Asianet Suvarna News Asianet Suvarna News

Lakshana Serial: ಚಿತ್ರಾನ್ನದ ಮಹತ್ವ ತಿಳಿಸಿಕೊಟ್ಟ ನಕ್ಷತ್ರಾ, ಸಿಂಪಲ್ ಆಗಿ ಮಾಡೋದ್ಹೇಗೆ ?

ಚಿತ್ರಾನ್ನ ಬಹುತೇಕರ ಮನೆಯಲ್ಲಿ ಬೆಳಗ್ಗಿನ ಖಾಯಂ ಬ್ರೇಕ್‌ಫಾಸ್ಟ್‌. ಸಿಂಪಲ್ ರೆಸಿಪಿ..ಸರಳವಾಗಿ ಆಗುತ್ತೆ ಅನ್ನೋ ಕಾರಣಕ್ಕೆ ಹೆಚ್ಚಿನವರು ಬೆಳಗೆದ್ದು ಇದನ್ನೇ ಮಾಡಿಕೊಳ್ತಾರೆ. ಸದ್ಯ ಈ ಚಿತ್ರಾನ್ನದ ಮಹಿಮೆಯನ್ನೂ ಸೀರಿಯಲ್‌ನಲ್ಲೂ ಹೇಳಲಾಗಿದ್ದು, ಎಲ್ಲೆಡೆ ವೈರಲ್‌ ಆಗ್ತಿದೆ.

Morning Breakfast Chitranna Story In Kannada serial Lakshana Vin
Author
First Published Jan 13, 2023, 1:31 PM IST

ದಿನಾ ಅಡುಗೆ ಮಾಡೋ ಹೆಂಗಳೆಯರ ಗೋಳು ಅಷ್ಟಿಷ್ಟಲ್ಲ. ರಾತ್ರಿ ಆಯ್ತೂಂದ್ರೆ ಬೆಳಗ್ಗೆ ತಿಂಡಿಗೇನು ಮಾಡೋದಪ್ಪಾ ಅನ್ನೋದೆ ಟೆನ್ಶನ್‌. ಬೆಳಗ್ಗೆದ್ದು ಆಫೀಸಿಗೆ ಹೋಗೋ ಗಂಡ, ಶಾಲೆಗೆ ಹೋಗೋ ಮಕ್ಕಳಿಗೆ ತಿನ್ನೋಕೆ, ಬಾಕ್ಸ್‌ಗೆ ರೆಡಿ ಮಾಡ್ಬೇಕು ಅಂದ್ರೆ ಏನಾದ್ರೂ ಈಝಿ ರೆಸಿಪಿಯನ್ನೇ ಸೆಲೆಕ್ಟ್ ಮಾಡಿಕೊಳ್ಳಬೇಕು. ಹೀಗಿದ್ದಾಗ ಹೆಚ್ಚಿನವರು ಸೆಲೆಕ್ಟ್ ಮಾಡಿಕೊಳ್ಳೋದು ಚಿತ್ರಾನ್ನ. ಸಾಮಾನ್ಯವಾಗಿ ಹತ್ತರಲ್ಲಿ ಎಂಟು ಮನೆಯಲ್ಲಾದರೂ ಪ್ರತಿದಿನ ಒಂದು ಹೊತ್ತು ಚಿತ್ರಾನ್ನ ಮಾಡುತ್ತಾರೆ. ಮಾಡೋಕೆ ಹೆಚ್ಚು ಇನ್‌ಗ್ರೀಡಿಯೆಂಟ್ಸ್ ಬೇಡ, ಆಫೀಸಿಗೆ ಹೋಗುವ ಗಡಿಬಿಡಿಯಲ್ಲಿ ಥಟ್ಟಂತ ರೆಡಿಯಾಗುತ್ತೆ ಅನ್ನೋ ಕಾರಣಕ್ಕೆ ಹೆಚ್ಚಿನವರು ಚಿತ್ರಾನ್ನವನ್ನು ಆಯ್ಕೆ ಮಾಡ್ತಾರೆ. ಬ್ಯಾಚುಲರ್ಸ್‌, ನಗರದಲ್ಲಿ ಮನೆ ಮಾಡಿ ಒಂಟಿಯಾಗಿರುವವರಿಗಂತೂ ಇದು ಪರಮಾನ್ನ.

