Asianet Suvarna News Asianet Suvarna News

ಆಹಾರದಲ್ಲೇ ಇತ್ತು ಆಪತ್ತು! ಕೇರಳದ ವಿಶೇಷ ಕುಜಿಮಂತಿ ಬಿರಿಯಾನಿ ತಿಂದ ಯುವತಿ ಸಾವು

ಹೊಟೇಲ್‌, ರೆಸ್ಟೋರೆಂಟ್‌ನ ಫುಡ್ ಕೆಲವೊಬ್ಬರಿಗೆ ಆಗಿ ಬರುವುದಿಲ್ಲ. ಫುಡ್‌ ಪಾಯ್ಸನಿಂಗ್‌, ಹೊಟ್ಟೆಯ ಅಸ್ವಸ್ಥತೆಗೆ ಕಾರಣವಾಗುತ್ತದೆ. ಹಾಗೆಯೇ ಯುವತಿಯೊಬ್ಬಳು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಸ್ಪೆಷಲ್ ಬಿರಿಯಾನಿ ಸೇವಿಸಿ ಮೃತಪಟ್ಟಿರುವ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ. 

Kasaragod woman orders biryani online, dies after eating it Vin
Author
First Published Jan 7, 2023, 5:09 PM IST

ಫುಡ್​ ಪಾಯಿಸನ್​ನಿಂದ ಕೇರಳದ ಕಾಸರಗೋಡಿನಲ್ಲಿ ಯುವತಿ (Girl)ಯೊಬ್ಬಳು ಮೃತಪಟ್ಟಿದ್ದಾಳೆ. ಮೃತ ಯುವತಿಯನ್ನು ಕಾಸರಗೋಡಿನ ಥಲಕ್ಲೇ ಮೂಲದ ಅಂಜುಶ್ರೀ ಪಾರ್ವತಿ ಎಂದು ಗುರುತಿಸಲಾಗಿದೆ. ಉದುಮದಲ್ಲಿರುವ ಹೋಟೆಲ್​ ಒಂದರಲ್ಲಿ ಆನ್​ಲೈನ್​ ಮೂಲಕ ಚಿಕನ್​ ಆಹಾರ ತರಿಸಿ ಅಂಜುಶ್ರೀ ಸೇವಿಸಿದ್ದಳು. ಇದಾದ ಬಳಿಕ ಆಕೆಯ ಆರೋಗ್ಯ (Health)ದಲ್ಲಿ ಏರುಪೇರು ಕಂಡುಬಂದಿತ್ತು. ಪರಿಸ್ಥಿತಿ ಗಂಭೀರವಾದ ಬೆನ್ನಲ್ಲೇ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಯುವತಿ ಮೃತಪಟ್ಟಿದ್ದಾಳೆ. ಪುಡ್​ ಪಾಯಿಸನ್​ನಿಂದ ಮೃತಪಟ್ಟಿದ್ದಾಳೆ (Death) ಎಂದು ವೈದ್ಯರು ದೃಢಪಡಿಸಿದ್ದಾರೆ.

ಕೇರಳ ಸ್ಪೆಷಲ್ ಕುಜಿಮಂತಿ ಹೆಸರಿನ  ಚಿಕನ್ ಬಿರಿಯಾನಿ ಸೇವಿಸಿದ್ದ ಯುವತಿ
ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿದ್ದ ಅಂಜುಶ್ರೀ ಕ್ರಿಸ್ ಮಸ್ ರಜೆಯ ಕಾರಣ ಸಮಯ ಕಳೆಯಲೆಂದು ಮನೆಗೆ ಬಂದಿದ್ದರು. ಈ ವೇಳೆ ಕಾಸರಗೋಡಿನ ಹೋಟೆಲ್ ಒಂದರಿಂದ ಆನ್ ಲೈನ್ ಮೂಲಕ ಕುಜಿಮಂತಿ ಹೆಸರಿನ  ಚಿಕನ್ ಬಿರಿಯಾನಿ ಖರೀದಿಸಿ ಸೇವಿಸಿದ್ದರು. ತಕ್ಷಣ ಆಕೆ ಅಸ್ವಸ್ಥಳಾಗಿದ್ದಳು. ಕೂಡಲೇ ಆಕೆಯನ್ನು ಸಮೀಪದ ಕಾಸರಗೋಡು ಆಸ್ಪತ್ರೆಗೂ ಬಳಿಕ ಮಂಗಳೂರು ಆಸ್ಪತ್ರೆಗೂ ಕೊಂಡೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಕೆ ಕೊನೆಯುಸಿರೆಳೆದಳು.

