ಫ್ಯಾನ್ ಸಹಾಯದಿಂದ ಐಸ್ ಕ್ರೀಂ ಮಾಡಿದ ಮಹಿಳೆ, ಆನಂದ್ ಮಹೀಂದ್ರಾ ವಿಡಿಯೋ ವೈರಲ್

ಐಸ್ ಕ್ರೀಂ ಮಾಡ್ಬೇಕು ಅಂದಾಗ ಫ್ರಿಡ್ಜ್ ಬೇಕು. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಮನೆಯಲ್ಲಿ ಫ್ರಿಡ್ಜ್ ಇಲ್ಲ, ಐಸ್ ಕ್ರೀಂ ಮಾಡೋಕೆ ಆಗಲ್ಲ ಅಂತ ನೀವು ಇನ್ಮುಂದೆ ಚಿಂತೆ ಮಾಡ್ಬೇಕಾಗಿಲ್ಲ. ಮಹಿಳೆ ಸೂಪರ್ ಐಡಿಯಾ ನೀಡಿದ್ದಾಳೆ. ವಿಡಿಯೋವನ್ನು ಆನಂದ್ ಮಹೀಂದ್ರಾ ಪೋಸ್ಟ್ ಮಾಡಿದ್ದಾರೆ. 
 

Woman Unique Style Of Preparing Ice Cream Has Left Anand Mahindra Mighty Impressed

ಉದ್ಯಮಿ ಆನಂದ್ ಮಹೀಂದ್ರಾ ಅವರ ಮತ್ತೊಂದು ಟ್ವೀಟ್  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಾರಿ ಐಸ್ ಕ್ರೀಂ ತಯಾರಿಸುವ ವಿಭಿನ್ನ ಟ್ರಿಕ್ ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಜನರು ಫ್ಯಾನನ್ನು ಹೀಗೂ ಬಳಕೆ ಮಾಡ್ಬಹುದು ಎಂದು ಹುಬ್ಬೇರಿಸಿದ್ದಾರೆ. ಅಷ್ಟಕ್ಕೂ ಆನಂದ್ ಮಹೀಂದ್ರಾ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಏನಿದೆ ಎಂಬುದರ ವಿವರ ಇಲ್ಲಿದೆ.  ವೈರಲ್ (Viral) ಆಗಿರುವ ಈ ವಿಡಿಯೋ (Video) ದಲ್ಲಿ ಮಹಿಳೆಯೊಬ್ಬರು ಐಸ್ ಕ್ರೀಂ ತಯಾರಿಸ್ತಿದ್ದಾರೆ. ಐಸ್ ಕ್ರೀಂ (Ice Cream) ಮಿಶ್ರಣವನ್ನು ಫ್ರಿಡ್ಜ್ ನ ಫ್ರೀಜರ್ ನಲ್ಲಿ ಇಡುವ ಬದಲು ಮಿಶ್ರಣ ಗಟ್ಟಿಯಾಗಲು ಫ್ಯಾನ್ ಬಳಸಿದ್ದಾರೆ.  

ಬೇಸಿಗೆ ಶುರುವಾಗಿದೆ. ಸೆಕೆ ಜೊತೆ ಐಸ್ ಕ್ರೀಂ ತಿನ್ನುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಆದ್ರೆ ಮನೆಯಲ್ಲಿ ಫ್ರಿಡ್ಜ್ ಇಲ್ಲವೆಂದಾಗ ಐಸ್ ಕ್ರೀಂ ತಯಾರಿಸೋದು ಕಷ್ಟ. ಹಾಗಾಗಿಯೇ ಅನೇಕರು ಐಸ್ ಕ್ರೀಂ ತಯಾರಿಸುವ ಆಸೆ ಕೈಬಿಡ್ತಾರೆ. ಅಂಥವರಿಗೆ ಈ ವಿಡಿಯೋ ತುಂಬಾ ಸಹಕಾರಿಯಾಗಿದೆ. ಯಾಕೆಂದ್ರೆ ಇಲ್ಲಿ ಐಸ್ ಕ್ರೀಂ ತಯಾರಿಸೋಕೆ ಫ್ರಿಡ್ಜ್ ಬೇಕಾಗಿಲ್ಲ. ಆದ್ರೆ ಐಸ್ ಕ್ಯೂಬ್ ಬೇಕು ಅನ್ನೋದು ನೆನಪಿರಲಿ.  

ಆನಂದ್ ಮಹೀಂದ್ರಾ (Anand Mahindra) ಅವರು ಮಾರ್ಚ್ 29 ರಂದು ಟ್ವಿಟರ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.  ಎಲ್ಲಿ ಇಚ್ಛೆ ಇರುತ್ತದೆಯೋ ಅಲ್ಲಿ ಒಂದು ಮಾರ್ಗವಿರುತ್ತದೆ. ಹ್ಯಾಂಡ್ ಮೇಡ್ ಆಂಡ್ ಫ್ಯಾನ್ ಮೇಡ್ ಐಸ್ ಕ್ರೀಂ, ಭಾರತದಲ್ಲಿ ಮಾತ್ರ ಎಂದು ಶೀರ್ಷಿಕೆ ಹಾಕಿದ್ದಾರೆ.  ಆನಂದ್ ಮಹೀಂದ್ರಾ ಈ ಟ್ವಿಟ್  ಸಾಕಷ್ಟು ವೈರಲ್ ಆಗಿದೆ. 12 ಲಕ್ಷಕ್ಕೂ ಹೆಚ್ಚು ಬಾರಿ ಇದನ್ನು ವೀಕ್ಷಿಸಲಾಗಿದೆ. 52 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಮತ್ತು 5736 ರೀಟ್ವೀಟ್‌ ಆಗಿದೆ. ನೂರಾರು ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. 

ಫ್ರಿಡ್ಜ್ ಇಲ್ಲದೆ  ಫ್ಯಾನ್ ಸಹಾಯದಿಂದ ತಯಾರಾದ ಐಸ್ ಕ್ರೀಂ: ಆನಂದ್ ಮಹೀಂದ್ರಾ ಪೋಸ್ಟ್ ಮಾಡಿರುವ ವಿಡಿಯೋ ಎರಡೂವರೆ ನಿಮಿಷದ್ದಾಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಮೊದಲು ಐಸ್ ಕ್ರೀಂಗೆ ಮಿಶ್ರಣ ಸಿದ್ಧಪಡಿಸಿಕೊಳ್ತಾರೆ. ನಂತ್ರ ಅದನ್ನು ಹಿಡಿಕೆ ಇರುವ ಸ್ಟೀಲ್ ಪಾತ್ರೆಗೆ ಹಾಕಿ, ಮುಚ್ಚಳ ಮುಚ್ಚುತ್ತಾರೆ. ನಂತ್ರ ಸ್ಟೂಲ್ ಮೇಲೆ ಇಟ್ಟಿರುವ ಇನ್ನೊಂದು ದೊಡ್ಡ ಸ್ಟೀಲ್ ಪಾತ್ರೆಯ ಮಧ್ಯದಲ್ಲಿ ಐಸ್ ಕ್ರೀಂ ತುಂಬಿದ ಪಾತ್ರೆಯನ್ನು ಇಡ್ತಾರೆ. ನಂತ್ರ ದೊಡ್ಡ ಪಾತ್ರೆಯ ತುಂಬ ಐಸ್ ಕ್ಯೂಬ್ ಹಾಕ್ತಾರೆ. ಇದಾದ ಬಳಿಕ ಸೀಲಿಂಗ್ ಫ್ಯಾನ್ ಗೆ ಕಟ್ಟಿದ್ದ ಹಗ್ಗವನ್ನು ಐಸ್ ಕ್ರೀಂ ತುಂಬಿದ ಪಾತ್ರೆಯ ಹಿಡಿಕೆಗೆ ಬಿಗಿದು ಫ್ಯಾನ್ ಆನ್ ಮಾಡುತ್ತಾರೆ. ಫ್ಯಾನ್ ವೇಗವಾಗಿ ತಿರುಗುತ್ತಿದ್ದಂತೆ ಈ ಪಾತ್ರೆ ಕೂಡ ತಿರುಗುತ್ತದೆ. ಪಾತ್ರೆಯ ಸುತ್ತ ಐಸ್ ಇದ್ದ ಕಾರಣ, ಐಸ್ ಕ್ರೀಮ್ ಮಿಶ್ರಣ ಕ್ರಮೇಣ ಗಟ್ಟಿಯಾಗ್ತಾ ಬರುತ್ತದೆ. ಸ್ವಲ್ಪ ಸಮಯ ಫ್ಯಾನ್ ಉರಿಸಿದ ನಂತ್ರ ಮಹಿಳೆ ಐಸ್ ಕ್ರೀಂ ತುಂಬಿದ ಪಾತ್ರೆಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ, ಅದ್ರ ಮುಚ್ಚಳ ತೆಗೆದು, ಸ್ಪೂನ್ ಸಹಾಯದಿಂದ ಇನ್ನೊಂದು ಪಾತ್ರೆಗೆ ಐಸ್ ಕ್ರೀಂ ಹಾಕ್ತಾರೆ. 

ಬಳಕೆದಾರರಿಂದ ಬಂದಿದೆ ಒಂದಿಷ್ಟು ಕಮೆಂಟ್ : ಆನಂದ್ ಮಹೀಂದ್ರಾ ಪೋಸ್ಟ್ ಮಾಡಿದ ಈ ವಿಡಿಯೋಕ್ಕೆ ಜನರು ಪ್ರತಿಕ್ರಿಯೆ ನೀಡಿದ್ದಾರೆ. ಇದು ದೇಸಿ ಗುಣಮಟ್ಟದ ಐಸ್ ಕ್ರೀಂ ಅಂತಾ ಒಬ್ಬರು ಹೇಳಿದ್ರೆ ಮತ್ತೊಬ್ಬರು ಇದು ಪ್ರಪಂಚದ ಅತ್ಯಂತ ಶುದ್ಧ ಐಸ್ ಕ್ರೀಂ ಎಂದಿದ್ದಾರೆ. ಅಷ್ಟೇ ಅಲ್ಲ ಕೆಲವರು ಇದು ಭಾರತದಲ್ಲಿ ಮಾತ್ರ ಸಾಧ್ಯ ಎಂಬುದನ್ನು ಒಪ್ಪಿಕೊಂಡಿದ್ದಾರೆ.  

Latest Videos
Follow Us:
Download App:
  • android
  • ios