ಬೇಕರಿಗಳೆಂದರೆ ಮೊದಲು ನೆನಪಾಗುವುದೇ 'ಅಯ್ಯಂಗಾರ್ ಬೇಕರಿ'. ಇಲ್ಲಿನ ರುಚಿ ನಿಮಗೆಲ್ಲರಿಗೂ ಗೊತ್ತು. ಆದರೆ ಜನರು ಅಷ್ಟೊಂದು ಇಷ್ಟಪಡಲು ಕಾರಣವೇನು ಗೊತ್ತಾ?.
ಮುಂಬೈನಲ್ಲಿ ಇರಾನಿ ಕೆಫೆಗಳು ಹೇಗೆ ಫೇಮಸ್ಸೋ ಹಾಗೆ ನಮ್ಮ ಬೆಂಗಳೂರಿನಲ್ಲಿ ಅಯ್ಯಂಗಾರ್ಸ್ ಬೇಕರಿಗಳು. ಹನಿ ಕೇಕ್, ಕ್ರೀಮ್ ಕೇಕ್, ಹುಟ್ಟುಹಬ್ಬದ ಕೇಕ್, ವೆನಿಲ್ಲಾ ಕ್ರೀಮ್, ಬೆಣ್ಣೆ ಬಿಸ್ಕತ್ತು, ಆಗಷ್ಟೇ ತಯಾರಿಸುವ ಬಿಸಿ ಬಿಸಿಯಾದ ಬ್ರೆಡ್‌ಗಳಿಗೆ ಹೆಸರುವಾಸಿಯಾದ ಅಯ್ಯಂಗಾರ್ಸ್ ಬೇಕರಿಗಳ ರುಚಿಯನ್ನು ಬಲ್ಲವನೇ ಬಲ್ಲ. ಬಹುತೇಕರ ಮನೆಗಳಲ್ಲಿ ಈಗಲೂ ಯಾವುದೇ ಸಮಾರಂಭವಾಗಲೀ ಹೆಚ್ಚಿನ ಸಿಹಿ ತಿಂಡಿಗಳನ್ನು ಆರ್ಡರ್ ಮಾಡುವುದು ಇಲ್ಲಿಂದಲೇ. ಆದರೆ ಒಂದು ಕಾಲದಲ್ಲಿ ನಗರದ ಹೆಗ್ಗರುತುಗಳಾಗಿದ್ದ ಈ ಬೇಕರಿಗಳು, ಪೇಸ್ಟ್ರಿಗಳು, ಕಪ್ ಕೇಕ್ ಅಂಗಡಿಗಳು ಬಂದ ಮೇಲೆ ಸೈಡ್ ಲೈನ್ ಆದಂತೆ ಕಂಡರೂ ಇಂದಿಗೂ ತಮ್ಮ ಹಳೆಯ ಚಾರ್ಮ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ ಎಂದರೆ ತಪ್ಪಾಗಲಾರದು. ಅದಕ್ಕೆ ಸಾಕ್ಷಿ ಜನ ಈಗಲೂ ಇಷ್ಟಪಟ್ಟು ಹುಡುಕಿಕೊಂಡು ಅಯ್ಯಂಗಾರ್ಸ್ ಬೇಕರಿಗಳತ್ತ ಹೆಜ್ಜೆ ಹಾಕುವುದು.
ಇದೇ ನೋಡಿ ಮೊದಲ ಅಯ್ಯಂಗಾರ್ ಬೇಕರಿ
2018ರ ಹೊತ್ತಿಗೆ ಬೆಂಗಳೂರಿನಲ್ಲಿ ಸರಿಸುಮಾರು 500 ಅಯ್ಯಂಗಾರ್ಸ್ ಬೇಕರಿಗಳಾಗಿದ್ದವು. ಇದರಲ್ಲಿ ಸುಮಾರು 20 ಮಾತ್ರ ಮೂಲವಾಗಿವೆ. 1898 ರಲ್ಲಿ ನಗರದಲ್ಲಿ ಮೊದಲ ಅಯ್ಯಂಗಾರ್ ಬೇಕರಿ ಪ್ರಾರಂಭಿಸಲಾಯಿತು. ಅದರ ಹೆಸರು ಬಿಬಿ ಬೇಕರಿ. ಹಾಸನ ಜಿಲ್ಲೆಯ ಓಲಿಕ್ಕಲ್ ಮೂಲದ ಎಚ್.ಎಸ್. ತಿರುಮಲಾಚಾರ್ ಅವರು 19 ನೇ ಶತಮಾನದ ಉತ್ತರಾರ್ಧದಲ್ಲಿ ಈ ಅಯ್ಯಂಗಾರ್ಸ್ ಬೇಕರಿಯನ್ನು ಪ್ರಾರಂಭಿಸಿದರು. ಆ ದಿನಗಳಲ್ಲಿ, ಭಾರತೀಯರಿಗೆ ಯುರೋಪಿಯನ್ ಬ್ರೆಡ್ ತಯಾರಿಕೆಯ ಪರಿಚಯವಿರಲಿಲ್ಲ. ಬೇಕರಿ ತೆರೆಯುವ ಮೊದಲು, ತಿರುಮಲಾಚಾರ್ ಒಂದು ಸಿಹಿತಿಂಡಿ ಅಂಗಡಿಯನ್ನು ಹೊಂದಿದ್ದರು. ಅವರ ಸಿಹಿತಿಂಡಿ ಅಂಗಡಿಗೆ ಭೇಟಿ ನೀಡುತ್ತಿದ್ದ ಒಬ್ಬ ಇಂಗ್ಲಿಷ್ ವ್ಯಕ್ತಿ, ಅವರಿಗೆ ಬ್ರೆಡ್ ಬೇಯಿಸುವುದು ಹೇಗೆಂದು ಕಲಿಸಿದರು. ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಅವರು ಪ್ರಾರಂಭಿಸಿದ ಬೇಕಿಂಗ್ ಯೂನಿಟ್ ಬಿಬಿ ಬೇಕರಿ (ಬೆಂಗಳೂರು ಬ್ರಾಹ್ಮಣ ಬೇಕರಿ), ಅಯ್ಯಂಗಾರ್ಸ್ ಬ್ರಾಂಡ್‌ನ ಮೂಲ.
ಮೊದಲು ಹೀಗಿತ್ತು
ಆರಂಭದಲ್ಲಿ, ಅಯ್ಯಂಗಾರ್ಸ್ ಬೇಕರಿಗಳು ಈಸ್ಟ್ ಆಧಾರಿತ ಉತ್ಪನ್ನಗಳನ್ನು ಮಾತ್ರ ನೀಡುತ್ತಿದ್ದವು. ಬ್ರೆಡ್, ರಸ್ಕ್, ಕೈಯಿಂದ ತಯಾರಿಸಿದ ಕುಕೀಸ್, ಪಫ್ಸ್, ಬನ್ಸ್ ಮತ್ತು ಬೇಸಿಕ್ ಕೇಕ್‌ಗಳು ಮೆನುವನ್ನು ಕಾಣಬಹುದಿತ್ತು. ಕೇಕ್‌ಗಳ ಮೇಲೆ ಕ್ರೀಮ್ ಅಥವಾ ಐಸಿಂಗ್ ಇರಲಿಲ್ಲ. ನಂತರ ಗೋಧಿ ಬ್ರೆಡ್‌ನಂತಹ ವಿಭಿನ್ನ ಉತ್ಪನ್ನಗಳು ಬಂದವು. ಕ್ರಮೇಣ, ಮೊಟ್ಟೆ ಪಫ್‌ಗಳು, ಪನೀರ್ ಪಫ್‌ನಂತಹ ಉತ್ಪನ್ನಗಳು ಅಯ್ಯಂಗಾರ್ಸ್ ಬೇಕರಿಗಳನ್ನು ಪ್ರವೇಶಿಸಿದವು. ಅದೇ ರೀತಿ, ಪೇಸ್ಟ್ರಿಗಳಲ್ಲಿ ವಿವಿಧ ಉತ್ಪನ್ನಗಳನ್ನು ಸೇರಿಸಲಾಯಿತು. ಸ್ಟ್ರಾಬೆರಿ, ಚಾಕೊಲೇಟ್ ಮತ್ತು ಅನಾನಸ್‌ನಂತಹ ಅನೇಕ ರುಚಿ ಸೇರಿಸಲಾಯಿತು.
ಅಯ್ಯಂಗಾರ್ ಬೇಕರಿಗಳು ಉತ್ಪನ್ನಗಳ ಗುಣಮಟ್ಟದ ಮೇಲೆ ಕೇಂದ್ರೀಕರಿಸುತ್ತಾರೆ. ಬ್ರ್ಯಾಂಡ್‌ನ ಮೂಲ ಅಂಶವೆಂದರೆ ರುಚಿ. ಕಾಲಾನಂತರದಲ್ಲಿ ಪೇಸ್ಟ್ರಿಯೊಂದಿಗೆ ವ್ಯತ್ಯಾಸವು ಪ್ರಾರಂಭವಾಯಿತು. ಅಯ್ಯಂಗಾರ್‌ಗಳ ಯಶಸ್ಸಿಗೆ ರುಚಿ ಪ್ರಮುಖವಾಗಿದೆ.ಸ್ಥೂಲ ಸಮೀಕ್ಷೆಯ ಪ್ರಕಾರ, ಶೇ. 70 ರಷ್ಟು ಅಯ್ಯಂಗಾರ್ ಬೇಕರಿಗಳು ಇನ್ನೂ ಸಾಂಪ್ರದಾಯಿಕ ಉತ್ಪನ್ನಗಳನ್ನು ಪೂರೈಸುತ್ತಿವೆ ಮತ್ತು ಶೇ. 30 ರಷ್ಟು ಹೊಸ ಮೆನುಗಳೊಂದಿಗೆ ಬರುತ್ತಿವೆ.
ಅಯ್ಯಂಗಾರ್ಸ್ ಬೇಕರಿಗಳ ಹೆಚ್ಚಿನ ಮಾರ್ಕೆಟಿಂಗ್ ಬಾಯಿ ಮಾತಿನ ಮೂಲಕವೇ ನಡೆಯುತ್ತದೆ. ಆದ್ದರಿಂದ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಲು ಹೆಚ್ಚು ಹಣದ ಅಗತ್ಯವಿಲ್ಲ. ಅನೇಕ ಗ್ರಾಹಕರು ಅವರ ದೀರ್ಘಕಾಲೀನ ಸಹಚರರು. ಅಂದರೆ ಹೆಚ್ಚಾಗಿ ಗ್ರಾಹಕರು ಎರಡನೇ ಅಥವಾ ಮೂರನೇ ತಲೆಮಾರಿನವರು. ದುಬೈನ ಜನರು ಬೇಕರಿ ಉತ್ಪನ್ನಗಳನ್ನು ಖರೀದಿಸಲು ಹಾಸನಕ್ಕೆ ಬರುತ್ತಾರೆ. ಇವರು ಜಾಹೀರಾತುಗಳಿಗಾಗಿ ಹೆಚ್ಚು ಖರ್ಚು ಮಾಡುವುದಿಲ್ಲ. ಬ್ರಾಂಡ್ ನಿರ್ಮಾಣದ ವಿಷಯದಲ್ಲಿ ಗ್ರಾಹಕರೊಂದಿಗಿನ ಸಂಬಂಧವು ಅಯ್ಯಂಗಾರ್ ಬೇಕರಿಗಳ ಬಲ.

