ಸಂಜೆಯಾದ್ರೆ ಸಾಕು ಬಿಸಿ ಬಿಸಿ ಟೀ (Tea) ಜತೆಗೆ ಏನಾದ್ರೂ ಕುರುಕಲು ತಿಂಡಿ ಸವಿಯೋಣ ಅನ್ಸುತ್ತೆ. ಹಾಗಂತ ಹೆಚ್ಚು ಎಣ್ಣೆಯಿರೋ ಸ್ನ್ಯಾಕ್ಸ್ (Snacks) ತಿಂದ್ರೆ ಆರೋಗ್ಯ (Health)ಕ್ಕೂ ಒಳ್ಳೇದಲ್ಲ ಅಲ್ವಾ ? ಸಿಂಪಲ್ ಆಗಿ ಹೆಲ್ದೀ ಕಟ್ಲೆಟ್ (Cutlet) ಮಾಡಿದ್ರೆ ಹೇಗೆ ?

ದಿನಪೂರ್ತಿ ಒತ್ತಡದಲ್ಲಿ ಕಳೆದು ಸಂಜೆಯಾದಾಗ ಎಲ್ಲರೂ ಒಂದ್ ಗ್ಲಾಸ್ ಟೀ ಜತೆಗೆ ಏನಾದರೂ ಸ್ನ್ಯಾಕ್ಸ್ (Snacks) ತಿನ್ನೋಕೆ ಇಷ್ಟಪಡುತ್ತಾರೆ. ಸಮೋಸಾ, ಬೋಂಡಾ, ಪಕೋಡ ಮತ್ತು ಹೆಚ್ಚಿನವು ಹಲವರ ಆಯ್ಕೆ. ಆದರೆ, ಈ ತಿಂಡಿಗಳು ರುಚಿಕರವಾಗಿರುತ್ತವೆ ಅನ್ನೋದೇನೂ ನಿಜ. ಆದ್ರೆ ನಿಸ್ಸಂದೇಹವಾಗಿ, ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಯಾಕೆಂದರೆ ಈ ತಿಂಡಿಗಳನ್ನು ಕರಿದು ಮಾಡಲಾಗುತ್ತದೆ. ಮತ್ತು ಹೆಚ್ಚಿನವುಗಳನ್ನು ಸಂಸ್ಕರಿಸಿದ ಹಿಟ್ಟಿನಿಂದ ತಯಾರಿಸಲಾಗುತ್ತದೆ. 

ಹಾಗಿದ್ರೆ ಸಂಜೆ ಟೀ ಜತೆ ಹೆಲ್ದೀಯಾಗಿ ಏನ್ ತಿನ್ಬೋದು. ಆರೋಗ್ಯ ಮತ್ತು ರುಚಿ ಎರಡರ ಪರಿಪೂರ್ಣ ಸಂಯೋಜನೆ ಬೇಕೆಂದರೆ ಕಟ್ಲೆಟ್ ಅತ್ಯುತ್ತಮ ಆಯ್ಕೆ. ಗೋಧಿ, ರಾಗಿ, ಓಟ್ಸ್ ಹೀಗೆ ಹಲವು ಹಿಟ್ಟಿನಿಂದ ಈ ಸುಲಭವಾದ ಕಟ್ಲೆಟ್‌ನ್ನು ತಯಾರಿಸಬಹುದು. ಜೊತೆಗೆ, ಈ ಕಟ್ಲೆಟ್ ಪಾಕವಿಧಾನಗಳು ತುಂಬಾ ಸುಲಭ ಮತ್ತು ತ್ವರಿತವಾಗಿ ತಯಾರಿಸಲು ಸಾಧ್ಯವಾಗುತ್ತದೆ. 

Healthy Snacks: ಪಾರ್ಟಿಯಾದರೇನು, ಹಾಳು ಮೂಳು ತಿನ್ನಲೇಬೇಕಾ?

ರುಚಿಕರವಾದ ತಿಂಡಿಗಳಿಲ್ಲದೆ ಚಹಾ ಸಮಯವು ಅಪೂರ್ಣವಾಗಿರುತ್ತದೆ. ಕಟ್ಲೆಟ್‌ಗಳು ಸಂಜೆಯ ಚಹಾದೊಂದಿಗೆ ಜೋಡಿಸಲು ಪರಿಪೂರ್ಣವಾಗಿವೆ. ಕಟ್ಲೆಟ್ ರುಚಿಕರವಾಗಿರುವುದು ಮಾತ್ರವಲ್ಲದೆ ದೇಹಕ್ಕೆ ಕೆಲಸಗಳನ್ನು ನಿರ್ವಹಿಸಲು ತ್ವರಿತ ಶಕ್ತಿಯನ್ನು ನೀಡುತ್ತದೆ. ಹಾಗಿದ್ರೆ ಹೆಲ್ದೀ ಮತ್ತು ಈಝಿ ಕಟ್ಲೆಟ್ ತಯಾರಿಸುವುದು ಹೇಗೆ ತಿಳಿಯೋಣ