ಮೈಕ್ರೋವೇವ್‌ನಲ್ಲಿ ತಯಾರಿಸಿದ ಚಿಕನ್‌ ತಿನ್ತೀರಾ? ಹುಷಾರ್‌ ಸಾವಿಗೆ ಬೇಗ ಹತ್ತಿರವಾಗ್ತೀರಿ

ರೊಮ್ಯಾನ್ಸಿಯಾ ಹೋಟೆಲ್‌ನಿಂದ ಬಿರಿಯಾನಿ ಖರೀದಿ
ಉದುಮದಲ್ಲಿರುವ ರೊಮ್ಯಾನ್ಸಿಯಾ ಹೋಟೆಲ್‌ನಿಂದ ಆಹಾರ ಪದಾರ್ಥ ಖರೀದಿಸಲಾಗಿತ್ತು ಎಂದು ತಿಳಿದುಬಂದಿದೆ. ಅಂಜು ಜೊತೆಗೆ ಊಟ ಮಾಡಿದ ಸ್ನೇಹಿತರಿಗೂ ಫುಡ್ ಪಾಯಿಸನ್​ ಆಗಿದ್ದು, ಅವರು ಕೂಡ ಅಸ್ವಸ್ಥರಾಗಿದ್ದಾರೆ ಎಂದು ಉದುಮ ಶಾಸಕ ಸಿ.ಎಚ್.ಕುಂಜಂಬು ಮಾಹಿತಿ ನೀಡಿದ್ದಾರೆ. ಅಂಜುಶ್ರೀ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದು, ಕಾಸರಗೋಡು ಮತ್ತು ಕಣ್ಣೂರಿನ ಅಧಿಕಾರಿಗಳು ಹೋಟೆಲ್‌ಗೆ ಭೇಟಿ ನೀಡಿದ್ದಾರೆ. ಸಾವಿಗೆ ಕಾರಣ 'ಕುಜಿಮಂತಿ'ಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಿದ್ದಾರೆ. 

ಸಂಬಂಧಪಟ್ಟ ಹೋಟೆಲ್‌ನಲ್ಲಿರುವ ನೀರು ಮತ್ತು ಆಹಾರ (Food)ವನ್ನು ಪರಿಶೀಲಿಸಲಾಯಿತು. ಈ ಘಟನೆ ಆರೋಗ್ಯ ಸಚಿವರ ಗಮನಕ್ಕೆ ಬರುತ್ತಿದ್ದಂತೆ ತನಿಖೆಗೆ ಆದೇಶಿಸಲಾಗಿದೆ. ದಿ.ಕುಮಾರನ್ ನಾಯರ್ - ಅಂಬಿಕಾ ದಂಪತಿಯ ಪುತ್ರಿಯಾದ ಅಂಜುಶ್ರೀ ಅವರು ತಾಯಿ ಅಲ್ಲದೆ ಸಹೋದರರನ್ನು ಅಗಲಿದ್ದಾರೆ. ಕಳೆದ ಒಂದು ವಾರದಲ್ಲಿ ಇದು ಎರಡನೇ ಫುಡ್​ ಪಾಯಿಸನ್​ ಸಾವಾಗಿದೆ. ಕೊಟ್ಟಾಯಂ ಮೂಲದ ರಶ್ಮಿ ಅವರು 'ಅಲ್ಫಾಹಮ್' ಸೇವಿಸಿ ಸೋಮವಾರ ಮೃತಪಟ್ಟಿದ್ದರು. ಅಲ್ಲದೆ ಕೆಲ ತಿಂಗಳಿನ ಹಿಂದೆ ಕಾಸರಗೋಡಿನಲ್ಲಿ ದೇವಾನಂದ ಎಂಬ ಬಾಲಕಿ ಶವರ್ಮಾ ತಿಂದು ಸಾವನ್ನಪ್ಪಿದ್ದಳು. 

Food Poisoning Remedies: ಫುಡ್ ಪಾಯಿಸನ್ ಸಮಸ್ಯೆಯೇ? ಮನೆಯಲ್ಲಿಯೇ ಈ ಔಷಧ ಮಾಡಿ

ಚಿಕನ್ ಶವರ್ಮಾ ತಿಂದು ಸಾವನ್ನಪ್ಪಿದ್ದ ಯುವತಿ
ಕಾಸರಗೋಡು (Kasaragod) ಜಿಲ್ಲೆಯಲ್ಲಿ ಶವರ್ಮಾ (Shawarma) ಸೇವಿಸಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದದ್ದಳು. ಮೇ 1ರಂದು ಕಾಸರಗೋಡಿನ ಐಡಿಯಲ್ ಫುಡ್ ಪಾಯಿಂಟ್ ಎಂಬ ಉಪಾಹಾರ ಗೃಹದಿಂದ ಚಿಕನ್ ಶವರ್ಮಾ ತಿಂದ 16 ವರ್ಷದ ದೇವಾನಂದ (Devananda) ಸಾವನ್ನಪ್ಪಿದ್ದು, ಹಲವರು ಆಸ್ಪತ್ರೆಗೆ (Hospital) ದಾಖಲಾಗಿದ್ದರು. ಜಿಲ್ಲಾ ವೈದ್ಯಾಧಿಕಾರಿ (ಡಿಎಂಒ) ಡಾ.ಎ.ವಿ.ರಾಮದಾಸ್, ಶಿಗೆಲ್ಲ ಎಂಬ ಬ್ಯಾಕ್ಟೀರಿಯಾ (Shigella Bacteria) ದಿಂದ ಆಹಾರ ವಿಷಪೂರಿತವಾಗಿ ಸಾವು ಸಂಭವಿಸಿದೆ ಎಂದು ಮಾಹಿತಿ ನೀಡಿದ್ದರು.

ಫುಡ್‌ ಪಾಯ್ಸನಿಂಗ್‌ನಿಂದಾಗಿ ಯುವತಿಯ ಸಾವು ಮತ್ತು 40ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾದ ನಂತರ, ರಾಜ್ಯ ಆರೋಗ್ಯ ಇಲಾಖೆ ದುರಂತದ ಹಿಂದಿನ ಕಾರಣವನ್ನು ಗುರುತಿಸಿದೆ. ಅನಾಹುತಕ್ಕೆ ಕಾರಣವಾಗಿದ್ದು ಶಿಗೆಲ್ಲಾ ಎಂಬ ಬ್ಯಾಕ್ಟೀರಿಯಾ ಎಂದು ಹೇಳಿತ್ತು..

Follow Us:
Download App:
  • android
  • ios