫುಟ್ಬಾಲ್ ಅಭಿಮಾನಿಗಳಿಗೆ ಶಾಕ್ ನೀಡಿದ ಲಿಯೋನೆಲ್ ಮೆಸ್ಸಿ
2026ರ ಫಿಫಾ ವಿಶ್ವಕಪ್ ಆಡೊಲ್ಲವೆಂದ ಫುಟ್ಬಾಲ್ ಮಾಂತ್ರಿಕ
ಕತಾರ್‌ನಲ್ಲಿ ಆಡಿದ ವಿಶ್ವಕಪ್ ನನ್ನ ಕೊನೆಯ ವಿಶ್ವಕಪ್ ಎಂದು ಅರ್ಜೆಂಟೀನಾ ನಾಯಕ
ಬೀಜಿಂಗ್(ಜೂ.14): ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲಿಗರಲ್ಲಿ ಓರ್ವರಾಗಿರುವ ಅರ್ಜೇಂಟೀನಾದ ನಾಯಕ ಲಿಯೋನೆಲ್ ಮೆಸ್ಸಿ 2026ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ತಾವು ಆಡುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಲಕ್ಷಾಂತರ ಅವರ ಅಭಿಮಾನಿಗಳಿಗೆ ಫುಟ್ಬಾಲ್ ಮಾಂತ್ರಿಕ ಮೆಸ್ಸಿ ಶಾಕ್ ನೀಡಿದ್ದಾರೆ.
ಈ ಬಗ್ಗೆ ಚೀನಾದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಕತಾರ್‌ನಲ್ಲಿ ಆಡಿದ ವಿಶ್ವಕಪ್ ನನ್ನ ಕೊನೆಯ ವಿಶ್ವಕಪ್. ಮುಂದಿನ ವಿಶ್ವಕಪ್ ನಾನು ಆಡುವುದಿಲ್ಲ ಎಂದಿದ್ದಾರೆ. 35 ವರ್ಷದ ಲಿಯೋನೆಲ್ ಮೆಸ್ಸಿ ಕಳೆದ ವರ್ಷ ತಮ್ಮ ಚೊಚ್ಚಲ ಫಿಫಾ ವಿಶ್ವಕಪ್ ಎತ್ತಿ ಹಿಡಿದಿದ್ದರು. ಆ ಬಳಿಕ ಅವರು ಮುಂದಿನ ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸದಿದ್ದರೂ, ಕೋಚ್‌ಗಳು ಹಾಗೂ ಸಹ ಆಟಗಾರರು 2026ರ ಫಿಫಾ ವಿಶ್ವಕಪ್‌ನಲ್ಲೂ ಮೆಸ್ಸಿ ಆಡಬಹುದು ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದರು.
ಸದ್ಯ ಈ ಎಲ್ಲಾ ಗೊಂದಲಗಳಿಗೆ ಸ್ವತಃ ಲಿಯೋನೆಲ್ ಮೆಸ್ಸಿಯೇ ಉತ್ತರ ನೀಡಿದ್ದಾರೆ. ಇತ್ತೀಚೆಗಷ್ಟೇ ಫ್ರಾನ್ಸ್‌ನ ಪ್ಯಾರಿಸ್ ಸೈಂಟ್ ಜರ್ಮೈನ್(ಪಿಎಸ್‌ಜಿ) ತಂಡವನ್ನು ತೊರೆದಿರುವ ಮೆಸ್ಸಿ, ಮುಂದೆ ಅಮೆರಿಕದ ಮಿಯಾಮಿ ತಂಡದ ಪರ ಆಡಲಿದ್ದಾರೆ.
ಸ್ಯಾಫ್ ಫುಟ್ಬಾಲ್: ಇಂದು ಟಿಕೆಟ್ ಮಾರಾಟ ಶುರು
ಬೆಂಗಳೂರು: ಜೂ.21ರಿಂದ ಜುಲೈ 4ರ ವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ 14ನೇ ಆವೃತ್ತಿಯ ಸ್ಯಾಫ್ ಫುಟ್ಬಾಲ್ ಚಾಂಪಿಯನ್ಶಿಪ್ ಪಂದ್ಯಗಳ ಟಿಕೆಟ್‌ಗಳನ್ನು ಆನ್ಲೈನ್ನಲ್ಲಿ ಮಾರಾಟಕ್ಕಿಡಲಾಗಿದೆ. ಟಿಕೆಟ್ಗಳು ಜೂನ್ 14ರಿಂದಲೇ ಪೇಟಿಎಂ ಆ್ಯಪ್ನಲ್ಲಿ ಲಭ್ಯವಿರುವುದಾಗಿ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಮಾಹಿತಿ ನೀಡಿದೆ.
23ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದು ದಾಖಲೆ ಬರೆದ ನೋವಾಕ್ ಜೋಕೋವಿಚ್!
