ಗಾರ್ಡನಿಂಗ್ ಬಹಳ ಉತ್ತಮ ಹವ್ಯಾಸ. ಬಾಲ್ಕನಿ, ಟೆರೇಸ್, ಹಿತ್ತಿಲು, ಅಂಗಳ ಎಂದು ಮನೆಯಲ್ಲಿ ಇರುವ ಜಾಗದಲ್ಲೇ ಸಾಕಷ್ಟು ಹೂವು ಹಾಗೂ ತರಕಾರಿ ಗಿಡಗಳನ್ನು ಬೆಳೆದುಕೊಂಡರೆ ಕಣ್ಣಿಗೂ ಹಬ್ಬ, ಮನಸ್ಸಿಗೂ ಹಿತ. ಆಗಾಗ ಸಿಗುವ ಕೆಮಿಕಲ್‌ರಹಿತ ತರಕಾರಿಗಳು ಆ ದಿನದ ಊಟವನ್ನು ಪೂರೈಸಿ ಹೆಚ್ಚಿನ ಸಂತೋಷವನ್ನೂ ತಂದುಕೊಡುತ್ತವೆ. ಮನೆಯಲ್ಲೇ ಇರುವ ಬಾಟಲ್, ಬಾಕ್ಸ್‌ಗಳಲ್ಲೇ ಮಣ್ಣು ಹಾಕಿ, ಹಸಿಕಸಗಳನ್ನೇ ಗೊಬ್ಬರವಾಗಿ ಬಳಸಿದರೆ ಇದಕ್ಕೆ ಹೆಚ್ಚು ಖರ್ಚೂ ಆಗುವುದಿಲ್ಲ. ದಿನಕ್ಕೆ 6 ಗಂಟೆಗಳ ಕಾಲ ಸೂರ್ಯನ ಬೆಳಕು ಬಿದ್ದರೆ ಬಹುತೇಕ  ಗಿಡಗಳು ಸೊಂಪಾಗಿ ಬೆಳೆಯುತ್ತವೆ. ಹೀಗೆ  ನೀವು ಮನೆಯಲ್ಲಿಯೇ ಸುಲಭವಾಗಿ ಬೆಳೆಯಬಹುದಾದ ತರಕಾರಿಗಳಿವು. 

ಟೊಮ್ಯಾಟೋ
ದಕ್ಷಿಣ ಅಮೆರಿಕ ಮೂಲದ ಟೊಮ್ಯಾಟೋ ಈಗ ಮನೆಮನೆಯ ಪ್ರತಿ ಊಟಕ್ಕೂ ಸಾಥ್ ನೀಡುತ್ತದೆ. ಸಾರು, ಚಟ್ನಿ, ಸೂಪ್, ಸಾಂಬಾರ್, ಸಲಾಡ್, ಪಾಸ್ತಾ, ಜ್ಯೂಸ್, ವಿಶೇಷ ಖಾದ್ಯಗಳು ಸೇರಿದಂತೆ ಎಲ್ಲದಕ್ಕೂ ಟೊಮ್ಯಾಟೋ ಕೊಡುವ ರುಚಿಯೇ ವಿಭಿನ್ನ. ಆ್ಯಂಟಿಆಕ್ಸಿಡೆಂಟ್‌ಗಳು, ವಿಟಮಿನ್‌ಗಳು, ಮಿನರಲ್‌ಗಳಿಂದ ಸಮೃದ್ಧವಾಗಿರುವ ಟೊಮ್ಯಾಟೋವನ್ನು ಮನೆಯಲ್ಲೇ ಬೆಳೆಯುವುದು ಕೂಡಾ ಸುಲಭ. ಮಣ್ಣು ಗೊಬ್ಬರ ಮಿಕ್ಸ್ ಮಾಡಿದ ಪಾಟ್‌ಗೆ ನೀರನ್ನು ಹಾಕಿ, ಟೊಮ್ಯಾಟೋವೊಂದನ್ನು ಗಾಲಿ ಗಾಲಿಯಾಗಿ ಕತ್ತರಿಸಿ ಇಟ್ಟು ಮೇಲಿನಿಂದ  ಒಂದು ಇಂಚಿನಷ್ಟು ಮಣ್ಣು ಮುಚ್ಚಿ. ಸೂರ್ಯನ ಬೆಳಕು ಹಿತವಾಗಿ ಬೀಳುವೆಡೆ ಪಾಟ್  ಇಡಿ. ಪ್ರತಿದಿನ ಸ್ವಲ್ಪ ನೀರುಣಿಸಿದರೆ ಸಾಕು. ಅದು ಮತ್ತೇನೂ ಕೇಳದೆ ಬೆಳೆದುಕೊಂಡು  ಹೋಗುತ್ತದೆ. 

ತಂಪು ತಂಪು ತರಕಾರಿ ಜ್ಯೂಸ್, ಬಾಯಿಗೂ ರುಚಿ, ದೇಹಕ್ಕೂ ಹಿತ

ಹಸಿಮೆಣಸು
ಹಸಿಮೆಣಸು ಪ್ರತಿದಿನದ ಅಡುಗೆಯಲ್ಲೂ ಬಳಕೆಯಾಗುತ್ತದೆ. ಆಹಾರಕ್ಕೆ ಖಾರ ರುಚಿ ಸೇರಿಸಿ ದೇಹಕ್ಕೆ ಥೈಮಿನ್, ಫೋಲೇಟ್, ಮ್ಯಾಂಗನೀಸನ್ನು ಸೇರಿಸುವ ಹಸಿಮೆಣಸನ್ನು ಬೆಳೆಯುವುದು ಬಹಳ ಸರಳ. ಮಣ್ಣಿಗೆ ಸ್ವಲ್ಪ ಗೊಬ್ಬರ ಹಾಗೂ ಎಪ್ಸೋಮ್ ಸಾಲ್ಟ್ ಸೇರಿಸಿ. ಈ ಸಾಲ್ಟ್‌ ಸೇರಿಸುವುದರಿಂದ ಹಸಿಮೆಣಸಿನಲ್ಲಿ ಮೆಗ್ನೀಶಿಯಂ ಪ್ರಮಾಣ ಹೆಚ್ಚುತ್ತದೆ. ಇದಕ್ಕೆ ಮನೆಯಲ್ಲಿರುವ ಒಣಮೆಣಸಿನ ಬೀಜಗಳನ್ನು ತೆಗೆದು ಹರಡಿ ಒಂದೆರಡು ಮುಷ್ಠಿ ಮಣ್ಣಿನಿಂದ ಮುಚ್ಚಿ ಬಿಡಿ. ಪ್ರತಿದಿನ ಒಂದು ಮಗ್ ನೀರು ಹಾಕುತ್ತಾ ಬನ್ನಿ. ಗಿಡ ಬೆಳೆವ ವೇಗ ನಿಮ್ಮ ಸಂತೋಷ ದುಪ್ಪಟ್ಟು ಮಾಡುತ್ತದೆ. 

ಕೊತ್ತಂಬರಿ ಸೊಪ್ಪು
ಕೊತ್ತಂಬರಿ ಸೊಪ್ಪು ಕೂಡಾ ದೈನಂದಿನ ಬಳಕೆಗೆ ಬೇಕು. ಇದರ ಪರಿಮಳ, ಫ್ಲೇವರ್ ಎಲ್ಲವೂ ಆಹಾರದ ರುಚಿ ಹೆಚ್ಚಿಸುತ್ತವೆ. ಆ್ಯಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಕೊತ್ತಂಬರಿ ಸೊಪ್ಪು ಆರೋಗ್ಯಕ್ಕೆ ಬಹಳ ಒಳ್ಳೆಯದು. ಕೊತ್ತಂಬರಿಯನ್ನು ಯಾವ ಖರ್ಚೂ ಇಲ್ಲದೆ ಮನೆಯಲ್ಲೇ ಬೆಳೆಯಬಹುದು. ಎರಡು ಮೂರು ಪಾಟ್‌ಗೆ ಹಾಕಿಕೊಂಡರೆ ಪ್ರತಿದಿನದ ಅಗತ್ಯಕ್ಕೆ ಸೊಪ್ಪು ಸಿಗುತ್ತಾ ಹೋಗುತ್ತದೆ. ಇದನ್ನು ಎರಡು ವಿಧಾನಗಳಲ್ಲಿ ಬೆಳೆಯಬಹುದು. ಎರಡಕ್ಕೂ ಮನೆಯಲ್ಲಿರುವ ಧನಿಯಾವನ್ನು ಒಂದೆರಡು ಚಮಚಗಳಷ್ಟು ತೆಗೆದುಕೊಂಡು ಹಗುರವಾಗಿ ಜಜ್ಜಿ. ಇದರಿಂದ ಧನಿಯಾ ಎರಡು ಭಾಗವಾಗುತ್ತದೆ. ನಂತರ ಮೊದಲ ವಿಧಾನದಲ್ಲಿ ಪಾಟ್ನಲ್ಲಿರುವ ಮಣ್ಣನ್ನು ಸ್ವಲ್ಪ ಕೆತ್ತಿಕೊಂಡು ಧನಿಯಾ ಬೀಜಗಳನ್ನು ಹರಡಿ. ಮೇಲೆ ಸ್ವಲ್ಪವೇ ಸ್ವಲ್ಪ ಮಣ್ಣಿನಿಂದ ಮುಚ್ಚಿ. ನಂತರ ಪ್ರತಿದಿನ ನೀರು ಹಾಕುತ್ತಾ ಬಂದರಾಯಿತು. 20 ದಿನದಲ್ಲಿ ಕೊತ್ತಂಬರಿ ಅಡುಗೆಗೆ ಸಿಗುತ್ತದೆ. ಮತ್ತೊಂದು ವಿಧಾನ ಹೈಡ್ರೋಫೋನಿಕ್ಸ್. ಇಲ್ಲಿ ಸೊಪ್ಪು ಬೆಳೆಯಲು ಮಣ್ಣೇ ಬೇಕಾಗಿಲ್ಲ. ಬದಲಿಗೆ ಪಾತ್ರೆಯೊಂದರಲ್ಲಿ ನೀರು ತುಂಬಿ, ಮೇಲಿನಿಂದ ತೂತುಗಳಿರುವ ಬುಟ್ಟಿಯನ್ನು ಇಡಿ. ಈ ಬುಟ್ಟಿಯ ಮೇಲೆ ಧನಿಯಾ ಹರಡಿ. ಹೆಚ್ಚು ಸೂರ್ಯನ ಬಿಸಿಲು ಬೀಳದ ಜಾಗದಲ್ಲಿಟ್ಟುಬಿಡಿ. ನೀರನ್ನು 15 ದಿನಕ್ಕೊಮ್ಮೆ ಬದಲಿಸಿದರೆ ಸಾಕು, ಬುಟ್ಟಿ ತುಂಬಾ ಸೊಪ್ಪು ಸಿಗುತ್ತದೆ. 

ಲಾಕ್ ಡೌನ್ ಸಡಿಲಿಕೆ ವೇಳೆ WHO ಕೊಟ್ಟ ಭಯಾನಕ ಎಚ್ಚರಿಕೆ!

ಪಾಲಕ್,  ಪುದೀನಾ ಹಾಗೂ ಮೆಂತ್ಯೆ ಸೊಪ್ಪು
ಐರನ್ ಹಾಗೂ ಕ್ಯಾಲ್ಶಿಯಂನಿಂದ ಸಮೃದ್ಧವಾಗಿರುವ ಈ ಎರಡೂ ಸೊಪ್ಪುಗಳು ಬಾಲ್ಕನಿಯ ಪಾಟ್‌ಗಳಲ್ಲೇ ಸುಲಭವಾಗಿ ಬೆಳೆದುಕೊಳ್ಳುತ್ತವೆ. ಮೆಂತ್ಯೆ ಕಾಳನ್ನು ಪಾಟ್‌ನಲ್ಲಿ 1 ಇಂಚು ಮಣ್ಣಿನ ಕೆಳಗೆ ಹಾಕಿ, ಬೀಜಗಳ ನಡುವೆ ಅಂತರವಿರಲಿ. ಇದರಿಂದ ಅವು ಬೆಳೆಯಲು ಅಗತ್ಯ ಸ್ಥಳ ಒದಗಿಸಿಕೊಟ್ಟಂತಾಗುತ್ತದೆ. ನಂತರ ದಿನಕ್ಕೆರಡು ಬಾರಿ ನೀರು ಹನಿಸಿ. ಪಾಲಕ್ ಹಾಗೂ  ಪುದೀನಾ ಬೀಜಗಳು ಇಲ್ಲದಿದ್ದಲ್ಲಿ ಮನೆಗೆ ತಂದ ಪಾಲಕ್ ಸೊಪ್ಪು ಹಾಗೂ ಪುದೀನಾ ಸೊಪ್ಪನ್ನೇ ಬೇರುಸಹಿತ ಇದ್ದರೆ ಅದೇ ಬೇರನ್ನೇ ನೆಟ್ಟರೂ ನಡೆಯುತ್ತದೆ. ಇವೆರಡು ಬಹಳ ಕಡಿಮೆ ಅವಧಿಯಲ್ಲಿ ಇಳುವರಿ ನೀಡುತ್ತವೆ. 

ಬೀನ್ಸ್
ಪ್ರೋಟೀನ್, ವಿಟಮಿನ್ ಬಿ, ಪೊಟ್ಯಾಶಿಯಂ ಹಾಗೂ ಮೆಗ್ನೀಶಿಯಂನಿಂದ  ಸಮೃದ್ಧವಾಗಿರುವ ಬೀನ್ಸ್ ಪಲ್ಯ, ಸಾಂಬಾರ್ ಎಲ್ಲದಕ್ಕೂ ಸೈ. ಬೀನ್ಸ್ ಬೆಳೆಯುವುದು ಕೂಡಾ ಬಹಳ ಸುಲಭವೇ. ಮನೆಯಲ್ಲಿ ತಂದ ಒಳ್ಳೆ ಜಾತಿಯ ಬೀನ್ಸ್‌ನ ಬೀಜಗಳನ್ನು ತೆಗೆದು ಚೆನ್ನಾಗಿ ಒಣಗಿಸಿಡಿ. ಇವು ಚೆನ್ನಾಗಿ ಒಣಗಿದ ಬಳಿಕ ಒಂದು  ಪಾಟ್‌ನಲ್ಲಿ ನಾಲ್ಕರಿಂದ ಆರು ಬೀಜಗಳನ್ನು ಒಂದು ಇಂಚು ಅಡಿಗೆ ಹಾಕಿ ಮಣ್ಣು ಮುಚ್ಚಿ. ಸ್ವಲ್ಪ ಗೊಬ್ಬರವನ್ನು ನೀರಿನೊಂದಿಗೆ ಮಿಕ್ಸ್ ಮಾಡಿ ಸೇರಿಸಿ. ಪ್ರತಿದಿನ ನೀರು ಹಾಕಲು ಮರೆಯಬೇಡಿ. ಗಿಡ ಸ್ವಲ್ಪ ಎತ್ತರವಾದ ಮೇಲೆ ಬೆಂಬಲಕ್ಕೆ ಕೋಲನ್ನು ಊರಿ.