'ಹೊಕ್ಕೊ' ಐಸ್‌ಕ್ರೀಂ ಸಂಸ್ಥೆಯು 'ಮಿರ್ಜಾಪುರ್' ಸಿನಿಮಾ ತಂಡದೊಂದಿಗೆ ಕೈಜೋಡಿಸಿದ್ದು, ಮಾರುಕಟ್ಟೆಗೆ ವಿಶಿಷ್ಟವಾದ 'ಬುಲೆಟ್ ಐಸ್‌ಕ್ರೀಂ' ಪರಿಚಯಿಸಿದೆ. ಈ ಸ್ಪೆಷಲ್ ಎಡಿಷನ್ ಐಸ್‌ಕ್ರೀಂ ಶೀಘ್ರದಲ್ಲೇ ಜೆಪ್ಟೋ, ಬ್ಲಿಂಕಿಟ್ ಸೇರಿದಂತೆ ಎಲ್ಲಾ ಪ್ರಮುಖ ಆನ್‌ಲೈನ್ ಡೆಲಿವರಿ ಆಪ್‌ಗಳಲ್ಲಿ ಲಭ್ಯವಾಗಲಿದೆ.
ಜನಪ್ರಿಯ ಕ್ರೈಮ್ ಡ್ರಾಮಾ ಸರಣಿ 'ಮಿರ್ಜಾಪುರ್' ಈಗ ಬೆಳ್ಳಿತೆರೆಗೆ ಬರಲು ಸಜ್ಜಾಗುತ್ತಿದೆ. ಬೆನ್ನಲ್ಲೇ ಐಸ್‌ಕ್ರೀಂ ಪ್ರಿಯರಿಗಾಗಿ ಒಂದು ರೋಚಕ ಸುದ್ದಿ ಇದೆ. ಖ್ಯಾತ ಐಸ್‌ಕ್ರೀಂ ಬ್ರ್ಯಾಂಡ್ 'ಹೊಕ್ಕೊ' (Hocco), 'ಮಿರ್ಜಾಪುರ್: ದಿ ಮೂವಿ' ಜೊತೆ ಕೈಜೋಡಿಸಿದ್ದು ಮಾರುಕಟ್ಟೆಗೆ ವಿಶಿಷ್ಟವಾದ 'ಬುಲೆಟ್ ಐಸ್‌ಕ್ರೀಂ' (Bullet Ice Cream) ಪರಿಚಯಿಸಿದೆ.
ಏನಿದರ ವಿಶೇಷತೆ?
ಮಿರ್ಜಾಪುರ್ ಸರಣಿಯ ಗತ್ತು ಮತ್ತು ಗಾಂಭೀರ್ಯಕ್ಕೆ ತಕ್ಕಂತೆ ಐಸ್‌ಕ್ರೀಂ ವಿನ್ಯಾಸಗೊಳಿಸಲಾಗಿದೆ. ಈ ಸರಣಿಯಲ್ಲಿ 'ಬುಲೆಟ್' (ಗುಂಡು) ಪ್ರಮುಖ ಪಾತ್ರ ವಹಿಸುವುದರಿಂದ, ಐಸ್‌ಕ್ರೀಂ ಅನ್ನು ಕೂಡ ಗುಂಡಿನ ಆಕಾರದಲ್ಲೇ ಸಿದ್ಧಪಡಿಸಲಾಗಿದೆ. ಈ ಸಹಭಾಗಿತ್ವದ ಬಗ್ಗೆ ಹೊಕ್ಕೊ ಸಂಸ್ಥೆಯ ಇ-ಕಾಮರ್ಸ್ ವಿಭಾಗದ ಉಪಾಧ್ಯಕ್ಷ ಪ್ರಥಮೇಶ್ ಟಿ. ಅವರು ಲಿಂಕ್ಡ್‌ಇನ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
"ಇದು ಶೋನಷ್ಟೇ ಬೋಲ್ಡ್ ಮತ್ತು ಅನಿರೀಕ್ಷಿತವಾಗಿದೆ. ಪಾಪ್ ಕಲ್ಚರ್ ಮತ್ತು ನೊಸ್ಟಾಲ್ಜಿಯಾವನ್ನು ಈ ಐಸ್‌ಕ್ರೀಂ ಮೂಲಕ ಜನರ ಮುಂದೆ ತರುತ್ತಿದ್ದೇವೆ," ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಈ ಐಸ್‌ಕ್ರೀಂ ಪ್ರಚಾರಕ್ಕಾಗಿ "ಇಲಾಕಾ ಅಪ್ನಾ, ರೂಲ್ಸ್ ಅಪ್ನಾ ಔರ್... ಬುಲೆಟ್ ಭಿ ಅಪ್ನಿ" (ನಮ್ಮ ಏರಿಯಾ, ನಮ್ಮ ರೂಲ್ಸ್ ಮತ್ತು ಬುಲೆಟ್ ಕೂಡ ನಮ್ಮದೇ) ಎಂಬ ಪವರ್‌ಫುಲ್ ಟ್ಯಾಗ್‌ಲೈನ್ ಬಳಸಲಾಗಿದೆ.
ಎಲ್ಲಿ ಸಿಗಲಿದೆ?
ಈ ಲಿಮಿಟೆಡ್ ಎಡಿಷನ್ ಬುಲೆಟ್ ಐಸ್‌ಕ್ರೀಂ ಶೀಘ್ರದಲ್ಲೇ ಪ್ರಮುಖ ಕ್ವಿಕ್-ಕಾಮರ್ಸ್ ವೇದಿಕೆಗಳಾದ ಬ್ಲಿಂಕಿಟ್ (Blinkit), ಜೆಪ್ಟೋ (Zepto), ಸ್ವಿಗ್ಗಿ ಇನ್‌ಸ್ಟಾಮಾರ್ಟ್, ಫ್ಲಿಪ್‌ಕಾರ್ಟ್ ಮಿನಿಟ್ಸ್, ಅಮೆಜಾನ್ ಮತ್ತು ಬಿಗ್‌ಬಾಸ್ಕೆಟ್‌ಗಳಲ್ಲಿ ಲಭ್ಯವಿರಲಿದೆ. ಜೊತೆಗೆ ಹ್ಯೂಬರ್ ಮತ್ತು ಹಾಲಿ (Huber & Holly) ಔಟ್‌ಲೆಟ್‌ಗಳಲ್ಲೂ ಗ್ರಾಹಕರು ಇದನ್ನು ಸವಿಯಬಹುದು.
ಮಿರ್ಜಾಪುರ್ ಸಿನಿಮಾ ಬಗ್ಗೆ
ಓಟಿಟಿಯಲ್ಲಿ ಭರ್ಜರಿ ಯಶಸ್ಸು ಕಂಡ ಮಿರ್ಜಾಪುರ್ ಸರಣಿ ಈಗ ಎಕ್ಸೆಲ್ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಸಿನಿಮಾವಾಗಿ ಮೂಡಿಬರುತ್ತಿದೆ. ಗುರ್ಮೀತ್ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ಪಂಕಜ್ ತ್ರಿಪಾಠಿ, ಅಲಿ ಫಜಲ್ ಸೇರಿದಂತೆ ಪ್ರಮುಖ ತಾರಾಗಣವಿರಲಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಈ ರೀತಿಯ ವಿಭಿನ್ನ ಪ್ರಚಾರದ ಮೂಲಕ ಮಿರ್ಜಾಪುರ್ ತಂಡ ಜನರ ಗಮನ ಸೆಳೆಯುತ್ತಿದೆ.


