ಕೊರೋನಾ ಅಲ್ಲ, ಕೋರನ್ ಮೀನು : ಸಕತ್ ಕಿಲಾಡಿ ಜಲಚರ!
ಎಲ್ಲೆಡೆ ಜನ ಕೊರೋನಾ ಅಂದ್ರೆ ಹೆದರಿ ನಡುಗುತ್ತಾರೆ. ಆದರೆ ಇತ್ತೀಚೆಗೆ ಇದೇ ಶಬ್ದ ಮಂಗಳೂರಿಗರ ಮೊಗದಲ್ಲಿ ಮಂದಹಾಸ ತರಿಸಿತು.
ಜಗತ್ತಿನಾದ್ಯಂತ ಕೊರೋನಾ ಇರಲಿ, ಕೆಮ್ಮಿನ ಸೌಂಡ್ ಕೇಳಿದರೇ ಜನ ಮೈಲು ದೂರು ಓಡುತ್ತಾರೆ. ಆದರೆ ಮಂಗಳೂರಿನಲ್ಲಿ ಹಾಗಾಗಲಿಲ್ಲ. ಅಲ್ಲಿ ಜನರೆಲ್ಲ ಕೊರೋನ್ ಅನ್ನು ಖುಷಿಯಿಂದ ಸ್ವಾಗತಿಸಿದರು.
ಹೆದರಬೇಡಿ, ಇದು ನಾವು ನೀವಂದುಕೊಂಡ ಹಾಗೆ ವೈರಸ್ ಸೋಂಕು ಕೊರೋನಾ ಅಲ್ಲ. ಬದಲಿಗೆ ಮಂಗಳೂರಿಗೆ ಆಗಮಿಸಿದ ಅಪರೂಪದ ಅತಿಥಿ ಕೊರೊನ್ ಮತ್ಸ್ಯ. ಅಪರೂಪದ ಈ ಜಾತಿಯ ಮೀನುಗಳಿಗೆ ಬಹಳ ಬೇಡಿಕೆ ಇದೆ. ಈ ಜಲ ಸಂತತಿ ಬಲೆಗೆ ಬೀಳುವುದು ಬಹಳ ಕಡಿಮೆ. ತೀರ ಅಪರೂಪಕ್ಕೆ ಮಾತ್ರ ಸಿಗುತ್ತವೆ. ಹಾಗೆ ಸಿಕ್ಕಾಗ ಮೀನುಗಾರರು ಬಹಳ ಖುಷಿಯಾಗುತ್ತಾರೆ. ಏಕೆಂದರೆ ಈ ಮೀನುಗಳ ಮಾಂಸಕ್ಕಿರುವ ಭಾರೀ ಬೇಡಿಕೆ. ಇದು ಸ್ಥಳೀಯ ಮಾರುಕಟ್ಟೆಗಳಿಗಿಂತ ಹೆಚ್ಚಾಗಿ ಹೊರ ರಾಜ್ಯಗಳ ಮಾರುಕಟ್ಟೆಗೆ ರಫ್ತಾಗುತ್ತದೆ. ಅಲ್ಲಿ ಈ ಮೀನುಗಳು ಕೆಜಿಗೆ ಸಾವಿರ ರು.ಗಳಿಗಿಂತ ಹೆಚ್ಚು ಬೆಲೆಗೆ ಸೋವಿಯಾಗುತ್ತವೆ. ಸ್ಥಳೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಹಿಂದೆಲ್ಲ ಕೆಜಿಗೆ 250 ರು.ಗಳಷ್ಟಿತ್ತು. ಆದರೆ ಈ ಸಲ ಮಾತ್ರ 400 ರಿಂದ 450 ರು. ದಾಖಲಿಸಿತ್ತು.
ಮಂಗಳೂರು ಬಂದರಿಗೆ ಬಂದಿದೆ ಕೊರೋನಾ ಮೀನು..! ಕೆಜಿಗೆ 2 ಸಾವಿರ
ಈ ಮೀನುಗಳು ಬಲೆಗೆ ಬಿದ್ದ ಸುದ್ದಿ ಕೇಳಿದ ಕೂಡಲೇ ಮೀನುಗಾರರ ಖುಷಿ ಹೆಚ್ಚಿತ್ತು. ಇದಕ್ಕೂ ಕಾರಣವಿದೆ. ಈ ಸಲ ಹವಾಮಾನ ವೈಪರೀತ್ಯ ಇಲ್ಲಿನ ಮೀನುಗಾರರಿಗೆ ಇನ್ನಿಲ್ಲದ ತೊಂದರೆ ಕೊಟ್ಟಿತು. ಮೀನುಗಾರಿಕೆಯಿಂದಲೇ ಹೊಟ್ಟೆಹೊರೆದುಕೊಳ್ಳುವ ಹಲವು ಸ್ಥಳೀಯ ಮೀನುಗಾರ ಕುಟುಂಬಗಳು ಕಂಗಾಲಾದವು. ಏಕೆಂದರೆ ಬರೋಬ್ಬರಿ ಒಂದೂವರೆ ತಿಂಗಳಷ್ಟುಲೇಟ್ ಆಗಿ ಈ ಸಲ ಮೀನುಗಾರಿಕೆ ಶುರುವಾದದ್ದು. ಅಷ್ಟಾದ ಮೇಲೂ ನಿಟ್ಟುಸಿರು ಬಿಡುವ ಹಾಗಿರಲಿಲ್ಲ. ಸಮುದ್ರಕ್ಕಿಳಿದರೆ ಮೀನುಗಳೇ ಮಾಯ!
ಹೌದು ಈ ಬಾರಿ ಜಲಕ್ಷಾಮವಿತ್ತು. ಇದರಿಂದ ಮೀನುಗಾರರಿಗೆ ಬಾಣಲೆಯಿಂದ ಬೆಂಕಿಗೆ ಬಿದ್ದ ಅನುಭವ. ಇದಕ್ಕೆ ಕಾರಣಗಳೇನೇ ಇರಬಹುದು. ಆದರೆ ಮೀನುಗಾರ ಕುಟುಂಬಗಳು ಬಹಳ ಬವಣೆ ಅನುಭವಿಸಿದವು. ಇಂಥಾ ಟೈಮ್‌ನಲ್ಲೇ ಮೀನುಗಾರರ ಅದೃಷ್ಟದ ಬಾಗಿಲು ತೆರೆದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೊರೋನ್ ಮೀನುಗಳು ಬಲೆಗೆ ಬಿದ್ದಿವೆ.
ಹೀಗೆ ಜಗತ್ತಿಗೆಲ್ಲ ಕೊರೋನಾ ಯಮ ಸದೃಶವಾಗಿದ್ದರೆ, ಮಂಗಳೂರಿಗರಿಗೆ ಕೊರೋನ್ ಮೀನು ನೆಮ್ಮದಿಯ ನಿಟ್ಟುಸಿರು ಬಿಡುವ ಹಾಗೆ ಮಾಡಿದೆ.