Rava cake recipe: ಮನೆಯಲ್ಲೇ ಬೇಕರಿ ಶೈಲಿಯ ಸಾಫ್ಟ್ ಸ್ಪಾಂಜ್ ಕೇಕ್ ಮಾಡಬೇಕೆಂದರೆ ಓವನ್, ಮೊಟ್ಟೆ ಅಥವಾ ದುಬಾರಿ ಎಸೆನ್ಸ್‌ಗಳ ಅಗತ್ಯವೇ ಇಲ್ಲ! ಕೇವಲ ಹಾಲು, ಮೊಸರು ಮತ್ತು ರವೆ ಬಳಸಿ ಬಾಯಲ್ಲಿಟ್ಟರೆ ಕರಗುವ ಹತ್ತಿಯಂತಹ ರವಾ ಕೇಕ್ ಅನ್ನು ಪಾತ್ರೆಯಲ್ಲೇ ಕೇವಲ 30 ನಿಮಿಷದಲ್ಲಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.

ಕೇಕ್ ಮಾಡಬೇಕೆಂದರೆ ಓವನ್ ಇರಬೇಕು, ವೆನಿಲ್ಲಾ ಎಸೆನ್ಸ್, ವಿನೆಗರ್, ಕೋಕೋ ಪೌಡರ್ ಅಥವಾ ಮೊಟ್ಟೆ ಇರಲೇಬೇಕು ಎಂಬುದು ಹಲವರ ಭಾವನೆ. ಆದರೆ, ಇವೆಲ್ಲದರ ಕಿರಿಕಿರಿಯಿಲ್ಲದೆ, ಮನೆಯಲ್ಲಿ ಪ್ರತಿದಿನ ಬಳಸುವ ಹಾಲು, ಮೊಸರು, ಸಕ್ಕರೆ ಮತ್ತು ರವೆಯನ್ನು ಬಳಸಿಕೊಂಡು ಬೇಕರಿಯ ಕೇಕ್‌ಗಿಂತಲೂ ಮೃದುವಾದ ಸ್ಪಾಂಜಿ ರವಾ ಕೇಕ್ (Eggless Suji/Rava Cake) ಅನ್ನು ಕೇವಲ 30 ನಿಮಿಷದಲ್ಲಿ ಪಾತ್ರೆಯಲ್ಲೇ ಸುಲಭವಾಗಿ ತಯಾರಿಸಬಹುದು. ಮತ್ಯಾಕೆ ತಡ, ಉತ್ತರ ಕರ್ನಾಟಕ ಶೈಲಿಯ ಈ ಸಿಂಪಲ್ ರವಾ ಕೇಕ್ ಮಾಡುವ ವಿಧಾನ ನೋಡೋಣ ಬನ್ನಿ..

ಬೇಕಾಗುವ ಸಾಮಗ್ರಿಗಳು

ರವೆ (ಉಪ್ಮಾ ರವೆ/ಮೀಡಿಯಂ ರವೆ): 1 ಕಪ್
ಸಕ್ಕರೆ: 3/4 ಕಪ್ (ಮುಕ್ಕಾಲು ಕಪ್)
ಮೊಸರು: 3/4 ಕಪ್
ಹಾಲು: 3/4 ಕಪ್ (ಕಾಯಿಸಿ ಆರಿಸಿದ್ದು)
ಮೈದಾ ಹಿಟ್ಟು: 1/2 ಕಪ್
ಅಡುಗೆ ಎಣ್ಣೆ: 2-3 ದೊಡ್ಡ ಚಮಚ
ಉಪ್ಪು: 1 ಚಿಟಿಕೆ
ಬೇಕಿಂಗ್ ಪೌಡರ್: 1 ಚಮಚ
ಅಡುಗೆ ಸೋಡಾ (ಬೇಕಿಂಗ್ ಸೋಡಾ): 1/2 ಚಮಚ
ಟೂಟಿ ಫ್ರೂಟಿ: ಸ್ವಲ್ಪ (ಬೇಕಿದ್ದರೆ ಮಾತ್ರ)

ಮಾಡುವ ಹಂತ-ಹಂತದ ಸುಲಭ ವಿಧಾನ

ರವೆ ಮತ್ತು ಸಕ್ಕರೆ ಪುಡಿ ಮಾಡಿಕೊಳ್ಳಿ
ಮೊದಲು ಮಿಕ್ಸಿ ಜಾರಿಗೆ 1 ಕಪ್ ರವೆ ಮತ್ತು 3/4 ಕಪ್ ಸಕ್ಕರೆಯನ್ನು ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. (ಸಕ್ಕರೆ ಪುಡಿ ಬಳಸುವ ಬದಲು ಹೀಗೆ ರವೆ ಜೊತೆಯೇ ಪುಡಿ ಮಾಡುವುದು ಉತ್ತಮ).

