ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ ಬೇಗ ಹಾಳಾಗದಂತೆ ದೀರ್ಘಕಾಲ ಸಂಗ್ರಹಿಸಿಡಬೇಕೇ? ಹಾಗಿದ್ದರೆ ಜಾರ್ನ ಸ್ವಚ್ಛತೆ, ತೇವಾಂಶ, ಉಪ್ಪಿನ ಪ್ರಮಾಣ ಮತ್ತು ಸಂಗ್ರಹಣೆಯ ಬಗ್ಗೆ ಗಮನ ಹರಿಸಿ. ಉಪ್ಪಿನಕಾಯಿಯನ್ನು ಸುರಕ್ಷಿತವಾಗಿ ಸಂಗ್ರಹಿಸಲು ಈ ಸರಳ ಟಿಪ್ಸ್ ಪಾಲಿಸಿ.
ವರ್ಷಗಟ್ಟಲೆ ಉಪ್ಪಿನಕಾಯಿ ಕೆಡದಂತೆ ಇರಬೇಕಾ?
ಚಳಿಗಾಲದಲ್ಲಿ ಮನೆಯಲ್ಲೇ ತಯಾರಿಸಿದ ಉಪ್ಪಿನಕಾಯಿ ಊಟದ ರುಚಿಯನ್ನು ಹೆಚ್ಚಿಸುತ್ತದೆ. ಖಾರ, ಹುಳಿ, ಉಪ್ಪು ಮತ್ತು ಮಸಾಲೆಗಳಿಂದ ಕೂಡಿದ ಉಪ್ಪಿನಕಾಯಿ ಊಟದ ಜೊತೆಗಿದ್ದರೆ ಸಾಮಾನ್ಯ ಆಹಾರವೂ ರುಚಿಕರವಾಗುತ್ತದೆ. ಇದೇ ಕಾರಣಕ್ಕೆ ಅನೇಕ ಮನೆಗಳಲ್ಲಿ ಚಳಿಗಾಲದಲ್ಲಿ ಉಪ್ಪಿನಕಾಯಿ ತಯಾರಿಸಿ ದೀರ್ಘಕಾಲ ಸಂಗ್ರಹಿಸಿಡುತ್ತಾರೆ. ಆದರೆ ಉಪ್ಪಿನಕಾಯಿ ತಯಾರಿಸುವುದು ಎಷ್ಟು ಸುಲಭವೋ, ಅದನ್ನು ದೀರ್ಘಕಾಲ ಚೆನ್ನಾಗಿ ಕಾಪಾಡುವುದು ಕೂಡ ಅಷ್ಟೇ ಮುಖ್ಯ. ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ಉಪ್ಪಿನಕಾಯಿಯ ರುಚಿ ಮತ್ತು ಬಣ್ಣ ಬದಲಾಗಬಹುದು, ತರಕಾರಿಗಳು ಮೆತ್ತಗಾಗಬಹುದು, ಕೆಟ್ಟ ವಾಸನೆ ಬರಬಹುದು ಅಥವಾ ಮೇಲ್ಭಾಗದಲ್ಲಿ ಶಿಲೀಂಧ್ರ ಬೆಳೆಯಬಹುದು.
ಚಳಿಗಾಲದಲ್ಲಿ ಉಪ್ಪಿನಕಾಯಿ ಹಾಳಾಗದಂತೆ ತಡೆಯಲು ಏನು ಮಾಡಬೇಕು?
ಸ್ವಚ್ಛವಾದ ಮತ್ತು ಸಂಪೂರ್ಣ ಒಣಗಿದ ಜಾರ್ ಬಳಸಿ
ಉಪ್ಪಿನಕಾಯಿ ಹಾಳಾಗದಂತೆ ಕಾಪಾಡಲು ಮೊದಲು ಜಾರ್ನ ಸ್ವಚ್ಛತೆಗೆ ಗಮನ ಕೊಡಿ. ಉಪ್ಪಿನಕಾಯಿ ಸಂಗ್ರಹಿಸಿಡುವ ಜಾರ್ ಅನ್ನು ಚೆನ್ನಾಗಿ ತೊಳೆದು ಸಂಪೂರ್ಣವಾಗಿ ಒಣಗಿಸಿ. ಜಾರ್ನ ಮುಚ್ಚಳ ಮತ್ತು ಉಪ್ಪಿನಕಾಯಿ ತೆಗೆಯಲು ಬಳಸುವ ಚಮಚದಲ್ಲಿಯೂ ತೇವಾಂಶ ಇರಬಾರದು.
ಉಪ್ಪಿನಕಾಯಿಯ ಪದಾರ್ಥಗಳಲ್ಲಿ ತೇವಾಂಶ ಇರದಂತೆ ನೋಡಿಕೊಳ್ಳಿ
ಉಪ್ಪಿನಕಾಯಿ ತಯಾರಿಸಲು ಬಳಸುವ ತರಕಾರಿಗಳು ಅಥವಾ ಹಣ್ಣುಗಳನ್ನು ಚೆನ್ನಾಗಿ ಒಣಗಿಸುವುದು ಅಗತ್ಯ. ಮಾವಿನಕಾಯಿ, ನಿಂಬೆಹಣ್ಣು, ಮೆಣಸಿನಕಾಯಿ ಅಥವಾ ಇತರ ತರಕಾರಿಗಳನ್ನು ತೊಳೆದ ತಕ್ಷಣ ಮಸಾಲೆ ಅಥವಾ ಎಣ್ಣೆಯೊಂದಿಗೆ ಬೆರೆಸಬೇಡಿ. ಅವುಗಳ ಮೇಲ್ಮೈಯಲ್ಲಿ ಉಳಿದಿರುವ ತೇವಾಂಶ ಉಪ್ಪಿನಕಾಯಿ ಬೇಗ ಹಾಳಾಗಲು ಕಾರಣವಾಗಬಹುದು. ಆದ್ದರಿಂದ ಮುಂದಿನ ಹಂತಕ್ಕೆ ಹೋಗುವ ಮೊದಲು ಅವುಗಳನ್ನು ಚೆನ್ನಾಗಿ ಒಣಗಿಸಿ.
ಉಪ್ಪು ಮತ್ತು ಹುಳಿಯ ಪ್ರಮಾಣ ಸರಿಯಾಗಿರಲಿ
ಉಪ್ಪಿನಕಾಯಿಯನ್ನು ಸುರಕ್ಷಿತವಾಗಿ ಸಂಗ್ರಹಿಸುವಲ್ಲಿ ಉಪ್ಪು ಮತ್ತು ಹುಳಿಯ ಸಮತೋಲನ ಪ್ರಮುಖ ಪಾತ್ರ ವಹಿಸುತ್ತದೆ. ಉಪ್ಪು ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ತರಕಾರಿಗಳಿಂದ ತೇವಾಂಶ ಹೊರಬರಲು ಮತ್ತು ಉಪ್ಪಿನಕಾಯಿಯನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ಹಾಗಾಗಿ ಇವುಗಳನ್ನು ಸಮ ಪ್ರಮಾಣದಲ್ಲಿ ಬಳಸಿ.
ಉಪ್ಪಿನಕಾಯಿ ಸಂಪೂರ್ಣವಾಗಿ ಎಣ್ಣೆ ಅಥವಾ ದ್ರವದಲ್ಲಿ ಮುಳುಗಿರಲಿ
ಉಪ್ಪಿನಕಾಯಿಯನ್ನು ಜಾರ್ನಲ್ಲಿ ತುಂಬಿದ ನಂತರ ಅದರಲ್ಲಿರುವ ಪದಾರ್ಥಗಳು ಸಂಪೂರ್ಣವಾಗಿ ಎಣ್ಣೆ, ಉಪ್ಪಿನ ದ್ರಾವಣ ಅಥವಾ ಬಳಸಿರುವ ದ್ರವದಲ್ಲಿ ಮುಳುಗಿವೆಯೇ ಎಂಬುದನ್ನು ಪರಿಶೀಲಿಸಿ. ಮೇಲ್ಭಾಗದಲ್ಲಿ ಹೊರಗೆ ಕಾಣುವಂತೆ ಉಳಿದಿರುವ ತುಂಡುಗಳು ಬೇಗ ಹಾಳಾಗುವ ಸಾಧ್ಯತೆ ಹೆಚ್ಚು.
ಉಪ್ಪಿನಕಾಯಿಯನ್ನು ಬಿಸಿಲು ಮತ್ತು ಶಾಖದಿಂದ ದೂರವಿಡಿ
ಚಳಿಗಾಲದಲ್ಲಿ ಉಪ್ಪಿನಕಾಯಿಯನ್ನು ಎಲ್ಲಿ ಸಂಗ್ರಹಿಸಿಡುತ್ತೀರಿ ಎಂಬುದೂ ಮುಖ್ಯ. ಜಾರ್ ಅನ್ನು ನೇರ ಬಿಸಿಲು ಅಥವಾ ಹೆಚ್ಚಿನ ಶಾಖ ಬೀಳದ ಸ್ಥಳದಲ್ಲಿ ಇರಿಸಿ. ಬಿಸಿಯಾದ ಮತ್ತು ಹೆಚ್ಚು ಬೆಳಕು ಬೀಳುವ ಜಾಗದಲ್ಲಿ ಇಟ್ಟರೆ ಉಪ್ಪಿನಕಾಯಿಯ ರುಚಿ, ಬಣ್ಣ ಮತ್ತು ವಿನ್ಯಾಸ ಬೇಗ ಬದಲಾಗಬಹುದು.
ಉಪ್ಪಿನಕಾಯಿ ತೆಗೆಯುವಾಗ ಒದ್ದೆಯಾದ ಚಮಚ ಬಳಸಬೇಡಿ
ಉಪ್ಪಿನಕಾಯಿಯನ್ನು ತೆಗೆದುಕೊಳ್ಳುವಾಗಲೂ ಎಚ್ಚರಿಕೆ ವಹಿಸಬೇಕು. ಪ್ರತಿಬಾರಿಯೂ ಸ್ವಚ್ಛವಾದ ಮತ್ತು ಸಂಪೂರ್ಣ ಒಣಗಿದ ಚಮಚವನ್ನೇ ಬಳಸಿ. ಒದ್ದೆಯಾದ ಚಮಚ, ಈಗಾಗಲೇ ಬಳಸಿದ ಚಮಚ ಅಥವಾ ಇತರ ಆಹಾರದ ಅವಶೇಷಗಳಿರುವ ಚಮಚವನ್ನು ನೇರವಾಗಿ ಉಪ್ಪಿನಕಾಯಿಯ ಜಾರ್ಗೆ ಹಾಕಬೇಡಿ. ಇದರಿಂದ ಉಪ್ಪಿನಕಾಯಿ ಹಾಳಾಗುತ್ತದೆ
ಉಪ್ಪಿನಕಾಯಿ ಹಾಳಾಗಿರುವ ಸೂಚನೆಗಳನ್ನು ಗುರುತಿಸಿ
ಉಪ್ಪಿನಕಾಯಿಯನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿರಿ. ಸಾಮಾನ್ಯ ಹುಳಿ ವಾಸನೆಯ ಬದಲಿಗೆ ವಿಚಿತ್ರ ಅಥವಾ ಕೆಟ್ಟ ವಾಸನೆ ಬರಲು ಆರಂಭಿಸಿದರೆ, ಅದರ ವಿನ್ಯಾಸ ಅತಿಯಾಗಿ ಅಂಟಂಟಾಗಿದ್ದರೆ, ಬಣ್ಣ ಅಸಹಜವಾಗಿ ಬದಲಾಗಿದ್ದರೆ ಅಥವಾ ಮೇಲ್ಭಾಗದಲ್ಲಿ ಶಿಲೀಂಧ್ರ ಕಾಣಿಸಿಕೊಂಡರೆ ಅದನ್ನು ತಿನ್ನುವುದು ಸುರಕ್ಷಿತವಲ್ಲ.


