masala bhat recipe : ಅನ್ನದಿಂದ ನಾನಾ ವೆರೈಟಿ ಅಡುಗೆ ಮಾಡ್ಬಹುದು. ಆದ್ರೆ ಅನೇಕರು ಸುಲಭ ಅಂತ ಪುಲಾವ್, ಪುಳಿಯೊಗರೆ ಮಾಡ್ತಾರೆ. ದಿನ ಅದೇ ತಿಂದು ಬೋರಾಗಿದ್ರೆ ಮಹಾರಾಷ್ಟ್ರದ ಮಸಾಲೆ ಬಾತ್ ರೆಸಿಪಿ ಟ್ರೈ ಮಾಡಿ.
ಪ್ರತಿದಿನ ಅದೇ ಪುಲಾವ್, ಚಿತ್ರಾನ್ನ ತಿಂದು ಬೇಜಾರಾಗಿದ್ದರೆ, ಒಮ್ಮೆ ಮಹಾರಾಷ್ಟ್ರ ಸ್ಟೈಲ್ ಮಸಾಲೆ ಬಾತ್ ಟ್ರೈ ಮಾಡಿ. ಸಿಂಪಲ್ ಆಗಿ ತಯಾರಿಸಬಹುದಾದ ಈ ಮಸಾಲೆ ಅನ್ನದಲ್ಲಿ ತರಕಾರಿಗಳು, ಮಸಾಲೆಗಳು ಮತ್ತು ಅನ್ನದ ಕಾಂಬಿನೇಷನ್ ತುಂಬಾ ರುಚಿಯಾಗಿರುತ್ತೆ. ವಿಶೇಷವಾಗಿ ಸಾಂಪ್ರದಾಯಿಕ ಗೋದಾ ಮಸಾಲೆ ಇದಕ್ಕೆ ವಿಭಿನ್ನ ರುಚಿ ಮತ್ತು ಸುವಾಸನೆ ನೀಡುತ್ತದೆ. ಮಧ್ಯಾಹ್ನದ ಊಟಕ್ಕೆ ಅಥವಾ ರಾತ್ರಿ ಡಿನ್ನರ್ಗೆ ಇದನ್ನು ಸುಲಭವಾಗಿ ತಯಾರಿಸಬಹುದು.
ಮಸಾಲೆ ಬಾತ್ ಗೆ ಬೇಕಾಗುವ ಸಾಮಗ್ರಿಗಳು
• 1 ಕಪ್ ಬಾಸ್ಮತಿ ಅಥವಾ ಕೊಲಂ ಅಕ್ಕಿ
• 1 ಕಪ್ ಕತ್ತರಿಸಿದ ತರಕಾರಿಗಳು (ಆಲೂಗಡ್ಡೆ, ಕ್ಯಾರೆಟ್, ಬಟಾಣಿ, ಬೀನ್ಸ್, ಹೂಕೋಸು)
• 2 ದೊಡ್ಡ ಚಮಚ ತುಪ್ಪ ಅಥವಾ ಎಣ್ಣೆ
• 1 ಚಮಚ ಜೀರಿಗೆ
• 1 ಚಮಚ ಸಾಸಿವೆ
• 1 ಚಿಟಿಕೆ ಇಂಗು
• 1 ಪಲಾವ್ ಎಲೆ
• 1 ಚಿಕ್ಕ ಚೂರು ದಾಲ್ಚಿನ್ನಿ
• 2-3 ಲವಂಗ
• ಒಂದುವರೆ ಚಮಚ ಗೋದಾ ಮಸಾಲೆ
• ಅರ್ಧ ಚಮಚ ಅರಿಶಿನ ಪುಡಿ
• 1 ಚಮಚ ಖಾರದ ಮೆಣಸಿನ ಪುಡಿ
• 10-12 ಗೋಡಂಬಿ
• 2 ದೊಡ್ಡ ಚಮಚ ತುರಿದ ತಾಜಾ ತೆಂಗಿನಕಾಯಿ
• ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
• ರುಚಿಗೆ ತಕ್ಕಷ್ಟು ಉಪ್ಪು
• 2 ಕಪ್ ನೀರು
ಮಾಡುವ ವಿಧಾನ