ರಾಗಿ ಕಟ್ಲೆಟ್ 
ರುಚಿಕರವಾದ, ಗರಿಗರಿಯಾದ ಮತ್ತು ಆರೋಗ್ಯಕರವಾದ ಏನನ್ನಾದರೂ ತಿನ್ನಬೇಕೆಂದು ಹಂಬಲಿಸುವವರಿಗೆ ರಾಗಿ ಕಟ್ಲೆಟ್ (Ragi Cutlet) ಪಾಕವಿಧಾನವು ಪರಿಪೂರ್ಣವಾಗಿದೆ. ಇದನ್ನು ತಯಾರಿಸುವ ರೀತಿ ಹೀಗಿದೆ. ಒಂದು ಬಟ್ಟಲಿನಲ್ಲಿ, ಕತ್ತರಿಸಿದ ಕ್ಯಾರೆಟ್, ಈರುಳ್ಳಿ, ಎಲೆಕೋಸು ಮತ್ತು ಹಿಸುಕಿದ ಆಲೂಗಡ್ಡೆ ಸೇರಿಸಿ. ಇದಕ್ಕೆ ಕೆಂಪು ಮೆಣಸಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೆಣಸು, ಉಪ್ಪು ಮತ್ತು ಗರಂ ಮಸಾಲಾ ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ. ಈಗ ಇದಕ್ಕೆ ರಾಗಿ ಹಿಟ್ಟನ್ನು ಸೇರಿಸಿ ಮಿಶ್ರಣ ಮಾಡಿ. ಸಣ್ಣ ಉಂಡೆಗಳನ್ನಾಗಿ ಮಾಡಿ ಕಟ್ಲೆಟ್ ಆಕಾರದಲ್ಲಿ ತಟ್ಟಿ ಎಣ್ಣೆಯಲ್ಲಿ ಕರಿ. ರುಚಿಕರವಾದ ರಾಗಿ ಕಟ್ಲೆಟ್ ಚಟ್ನಿಯೊಂದಿಗೆ ಸವಿಯಲು ಸಿದ್ಧ.

ಓಟ್ಸ್ ಕಟ್ಲೆಟ್
ಓಟ್ಸ್ (Oats) ಕಟ್ಲೆಟ್ ಅನ್ನು ಹುರಿದ ಓಟ್ಸ್, ತರಕಾರಿಗಳು ಮತ್ತು ಕೆಲವು ಮಸಾಲೆಗಳೊಂದಿಗೆ ತಯಾರಿಸಲಾಗುತ್ತದೆ. ಈ ಪಾಕವಿಧಾನವನ್ನು ಸಂಜೆಯ ಟೀ ಸ್ನ್ಯಾಕ್ಸ್, ಬೆಳಗ್ಗಿನ ಉಪಾಹಾರವಾಗಿಯೂ ಸವಿಯಬಹುದು. ಈ ಕಟ್ಲೆಟ್ ರೆಸಿಪಿ ಸಂಪೂರ್ಣವಾಗಿ ಪ್ರಮುಖ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಪ್ರಮಾಣವನ್ನು ಹೊಂದಿದೆ. ಇದನ್ನು ತಯಾರಿಸುವ ರೀತಿ ಹೀಗಿದೆ.

ಬೇಯಿಸಿದ ಆಲೂಗಡ್ಡೆ (Potato) ಮತ್ತು ತುರಿದ ಕ್ಯಾರೆಟ್‌ನ್ನು ಒಟ್ಟಿಗೆ ಸರಿಯಾಗಿ ಸ್ಮ್ಯಾಶ್ ಮಾಡಿ. ದೊಡ್ಡ ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಹುರಿದ ಓಟ್ಸ್, ಹಿಸುಕಿದ ಆಲೂಗಡ್ಡೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ, ತುರಿದ ಕ್ಯಾರೆಟ್, ಉಪ್ಪು, ಮೆಣಸಿನ ಪುಡಿ ಮತ್ತು ಗರಂ ಮಸಾಲಾ ಪುಡಿ ಸೇರಿಸಿ. ನಂತರ ಇದಕ್ಕೆ ಪುಡಿ ಮಾಡಿದ ಪನೀರ್ ಸೇರಿಸಿ ಹಿಟ್ಟನ್ನು ಸಿದ್ಧಗೊಳಿಸಿ. ಕಟ್ಲೆಟ್ ತಯಾರಿಸಿ ಎಣ್ಣೆಯಲ್ಲಿ ಕರಿಯಿರಿ.