ಟಿಕೆಟ್ ಬೆಲೆ 99 ರುಪಾಯಿನಿಂದ ಆರಂಭವಾಗಲಿದ್ದು, ಗರಿಷ್ಠ 799 ರುಪಾಯಿ ನಿಗದಿಪಡಿಸಲಾಗಿದೆ. ಒಟ್ಟು 7 ವಿಭಾಗಗಳಲ್ಲಿ ಟಿಕೆಟ್ ಮಾರಾಟ ಮಾಡಲಾಗುತ್ತದೆ. ಈ ಬಾರಿ 8 ತಂಡಗಳು ಪಾಲ್ಗೊಳ್ಳಲಿದ್ದು, ತಲಾ 4 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ ಗುಂಪು ಹಂತದಲ್ಲಿ ಪಾಕಿಸ್ತಾನ(ಜೂ.21), ನೇಪಾಳ(ಜೂ.24) ಹಾಗೂ ಜೂ.27ಕ್ಕೆ ಕುವೈತ್ ವಿರುದ್ಧ ಆಡಲಿದೆ.
ನೆಟ್ಬಾಲ್: ಭಾರತಕ್ಕೆ ಸತತ 2ನೇ ಸೋಲು
ಜೊಂಜು(ಕೊರಿಯಾ): ಏಷ್ಯನ್ ಯೂತ್ ನೆಟ್ಬಾಲ್ ಚಾಂಪಿಯನ್ಶಿಪ್ನಲ್ಲಿ ಭಾರತ ಸತತ 2ನೇ ಸೋಲು ಕಂಡಿದೆ. ಭಾನುವಾರ ಹಾಂಕಾಂಗ್ ವಿರುದ್ಧ 35-45 ಅಂಕಗಳಿಂದ ಸೋತಿದ್ದ ಭಾರತ, ಸೋಮವಾರ ಮಲೇಷ್ಯಾ ವಿರುದ್ಧ 30-69 ಅಂಕಗಳಿಂದ ಶರಣಾಯಿತು. ಭಾರತ ಮುಂದಿನ ಪಂದ್ಯದಲ್ಲಿ ಮಂಗಳವಾರ ಜಪಾನ್ ವಿರುದ್ಧ ಆಡಲಿದೆ.
ಹಾಕಿ ಏಷ್ಯಾಕಪ್ ಗೆದ್ದ ಭಾರತ ವನಿತೆಯರಿಗೆ ಸನ್ಮಾನ
ಬೆಂಗಳೂರು: ಇತ್ತೀಚೆಗೆ ಜಪಾನ್ನಲ್ಲಿ ನಡೆದ ಕಿರಿಯ ಮಹಿಳೆಯರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಚೊಚ್ಚಲ ಬಾರಿ ಚಾಂಪಿಯನ್ ಆದ ಭಾರತ ತಂಡ ಮಂಗಳವಾರ ಬೆಂಗಳೂರಿಗೆ ಆಗಮಿಸಿದ್ದು, ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಏರ್ಪಡಿಸಲಾಯಿತು. ಬಳಿಕ ಸಾಯ್ ಕೇಂದ್ರದಲ್ಲಿ ಅದ್ಧೂರಿ ಮೆರವಣಿಗೆ, ಸನ್ಮಾನ ಕಾರ್ಯಕಮ ನಡೆಯಿತು. ಮೆರವಣಿಗೆಯಲ್ಲಿ ಆಟಗಾರ್ತಿಯರೇ ಕುಣಿದು ಕುಪ್ಪಳಿಸಿದ್ದು ವಿಶೇಷವಾಗಿತ್ತು. ಸಾಯ್ ಕೇಂದ್ರದ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.
ನೆಟ್ಬಾಲ್: ಭಾರತಕ್ಕೆ ಜಪಾನ್ ವಿರುದ್ಧ ಗೆಲುವು
ಜೊಂಜು(ಕೊರಿಯಾ): ಏಷ್ಯನ್ ಯೂತ್ ನೆಟ್ಬಾಲ್ ಚಾಂಪಿಯನ್ಶಿಪ್ನಲ್ಲಿ ಭಾರತ 2ನೇ ಗೆಲುವು ಸಾಧಿಸಿದೆ. ಮಂಗಳವಾರ ಜಪಾನ್ ವಿರುದ್ಧ ಭಾರತ 68-28 ಅಂಕಗಳಿಂದ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು. ಮೊದಲಾರ್ಧದಲ್ಲೇ 37-14 ಅಂಕಗಳ ಮುನ್ನಡೆ ಸಾಧಿಸಿದ್ದ ಭಾರತ ಕೊನೆವರೆಗೂ ಪಂದ್ಯದ ಮೇಲಿನ ಹಿಡಿತ ಸಡಿಲಗೊಳಿಸಲಿಲ್ಲ. ಆರಂಭಿಕ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ ಗೆದ್ದಿದ್ದ ಭಾರತ ಬಳಿಕ ಹಾಂಕಾಂಗ್ ಹಾಗೂ ಮಲೇಷ್ಯಾ ವಿರುದ್ಧ ಸೋಲನುಭವಿಸಿತ್ತು. ಮುಂದಿನ ಪಂದ್ಯದಲ್ಲಿ ಬುಧವಾರ ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ.