ಕರ್ನಾಟಕದಲ್ಲಿಯೂ ಬಾಂಬೆ ಮಿಠಾಯಿ ನಿಷೇಧ; ಕಾಟನ್ ಕ್ಯಾಂಡಿ ಪರೀಕ್ಷೆಗೆ ಮುಂದಾದ ಸರ್ಕಾರ
ತಮಿಳುನಾಡು, ಪುದುಚೇರಿಯ ಮಾದರಿಯಲ್ಲಿಯೇ ಕರ್ನಾಟಕದಲ್ಲಿಯೂ 'ಬಾಂಬೆ ಮಿಠಾಯಿ' ಮಾರಾಟ ನಿಷೇಧಕ್ಕೆ ಸರ್ಕಾರ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ವೊವಿಧೆಡೆ ಮಿಠಾಯಿಗಳ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
ಬೆಂಗಳೂರು (ಫೆ.21): ದೇಶದಲ್ಲಿ ಈಗಾಗಲೇ ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕ್ಯಾನ್ಸರ್ ಕಾರಕ ಅಂಶವಿದೆ ಎಂಬ ಆಧಾರದ ಮೇಲೆ 'ಬಾಂಬೆ ಮಿಠಾಯಿ ಅಥವಾ ಕಾಟನ್ ಕ್ಯಾಂಡಿ' ಮಾರಾಟ ನಿಷೇಧಿಸಲಾಗುತ್ತಿದೆ. ಇದರ ಬೆನ್ನಲ್ಲಿಯೇ ಕರ್ನಾಟಕದಲ್ಲಿಯೂ ಬಾಂಬೆ ಮಿಠಾಯಿ ಪರೀಕ್ಷೆಗೆ ಮುಂದಾಗಿದ್ದು, ಆರೋಗ್ಯಕ್ಕೆ ಹಾನಿಕಾರಕ ಅಂಶಗಳು ಪತ್ತೆಯಾದಲ್ಲಿ ಮಾರಾಟ ನಿಷೇಧಕ್ಕೆ ಸರ್ಕಾರ ಮುಂದಾಗಲಿದೆ.
ಬಾಂಬೆ ಮಿಠಾಯಿ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ.. ಚಿಕ್ಕವರಿಂದ ದೊಡ್ಡವರವರೆಗೂ ಇಷ್ಟಪಟ್ಟು ತಿನ್ನುವ ತಿಂಡಿಯಾಗಿದೆ. ಆದರೆ, ಈ ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್ ಉಂಟುಮಾಡುವ ರೋಡಮೈನ್-ಬಿ ಎಂಬ ಬಣ್ಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪುದುಚೇರಿ ಮತ್ತು ತಮಿಳುನಾಡು ಸರ್ಕಾರಗಳು ಕಾಟನ್ ಕ್ಯಾಂಡಿ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸಲು ಮುಂದಾಗಿವೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲಿಯೂ ಬಾಂಬೆ ಮಿಠಾಯಿ ಮಾದರಿಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ. ರೋಡಮೈನ್-ಬಿ ಪತ್ತೆಯಾದಲ್ಲಿ ಕಾಟನ್ ಕ್ಯಾಂಡಿ ಮಾರಾಟ ನಿಷೇಧಿಸಲಾಗುತ್ತದೆ ಎಂಬ ಸುಳಿವು ಸಿಕ್ಕಿದೆ.
ಕಾಂಗ್ರೆಸ್ ಗ್ಯಾರಂಟಿ ಪಡೆದ ಫಲಾನುಭವಿಗಳ ಸಮೀಕ್ಷೆಗೆ ಮುಂದಾದ ಸರ್ಕಾರ; 12 ಕೋಟಿ ರೂ. ಖರ್ಚು ಮಾಡಲು ನಿರ್ಧಾರ
ರಾಜ್ಯದ ಪ್ರತಿ ಹಬ್ಬ, ಜಾತ್ರೆಗಳು, ವಸ್ತು ಪ್ರದರ್ಶನಗಳು, ವಿಶೇಷ ಮೇಳಗಳು, ಅದ್ಧೂರಿ ಮದುವೆ ಸಮಾರಂಭಗಳು, ವಿಶೇಷ ಎಕ್ಸಿಬಿಷನ್‌ಗಳನ್ನು ಆಯೋಜನೆ ಮಾಡಿದಲ್ಲಿ ಬಾಂಬೆ ಮಿಠಯಿ ಮಾರಾಟ ಸಾಮಾನ್ಯವಾಗಿರುತ್ತದೆ. ಇನ್ನು ಬೆಂಗಳೂರಿನ ರಸ್ತೆಗಳು, ಉದ್ಯಾನಗಳು ಮತ್ತು ಮಾರುಕಟ್ಟೆಗಳು ಸೇರಿದಂತೆ ಎಲ್ಲೆಡೆ ಬಾಂಬೆ ಮಿಠಾಯಿ ಮಾರಾಟ ಮಾಡಲಾಗುತ್ತಿದೆ. ಆದರೆ, ಈ ಕಾಟನ್ ಕ್ಯಾಂಡಿ ಆರೋಗ್ಯಕ್ಕೆ ಹಾನಿಕಾರಕವೇ ಎಂದು ಪರೀಕ್ಷೆ ಮಾಡಲಾಗುತ್ತಿದೆ. ಈಗಾಗಲೇ ತಮಿಳುನಾಡಿನ ಸರ್ಕಾರಿ ಪ್ರಯೋಗಾಲಯದಲ್ಲಿ ನಡೆಸಲಾದ ಪರೀಕ್ಷೆಗಳಲ್ಲಿ ಬಾಂಬೆ ಮಿಠಾಯಿಯಲ್ಲಿ ರೋಡಮೈನ್-ಬಿ ಇರುವಿಕೆ ದೃಢಪಟ್ಟಿದೆ. ನಮ್ಮ ರಾಜ್ಯದ ಪರೀಕ್ಷೆಯಲ್ಲಿ ಏನಾಗಲಿದೆ ಎಂಬುದರ ಮೇಲೆ ನಿಷೇಧ ಮಾಡಬೇಕೋ ಬೇಡವೋ ಎಂಬ ತೀರ್ಮಾನ ಕೈಗೊಳ್ಳಲಾಗುತ್ತದೆ.
ರಾಜ್ಯದಲ್ಲಿ ಕಾಟನ್ ಕ್ಯಾಂಡಿ ಮಾರಾಟ ಮಾಡುವ ವಿವಿಧ ಸ್ಥಳಗಳಿಂದ ಕ್ಯಾಂಡಿಯ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ನಾವು ಸಂಗ್ರಹಿಸಿದ ಮಾದರಿಗಳ ಟೆಸ್ಟ್ ರಿಸಲ್ಟ್ ನೋಡುತ್ತೇವೆ. ಇದಲ್ಲದೆ, ಆರೋಗ್ಯ ಕಮಿಷನರೇಟ್‌ನಿಂದಲೂ ನಾವು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಮೌಲ್ಯಮಾಪನ ಮಾಡುತ್ತೇವೆ ಎಂದು ಆಹಾರ ಸುರಕ್ಷತಾ ಆಯುಕ್ತರು ಡಿ.ರಂದೀಪ್ ತಿಳಿಸಿದ್ದಾರೆ.
ಮಂಡ್ಯದಲ್ಲಿ ರಾಜಕೀಯ ಪ್ರವೇಶ ಸುಳಿವು ನೀಡಿದ ಡಾ.ಸಿ.ಎನ್. ಮಂಜುನಾಥ್; ಲೋಕಸಭೆಯೇ ಬೇರೆ, ರಾಜಕೀಯವೇ ಬೇರೆ ಎಂದಿದ್ಯಾಕೆ?
ಕಾಟನ್ ಕ್ಯಾಂಡಿಯಲ್ಲಿ ಬಳಕೆ ಮಾಡುವ ಬಣ್ಣವು ರೋಡಮೈನ್-ಬಿ ಅಂಶವನ್ನು ಹೊಂದಿದೆ. ಆದರೆ, ಈ ರಸಾಯನಿಕ ಬಳಕೆ ಮಾಡುವ ಬಗ್ಗೆ ಕಾಟನ್ ಕ್ಯಾಂಡಿಯ ಮೇಲೆ ಯಾವುದೇ ಲೇಬಲ್‌ಗಳನ್ನು ಅಂಟಿಸುವುದಿಲ್ಲ. ಆದ್ದರಿಂದ ಇದನ್ನು ಸೇವಿಸುವುದರಿಂದ ದೊಡ್ಡ ಆರೋಗ್ಯ ಹಾನಿಯೇ ಸಂಭವಿಸುತ್ತದೆ. ಪ್ಯಾಕೇಜಿಂಗ್ ಲೇಬಲ್‌ಗಳಲ್ಲಿ ಈ ಅಂಶಗಳನ್ನು ಪಟ್ಟಿ ಮಾಡದಿದ್ದರೂ, ಈ ವಸ್ತುಗಳು ಆರೋಗ್ಯಕ್ಕೆ ಅಪಾಯ ಉಂಟುಮಾಡುತ್ತವೆ. ಸ್ಲೋ ಪಾಯ್ಸನ್ ಆಗಿ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ, ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಅಂತಹ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸುವುದು ಸೂಕ್ತ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.