ಮೊದಲು ಕುಕ್ಕರ್ ಅಥವಾ ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ. ಇದಕ್ಕೆ ಗೋಡಂಬಿ ಹಾಕಿ ತಿಳಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿದು ತೆಗೆದು ಪಕ್ಕಕ್ಕಿಡಿ. ಅದೇ ತುಪ್ಪಕ್ಕೆ ಸಾಸಿವೆ, ಜೀರಿಗೆ, ಇಂಗು, ಪುಲಾವ್ ಎಲೆ, ದಾಲ್ಚಿನ್ನಿ ಮತ್ತು ಲವಂಗ ಹಾಕಿ. ಸಾಸಿವೆ ಸಿಡಿದ ಬಳಿಕ ಕತ್ತರಿಸಿದ ತರಕಾರಿಗಳು ಮತ್ತು ಅರಿಶಿನ ಪುಡಿ ಹಾಕಿ ಸುಮಾರು 2 ನಿಮಿಷ ಹುರಿಯಿರಿ. ಈಗ ಗೋದಾ ಮಸಾಲೆ, ಖಾರದ ಮೆಣಸಿನ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮಸಾಲೆ ತರಕಾರಿಗಳಿಗೆ ಚೆನ್ನಾಗಿ ಹೊಂದಿಕೊಳ್ಳುವಂತೆ ಸ್ವಲ್ಪ ಹುರಿಯಿರಿ.
ಮೊದಲೇ ತೊಳೆದು ನೆನೆಸಿಟ್ಟ ಅಕ್ಕಿಯ ನೀರು ಬಸಿದು ಪಾತ್ರೆಗೆ ಹಾಕಿ. ಅಕ್ಕಿ ಮುರಿಯದಂತೆ ನಿಧಾನವಾಗಿ ಮಿಕ್ಸ್ ಮಾಡಿ. ನಂತರ 2 ಕಪ್ ಬಿಸಿ ನೀರು, ಹುರಿದ ಗೋಡಂಬಿ ಮತ್ತು ಅರ್ಧದಷ್ಟು ತುರಿದ ತೆಂಗಿನಕಾಯಿ ಹಾಕಿ. ಕುಕ್ಕರ್ ಮುಚ್ಚಿ ಮಧ್ಯಮ ಉರಿಯಲ್ಲಿ 2 ಸೀಟಿ ಬರುವವರೆಗೆ ಬೇಯಿಸಿ. ಕುಕ್ಕರ್ನ ಒತ್ತಡ ಕಡಿಮೆಯಾದ ಬಳಿಕ ಮುಚ್ಚಳ ತೆರೆದು ಮೇಲೆ ಕೊತ್ತಂಬರಿ ಸೊಪ್ಪು ಮತ್ತು ಉಳಿದ ತೆಂಗಿನಕಾಯಿ ಹಾಕಿ.
ಈಗ ರುಚಿಕರವಾದ ಮಹಾರಾಷ್ಟ್ರ ಸ್ಟೈಲ್ ಮಸಾಲೆ ಬಾತ್ ಸವಿಯಲು ಸಿದ್ಧ. ಬಿಸಿಬಿಸಿಯಾಗಿ ಬಡಿಸಿ. ಮಸಾಲೆ ಅನ್ನದ ಸಾಂಪ್ರದಾಯಿಕ ರುಚಿಗೆ ಗೋದಾ ಮಸಾಲೆ ಪ್ರಮುಖವಾಗಿರುವುದರಿಂದ ಅದನ್ನು ಬಳಸಬೇಕು. ಬಾಸ್ಮತಿ ಅಥವಾ ಕೊಲಂ ಅಕ್ಕಿಯನ್ನೇ ಆದಷ್ಟು ಬಳಸಿ. ಎಣ್ಣೆಯ ಬದಲು ತುಪ್ಪ ಬಳಸಿದರೆ ಅನ್ನಕ್ಕೆ ಉತ್ತಮ ಸುವಾಸನೆ ಬರುತ್ತದೆ.ಬಡಿಸುವ ಮೊದಲು ಸ್ವಲ್ಪ ನಿಂಬೆ ರಸ ಹಿಂಡಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ. ಇದನ್ನು ಮೊಸರು, ಮಜ್ಜಿಗೆ, ಕಢಿ ಅಥವಾ ಪಾಪಡ್ ಜೊತೆ ಬಡಿಸಬಹುದು.


