ಮೈಸೂರಿನಲ್ಲಿ ಹಲಸಿನ ಹಬ್ಬ, ಗಮನಸೆಳೆದ ಹಲಸಿನ ಹಣ್ಣಿನ ಖಾದ್ಯಗಳು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಲಸಿನ ಹಬ್ಬ ನಡೆಯಿತು. ಸಹಜ ಸಮೃದ್ಧ ಬಳಗ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮೇಳದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು.
ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್
ಮೈಸೂರು (ಆ.7): ಉಂಡು ಮಾವು ತಿನ್ನು ಹಸಿದು ಹಲಸು ತಿನ್ನು ಎನ್ನುವ ಮಾತಿದೆ. ಹಲಸು ಕೇವಲ ಹಣ್ಣಲ್ಲ ಸಂಬಂಧ ನೆನಪಿಸುವ ಹಣ್ಣು. ಅಜ್ಜಿ, ತಾತ ನೆಟ್ಟ ಹಲಸಿನ ಗಿಡ ಮಕ್ಕಳು, ಮೊಮ್ಮಕ್ಕಳು ಕಾಲಕ್ಕೂ ಫಲ ಕೊಡುತ್ತದೆ. ಆ ಮೂಲಕ ಹಿರಿಯರ ನೆನಪನ್ನ ಜೀವಂತವಾಗಿಡುತ್ತದೆ. ಅಂತಹ ಹಣ್ಣನ್ನ ಇಷ್ಟಪಡದವರಿಲ್ಲ. ಎಲ್ಲಾ ವಯಸ್ಸಿನವರಿಗೂ ಇದು ಫೇವರೆಟ್. ಅಂತೆಯೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಲಸಿನ ಹಬ್ಬ ನಡೆಯಿತು. ಸಹಜ ಸಮೃದ್ಧ ಬಳಗ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮೇಳದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಹಲಸಿನಿಂದ ತಯಾರಾದ ಬಗೆ ಬಗೆಯ ತಿಂಡಿ ಸವಿದು ಹೊಸ ರುಚಿಯ ಅನುಭವ ಪಡೆದರು. ಆಗಸ್ಟ್ 6 ಮತ್ತು 7 ರಂದು ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಹಲಸಿನ ಹಬ್ಬ ಆಯೋಜನೆ ಮಾಡಲಾಗಿತ್ತು. ಹಲಸು ಪ್ರಿಯರ ಮನಸೋರೆಗೊಳಿಸಲು ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ಹಾಗೂ ಹಲಸಿನ ಅಡುಗೆ ಸ್ಪರ್ಧೆ ನಡೆಸಲಾಯ್ತು. ಮಹಿಳೆಯರು, ಪುರುಷರೆನ್ನದೆ ಬಹಳ ಖುಷಿಯಿಂದಲೇ ಭಾಗಿಯಾದ ಹಲಸು ಪ್ರಿಯರು ಹಲಸಿನಿಂದ ವಿವಿಧ ಬಗೆಯ ಖಾದ್ಯ ತಯಾರಿಸಿ ಗಮನಸೆಳೆದರು. ಇನ್ನು ಹಲಸಿನ ಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದ ಮಣಿಕಂಠನ್ ಎಂಬುವವರು ಕೆಲವೇ ಸೆಕೆಂಡುಗಳಲ್ಲಿ ಹತ್ತಾರು ಹಣ್ಣುಗಳನ್ನು ತಿಂದು ಮುಗಿಸಿ ಸ್ಪರ್ಧೆಯ ವಿಜೇತರಾದರು.
ಸ್ಟ್ರಾಬೆರಿ ತಿಂದ್ರೆ ಅಲ್ಝೈಮರ್ ಬರೋದೇ ಇಲ್ವಂತೆ !
ರುಚಿ ರುಚಿಯಾದ ಹಲಸಿನ ಖಾದ್ಯಗಳು:
ಹಲಸಿನ ಅಡುಗೆ ಸ್ಪರ್ಧೆಯಲ್ಲಿ ಭಾಗಿಯಾದವರು ವಿವಿಧ ಬಗೆಯ ತಿಂಡಿಗಳನ್ನು ತಯಾರಿಸಿದ್ರು. ಕೇವಲ ಹಲಸಿನಿಂದಲೇ ತಯಾರಾಗಿದ್ದ ತಿಂಡಿಗಳು ಜನರು ಬಾಯಿ ಚಪ್ಪರಿಸುವಂತೆ ಮಾಡಿತ್ತು. ಹಲಸಿನ ಕಾಯಿ ಪಕೋಡ, ಹಲಸಿನ ಕೇಕ್, ವಡೆ, ಹಲ್ವಾ, ಹಲಸಿನ ಹಣ್ಣಿನ ಐಸ್‌ಕ್ರೀಂಗೆ ಜನ ಕ್ಯೂ ನಿಂತಿದ್ದರು. ಹಲಸಿನ ಹಣ್ಣಿನ ಜೊತೆ ಜೊತೆಗೆ ಕೆಲವು ಆರೋಗ್ಯ ಕರ ತಿಂಡಿ ತಿನಿಸುಗಳನ್ನು ಮೇಳದಲ್ಲಿ ಇಡಲಾಗಿತ್ತು.
ಕಾರವಾರ: ಬೀದಿ ಬದಿ ವ್ಯಾಪಾರಸ್ಥರ ಮೇಲೆ ನಗರಸಭೆ ದೌರ್ಜನ್ಯ
ಅಪರೂಪದ ತಳಿಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮ:
ಹಲಸಿನ ಹಣ್ಣಿನಲ್ಲಿ ಹಲವಾರು ತಳಿಗಳಿವೆ. ಅಂತಹ ತಳಿಗಳ ಬಗ್ಗೆ ಮಾಹಿತಿ ನೀಡಲು ಮತ್ತು ಉಳಸಿಕೊಳ್ಳುವ ನಿಟ್ಟಿನಲ್ಲಿ ಹಲಸಿನ ಹಬ್ಬ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಅಪರೂಪದ ತಳಿಗಳ ಬಗ್ಗೆ ಮಾಹಿತಿ ನೀಡಿದ ಆಯೋಜಕರು, ಜನರಿಗೆ ಉಪಯೋಗಗಳ ಬಗ್ಗೆ ತಿಳಿಸಿದರು. ಕೆಂಪು ಹಲಸು, ತೂಬಗೆರೆ ಹಲಸು, ರುದ್ರಾಕ್ಷಿ ಹಲಸು, ಸರ್ವಋತು ಹಲಸು, ಸಿದ್ಧಾ ಹಲಸು ಹೀಗೆ ಮೂವತ್ತು ಜಾತಿಯ ತಳಿಗಳ ಸಸಿಗಳನ್ನು ಮಾರಾಟಕ್ಕಿಡಲಾಗಿತ್ತು. ಸಸಿಗಳ ಬಗ್ಗೆ ಮಾಹಿತಿ ಪಡೆದ ಹಲವಾರು ಜನರು ಅವುಗಳನ್ನು ಖರೀದಿಸುವ ಹಲಸು ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು.