ಫಿಫಾ AIFF ಬ್ಯಾನ್ ಮಾಡಿದ್ದರ ಬಗ್ಗೆ ಮಾಜಿ ನಾಯಕ ಬೈಚುಂಗ್ ಭುಟಿಯಾ ಅಚ್ಚರಿಯ ಹೇಳಿಕೆ..!
ಭಾರತೀಯ ಫುಟ್ಬಾಲ್ ಫೆಡರೇಷನ್ ಬ್ಯಾನ್ ಮಾಡಿದ ಫಿಫಾ
ಫಿಫಾ ನಡೆ ಅತ್ಯಂತ ಕಠೋರವಾದದ್ದು ಎಂದು ಭಾರತ ಫುಟ್ಬಾಲ್ ಮಾಜಿ ನಾಯಕ ಭುಟಿಯಾ
ವ್ಯವಸ್ಥೆ ಸರಿದಾರಿಗೆ ತರಲು ಇದು ಸಕಾಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಬೈಚುಂಗ್ ಭುಟಿಯಾ
ನವದೆಹಲಿ(ಆ.16): ಭಾರತೀಯ ಫುಟ್ಬಾಲ್ ಫೆಡರೇಷನ್(AIFF)ನಲ್ಲಿ ಮೂರನೇ ವ್ಯಕ್ತಿಗಳ ಹಸ್ತಾಕ್ಷೇಪವಾಗುತ್ತಿರುವುದರಿಂದ ಫಿಫಾ, ಮಂಗಳವಾರವಾದ ಇಂದು(ಆ.16) ಭಾರತೀಯ ರಾಷ್ಟ್ರೀಯ ಫುಟ್ಬಾಲ್ ಫೆಡರೇಶನ್ ಮಾನ್ಯತೆಯನ್ನು ರದ್ದು ಪಡಿಸಿದೆ. ಈ ವಿಚಾರದ ಕುರಿತಂತೆ ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದು, AIFF ಬ್ಯಾನ್ ಮಾಡಿರುವ ಫಿಫಾ ನಡೆಯು ಅತ್ಯಂತ ಕಠೋರವಾದ ತೀರ್ಮಾನವಾಗಿದೆ, ಆದರೆ ವ್ಯವಸ್ಥೆಯನ್ನು ಸರಿದಾರಿಗೆ ತರಲು ಇದೊಂದು ಸುವರ್ಣಾವಕಾಶವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಗಸ್ಟ್ 16ರ ಬೆಳ್ಳಂಬೆಳಗ್ಗೆ ಫಿಫಾ ಸಂಸ್ಥೆಯು, ಭಾರತೀಯ ಫುಟ್ಬಾಲ್ ಫೆಡರೇಷನ್‌ನಲ್ಲಿ ಮೂರನೇ ವ್ಯಕ್ತಿಗಳ ಹಸ್ತಾಕ್ಷೇಪವಾಗುತ್ತಿದೆ. ಇದು ಫಿಫಾ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಫಿಫಾ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು. ಇದರ ಬೆನ್ನಲ್ಲೇ ಭಾರತದಲ್ಲಿ 2022ನೇ ಸಾಲಿನ ಫಿಫಾ ಅಂಡರ್ 17 ಮಹಿಳಾ ವಿಶ್ವಕಪ್ ಆಯೋಜನೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಮುಂಬರುವ ಅಕ್ಟೋಬರ್ 11ರಿಂದ 30ರವರೆಗೆ ಭಾರತದಲ್ಲಿ ಅಂಡರ್ 17 ಮಹಿಳಾ ಫುಟ್ಬಾಲ್ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿತ್ತು.
ಭಾರತೀಯ ಫುಟ್ಬಾಲ್ ಫೆಡರೇಷನ್, ಫಿಫಾ ಕಾನೂನುಗಳನ್ನು ಗಂಭೀರವಾಗಿ ಉಲ್ಲಂಘಿಸಿರುವುದರಿಂದಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ AIFF ಸಂಸ್ಥೆಯ ಮಾನ್ಯತೆಯನ್ನು ರದ್ದುಪಡಿಸಲಾಗಿದೆ. 85 ವರ್ಷಗಳ ಫಿಫಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ AIFF ಸಂಸ್ಥೆಯು ಬ್ಯಾನ್ ಆಗಿದೆ.
ಭಾರತೀಯ ರಾಷ್ಟ್ರೀಯ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷರಾಗಿದ್ದ ಪ್ರಪುಲ್ ಪಟೇಲ್ ಅವರ ಅಧಿಕಾರವಧಿ ಮುಗಿದಿದ್ದರೂ ಸಹಾ ಹೊಸದಾಗಿ ಚುನಾವಣೆ ನಡೆಸದೆ ಅಧ್ಯಕ್ಷರಾಗಿ ಅಧಿಕಾರದಲ್ಲಿ ಮುಂದುವರೆದಿದ್ದರು. ಇದಾದ ಬಳಿಕ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಪ್ರಪುಲ್ ಪಟೇಲ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಆಡಳಿತಾಧಿಕಾರಿಗಳ ಸಮಿತಿಯೊಂದನ್ನು ರಚಿಸಿತ್ತು.
FIFA suspends AIFF ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಮಾನ್ಯತೆ ರದ್ದುಪಡಿಸಿದ ಫಿಫಾ..! ಕಾರಣ ಏನು?
ಇದೀಗ ಈ ಕುರಿತಂತೆ ಪಿಟಿಐ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಬೈಚುಂಗ್ ಭುಟಿಯಾ, ಭಾರತೀಯ ಫುಟ್ಬಾಲ್ ಸಂಸ್ಥೆಯನ್ನು ಫಿಫಾ ಬ್ಯಾನ್ ಮಾಡಿದ್ದು ನಿಜಕ್ಕೂ ದುರಾದೃಷ್ಟಕರ. ಇದು ಫಿಫಾ ತೆಗೆದುಕೊಂಡ ಕಠಿಣ ತೀರ್ಮಾನ. ಹೀಗಿದ್ದೂ ಕ್ರೀಡೆಯ ಹಿತಾದೃಷ್ಟಿಯಿಂದ ವ್ಯವಸ್ಥೆಯನ್ನು ಸರಿದಾರಿಗೆ ತರಲು ಇದೊಂದು ಸುವರ್ಣಾವಕಾಶವಾಗಿದೆ ಎಂದು ಹೇಳಿದ್ದಾರೆ.
ಭಾರತೀಯ ಫುಟ್ಬಾಲ್ ಸಂಸ್ಥೆಯನ್ನು ಫಿಫಾ ಬ್ಯಾನ್ ಮಾಡಿರುವುದು ಅತ್ಯಂತ ದುರಾದೃಷ್ಟಕರ. ಇದು ಭಾರತೀಯ ಫುಟ್ಬಾಲ್ ಮೇಲೆ ಫಿಫಾ ತೆಗೆದುಕೊಂಡಿರುವ ಅತ್ಯಂತ ಕಠಿಣ ತೀರ್ಮಾನವಾಗಿದೆ. ಆದರೆ ಇದೇ ವೇಳೆ ವ್ಯವಸ್ಥೆಯನ್ನು ಸರಿಪಡಿಸಲು ಒಂದೊಳ್ಳೆಯ ಸುವರ್ಣಾವಕಾಶ ಒದಗಿ ಬಂದಿದೆ. ಈ ಸಂದರ್ಭದಲ್ಲಿ ಫುಟ್ಬಾಲ್ ಫೆಡರೇಷನ್, ಎಲ್ಲಾ ರಾಜ್ಯ ಫುಟ್ಬಾಲ್ ಸಂಸ್ಥೆಗಳು ಒಟ್ಟಾಗಿ ನಿಂತು ಈ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಬೇಕು. ಪ್ರತಿಯೊಬ್ಬರು ದೇಶದ ಫುಟ್ಬಾಲ್ ಕ್ರೀಡೆಯನ್ನು ಉತ್ತಮಪಡಿಸಲು ಕೆಲಸ ಮಾಡಬೇಕು ಎಂದು ಬೈಚುಂಗ್ ಭುಟಿಯಾ ಕರೆ ನೀಡಿದ್ದಾರೆ.