23ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದು ದಾಖಲೆ ಬರೆದ ನೋವಾಕ್ ಜೋಕೋವಿಚ್!
ನೋವಾಕ್ ಜೋಕೋವಿಚ್ 23 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳನ್ನು ಗೆದ್ದು ಪುರುಷರ ಟೆನಿಸ್ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಇದು ಜೋಕೋವಿಚ್‌ಗೆ ಮೂರನೇ ಫ್ರೆಂಚ್ ಒಪನ್ ಕಿರೀಟವಾಗಿದೆ.
ಪ್ಯಾರಿಸ್(ಜೂ.11): ಟೆನಿಸ್ ಸಾಮ್ರಾಜ್ಯದಲ್ಲಿ ನೋವಾಕ್ ಜೋಕೋವಿಚ್ ಸಾಧನೆಯನ್ನು ಜಗತ್ತೇ ಕೊಂಡಾಡುತ್ತಿದೆ. ಇದೀಗ 23ನೇ ಗ್ರ್ಯಾನ್ ಸ್ಲ್ಯಾಂ ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ಹಲವು ದಾಖಲೆ ನಿರ್ಮಿಸಿದ್ದಾರೆ. ಫ್ರೆಂಚ್ ಓಪನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸರ್ಬಿಯಾ ನೋವಾಕ್ ಜೋಕೋವಿಚ್ ನಾರ್ವೆಯ ಕ್ಯಾಸ್ಪರ್ ರುಡ್ ವಿರುದ್ಧ 7-6 (7/1), 6-3, 7-5 ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಪ್ರತಿಷ್ಠಿತ 4 ಒಪನ್ ಟೂರ್ನಿಯನ್ನು ತಲಾ ಮೂರು ಮೂರು ಬಾರಿ ಗೆದ್ದ ಏಕೈಕ ಸಾಧಕ ಅನ್ನೋ ಹೆಗ್ಗಳಿಕಗೂ ಜೋಕೋವಿಚ್ ಪಾತ್ರರಾಗಿದ್ದಾರೆ.
ಇಂದು ನಡೆದ ಫೈನಲ್ ಪಂದ್ಯದಲ್ಲಿ ನೋವಾಕ್ ಮತ್ತೆ ಅಧಿಪತ್ಯ ಸಾಧಿಸುವಲ್ಲಿ ಯಶಸ್ವಿಯಾದರು. 4ನೇ ಶ್ರೇಯಾಂಕಿತ ಕ್ಯಾಸ್ಪರ್ ರುಡ್ ಹೋರಾಟ ಜೋಕೋವಿಚ್ ಮುಂದೆ ನಡೆಯಲಿಲ್ಲ. ರುಡ್‌ಗೆ ಮೇಲುಗೈ ಸಾಧಿಸಲು ಅವಕಾಶವೇ ನೀಡಲಿಲ್ಲ. ಫೈನಲ್ ಪಂದ್ಯ ಬಹುತೇಕ ಒನ್ ಸೈಡೆಡ್ ಪಂದ್ಯವಾಗಿ ಅಂತ್ಯಗೊಂಡಿತು. ಮೊದಲ ಸೆಟ್‌ನಲ್ಲಿ ರುಡ್ ತೀವ್ರ ಸ್ಪರ್ಧೆ ಒಡ್ಡಿದರು. ಆದರೆ ಜೋಕೋವಿಚ್ ಟೈಬ್ರೇಕರ್ ವೇಳೆ 7-6 (7/1) ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದರು.
Australian Open ಜೋಕೋವಿಚ್ ಮುಡಿಗೆ ಆಸ್ಟ್ರೇಲಿಯನ್ ಓಪನ್ ಕಿರೀಟ; ಬಿಕ್ಕಿ ಬಿಕ್ಕಿ ಅತ್ತ ಟೆನಿಸ್ ದಿಗ್ಗಜ
ಎರಡನೆ ಸೆಟ್‌ನಲ್ಲಿ ಜೋಕೋವಿಚ್ ಸಂಪೂರ್ಣ ಮೇಲುಗೈ ಸಾಧಿಸಿದರು. ಎರಡನೇ ಸೆಟ್ 6-3 ಅಂತರದಲ್ಲಿ ಜೋಕೋವಿಚ್ ತಮ್ಮದಾಗಿಸಿದರು. ಇನ್ನೂ 3ನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ಮೂಡಿ ಬಂತು. ಆದರೆ ಜೋಕೋವಿಚ್ 7-5 ಅಂತರದಲ್ಲಿ ಗೆಲುವಿನ ನಗೆ ಬೀರಿದರು.
ದಿಗ್ಗಜ ನಡಾಲ್ ಹಿಂದಿಕ್ಕಿದ ಜೋಕೋವಿಚ್
ಪುರುಷರ ಸಿಂಗಲ್ಸ್ನಲ್ಲಿ ಸದ್ಯ ಜೋಕೋವಿಚ್ 23 ಗ್ರ್ಯಾನ್ ಸ್ಲ್ಯಾಂ ಕಿರೀಟ್ ಮುಡಿಗೇರಿಸಿಕೊಂಡಿದ್ದಾರೆ.ಮತ್ತೊರ್ವ ದಿಗ್ಗಜ ರಾಫೆಲ್ ನಡಾಲ್ 22 ಗ್ರ್ಯಾನ್ಸ್ಲಾಂಗಳನ್ನು ಗೆದ್ದಿದ್ದಾರೆ. ಈ ಮೂಲಕ ಜೋಕೋ ಪುರುಷರ ಸಿಂಗಲ್ಸ್ನಲ್ಲಿ ಅತಿ ಹೆಚ್ಚು ಗ್ರ್ಯಾನ್‌ಸ್ಲಾಂ ಗೆದ್ದ ದಾಖಲೆ ಬರೆದಿದ್ದಾರೆ. ಮಹಿಳಾ ಸಿಂಗಲ್ಸ್ನಲ್ಲಿ ಆಸ್ಪ್ರೇಲಿಯಾದ ಮಾರ್ಗರೇಟ್ ಕೋರ್ಚ್ ದಾಖಲೆಯ 24 ಗ್ರ್ಯಾನ್‌ಸ್ಲಾಂ ಗೆದ್ದಿದ್ದರೆ, ಅಮೆರಿಕದ ಸೆರೆನಾ ವಿಲಿಯಮ್ಸ್ 23, ಜರ್ಮನಿಯ ಸ್ಟೆಫಿ ಗ್ರಾಫ್ 22 ಬಾರಿ ಪ್ರಶಸ್ತಿ ಗೆದ್ದಿದ್ದಾರೆ. ಗರಿಷ್ಠ ಗ್ರ್ಯಾನ್‌ಸ್ಲ್ಯಾಂ ದಾಖಲೆ ಸರಿಗಟ್ಟಲು ಜೋಕೋಗೆ ಇನ್ನೊಂದು ಗ್ರ್ಯಾನ್ ಸ್ಲ್ಯಾಂ ಪ್ರಶಸ್ತಿ ಮಾತ್ರ ಬೇಕಿದೆ.
ಜೋಕೋವಿಚ್ ಮೊದಲ ಸೆಮೀಸ್ನಲ್ಲಿ ವಿಶ್ವ ನಂ.1, ಸ್ಪೇನ್‌ನ ಕಾರ್ಲೋಸ್ ಆಲ್ಕರಜ್ ವಿರುದ್ಧ ಗೆದ್ದು ಪ್ರಶಸ್ತಿ ಸುತ್ತಿಗೇರಿದ್ದರು.. ಮತ್ತೊಂದೆಡೆ ಚೊಚ್ಚಲ ಗ್ರ್ಯಾನ್‌ಸ್ಲಾಂ ಗೆಲ್ಲುವ ನಿರೀಕ್ಷೆಯಲ್ಲಿರುವ ರುಡ್, ಸೆಮೀಸ್ನಲ್ಲಿ ಜರ್ಮನಿಯ ಅಲೆಕ್ಸಾಂಡೆರ್ ಜ್ವೆರೆವ್ರನ್ನು 6-3, 6-4, 6-0 ಅಂತರದಲ್ಲಿ ಮಣಿಸಿ ಸತತ 2ನೇ ಬಾರಿ ಫ್ರೆಂಚ್ ಓಪನ್ ಫೈನಲ್ಗೇರಿದರು. ಒಟ್ಟಾರೆ ರುಡ್‌ಗೆ ಇದು 3ನೇ ಗ್ರ್ಯಾನ್‌ಸ್ಲಾಂ ಫೈನಲ್. ಕಳೆದ ವರ್ಷ ಫ್ರೆಂಚ್ ಓಪನ್ ಫೈನಲ್ನಲ್ಲಿ ನಡಾಲ್ ವಿರುದ್ಧ ಸೋತಿದ್ದರೆ, ಯುಎಸ್ ಓಪನ್ನಲ್ಲಿ ಆಲ್ಕರಜ್ ವಿರುದ್ಧ ಸೋತು ರನ್ನರ್-ಅಪ್ ಆಗಿದ್ದರು.