Variety Chutney: ಸ್ನ್ಯಾಕ್ಸ್‌ ಜತೆ ಸವಿಯಲು ಬೆಸ್ಟ್‌ ರೆಸಿಪಿ

ಪೋಹಾ ಕಟ್ಲೆಟ್ 
ಅವಲಕ್ಕಿಯನ್ನು ಬಳಸಿಕೊಂಡು ಈ ಕಟ್ಲೆಟ್ನ್ನು ಸುಲಭವಾಗಿ ತಯಾರಿಸಬಹುದು.ಅವಲಕ್ಕಿಯನ್ನು ನೀರಿನಲ್ಲಿ ನೆನೆಸಿ ನೀರನ್ನು ಹಿಂಡಿ ತೆಗೆಯಬೇಕು. ಇದಕ್ಕೆ ಬೇಯಿಸಿದ ಆಲೂಗಡ್ಡೆ, ಕತ್ತರಿಸಿದ ಹಸಿ ಮೆಣಸಿನಕಾಯಿ, ಒಣಮೆಣಸಿನಕಾಯಿ, ಕತ್ತರಿಸಿದ ಶುಂಠಿ, ಸ್ಪಲ್ಪ ಕಾರ್ನ್ ಪುಡಿ ಸೇರಿಸಬೇಕು. ಅಗತ್ಯವಿದ್ದಲ್ಲಿ ನೀರು ಸೇರಿಸಿಕೊಳ್ಳಬಹುದು. ಹಿಟ್ಟು ಹದಕ್ಕೆ ಬಂದ ನಂತರ ಕಟ್ಲೆಟ್ ತಯಾರಿಸಿ ಕರಿಯಿರಿ. 

ಕಡಲೆ ಕಟ್ಲೆಟ್‌
ಕಡಲೆ, ಮಸಾಲೆಗಳು ಮತ್ತು ಕೆಲವು ತರಕಾರಿಗಳನ್ನು ಸೇರಿಸಿ ಕಡಲೆ ಕಟ್ಲೆಟ್‌ಗಳನ್ನು ತಯಾರಿಬಹುದು. ಇದನ್ನು ತಯಾರಿಸಲು 1 ಕಪ್ ನೆನೆಸಿದ ಕಡಲೆ, 1/2 ಕಪ್ ಕತ್ತರಿಸಿದ ಈರುಳ್ಳಿ, 1 ಕಪ್ ಬ್ರೆಡ್ ತುಂಡುಗಳು, ಕತ್ತರಿಸಿದ ಮೆಣಸಿನಕಾಯಿಗಳು, 5-6 ಕತ್ತರಿಸಿದ ಲವಂಗ, ಬೆಳ್ಳುಳ್ಳಿ, ಕತ್ತರಿಸಿದ ಮಧ್ಯಮ ಗಾತ್ರದ ಶುಂಠಿಯನ್ನು ಗ್ರೈಂಡರ್‌ನಲ್ಲಿ ಅರೆ ನುಣ್ಣಗೆ ಮಿಕ್ಸ್ ಮಾಡಿಕೊಳ್ಳಬೇಕು. ಇದಕ್ಕೆ , ಮೆಣಸಿನ ಹುಡಿ, ಉಪ್ಪನ್ನು ಸೇರಿಸಿಕೊಳ್ಳಬೇಕು. ನಂತರ ರೌಂಡ್ ಶೇಪ್‌ನಲ್ಲಿ ತಟ್ಟಿಕೊಂಡು ಎಣ್ಣೆಯಲ್ಲಿ ಕರಿದರೆ ಕಟ್ಲೆಟ್ ಸಿದ್ಧ.

ಬೀಟ್ರೂಟ್‌ ಆಲೂ ಕಟ್ಲೆಟ್ 
ಬೀಟ್ರೂಟ್ (Beetroot) ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಇದು ಫೈಬರ್, ವಿಟಮಿನ್ ಬಿ 9, ಸಿ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಕಬ್ಬಿಣದ ಉತ್ತಮ ಮೂಲವಾಗಿದೆ. ಆದ್ದರಿಂದ, ಬೀಟ್ರೂಟ್‌ನ ಹಲವಾರು ಪ್ರಯೋಜನಗಳೊಂದಿಗೆ, ಈ ಕಟ್ಲೆಟ್ ರೆಸಿಪಿಯನ್ನು ಪ್ರಯತ್ನಿಸಲೇಬೇಕು.

ಬೀಟ್ರೂಟ್‌ನ್ನು ತುರಿದು ಇದರಲ್ಲಿರುವ ಹೆಚ್ಚುವರಿ ನೀರನ್ನು ತೆಗೆದು ಹಾಕಬೇಕು. ಇದಕ್ಕೆ ಆಲೂಗಡ್ಡೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಉಪ್ಪು, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಚಾಟ್ ಮಸಾಲ ಮುಂತಾದ ಎಲ್ಲಾ ಪದಾರ್ಥಗಳನ್ನು ಸೇರಿಸಿ ಹಿಟ್ಟನ್ನು ತಯಾರಿಸಿಕೊಳ್ಳಬೇಕು. ಇದನ್ನು ರೌಂಡ್ ಶೇಪ್ ಮಾಡಿಕೊಂಡುಕಟ್ಲೆಟ್ ಮಾಡಿಕೊಂಡರೆ ಪುದೀನಾ ಚಟ್ನಿಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ.