* ಅಖಿಲ ಭಾರತ ಫುಟ್ಬಾಲ್‌ ಫೆಡರೇಷನ್‌ ಸಂಸ್ಥೆಯ ಅಧ್ಯಕ್ಷ ಹುದ್ದೆಗೆ ಬೈಚುಂಗ್ ಭುಟಿಯಾ ಸ್ಪರ್ಧೆ* ಭಾರತ ಫುಟ್ಬಾಲ್ ಕಂಡ ದಿಗ್ಗಜ ಆಟಗಾರ ಬೈಚುಂಗ್ ಭುಟಿಯಾ* AIFF ಚುನಾವಣೆಯು ಆಗಸ್ಟ್ 28ರಂದು ನಡೆಯಲಿದೆ.

ನವದೆಹಲಿ(ಆ.20): ಭಾರತದ ದಿಗ್ಗಜ ಫುಟ್ಬಾಲಿಗ ಬೈಚುಂಗ್‌ ಭುಟಿಯಾ ಅಖಿಲ ಭಾರತ ಫುಟ್ಬಾಲ್‌ ಫೆಡರೇಷನ್‌(ಎಐಎಫ್‌ಎಫ್‌) ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದು, ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ದೊಡ್ಡ ದೊಡ್ಡ ರಾಜಕೀಯ ನಾಯಕರು ಸಹ ರೇಸ್‌ನಲ್ಲಿರುವ ಕಾರಣ ಚೈಚುಂಗ್ ಭುಟಿಯಾ ಆಯ್ಕೆ ಕಷ್ಟವೆನಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿತ್ತು. ಬಹಳಷ್ಟು ವಿಳಂಬಗೊಂಡಿರುವ ಚುನಾವಣೆಯು ಆಗಸ್ಟ್ 28ರಂದು ನಡೆಯಲಿದೆ.

ಎಎಫ್‌ಸಿ ಟೂರ್ನಿಗಳಲ್ಲಿ ಆಡಲು ಬಿಡಿ: ಫಿಫಾಗೆ ಕೇಂದ್ರ ಮನವಿ

ನವದೆಹಲಿ: ಏಷ್ಯನ್‌ ಫುಟ್ಬಾಲ್‌ ಕಾನ್ಫೆಡರೇಷನ್‌(ಎಎಫ್‌ಸಿ) ಟೂರ್ನಿಗಳಲ್ಲಿ ಭಾರತೀಯ ಕ್ಲಬ್‌ಗಳಿಗೆ ಆಡಲು ಅವಕಾಶ ನೀಡುವಂತೆ ವಿಶ್ವ ಫುಟ್ಬಾಲ್‌ ಆಡಳಿತ ಮಂಡಳಿ ಫಿಫಾಗೆ ಕೇಂದ್ರ ಸರ್ಕಾರ ಮನವಿ ಸಲ್ಲಿಸಿದೆ. ಕೇರಳದ ಗೋಕುಲಂ ಎಫ್‌ಸಿ ಮಹಿಳಾ ತಂಡ ಎಎಫ್‌ಸಿ ಕ್ಲಬ್‌ ಚಾಂಪಿಯನ್‌ಶಿಪ್‌ನಲ್ಲಿ ಆಡಲು ಉಜ್ಬೇಕಿಸ್ತಾನದ ತಾಷ್ಕೆಂಟ್‌ ತಲುಪಿದ್ದು, ಭಾರತೀಯ ಫುಟ್ಬಾಲ್‌ ಫೆಡರೇಷನ್‌(ಎಎಫ್‌ಎಫ್‌ಐ) ಅನ್ನು ಫಿಫಾ ನಿಷೇಧಗೊಳಿಸಿದ ಕಾರಣ ತಂಡ ಅತಂತ್ರಗೊಂಡಿದೆ. ಆಗಸ್ಟ್ 23ರಂದು ಗೋಕುಲಂ ಎಫ್‌ಸಿ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯವನ್ನು ಆಡಬೇಕಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಕ್ರೀಡಾ ಸಚಿವಾಲಯ ಫಿಫಾ ಮತ್ತು ಎಎಫ್‌ಸಿಗೆ ಇ-ಮೇಲ್‌ ಮೂಲಕ ಮನವಿ ಸಲ್ಲಿಸಿದೆ.

ಕೆಲದಿನಗಳ ಹಿಂದಷ್ಟೇ ಅಖಿಲ ಭಾರತ ಫುಟ್ಬಾಲ್‌ ಫೆಡರೇಶನ್‌(ಎಐಎಫ್‌ಎಫ್‌) ಮೇಲಿನ ಅಂತಾರಾಷ್ಟ್ರೀಯ ಫುಟ್ಬಾಲ್ ಫೆಡರೇಶನ್‌(ಫಿಫಾ) ವಿಧಿಸಿರುವ ಅಮಾನತು ತೆರವಿಗೆ ಬೇಕಾದ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಚ್‌ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ, ಈಗಾಗಲೇ 2 ಬಾರಿ ಫಿಫಾ ಜೊತೆ ಮಾತುಕತೆ ನಡೆಸಲಾಗಿದೆ ಎಂದಿತ್ತು

ಫಿಫಾ AIFF ಬ್ಯಾನ್ ಮಾಡಿದ್ದರ ಬಗ್ಗೆ ಮಾಜಿ ನಾಯಕ ಬೈಚುಂಗ್ ಭುಟಿಯಾ ಅಚ್ಚರಿಯ ಹೇಳಿಕೆ..!

ಭಾರತೀಯ ಫುಟ್ಬಾಲ್‌ ಆಡಳಿತದಲ್ಲಿ ಹೊರಗಿನವರ ಪ್ರಭಾವದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್‌ ಸಂಸ್ಥೆಗಳ ಒಕ್ಕೂಟ (ಫಿಫಾ) ಅಖಿಲ ಭಾರತ ಫುಟ್ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಮೇಲೆ ನಿಷೇಧ ಹೇರಿತ್ತು. ಸುಪ್ರೀಂಕೋರ್ಚ್‌ ನೇಮಿತ ಆಡಳಿತ ಮಂಡಳಿ(ಸಿಒಎ)ಯನ್ನು ರದ್ದುಗೊಳಿಸಿ, ಕಾನೂನು ತಿದ್ದುಪಡಿ ಮಾಡಿದ ಬಳಿಕ ನಿಷೇಧ ಹಿಂಪಡೆಯುವುದಾಗಿ ಫಿಫಾ ಸ್ಪಷ್ಟಪಡಿಸಿದೆ. ಕೆಲ ದಿನಗಳ ಹಿಂದಷ್ಟೇ ಆಡಳಿತ ಸಮಿತಿಯು ರಾಷ್ಟ್ರೀಯ ಕ್ರೀಡಾ ನೀತಿ ಮತ್ತು ಮಾರ್ಗಸೂಚಿಯ ಅನ್ವಯ ಸಂವಿಧಾನ ರಚನೆ ಮಾಡಬೇಕು ಎಂದು ಸುಪ್ರೀಂಕೋರ್ಚ್‌ ಸೂಚಿಸಿತ್ತು. ಆದರೆ ಸಿಒಎ ಭಾರತೀಯ ಫುಟ್ಬಾಲ್‌ನ ದೈನಂದಿನ ಚಟುವಟಿಕೆಗಳ ಮೇಲ್ವಿಚಾರಣೆ ನಡೆಸುವುದನ್ನು ವಿರೋಧಿಸಿದ್ದ ಫಿಫಾ, ಆದಷ್ಟು ಬೇಗ ಸಮಿತಿಯನ್ನು ರದ್ದುಗೊಳಿಸಿ ಸ್ವತಂತ್ರ ಚುನಾವಣಾ ಸಮಿತಿಯ ಕಣ್ಗಾವಲಿನಲ್ಲಿ ಚುನಾವಣೆ ನಡೆಸಿ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡುವಂತೆ ಸೂಚಿಸಿತ್ತು. ಫಿಫಾ ಸೂಚನೆಯನ್ನು ಪಾಲಿಸದ ಕಾರಣ ಎಐಎಫ್‌ಎಫ್‌ ಮೇಲೆ ನಿಷೇಧ ಹೇರಲಾಗಿದೆ.