ಚಿತ್ರಾನ್ನ ಅಂದ್ರೆ ಸೂಪರ್ ಈಝಿ ಮತ್ತು ಸೂಪರ್ ಟೇಸ್ಟೀ ಅನ್ನೋದು ಎಲ್ಲರಿಗೂ ಗೊತ್ತಿದೆ. ಹೀಗಿರುವಾಗ ಇಲ್ಲೊಂದು ಸೀರಿಯಲ್‌ನಲ್ಲೇ ಚಿತ್ರಾನ್ನದ ಮಹತ್ವವನ್ನು ಹೇಳಲಾಗಿದೆ. ಅಚ್ಚರಿ ಎನಿಸಿದರೂ ಇದು ನಿಜ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಲಕ್ಷಣ ಧಾರಾವಾಹಿಯಲ್ಲಿ ಕನ್ನಡಿಗರ ಪಾಲಿಗೆ ಚಿತ್ರಾನ್ನದ ಮಹತ್ವದ (Importance) ಬಗ್ಗೆ ಬಿಡಿಸಿ ಹೇಳಲಾಗಿದೆ. ಧಾರವಾಹಿಯ (Serial) ಪಾತ್ರಧಾರಿ ನಕ್ಷತ್ರಾ ಈ ಬಗ್ಗೆ ವಿವರಿಸಿ ಹೇಳುತ್ತಾರೆ.

ಈ ಟಿಪ್ಸ್ ಬಳಸಿ, ಮನೆಯಲ್ಲಿಯೇ ರೆಸ್ಟೋರೆಂಟ್ ರೀತಿ ಫ್ಲಫಿ ಅನ್ನ ತಯಾರಿಸಿ!

'ಲಕ್ಷಣ' ಸೀರಿಯಲ್‌ನಲ್ಲಿ ಚಿತ್ರಾನ್ನದ ಮಹಿಮೆ
'ಅರ್ಧಕರ್ಧ ಬೆಂಗಳೂರು, ಮೈಸೂರು ನಡೀತಿರೋದೆ ಚಿತ್ರಾನ್ನದಿಂದ. ಬೆಂಗಳೂರಿಗೆ ವಾರಕ್ಕೆ ನಾಲ್ಕು ದಿನ ಚಿತ್ರಾನ್ನ ಮಾಡಿ ತಿಂದಿಲ್ಲಾಂದ್ರೆ ಸಮಾಧಾನನೇ ಇರಲ್ಲ. ಚಿತ್ರಾನ್ನದ ಮಧ್ಯೆ ಸಿಗೋ ಕಡಲೇಬೀಜ (Groundnut), ಹುಳಿ-ಖಾರ ಟೇಸ್ಟ್‌ ಜೊತೆಗೆ ಬಿಸಿ ಬಿಸಿ ಕಾಫಿಯಿದ್ದರೆ ಸ್ವರ್ಗಾನೇ. ಚಿತ್ರಾನ್ನಕ್ಕೆ ಇನ್ನೊಂದು ವಿಶೇಷತೆಯಿದೆ. ಇದು ತಿಂಡಿನೂ ಹೌದು, ಊಟಾನೂ ಹೌದು. ಬಾಂಡ್ಲಿಯಿಂದ ಇಳಿಸಿಕೊಂಡು ಬಿಸಿಬಿಸಿಯಾಗಿಯೂ ತಿನ್ಬೋದು, ಹಾಗೆಯೇ ಡಬ್ಬಿಗೆ ತುಂಬಿಕೊಂಡು ತಣ್ಣಗೆ ಕೂಡಾ ತಿನ್ಬೋದು' ಎಂದು ತಿಳಿಸುತ್ತಾರೆ. 

