ಪ್ರಧಾನಿ ಮೋದಿ ಮಖಾನಾವನ್ನು ಸೂಪರ್ ಫುಡ್ ಎಂದು ಕರೆದಿದ್ದಾರೆ. ಬಿಹಾರದ ಸಾಂಪ್ರದಾಯಿಕ ಬೆಳೆಯಾದ ಕಮಲದ ಬೀಜವನ್ನು ವರ್ಷದಲ್ಲಿ 300 ದಿನ ಸೇವಿಸುವುದಾಗಿ ಹೇಳಿದ್ದಾರೆ. ಮಖಾನಾ ಕಡಿಮೆ ಕ್ಯಾಲೋರಿ, ಹೆಚ್ಚಿನ ಪೌಷ್ಟಿಕಾಂಶ, ಪ್ರೋಟೀನ್ ಹೊಂದಿದೆ. ಇದು ಮಧುಮೇಹ, ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಮೂಳೆಗಳನ್ನು ಬಲಪಡಿಸುತ್ತದೆ, ಒತ್ತಡ ಕಡಿಮೆ ಮಾಡಿ, ನಿದ್ರೆಗೆ ಸಹಕಾರಿ. ಮಖಾನಾ ರೈತರಿಗೆ ಅನುಕೂಲವಾಗುವಂತೆ ಮಂಡಳಿ ರಚನೆಗೆ ಸರ್ಕಾರ ಮುಂದಾಗಿದೆ.
ಆಹಾರ (Food) ಹಾಗೂ ಯೋಗ (Yoga), 74 ವರ್ಷದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಆರೋಗ್ಯದ ಗುಟ್ಟು. ಇದು ಎಲ್ಲರಿಗೂ ಗೊತ್ತೇ ಇರೋ ವಿಷ್ಯ. ನವರಾತ್ರಿ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಉಪವಾಸ ಮಾಡುವ ನರೇಂದ್ರ ಮೋದಿ, ಅನೇಕ ಬಾರಿ, ಸೂಪರ್ ಫುಡ್ ಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ನರೇಂದ್ರ ಮೋದಿ ಯಾವ್ದೆ ಆಹಾರದ ಬಗ್ಗೆ ಹೇಳಿಕೆ ನೀಡಿದ್ರೂ ಅದು ವೈರಲ್ ಆಗುತ್ತೆ. ಅವರ ಅಭಿಮಾನಿಗಳು ಮೋದಿ ಹೇಳಿದಂತೆ ಸೂಪರ್ ಫುಡ್ ಸೇವನೆ ಶುರು ಮಾಡ್ತಾರೆ. ಈಗ ಮಖಾನಾ ಮಹತ್ವವನ್ನು ನರೇಂದ್ರ ಮೋದಿ ಜನರಿಗೆ ತಿಳಿಸಿದ್ದಾರೆ.
ಬಿಹಾರದ ಸಾಂಪ್ರದಾಯಿಕ ಬೆಳೆಯಾದ ಮಖಾನಾ ಮಹತ್ವವನ್ನು ಅವರು ಒತ್ತಿ ಹೇಳಿದ್ದಾರೆ. ಸೋಮವಾರ ಭಾಗಲ್ಪುರದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಮೋದಿ, ಮಖಾನಾವನ್ನು ಸೂಪರ್ ಫುಡ್ ಅಂತ ಕರೆದಿದ್ದಾರೆ. ವರ್ಷದ 365 ದಿನಗಳಲ್ಲಿ ಕನಿಷ್ಠ 300 ದಿನ ಮಖಾನಾ ಸೇವೆನೆ ಮಾಡೋದಾಗಿ ಅವರು ಹೇಳಿದ್ದಾರೆ. ಈಗ ದೇಶಾದ್ಯಂತದ ಮಖಾನಾ ಉಪಾಹಾರದ ಪ್ರಧಾನ ಖಾದ್ಯವಾಗಿದೆ. ಇದು ಜಾಗತಿಕ ಮಾರುಕಟ್ಟೆಗಳಿಗೆ ತೆಗೆದುಕೊಂಡು ಹೋಗಬೇಕಾದ ಸೂಪರ್‌ಫುಡ್. ಅದಕ್ಕಾಗಿಯೇ, ಈ ವರ್ಷದ ಬಜೆಟ್‌ನಲ್ಲಿ, ಮಖಾನಾ ರೈತರ ಅನುಕೂಲಕ್ಕಾಗಿ, ಸರ್ಕಾರ ಮಖಾನಾ ಮಂಡಳಿಯನ್ನು ರಚಿಸುವುದಾಗಿ ಘೋಷಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕೆಂಪು ಈರುಳ್ಳಿ vs ಬಿಳಿ ಈರುಳ್ಳಿ: ಆರೋಗ್ಯಕ್ಕೆ ಯಾವುದು ಬೆಸ್ಟ್?
ಮಖಾನಾ ಅಂದ್ರೇನು? : ಮೋದಿ ಪ್ರತಿ ದಿನ ಸೇವನೆ ಮಾಡುವ ಮಖಾನಾ ಅಂದ್ರೆ ಕಮಲದ ಬೀಜ. ಬಿಹಾರ, ಅಸ್ಸಾಂ ಮತ್ತು ಮಣಿಪುರದಲ್ಲಿ ಇದನ್ನು ಬೆಳೆಯಲಾಗುತ್ತದೆ. ಭಾರತ, ಮಖಾನಾದ ಅತಿದೊಡ್ಡ ಉತ್ಪಾದಕ ರಾಷ್ಟ್ರ. ಮಖಾನವನ್ನು ಹುರಿದ ತಿಂಡಿಯಾಗಿ ತಿನ್ನಲಾಗುತ್ತೆ. ಉಪವಾಸದ ಸಮಯದಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಜನರು ಸೇವನೆ ಮಾಡ್ತಾರೆ.
ಮಖಾನಾ ಸೂಪರ್ ಫುಡ್ ಹೇಗೆ? :
ಕಡಿಮೆ ಕ್ಯಾಲೋರಿ : ಮಖಾನಾ ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರವಾಗಿದೆ. ಇದನ್ನು ಸೇವನೆ ಮಾಡಿದ್ರೆ ತೂಕ ಹೆಚ್ಚಾಗುತ್ತೆ ಎನ್ನುವ ಟೆನ್ಷನ್ ಇಲ್ಲ.
ಪೌಷ್ಟಿಕ ಆಹಾರ : ಮಖಾನಾ ಅತ್ಯಂತ ಹೆಚ್ಚು ಪೌಷ್ಟಿಕ ಆಹಾರವಾಗಿದೆ. ಇದು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಉಪವಾಸದ ಸಂದರ್ಭದಲ್ಲಿ ಮಖಾನಾ ಸೇವನೆ ಮಾಡಿದ್ರೆ ದೇಹ ಶಕ್ತಿ ಪಡೆಯುತ್ತದೆ. ಇದನ್ನು ಆರೋಗ್ಯಕರ ತಿಂಡಿಯೆಂದು ಪರಿಗಣಿಸಲಾಗುತ್ತದೆ.
ಸಮೃದ್ಧವಾಗಿದೆ ಪ್ರೋಟೀನ್ : ಮಖಾನಾದಲ್ಲಿ ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿದೆ. ಸ್ನಾಯುಗಳನ್ನು ಬಲಗೊಳಿಸಲು ಇದು ನೆರವಾಗುತ್ತದೆ.
ಮಧುಮೇಹಿಗಳಿಗೆ ಒಳ್ಳೆಯದು : ಮಧುಮೇಹ ರೋಗಿಗಳು ಇದನ್ನು ಸೇವನೆ ಮಾಡ್ಬಹುದು. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಹೆಚ್ಚಾಗಲು ಬಿಡುವುದಿಲ್ಲ.
ಉತ್ಕರ್ಷಣ ನಿರೋಧಕ : ಮಖಾನಾ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ. ನಿಮ್ಮ ವಯಸ್ಸನ್ನು ಮುಚ್ಚಿಡಬೇಕು ಅಂದ್ರೆ ಪ್ರತಿ ದಿನ ಮಖಾನಾವನ್ನು ಡಯಟ್ ನಲ್ಲಿ ಸೇರಿಸ್ಕೊಳ್ಳಿ.
ಹೃದಯದ ಆರೋಗ್ಯ: ಮಖಾನಾ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ಹೃದಯವನ್ನು ಆರೋಗ್ಯವಾಗಿಡಲು ಇದು ಸಹಾಯ ಮಾಡುತ್ತದೆ.
ನೀವು ಬೇಸಿಗೆಯಲ್ಲಿ ಆರೋಗ್ಯವಾಗಿರಲು ಈ ಆಹಾರದಿಂದ ದೂರವಿರಿ
ಮೂಳೆಗಳಿಗೆ ಬಲ : ವಯಸ್ಸಾದಂತೆ ಮೂಳೆ ದುರ್ಬಲವಾಗುತ್ತದೆ. ಮಖಾನಾ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದ್ದು, ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ
ಒತ್ತಡ ನಿಯಂತ್ರಣ : ಮಖಾನಾದಲ್ಲಿ ಅಮೈನೋ ಆಮ್ಲ ಮತ್ತು ಮೆಗ್ನೀಸಿಯಮ್ ಇದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಒತ್ತಡದಿಂದ ಬಳಲುವ ಜನರು ಡಯಟ್ ನಲ್ಲಿ ಇದನ್ನು ಸೇರಿಸಿಕೊಳ್ಬಹುದು.
ನಿದ್ರೆಗೆ ಉತ್ತಮ : ಈಗಿನ ದಿನಗಳಲ್ಲಿ ನಿದ್ರಾಹೀನತೆ ದೊಡ್ಡ ಸಮಸ್ಯೆಯಾಗಿದೆ. ಅನೇಕರು ರಾತ್ರಿ ನಿದ್ರೆ ಬರೆದೆ ತೊಂದರೆ ಅನುಭವಿಸುತ್ತಾರೆ. ಮಖಾನಾ ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ನೀವು ರಾತ್ರಿ ಮಲಗುವ ಮೊದಲು ಮಖಾನಾ ಸೇವನೆ ಮಾಡಿದ್ರೆ ಒಳ್ಳೆಯದು.
ಮೋದಿ ಮಖಾನಾ ಬಗ್ಗೆ ಮಾತನಾಡ್ತಿದ್ದಂತೆ ಜನಸಾಮಾನ್ಯರಿಗೆ ಸಣ್ಣ ಟೆನ್ಷನ್ ಶುರುವಾಗಿದೆ. ಮೊದಲೇ ದುಬಾರಿ ಇರುವ ಈ ಮಖಾನಾ ಬೆಲೆ ಇನ್ನಷ್ಟು ಹೆಚ್ಚಾಗಲಿದೆ ಎಂಬ ಭಯದಲ್ಲಿ ಜನರಿದ್ದಾರೆ. ನರೇಂದ್ರ ಮೋದಿ ನುಗ್ಗೆ ಕಾಯಿ ಬಗ್ಗೆ ಮಾತನಾಡ್ತಿದ್ದಂತೆ ಅದ್ರ ಬೆಲೆ ಗಗನಕ್ಕೇರಿತ್ತು.
