ಉಚಿತ ಸೌಲಭ್ಯಗಳ ಹೆಸರಿನಲ್ಲಿ ಜನಸಾಮಾನ್ಯರಿಗೆ ಬರೆ ಎಳೆಯಲಾಗುತ್ತಿದೆ. ವಿದ್ಯುತ್, ನೀರು, ಕಸದ ಬಿಲ್ ಹೆಚ್ಚಳ, ಬಸ್ ಪ್ರಯಾಣ ದರ ದುಪ್ಪಟ್ಟು, ಬೆಲೆ ಏರಿಕೆ, ಹೋಟೆಲ್ ದರ ಏರಿಕೆ ಹೀಗೆ ಎಲ್ಲದರಲ್ಲೂ ದುಬಾರಿಯಾಗಿದೆ. ಬೆಂಗಳೂರಿನ ಹೋಟೆಲ್ ಒಂದರಲ್ಲಿ ಚಟ್ನಿಗೂ ಬಿಲ್ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ. ಉಚಿತದ ಮರೆಮಾಚಲು ಇಂತಹ ತಂತ್ರ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಒಂದೆಡೆ ಉಚಿತ ಸೌಲಭ್ಯ... ಇನ್ನೊಂದೆಡೆ ಎಲ್ಲವೂ 2-3 ಪಟ್ಟು ದುಬಾರಿ. ಇದು ಸದ್ಯ ನಮ್ಮ ರಾಜ್ಯದ ಸ್ಥಿತಿಯಾಗಿದೆ. ಮನೆ ಬಳಕೆಯ ಕರೆಂಟ್​ ಉಚಿತ ಕೊಟ್ಟು ಕರೆಂಟ್​ ಬಿಲ್​ ಹೆಚ್ಚು ಮಾಡಲಾಗಿದೆ. ಇದರಿಂದ ವಾಣಿಜ್ಯ ಬಳಕೆಗೆ ವಿದ್ಯುತ್​ ಬಳಸುತ್ತಿರುವವರ ಸ್ಥಿತಿ ಅಯೋಮಯವಾಗಿದೆ. ಉಚಿತ ವಿದ್ಯುತ್​ ಸರಿದೂಗಿಸಲು ನೀರಿನ ಬಿಲ್ಲನ್ನೂ ಹೆಚ್ಚು ಮಾಡಲಾಗಿದೆ. ಆಮೇಲೆ ಕಸದ ಬಿಲ್ಲು, ಆ ಬಿಲ್ಲು, ಈ ಬಿಲ್ಲು. ಮಹಿಳೆಯರಿಗೆ ಬಸ್​ನಲ್ಲಿ ಉಚಿತ ಸೌಲಭ್ಯ ಕೊಟ್ಟು, ಬೇರೆ ಬೇರೆ ಊರುಗಳಿಗೆ ಹೋಗುವ ಬಸ್​ ದರವನ್ನು ಎರಡು, ಎರಡೂವರೆ ಪಟ್ಟು ಹೆಚ್ಚಳ ಮಾಡಲಾಗಿದೆ. ಬಹುತೇಕ ಊರುಗಳಲ್ಲಿ ಇದ್ದ ರಾಜಹಂಸ ಬಸ್ಸುಗಳನ್ನು ರದ್ದು ಮಾಡಿ ಸ್ಲೀಪರ್​ ಕೋಚ್​ ಬಸ್ಸು ಬಿಡಲಾಗಿದೆ. ಇದರ ರೇಟು ನೋಡಿದರೆ ಜನಸಾಮಾನ್ಯರು ದಂಗಾಗೋದು ಗ್ಯಾರೆಂಟಿ. 500-600 ರೂಪಾಯಿ ಇದ್ದ ಟಿಕೆಟ್​ ದರ 1000-1200 ಆಗಿದೆ. ವೀಕೆಂಡ್​ಗಳಲ್ಲಂತೂ ಬೇರೆ ಊರುಗಳಿಗೆ ಹೋಗುವವರ ಪಾಡು ಆ ದೇವರಿಗೇ ಪ್ರೀತಿ!

ಅದೇ ಇನ್ನೊಂದೆಡೆ ಬೇಳೆ-ಕಾಳುಗಳ ದರ ಏರಿಕೆ. ಹಾಲಿನ ದರವೂ ಏರಿಕೆಯಾಗಿದೆ. ಇದರಿಂದ ಅನಿವಾರ್ಯವಾಗಿ ಹೋಟೆಲ್​ಗಳಲ್ಲಿ ತಿನಿಸುಗಳು ದುಬಾರಿಯಾಗಿವೆ. ಇವುಗಳ ನಡುವೆಯೇ ಇದೀಗ ಶಾಕಿಂಗ್​ ಎನ್ನಿಸುವಂಥ ಹೋಟೆಲ್​ ಬಿಲ್​ ಒಂದು ವೈರಲ್​ ಆಗಿದೆ. ಅದು ಬೆಂಗಳೂರಿನ ಮಲ್ಲೇಶ್ವರದಲ್ಲಿ ಈಚೆಗೆ ಉದ್ಘಾಟನೆಯಾಗಿರುವ ಹೋಟೆಲ್​ ಒಂದರ ಬಿಲ್​. ಇದರಲ್ಲಿ ಇಡ್ಲಿ, ದೋಸೆಗೆ ಕೊಡುವ ಚಟ್ನಿಯನ್ನೂ ಬಿಲ್​ನಲ್ಲಿ ಸೇರಿಸಲಾಗಿದೆ. ಅಸಲಿಗೆ ಸದ್ಯ ಚಟ್ನಿಗೆ ಜೀರೋ ರೂಪಾಯಿ ಎಂದು ತೋರಿಸಲಾಗಿದೆ. ಆದರೆ ಉಚಿತವಾಗಿ ಕೊಟ್ಟಿರುವ ಚಟ್ನಿಯನ್ನೂ ಸೇರಿಸಿರುವುದಕ್ಕೆ ಬೇರೆಯದ್ದೇ ಕಾರಣ ಇದೆ ಎನ್ನುವುದು ನೆಟ್ಟಿಗರ ಅಭಿಮತ. ಅಷ್ಟಕ್ಕೂ ಸದ್ಯ ಯಾವ ಹೋಟೆಲ್​ನವರೂ ಚಟ್ನಿಯನ್ನು ಬಿಲ್​ನಲ್ಲಿ ತೋರಿಸುವುದಿಲ್ಲ. ಆದರೆ ಮುಂದೆ ಚಟ್ನಿಗೂ ದುಡ್ಡು ಹಾಕುತ್ತಾರೆ. ಇಲ್ಲದಿದ್ದರೆ, ಹೀಗೆ ಬಿಲ್​ನಲ್ಲಿ ಅದನ್ನು ನಮೂದು ಮಾಡುವ ಅವಶ್ಯಕತೆಯೇ ಇರಲಿಲ್ಲ ಎನ್ನಲಾಗುತ್ತಿದೆ. 

ಪನೀರ್​ ಹೆಸರಲ್ಲಿ ವಿಷ? ಗೌರಿ ಖಾನ್​ ವಿವಾದದ ಬೆನ್ನಲ್ಲೇ ರೆಸ್ಟೋರೆಂಟ್​ಗಳಿಗೆ ಹೊರಟಿತು ಖಡಕ್​ ಆದೇಶ!

ಈಗ ಏರುತ್ತಿರುವ ದರವನ್ನು ನೋಡಿದರೆ ಚಟ್ನಿಗೂ ದುಡ್ಡು ಬಂದರೆ ಅಚ್ಚರಿಯೇನಿಲ್ಲ ಎನ್ನುವುದು ಬಹುತೇಕ ನೆಟ್ಟಿಗರ ಅಭಿಮತ. ಆದರೆ ಈ ಬಿಲ್​ಗೆ ಹಲವು ಹಾಸ್ಯಮಯ ಎನ್ನುವಂಥ ಕಮೆಂಟ್​ಗಳೂ ಬರುತ್ತಿವೆ. ಅನಂತ ನಾರಾಯಣ ಕೋಲಾರ ಎನ್ನುವವರು ತಮ್ಮ ಫೇಸ್​ಬುಕ್​ನಲ್ಲಿ ಈ ಬಿಲ್​ ಶೇರ್​ ಮಾಡಿದ್ದಾರೆ. ಇದಕ್ಕೆ ಕುತೂಹಲ ಎನ್ನಿಸುವ ಕಮೆಂಟ್​ಗಳು ಬರುತ್ತಿವೆ. ಗ್ರಾಹಕರನ್ನು ಮರುಳು ಮಾಡಲು ಹೀಗೆ ಮಾಡಲಾಗಿದೆ ಎಂದು ಒಬ್ಬರು ಬರೆದರೆ, ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳಲು ಚಟ್ನಿ ಫ್ರೀ ಆಗಿ ಕೊಟ್ಟಿರುವುದಾಗಿ ಹೋಟೆಲ್​ ಹೇಳಿದಂತಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ. 

ದೋಸೆ ಇಡ್ಲಿ ಜೊತೆಗೆ ಕೊಡುವ ಆಲೂ ಪಲ್ಯ ಮತ್ತು ಸಾಂಬಾರ್ ಕೂಡಾ ಹಾಕಬಹುದಿತ್ತು ಎಂದು ಒಬ್ಬರು ಹೇಳಿದರೆ, ಅದಕ್ಕೆ ಪ್ರತಿಕ್ರಿಯೆ ನೀಡಿರುವವರು, ಮುಂದೆ ಅದಕ್ಕೂ ಹಣ ಕೊಡಬೇಕಾಗಬಹುದು. ಈಗ 00 ಇರುವ ಜಾಗದಲ್ಲಿ 10, 20, 30... ಹೀಗೆ ಬರಬಹುದು. ಮುಂದೆ ಒಂದೇ ಸಾರಿ ಮಾಡಿದರೆ ಜನ ಪ್ರಶ್ನೆ ಮಾಡುತ್ತಾರೆ. ಅದಕ್ಕಾಗಿಯೇ  ಈಗಿನಿಂದಲೇ ಅಭ್ಯಾಸ ಮಾಡಿಸಿದ್ದಾರೆ ಅಷ್ಟೇ ಎಂದಿದ್ದಾರೆ. ಇದು ಉಚಿತ ಭಾಗ್ಯ ಎಂದು ಜನರಿಗೆ ತಿಳಿಯಬೇಕಲ್ಲವೇ, ಉಚಿತ ಕೊಟ್ಟು ಜನರನ್ನು ಮಂಗ ಮಾಡುವುದು ಎಂದರೆ ಇದೇ ಎಂದು ನಮ್ಮ ಜನರಿಗೆ ಇವರು ತೋರಿಸುತ್ತಿದ್ದಾರೆ ಎಂದು ಮತ್ತೊಬ್ಬರು ವ್ಯಂಗ್ಯವಾಗಿ ಬರೆದಿದ್ದಾರೆ. ಒಟ್ಟಿನಲ್ಲಿ ಚಟ್ನಿಯ ಬಗ್ಗೆ ಸೋಷಿಯಲ್​  ಮೀಡಿಯಾದಲ್ಲಿ ಕಮೆಂಟುಗಳ ಸುರಿಮಳೆಯೇ ಆಗುತ್ತಿದೆ. 

ಪನೀರ್​ ಎಂದು ಪ್ರಾಣಕ್ಕೆ ಕುತ್ತಾಗ್ತಿರೋ ವಿಷ ಸೇವಿಸ್ತಾ ಇದ್ದೀರಾ? ನಕಲಿ ಕಂಡುಹಿಡಿಯೋ ಸುಲಭದ ಉಪಾಯ ಹೀಗಿದೆ..