ಹಿಟ್ಟಿನ ಮಿಶ್ರಣ ತಯಾರಿ
ಅದೇ ಮಿಕ್ಸಿ ಜಾರಿಗೆ ಈಗ ಮುಕ್ಕಾಲು ಕಪ್ ಮೊಸರು, ಅರ್ಧ ಕಪ್ ಮೈದಾ ಹಿಟ್ಟು, ಮುಕ್ಕಾಲು ಕಪ್ ಹಾಲು ಮತ್ತು 2-3 ಚಮಚ ಅಡುಗೆ ಎಣ್ಣೆ ಸೇರಿಸಿ ಮುಚ್ಚಳ ಮುಚ್ಚಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಈ ಮಿಶ್ರಣವನ್ನು ಒಂದು ಅಗಲವಾದ ಬಟ್ಟಲಿಗೆ ಸುರಿಯಿರಿ.

ಸೋಡಾ ಮತ್ತು ಬೇಕಿಂಗ್ ಪೌಡರ್ ಸೇರಿಸಿ
ಈಗ ಮಿಶ್ರಣಕ್ಕೆ 1 ಚಿಟಿಕೆ ಉಪ್ಪು, 1 ಚಮಚ ಬೇಕಿಂಗ್ ಪೌಡರ್ ಮತ್ತು ಅರ್ಧ ಚಮಚ ಅಡುಗೆ ಸೋಡಾ ಹಾಕಿ ಒಂದೇ ದಿಕ್ಕಿನಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮಕ್ಕಳಿಗೆ ಇಷ್ಟವಾಗುವಂತೆ ಸ್ವಲ್ಪ ಟೂಟಿ ಫ್ರೂಟಿಯನ್ನು ಸೇರಿಸಿ ಕಲಸಿಕೊಳ್ಳಿ.

ಕೇಕ್ ಟ್ರೇ ಸಿದ್ಧತೆ
ಕೇಕ್ ಟ್ರೇ ಅಥವಾ ಯಾವುದೇ ಸಮತಟ್ಟಾದ ಸ್ಟೀಲ್ ಪಾತ್ರೆಗೆ ಸ್ವಲ್ಪ ಎಣ್ಣೆ ಸವರಿ, ಬಟರ್ ಪೇಪರ್ ಹಾಕಿ (ಬಟರ್ ಪೇಪರ್ ಇಲ್ಲದಿದ್ದರೆ ಬರೀ ಎಣ್ಣೆ ಸವರಿದರೂ ಸಾಕು). ತಯಾರಿಸಿದ ಹಿಟ್ಟನ್ನು ಪಾತ್ರೆಗೆ ಸುರಿಯಿರಿ. ನೆನಪಿರಲಿ, ಹಿಟ್ಟನ್ನು ಪಾತ್ರೆಯ ಅರ್ಧದಷ್ಟು ಮಾತ್ರ ಹಾಕಬೇಕು, ಏಕೆಂದರೆ ಕೇಕ್ ಬೇಯುವಾಗ ಉಬ್ಬಿ ಮೇಲೆ ಬರುತ್ತದೆ. ಮೇಲೆ ಸ್ವಲ್ಪ ಟೂಟಿ ಫ್ರೂಟಿ ಉದುರಿಸಿ ಲಘುವಾಗಿ ತಟ್ಟಿ.

ಓವನ್ ಇಲ್ಲದೆ ಪಾತ್ರೆಯಲ್ಲೇ ಬೇಯಿಸಿ
ಒಲೆಯ ಮೇಲೆ ಒಂದು ದಪ್ಪ ತಳದ ಪಾತ್ರೆ ಅಥವಾ ಕುಕ್ಕರ್ ಇಟ್ಟು 4-5 ನಿಮಿಷ ಬಿಸಿ ಮಾಡಿ (ನೀರು ಅಥವಾ ಉಪ್ಪು ಹಾಕುವ ಅಗತ್ಯವಿಲ್ಲ). ಪಾತ್ರೆ ಬಿಸಿಯಾದ ನಂತರ ಕೇಕ್ ಟ್ರೇ ಅನ್ನು ನೇರವಾಗಿ ಒಳಗೆ ಇಟ್ಟು, ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 30 ನಿಮಿಷಗಳ ಕಾಲ ಬೇಯಿಸಿ.

ಪರೀಕ್ಷಿಸಿ ನೋಡಿ
30 ನಿಮಿಷದ ನಂತರ ಮುಚ್ಚಳ ತೆರೆದು, ಒಂದು ಚಾಕು ಅಥವಾ ಟೂತ್‌ಪಿಕ್‌ನಿಂದ ಕೇಕ್‌ನ ಮಧ್ಯಭಾಗಕ್ಕೆ ಚುಚ್ಚಿ ನೋಡಿ. ಚಾಕುವಿಗೆ ಹಿಟ್ಟು ಅಂಟಿಕೊಳ್ಳದಿದ್ದರೆ ಕೇಕ್ ಸಂಪೂರ್ಣ ಬೆಂದಿದೆ ಎಂದರ್ಥ. ಒಲೆ ಆಫ್ ಮಾಡಿ 10 ನಿಮಿಷ ತಣ್ಣಗಾಗಲು ಬಿಟ್ಟು, ನಂತರ ತಟ್ಟೆಗೆ ಮಗುಚಿ ಪೀಸ್ ಮಾಡಿದರೆ, ಹತ್ತಿಯಂತೆ ಮೃದುವಾದ, ಸೂಪರ್ ಸ್ಪಾಂಜಿ ರವಾ ಕೇಕ್ ಸವಿಯಲು ಸಿದ್ಧ!