Asianet Suvarna News Asianet Suvarna News

ನಾಗರಪಂಚಮಿ ಹಬ್ಬಕ್ಕೆ ಸ್ಪೆಷಲ್ ಎಳ್ಳುಂಡೆ, ತಂಬಿಟ್ಟು ಮಾಡಿ

ಎಲ್ಲಾ ಹಬ್ಬಕ್ಕೂ ಆರಂಭಿಕವಾಗಿ ಬರುವ ನಾಗರಪಂಚಮಿ ಹಬ್ಬ ಅಂತೂ ಇಂತೂ ಬಂದೇ ಬಿಟ್ಟಿದೆ. ಹಬ್ಬ ಅಂದ್ಮೇಲೆ ಸಿಹಿತಿಂಡಿ ತಯಾರಿ ಆಗ್ಲೇಬೇಕಲ್ಲಾ. ಹಾಗಿದ್ರೆ ಎಳ್ಳಿನ ಉಂಡೆ, ತಂಬಿಟ್ಟು ಮಾಡೋದು ಹೇಗೆ. ಇಲ್ಲಿದೆ ಸಿಂಪಲ್ ರೆಸಿಪಿ.

Prepare Tasty Ellunde And Tambittu For Nagarapanchami Vin
Author
Bengaluru, First Published Jul 31, 2022, 4:48 PM IST

ಹಿಂದೂ ಪಂಚಾಂಗದ ಪ್ರಕಾರ ಎಲ್ಲ ಹಬ್ಬಗಳಿಗೆ ಬರುವ ಹಬ್ಬ ಎಂದರೆ ಅದು ನಾಗರ ಪಂಚಮಿ. ಶ್ರಾವಣ ಶುದ್ಧ ಪಂಚಮಿಯಿಂದ ನಾಗರಪಂಚಮಿಯನ್ನು ಆಚರಿಸಲಾಗುತ್ತದೆ. ನಾಗರ ಪಂಚಮಿ ಸಂಬಂಧಿಸಿದಂತೆ ಜನಪದ ಮತ್ತು ಪುರಾಣದಲ್ಲಿ ಹಲವು ಕಥೆಗಳಿವೆ. ಈ ಕಾಲದಲ್ಲಿ ಕೀಟ, ಮಿಡತೆಗಳ ಹಾವಳಿ ಅಧಿಕ. ಅಷ್ಟೇ ಅಲ್ಲದೆ ಫಸಲು ತಿನ್ನಲು ಬರುವ ಇಲಿಗಳಿಗೂ ಕೊರತೆಯಿಲ್ಲ. ಇವೆಲ್ಲದರಿಂದ ರೈತನ ಫಸಲನ್ನು ಕಾಪಾಡುವುದು ಹಾವುಗಳು. ಇಲಿ, ಕಪ್ಪೆಗಳ ಅತಿಯಾದ ಹಾವಳಿಯನ್ನು ನಿಯಂತ್ರಿಸುವ ನಾಗರನಿಗೆ ಪುಟ್ಟದೊಂದು ಧನ್ಯವಾದ ಹೇಳಲು ನಡೆಸುವ ಪೂಜೆಯೇ ನಾಗರ ಪಂಚಮಿ.

ನಾಗರಪಂಚಮಿ ಹಬ್ಬದಂದು (Nagarapanchami festival) ಮಹಿಳೆಯರು (Woman) ನಾಗದೇವತೆಯನ್ನು ಪೂಜಿಸುತ್ತಾರೆ ಮತ್ತು ಹಾವುಗಳಿಗೆ ಹಾಲು, ಸಿಹಿತಿಂಡಿಯನ್ನು ಅರ್ಪಿಸುತ್ತಾರೆ. ಕೆಲ ಮಹಿಳೆಯರು ಉಪವಾಸ ಅಥವಾ ವ್ರತವನ್ನು ಆಚರಿಸುತ್ತಾರೆ. ತಮ್ಮ ಸಹೋದರರು ಮತ್ತು ಕುಟುಂಬದ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾರೆ. ಈ ಮಂಗಳಕರ ದಿನದಂದು ಯಾವುದೇ ಕರಿದ ಅಥವಾ ಉಪ್ಪು ಆಹಾರವನ್ನು ತಯಾರಿಸುವುದಿಲ್ಲ. ಬದಲಾಗಿ ಎಳ್ಳುಂಡೆ ಸೇರಿದಂತೆ ಇತರ ಸಿಹಿ ಪದಾರ್ಥಗಳನ್ನು (Sweets) ಸಿದ್ಧ ಮಾಡುತ್ತಾರೆ. ಅದರಲ್ಲೂ ನಾಗರಪಂಚಮಿ ಹಬ್ಬಕ್ಕೆ ಎಳ್ಳಿನ ಲಡ್ಡು, ತಂಬಿಟ್ಟು ಇರಲೇಬೇಕು. ಅದನ್ನು ತಯಾರಿಸುವುದು ಹೇಗೆ ತಿಳಿಯೋಣ.

Nag Panchami 2022: ನಾಗರ ಪೂಜೆಯ ವಿಧಾನ ಹೀಗೆ..

ಎಳ್ಳಿನ ಉಂಡೆ

ಬೇಕಾದ ಪದಾರ್ಥಗಳು
ಬಿಳಿ ಎಳ್ಳು ಬೀಜಗಳು  3 ಕಪ್
ತುರಿದ ತೆಂಗಿನಕಾಯಿ 1/2 ಕಪ್
ತುರಿದ ಬೆಲ್ಲ 1 ಕಪ್
ಅಗತ್ಯವಿರುವಷ್ಟು ನೀರು

ಮಾಡುವ ವಿಧಾನ: ಎಳ್ಳು ಸ್ವಲ್ಪ ಗೋಲ್ಡನ್ ಬ್ರೌನ್ ಆಗುವವರೆಗೆ ಕಡಾಯಿಯಲ್ಲಿ ಹುರಿಯಿರಿ. ನಂತರ ಒಂದು ಬಟ್ಟಲಿಗೆ ವರ್ಗಾಯಿಸಿ ಮತ್ತು ಅದನ್ನು ಪಕ್ಕಕ್ಕೆ ಇರಿಸಿ. ನಂತರ ಬೆಲ್ಲವನ್ನು ಕರಗಿಸಿ ಮತ್ತು ಸಿರಪ್ ಮಾಡಲು ಸ್ವಲ್ಪ ನೀರು ಸೇರಿಸಿ. ಇದು ತುಂಬಾ ನೀರು ಅಥವಾ ತುಂಬಾ ದಪ್ಪವಾಗಿರಬಾರದು. ಈಗ ತುರಿದ ತೆಂಗಿನಕಾಯಿ ಸೇರಿಸಿ. ನೀರು ಆವಿಯಾಗುವವರೆಗೆ ಸ್ವಲ್ಪ ಸಮಯ ಬೇಯಿಸಿ, ನಂತರ ಹುರಿದ ಎಳ್ಳನ್ನು ಸೇರಿಸಿ ಮತ್ತು ಸರಿಯಾಗಿ ಮಿಶ್ರಣ ಮಾಡಿ. ಈಗ ಮಿಶ್ರಣದಿಂದ ಸಣ್ಣ ಲಡ್ಡುಗಳನ್ನು ಮಾಡಿ. ಮಿಶ್ರಣವು ತಣ್ಣಗಾಗದಂತೆ ನೋಡಿಕೊಳ್ಳಿ, ಏಕೆಂದರೆ ತಣ್ಣಗಾದರೆ ಲಡ್ಡುಗಳನ್ನು ಮಾಡಲು ಕಷ್ಟವಾಗುತ್ತದೆ.

ತಂಬಿಟ್ಟು

ಬೇಕಾದ ಪದಾರ್ಥಗಳು
ಕಡಲೆ ಕಾಳು 1 ಕಪ್
ಹೆಸರು ಕಾಳು 1 ಕಪ್
ಅಕ್ಕಿ 1/3 ಕಪ್
ಉದ್ದಿನ ಬೇಳೆ 1/8 ಕಪ್
ಬೆಲ್ಲ ಒಂದುವರೆ ಕಪ್
ತೆಂಗಿನ ತುರಿ 1 ಕಪ್
ಹುರಿದು ಸಿಪ್ಪೆ ತೆಗೆದ ಶೇಂಗಾ ಬೀಜ 1/2 ಕಪ್
ಏಲಕ್ಕಿ ಪುಡಿ 1/2 ಟೀ ಸ್ಪೂನ್

Nag Panchami 2022: ನಾಗರ ಹಾವಿನ ಕುರಿತ ಮೂಢನಂಬಿಕೆಗಳು ಒಂದೆರಡಲ್ಲ..

ಮಾಡುವ ವಿಧಾನ: ಬಾಣಲೆಗೆ ಕಡಲೆ ಕಾಳು ಹಾಕಿ 5 ರಿಂದ 6 ನಿಮಿಷ ಹುರಿದು ತೆಗೆಯಿರಿ. ನಂತರ ಅದೇ ಬಾಣಲೆಗೆ ಹೆಸರು ಕಾಳು ಹಾಕಿ 5ರಿಂದ 6 ನಿಮಿಷ ಹುರಿಯಿರಿ. ಅದೇ ರೀತಿ ಕ್ರಮವಾಗಿ ಅಕ್ಕಿ, ಉದ್ದಿನ ಬೇಳೆ ಹಾಕಿ 5 ನಿಮಿಷ ಮಧ್ಯಮ ಉರಿಯಲ್ಲಿ ಹುರಿದು ತೆಗೆಯಿರಿ. ಹುರಿದ ಶೇಂಗಾಬೀಜಗಳನ್ನೊಂದು ಹೊರತು ಪಡಿಸಿ ಉಳಿದೆಲ್ಲವುಗಳನ್ನು ಒಂದು ಪಾತ್ರೆಗೆ ಹಾಕಿ ಕಲಸಿ. ಒಂದು ಮಿಕ್ಸಿ ಜಾರಿಗೆ ಈ ಸಾಮಾಗ್ರಿಗಳನ್ನು ಹಾಕಿ ನುಣ್ಣಗೆ ರುಬ್ಬಿ ಪುಡಿ ಮಾಡಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಒಂದು ಮುಕ್ಕಾಲು ಕಪ್ ಬೆಲ್ಲ, ಅರ್ಧ ಕಪ್ ನೀರು ಹಾಕಿ ಕಲಕಿ.

ಮಧ್ಯಮ ಉರಿಯಲ್ಲಿ 4 ರಿಂದ 5 ನಿಮಿಷ ಬೆಲ್ಲ ಕರಗುವ ತನಕ ಕುದಿಸಿ. ತೆಂಗಿನ ತುರಿ ಹಾಕಿ ಕಲಸಿ. ಬೆಲ್ಲ ಸ್ವಲ್ಪ ಅಂಟಿಕೊಳ್ಳಲು ಪ್ರಾರಂಭಿಸಿದಾಗ ಇದಕ್ಕೆ 2 ಕಪ್ ರುಬ್ಬಿದ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಅರ್ಧ ಕಪ್ ಶೇಂಗಾ ಬೀಜ, ಅರ್ಧ ಚಮಚ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿ. ಈಗ ಇದನ್ನು ಚಿಕ್ಕ, ಚಿಕ್ಕ ಉಂಡೆಗಳನ್ನು ಮಾಡಿ. ರುಚಿಕರವಾದ ತಂಬಿಟ್ಟು ಸವಿಯಲು ಸಿದ್ಧವಾಗಿದೆ.

Follow Us:
Download App:
  • android
  • ios