ಅಷ್ಟೇ ಅಲ್ಲ, ದೋಸೆಗೆ ಚಟ್ನಿ ಬೇಕು, ಇಡ್ಲಿಗೆ ಸಾಂಬಾರ್ ಬೇಕು, ಪೂರಿಗೆ ಸಾಗು ಬೇಕು, ಪಲಾವ್‌ಗೆ ರಾಯ್ತಾ ಬೇಕು. ಆದ್ರೆ ಚಿತ್ರಾನ್ನವನ್ನು ನೆಂಚಿಕೊಳ್ಳೋಕೆ ಏನಿಲ್ಲಾಂದ್ರೂ ತಿನ್ಬೋದು. ಚಿತ್ರಾನ್ನಕ್ಕೆ ಬಡವರು, ಶ್ರೀಮಂತರು ಅಂತ ಏನೂ ಇಲ್ಲ. ಟೈಂ ಇಲ್ಲದಿದ್ದಾಗ, ಅನ್ನ ಮಿಕ್ಕಿದಾಗ, ಟ್ರಿಪ್ ಹೋಗುವಾಗ ಚಿತ್ರಾನ್ನಕ್ಕಿಂತ ಒಳ್ಳೆ ಫ್ರೆಂಡ್ ಯಾವುದೂ ಇಲ್ಲ' ಎಂದು ಹೇಳುತ್ತಾರೆ. ಸೀರಿಯಲ್‌ನಲ್ಲಿ ಚಿತ್ರಾನ್ನದ ಮಹತ್ವದ ಬಗ್ಗೆ ವಿವರಿಸಿರೋದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Raw Papaya Recipe: ಮಕ್ಕಳಿಗೆ ಇಷ್ಟವಾಗುತ್ತೆ ಪಪ್ಪಾಯಿ ಕಾಯಿಯ ಈ ರೆಸಿಪಿ

ಚಿತ್ರಾನ್ನ

ಬೇಕಾದ ಪದಾರ್ಥಗಳು
ಅಕ್ಕಿ ಅರ್ಧ ಕೆಜಿ
ಈರುಳ್ಳಿ ಒಂದು
ಹಸಿಮೆಣಸಿನಕಾಯಿ 2
ಶೇಂಗಾ 1 ಸ್ಪೂನ್‌
ಕಡಲೇಬೇಳೆ 1 ಸ್ಪೂನ್
ಚಿಟಿಕೆ ಅರಿಶಿನ
ರುಚಿಕೆ ತಕ್ಕಷ್ಟು ಉಪ್ಪು
2 ಸ್ಪೂನ್ ಎಣ್ಣೆ
ಒಂದು ನಿಂಬೆ
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ: ಮೊದಲಿಗೆ ಒಲೆಯಲ್ಲಿ ಬಾಣಲೆಯನ್ನು ಇಟ್ಟುಕೊಂಡು ಎರಡು ಸ್ಪೂನ್ ಎಣ್ಣೆ ಸೇರಿಸಬೇಕು. ಎಣ್ಣೆ ಬಿಸಿಯಾದಾಗ ಸಾಸಿವೆ ಸೇರಿಸಿ, ಅದು ಸಿಡಿದ ಬಳಿಕ ಶೇಂಗಾ, ಕಡಲೇಬೇಳೆ ಸೇರಿಸಿಕೊಳ್ಳಬೇಕು. ನಂತರ ಹಸಿ ಮೆಣಸಿನಕಾಯಿ (Green chillies), ಕತ್ತರಿಸಿದ ಈರುಳ್ಳಿ ಸೇರಿಸಿಕೊಳ್ಳಬೇಕು. ಈರುಳ್ಳಿ, ಹಸಿ ಮೆಣಸಿನಕಾಯಿ ಲೈಟಾಗಿ ಫ್ರೈ ಆದ ನಂತರ ಚಿಟಿಕಿ ಅರಿಶಿನ ಹಾಕಬೇಕು. ನಂತರ ನಿಂಬೆ ರಸವನ್ನು ಸೇರಿಸಿಕೊಂಡು ಮಿಕ್ಸ್ ಮಾಡಬೇಕು. ಇದಕ್ಕೆ ಉಪ್ಪನ್ನು ಸೇರಿಸಿ ಮಿಕ್ಸ್ ಮಾಡಿಕೊಂಡು, ಸ್ಪಲ್ಪ ಹೊತ್ತಿನ ಬಳಿಕ ಬೇಯಿಸಿದ ಅನ್ನವನ್ನು ಸೇರಿಸಿದರಾಯಿತು. ಮೇಲಿಂದ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಬಿಸಿಬಿಸಿಯಾದ ಚಿತ್ರಾನ್ನ ರೆಡಿ. 

ಒರಳು ಚಿತ್ರಾನ್ನ

ಬೇಕಾಗುವ ಸಾಮಗ್ರಿ: ಹಸಿ ತೆಂಗಿನ ತುರಿ- 1 ಕಪ್‌, ಕೊತ್ತಂಬರಿ ಸೊಪ್ಪು-1 ಸಣ್ಣ ಕಟ್ಟು, ಹಸಿ ಮೆಣಸಿನಕಾಯಿ 3, ಜೀರಿಗೆ 1 ಚಮಚ, ಅರಿಶಿನ- ಸ್ವಲ್ಪ, ಹುಣಸೆ ಹಣ್ಣು - ಅಡಿಕೆ ಗಾತ್ರ, ಉಪ್ಪು, ಅನ್ನ, ಬೆಲ್ಲ ಸ್ವಲ್ಪ, ಕರಿಬೇವು, ಅನ್ನ - 3 ಕಪ್‌, ಸಾಸಿವೆ, ಉದ್ದಿನ ಬೇಳೆ, ಕಡಲೇ ಬೀಜ, ಕಡಲೆ ಬೇಳೆ, ಎಣ್ಣೆ.

ಮಾಡುವ ವಿಧಾನ: ಇದನ್ನು ಒರಳಲ್ಲಿ ಮಾಡಿದ್ರೆ ರುಚಿ ಹೆಚ್ಚು ಅಂತಾರೆ. ಮಿಕ್ಸಿಯಲ್ಲೂ ಮಾಡಬಹುದು. ನನಗೆ ಬಹಳ ಇಷ್ಟವಾದ ರೆಸಿಪಿ ಇದು. ಅಮ್ಮ ಅದ್ಭುತವಾಗಿ ಈ ಒರಳು ಚಿತ್ರಾನ್ನ ಮಾಡುತ್ತಾರೆ. ಮಾಡೋದು ಸುಲಭ. ರುಚಿಯೂ ಸೂಪರಾಗಿರುತ್ತೆ. ಮೊದಲು ತೆಂಗಿನಕಾಯಿ, ಬೆಲ್ಲ, ಅರಿಶಿನ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನ ಕಾಯಿ, ಜೀರಿಗೆ, ಹುಣಸೆ ಹಣ್ಣು ಇದನ್ನೆಲ್ಲ ತರಿ ತರಿಯಾಗಿ ರುಬ್ಬಿಕೊಳ್ಳಬೇಕು.ಇನ್ನೊಂದು ಕಡೆ ಒಗ್ಗರಣೆಗಿಡಬೇಕು. ಸಾಸಿವೆ, ಕಡಲೇಬೇಳೆ, ಉದ್ದಿನ ಬೇಳೆ, ಒಣಮೆಣಸು, ಕಡಲೇ ಬೀಜ ಮತ್ತು ಕರಿಬೇವಿನ ಒಗ್ಗರಣೆ ರೆಡಿ ಮಾಡಿ, ಇದಕ್ಕೆ ರುಬ್ಬಿರೋದನ್ನು ಹಾಕಿ. ಚೆನ್ನಾಗಿ ಮಿಕ್ಸ್‌ ಮಾಡಿ. ಹಸಿ ವಾಸನೆ ಹೋಗೋ ಹಾಗೆ ಸ್ವಲ್ಪ ಹೊತ್ತು ಬಿಸಿ ಮಾಡಿ. ಇದಕ್ಕೆ ಉಪ್ಪು ಸೇರಿಸಿ. ಆಮೇಲೆ ಅನ್ನ ಹಾಕಿ ಮಿಕ್ಸ್‌ ಮಾಡಿದ್ರೆ ಮುಗೀತು. ಒರಳು ಚಿತ್ರಾನ್ನ ರೆಡಿ.

Follow Us:
Download App:
  • android
  • ios