ಮೂರು ವರ್ಷಗಳ ಕಾಲ ಅಮೆರಿಕಾದಲ್ಲಿ ಟೆಕ್ಕಿಯಾಗಿ ಕೆಲಸ ಮಾಡಿದ ಯುವಕನೊರ್ವ ಭಾರತಕ್ಕೆ ಮರಳಿ ಮೊಹಾಲಿಯಲ್ಲಿ ಫುಡ್ ಸ್ಟಾಲ್ ಆರಂಭಿಸಿದ್ದಾರೆ.
ಮೊಹಾಲಿ: ಜಾಗತಿಕ ಸ್ಥಿತಿಗತಿಗಳಿಂದಾಗಿ ಜಗತ್ತಿನ ಬಹುತೇಕ ರಾಷ್ಟ್ರಗಳು ಹಣದುಬ್ಬರದ ಸಮಸ್ಯೆಯಿಂದ ಬಳಲುತ್ತಿವೆ. ಅನೇಕರ ಉದ್ಯೋಗಗಳು ತೂಗುಗತ್ತಿಯಲ್ಲಿ ನೇತಾಡುತ್ತಿದ್ದರೆ, ಅನೇಕರು ಈಗಾಗಲೇ ಕೆಲಸ ಕಳೆದುಕೊಂಡಿದ್ದಾರೆ. ಇಂತಹ ಸ್ಥಿತಿಯಲ್ಲಿ ಅನೇಕರು ಆರ್ಥಿಕ ಸಂಕಷ್ಟಕ್ಕೊಳಗಾಗಿ ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಹೀಗಿರುವಾಗ ಅಮೆರಿಕಾದಲ್ಲಿ ಮೂರು ವರ್ಷಗಳ ಕಾಲ ಟೆಕ್ಕಿಯಾಗಿ ಕೆಲಸ ಮಾಡಿದ್ದ ಯುವಕನೋರ್ವ ದೇಶಕ್ಕೆ ಮರಳಿದ್ದು, ಇಲ್ಲಿ ಫುಡ್ ಸ್ಟಾಲ್ ಸ್ಥಾಪಿಸುವ ಮೂಲಕ ಯಾವುದಕ್ಕೂ ಅಂಜದೇ ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ. ಇವರ ಈ ಸ್ಟೋರಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ಮೂರು ವರ್ಷಗಳನ್ನು ಕಳೆದ ನಂತರ ಟೆಕ್ಕಿ ಮಣೀಂದರ್ ಸಿಂಗ್ ಭಾರತಕ್ಕೆ ಮರಳಿದ್ದು, ಅವರು ತಮ್ಮ ಪತ್ನಿಯ ಜೊತೆ ಸೇರಿ ಪಂಜಾಬ್‌ನ ಮೊಹಾಲಿಯಲ್ಲಿ ಮನೆಯಲ್ಲಿ ತಯಾರಿಸಿದ ವಿವಿಧ ಉತ್ತರ ಭಾರತೀಯ ಖಾದ್ಯಗಳನ್ನು ಮಾರಾಟ ಮಾಡುವ ಆಹಾರ ಮಳಿಗೆಯನ್ನು ಸ್ಥಾಪಿಸಿದ್ದಾರೆ. ಇವರ ಬಗ್ಗೆ ಬ್ಲಾಗರ್ @realfoodler ಅವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಅದೀಗ ವೈರಲ್ ಆಗಿದೆ. ಸಿಂಗ್ ಅವರು ಕೇವಲ ಟೆಕ್ಕಿಯಾಗಿ ಉಳಿಯದೇ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದು ಅವರಿಗೆ ಸುಮಾರು 12 ವರ್ಷಗಳ ಕೆಲಸದ ಅನುಭವವಿದೆ ಎಂದು . ಐಟಿ ಹೊರತುಪಡಿಸಿ, ಅವರು ಚಿಲ್ಲರೆ ವ್ಯಾಪಾರ, ಕಾಲ್ ಸೆಂಟರ್‌ಗಳು ಮತ್ತು ಮಾರಾಟ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಇತ್ತೀಚೆಗೆ ಅನೇಕ ಅಕ್ರಮ ವಲಸಿಗರನ್ನು ಅಮೆರಿಕಾ ಗಡೀಪಾರು ಮಾಡಿತ್ತು. ಆದರೆ ಇವರು ಹೀಗೆ ಗಡೀಪಾರು ಆಗಿ ಬಂದವರಲ್ಲ. ನ್ಯೂಯಾರ್ಕ್‌ನಲ್ಲಿ ತಾವು ಹಿಂದೆ ವಾಸಿಸುತ್ತಿದಿದ್ದಕ್ಕೆ ಪುರಾವೆಯಾಗಿ ಅವನು ತಮ್ಮ ಚಾಲನಾ ಪರವಾನಗಿಯನ್ನು ಕ್ಯಾಮೆರಾಗೆ ತೋರಿಸುತ್ತ, ತಾನು ಅಮೆರಿಕಾದಿಂದ ಗಡೀಪಾರು ಆಗಿ ಬಂದವನಲ್ಲ , ಬದಲಾಗಿ, ತನ್ನ ತಂದೆ ತೀರಿಕೊಂಡ ನಂತರ ದೇಶಕ್ಕೆ ಹಿಂತಿರುಗಿದಾಗಿ ಹೇಳಿದ್ದಾರೆ. ತನ್ನ ಹೆಂಡತಿಗೆ ಅಡುಗೆಯಲ್ಲಿ ಎರಡು ದಶಕಗಳ ಅನುಭವವಿದೆ. ಹೀಗಾಗಿ ಒಟ್ಟಿಗೆ ಆಹಾರ ಉದ್ಯಮವನ್ನು ಪ್ರಾರಂಭಿಸಲು ನಿರ್ಧರಿಸಿದ್ದಾಗಿ ಅವರು ಹೇಳಿದ್ದಾರೆ. ಆಕೆ ವಿವಿಧ ಆಹಾರಗಳನ್ನು ತಯಾರಿಸುತ್ತಿದ್ದರೆ ತಾನು ಆಕೆಗೆ ಆ ಕೆಲಸದಲ್ಲಿ ಸಹಾಯ ಮಾಡುತ್ತಿರುವುದಾಗಿ ಮಣೀಂದರ್ ಸಿಂಗ್ ಹೇಳುತ್ತಾರೆ. ಇವರ ಈ ಫುಡ್ ಸ್ಟಾಲ್ ಯಶಸ್ವಿಯಾಗಿ ನಡೆಯುತ್ತಿದ್ದು, ರಾಜ್ಮಾ, ಕಧಿ ಪಕೋಡ, ಅನ್ನ, ರೂಮಾಲಿ ರೊಟ್ಟಿಗಳು, ಸೋಯಾ ಚಾಪ್ ಕರಿ ಮತ್ತು ಮಾವಿನ ಲಸ್ಸಿ ಮುಂತಾದವುಗಳನ್ನು ಇವರು ಸಿದ್ಧಪಡಿಸುತ್ತಾರೆ.
ಅನೇಕರಿಗೆ ಕೆಲಸದ ಬಗ್ಗೆ ಬಹಳ ಕೀಳರಿಮೆ ಇರುತ್ತದೆ. ಕೆಲವು ಕೆಲಸಗಳನ್ನು ಎಲ್ಲರೂ ಮಾಡಲು ಇಷ್ಟಪಡುವುದಿಲ್ಲ, ಆದರೆ ಮಣೀಂದರ್ ಸಿಂಗ್ ತಾನು ಟೆಕ್ಕಿ ತಾನು ಅಡುಗೆ ಕೆಲಸದ ಉದ್ಯಮ ಆರಂಭಿಸಿದರೆ ಜನ ಏನು ಅಂತಾರೋ ಎಂಬ ಬಗ್ಗೆ ಯಾವುದೇ ತಲೆಕೆಡಿಸಿಕೊಳ್ಳದೇ ಆಹಾರೋದ್ಯಮ ಆರಂಭಿಸಿದ್ದು, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಈ ವಿಚಾರ ಈಗ ಅನೇಕರಿಗೆ ಸ್ಪೂರ್ತಿ ತುಂಬಿದ್ದು, ಕೆಲವರು ತಾನು ನಿವೃತ್ತಿ ಆದ ನಂತರ ಇದೇ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈ ತರ ಸ್ವಾಭಿಮಾನದಿಂದ ಬದುಕುವುದರಲ್ಲಿ ಯಾವುದೇ ತಪ್ಪಿಲ್ಲ, ಕಷ್ಟಪಟ್ಟು ಪ್ರಾಮಾಣಿಕತೆಯಿಂದ ಮಾಡಿದ ಕೆಲಸ ಯಾವಾಗಲೂ ಕೈ ಹಿಡಿಯುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಗಂಡನಿಗೆ ಜೊತೆಯಾಗಿ ಕೆಲಸ ಮಾಡುತ್ತಿರುವ ಆತನ ಪತ್ನಿಗೂ ಧನ್ಯವಾದಗಳು. ದೇವರು ಅವನನ್ನು ಆಶೀರ್ವದಿಸಲಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಭಾರತದಲ್ಲಿ, ನಾವು ಎಲ್ಲಾ ರೀತಿಯ ಕೆಲಸಗಳನ್ನು ಮಾಡಲು ಹೆಚ್ಚು ಒಗ್ಗಿಕೊಳ್ಳಬೇಕು. ಕೆಲವು ರೀತಿಯ ಕೆಲಸಗಳಿಗೆ ಅಂಟಿಕೊಂಡಿರುವ ಕಳಂಕ ತುಂಬಾ ಹೆಚ್ಚಾಗಿದೆ. ಅಮೆರಿಕದಲ್ಲಿ, ಪ್ರತಿಯೊಬ್ಬರೂ ಎಲ್ಲಾ ರೀತಿಯ ಕೆಲಸಗಳನ್ನು ಮಾಡುತ್ತಾರೆ ಮತ್ತು ಮಾಡಲು ಮುಕ್ತರಾಗಿರುತ್ತಾರೆ. ಇದೇ ರೀತಿಯ ಸಂಸ್ಕೃತಿ ಭಾರತೀಯರಲ್ಲಿ ಹೆಚ್ಚು ಬರಬೇಕು ಎಂದು ನಾನು ಬಯಸುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಪ್ರತಿಯೊಬ್ಬರು ತಮ್ಮದೇ ರೀತಿಯಲ್ಲಿ ಶಾಂತಿಯನ್ನು ಬಯಸುತ್ತಾರೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಕೆಲಸವಿಲ್ಲದೇ ಖಾಲಿ ಕುಳಿತು ಬೇರೆಯವರಿಗೆ ಭಾರವಾಗುವುದಕ್ಕಿಂತ ಯಾವ ಕೆಲಸವಾದರೂ ಸರಿ ಸ್ವಾಭಿಮಾನದಿಂದ ಬದುಕಿದರೆ ಅದೇ ದೊಡ್ಡ ಸಾಧನೆ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ..
