ಕುಕ್ಕಿಂಗ್ ವೀಡಿಯೋಗಳಿಂದಲೇ ತಿಂಗಳಿಗೆ 10 ಲಕ್ಷ ಸಂಪಾದಿಸ್ತಾರಂತೆ ಈ ಟ್ರಕ್ ಡ್ರೈವರ್
ಅಡುಗೆ ಮಾಡುವ ವೀಡಿಯೋಗಳ ಮೂಲಕ ಯುಟ್ಯೂಬರ್ ಆಗಿ ಬದಲಾದ ಟ್ರಕ್ ಚಾಲಕ ಜಾರ್ಖಂಡ್‌ನ ರಾಜೇಶ್ ರೇವಾನಿ ಬಗ್ಗೆ ಬಹುತೇಕರಿಗೆ ಗೊತ್ತು. ಅವರ ಆದಾಯ ಎಷ್ಟಿರಬಹುದು ಎಂಬ ಊಹೆ ನಿಮಗಿದೆಯಾ ಇಲ್ಲ ಎಂದಾದರೆ ಈ ಸ್ಟೋರಿ ನೀವು ಓದ್ಲೇಬೇಕು.
ಅಡುಗೆ ಮಾಡುವ ವೀಡಿಯೋಗಳ ಮೂಲಕ ಯುಟ್ಯೂಬರ್ ಆಗಿ ಬದಲಾದ ಟ್ರಕ್ ಚಾಲಕ ಜಾರ್ಖಂಡ್‌ನ ರಾಜೇಶ್ ರೇವಾನಿ ಬಗ್ಗೆ ಬಹುತೇಕರಿಗೆ ಗೊತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈಜಾಡುವ ಬಹುತೇಕರು ಇವರ ವೀಡಿಯೋಗಳನ್ನು ನೋಡಿಯೇ ನೋಡಿರುತ್ತೀರಾ? ಅಲ್ಲದೇ ರಸ್ತೆ ಬದಿಯ ಅವರ ಕುಕ್ಕಿಂಗ್ ವೀಡಿಯೋವನ್ನು ಇಷ್ಟಪಟ್ಟಿರುತ್ತೀರಿ. ಆದರೆ ಅವರ ಆದಾಯ ಎಷ್ಟಿರಬಹುದು ಎಂಬ ಊಹೆ ನಿಮಗಿದೆಯಾ ಇಲ್ಲ ಎಂದಾದರೆ ಈ ಸ್ಟೋರಿ ನೀವು ಓದ್ಲೇಬೇಕು.
ಸಾಮಾನ್ಯವಾಗಿ ಟ್ರಕ್ ಚಾಲಕರೆಂದರೆ ಅವರ ಸಂಬಳ ತಿಂಗಳಿಗೆ 20 ರಿಂದ 30 ಸಾವಿರದವರೆಗೆ ಇರಬಹುದು. ಆದರೆ ಟ್ರಕ್ ಚಾಲನೆಯ ಹೊರತಾಗಿ ತಾವು ಮಾಡುವ ಈ ಯೂಟ್ಯೂಬ್ ವೀಡಿಯೋಗಳ ಸೈಡ್ ಬ್ಯುಸಿನೆಸ್‌ನಿಂದ ಇವರು ಗಳಿಸ್ತಿರೋದು ತಿಂಗಳಿಗೆ ಬರೋಬ್ಬರಿ 10 ಲಕ್ಷ ರೂಪಾಯಿಗೂ ಅಧಿಕವಂತೆ. ಅಚ್ಚರಿ ಎನಿಸಿದರು ಇದು ನಿಜ. ಸುಮಾರು ಎರಡು ದಶಕಗಳಿಂದ ಭಾರತದ ರಸ್ತೆಗಳಲ್ಲಿ ದೇಶದ ಉದ್ದಗಲಕ್ಕೂ ಟ್ರಕ್ ಚಾಲನೆ ಮಾಡಿರುವ ರಾಜೇಶ್ ರೇವಾನಿ ತಮ್ಮ ವೃತ್ತಿಗಿಂತ ತಮ್ಮ ಹವ್ಯಾಸವಾದ ಅಡುಗೆ ವೀಡಿಯೋಗೆ ಸಖತ್ ಫೇಮಸ್ ಆಗಿದ್ದಾರೆ.
ಯೂಟ್ಯೂಬರ್ ಆಗಿ ಮನೆ ಖರೀದಿಸಿದ ಟ್ರಕ್ ಡ್ರೈವರ್; ಇದಕ್ಕಿಂತ ಸ್ಪೂರ್ತಿ ಇನ್ನೇನು ಅಂದ್ರು ಆನಂದ್ ಮಹೀಂದ್ರ
ಅಡುಗೆ ಮೇಲಿನ ಇವರ ಆಸಕ್ತಿಯೇ ಇವರಿಗೆ ಯೂಟ್ಯೂಬ್ ವೀಡಿಯೋ ಮಾಡುವಂತೆ ಪ್ರೇರಪಣೆ ಮಾಡಿತ್ತಂತೆ. ಹೀಗಾಗಿ ರಾಜೇಶ್ ವ್ಲೋಗ್ಸ್ ಎಂಬ ಯೂಟ್ಯೂಬ್ ಚಾನೆಲ್ ತೆರೆದ ಇವರಿಗೆ ಈಗ 1.86 ಮಿಲಿಯನ್ ಚಂದದಾರರಿದ್ದಾರೆ (subscribers). ಹೀಗೆ ಯೂಟ್ಯೂಬ್‌ನಲ್ಲಿ ಬಂದ ಹಣದಿಂದಲೇ ಅವರು ಮನೆಯೊಂದನ್ನು ಖರೀದಿಸಿದ್ದಾರೆ.
ಇತ್ತೀಚೆಗಿನ ಸಂದರ್ಶನವೊಂದರಲ್ಲಿ ರಾಜೇಶ್ ಅವರು ತಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ಮಾತನಾಡಿದ್ದರು. ಪ್ರಸ್ತುತ ಇವರು ತಮ್ಮ ಮೊದಲ ಮನೆಯನ್ನು ಕಟ್ಟಿಸುತ್ತಿದ್ದು, ಇದರ ಜೊತೆಗೆ ಈ ಹಿಂದೆ ನಡೆದ ಭೀಕರ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ಜೀವ ಉಳಿಸಿಕೊಂಡ ಬಗ್ಗೆಯೂ ಮಾತನಾಡಿದ್ದಾರೆ. ಆ ಅಪಘಾತದಲ್ಲಿ ಅವರ ಕೈಗೆ ಗಂಭೀರ ಗಾಯವಾಗಿದ್ದು, ಕುಟುಂಬದ ಹೊಟ್ಟೆ ಹೊರೆಯುವುದಕ್ಕಾಗಿ ಹಾಗೂ ಕಟ್ಟುತ್ತಿರುವ ಮನೆಯ ಕೆಲಸ ಪೂರ್ಣಗೊಳ್ಳುವುದಕ್ಕಾಗಿ ಈ ಟ್ರಕ್ ಚಾಲನೆ ಕೆಲಸವನ್ನು ಮುಂದುವರೆಸಿರುವುದಾಗಿ ಅವರು ಹೇಳಿದ್ದಾರೆ.
ಬಾಯಲ್ಲಿ ನೀರೂರಿಸೋ ಚಿಕನ್ ಕರಿ, ಫಿಶ್ ಫ್ರೈ; ಟ್ರಕ್ ಡ್ರೈವರ್ ಆಹಾರ ತಯಾರಿಸೋ ವೀಡಿಯೋ ಸಖತ್ ವೈರಲ್
ಸಂದರ್ಶಕ ಸಿದ್ಧಾರ್ಥ್ ಕಣ್ಣನ್ ಜೊತೆ ತಮ್ಮ ಬದುಕಿನ ಪ್ರಯಾಣದ ಬಗ್ಗೆ ಮಾತನಾಡಿದ ರಾಜೇಶ್, ತಾನೋರ್ವ ಟ್ರಕ್ ಚಾಲಕನಾಗಿ ತಿಂಗಳಿಗೆ 25ರಿಂದ 30 ಸಾವಿರ ರೂಪಾಯಿಯನ್ನು ದುಡಿಯುತ್ತೇನೆ. ಆದರೆ ಯುಟ್ಯೂಬರ್ ಆಗಿ ಬದಲಾದ ನಂತರ ಅದರಿಂದ ಒಂದೊಂದು ತಿಂಗಳು ಒಂದೊಂದು ರೀತಿಯಲ್ಲಿ ಹಣ ಬರುತ್ತದೆ. ಒಮ್ಮೆ ನನಗೆ 10 ಲಕ್ಷ ರೂಪಾಯಿ ಬಂದಿತ್ತು. ಆದರೆ ಸಾಮಾನ್ಯವಾಗಿ 4 ರಿಂದ 5 ಲಕ್ಷ ರೂಪಾಯಿ ಬರುತ್ತಿರುತ್ತದೆ. ಇಂಟರ್‌ನೆಟ್ ಬಳಕೆದಾರರು ನನ್ನ ವೀಡಿಯೋವನ್ನು ಎಷ್ಟು ಹೊತ್ತು ನೋಡುತ್ತಾರೆ ಎಂಬುದರ ಮೇಲೆ ಅದು ಅವಲಂಬಿತವಾಗಿದೆ ಎಂದು ಹೇಳಿದ್ದಾರೆ.
ತಮ್ಮ ಮೊದಲ ವೈರಲ್ ವೀಡಿಯೋ ಬಗ್ಗೆ ಮಾತನಾಡಿದ ರಾಜೇಶ್, ತಾನು ಧ್ವನಿ ನೀಡಿ ಮೊದಲ ವೀಡಿಯೋವನ್ನು ಪೋಸ್ಟ್ ಮಾಡಿದ್ದೆ. ಈ ವೇಳೆ ಜನರು ನಿಮ್ಮ ಮುಖ ತೋರಿಸುವಂತೆ ನನ್ನನ್ನು ಕೇಳುತ್ತಲೇ ಇದ್ದರು. ಹೀಗಾಗಿ ನನ್ನ ಮಗ ನಾನು ಅಡುಗೆ ಮಾಡುವ ವೀಡಿಯೋವನ್ನು ರೆಕಾರ್ಡ್ ಮಾಡಿದ್ದ. ಇದಾದ ನಂತರ ನನ್ನ ಮುಖ ತೋರಿಸುವ ವೀಡಿಯೋ ಹಾಕಿದೆ. ಈ ವೀಡಿಯೋಗೆ ನನಗೆ ಒಂದೇ ದಿನದಲ್ಲಿ 4 ರಿಂದ 5 ಲಕ್ಷ ವೀಕ್ಷಣೆ ಸಿಕ್ತು ಎಂದು ಹೇಳಿದ್ದಾರೆ. ತಮ್ಮ ಈ ಟ್ರಕ್ ಚಾಲನೆ ವೃತ್ತಿ ಹಾಗೂ ಯುಟ್ಯೂಬ್ ಚಾನೆಲ್ ಎರಡನ್ನು ಹೇಗೆ ಬ್ಯಾಲೆನ್ಸ್ ಮಾಡುತ್ತೀರಿ ಎಂದು ಕೇಳಿದಾಗ ಪ್ರತಿಕ್ರಿಯಿಸಿದ ರಾಜೇಶ್, ಈ ಸಾಧನೆಯ ಹಿಂದೆ ತಮ್ಮ ಕುಟುಂಬದ ಸಂಪೂರ್ಣ ಬೆಂಬಲ ಇದೆ. ಅವರ ಬೆಂಬಲದಿಂದಲೇ ಇದೆಲ್ಲಾ ಸಾಧ್ಯವಾಯ್ತು ಎಂದು ಹೇಳಿದ್ದಾರೆ. ಈ ಹಿಂದೆ ಮಹೀಂದ್ರಾ ಗ್ರೂಪ್‌ನ ಮಾಲೀಕ ಉದ್ಯಮಿ ಆನಂದ್ ಮಹೀಂದ್ರಾ ಕೂಡ ಈ ಟ್ರಕ್ಕಿಂಗ್ ಚಾಲಕನ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.