ಮನೆಯಲ್ಲಿ ಉಳಿದ ಚಪಾತಿಗಳಿಂದ ಕೋತು ಚಪಾತಿ, ನೂಡಲ್ಸ್, ಪಿಜ್ಜಾ ಮತ್ತು ರೋಲ್ಸ್ ಸೇರಿದಂತೆ ಆರು ರುಚಿಕರವಾದ ಭಕ್ಷ್ಯಗಳನ್ನು ತಯಾರಿಸಬಹುದು. ಈ ಸುಲಭ ವಿಧಾನಗಳನ್ನು ಬಳಸಿ ಮಿಕ್ಕ ಚಪಾತಿಯನ್ನು ರುಚಿಕರವಾದ ತಿಂಡಿಗಳಾಗಿ ಬದಲಾಯಿಸಬಹುದು.
ಮನೆಯಲ್ಲಿ ಚಪಾತಿ ಮಾಡಿರುತ್ತೀರಿ. ಒಂದಷ್ಟು ತಿಂದ ಬಳಿಕ ಮೂರ್ನಾಲ್ಕು ಚಪಾತಿಗಳು ಹಾಗೆಯೇ ಉಳಿದಿರುತ್ತವೆ. ಈ ಮಿಕ್ಕ ಚಪಾತಿಗಳಿಂದ ನೀವು ಬಗೆಬಗೆಯ ಖಾದ್ಯಗಳನ್ನ ಮಾಡಬಹುದು. ಕೋತು ಚಪಾತಿ, ನೂಡಲ್ಸ್, ಪಿಜ್ಜಾ ಮತ್ತು ರೋಲ್ಸ್ ಸೇರಿದಂತೆ ಆರು ರುಚಿಕರವಾದ ಭಕ್ಷ್ಯಗಳಾಗಿ ಮಾಡಬಹುದು. ಹೇಗೆ ಅನ್ನೋದ್ರ ವಿವರ ಈ ಸ್ಟೋರಿಯಲ್ಲಿದೆ.
ಅದಕ್ಕಾಗಿ ನೀವು ಏನು ಮಾಡಬೇಕು?
ಮೊದಲು ಎಷ್ಟು ಚಪಾತಿಗಳು ಉಳಿದಿವೆ ಅನ್ನೋದನ್ನು ಮೊದಲು ಲೆಕ್ಕ ಹಾಕಿ. ಆ ಚಪಾತಿಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಬೇಕು. ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಸಾಸಿವೆ, ಕರಿಬೇವು, ಈರುಳ್ಳಿ, ಟೊಮೆಟೊ ಮತ್ತು ಹಸಿರು ಮೆಣಸಿನಕಾಯಿಗಳನ್ನು ಹುರಿಯಿರಿ. ನಂತರ ಮೆಣಸಿನ ಪುಡಿ, ಅರಿಶಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಬಳಿಕ ಕತ್ತರಿಸಿದ ಚಪಾತಿ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಿಮಗೆ ಮೊಟ್ಟೆ ಇಷ್ಟವಾದರೆ ಅದನ್ನೂ ಸೇರಿಸಿದ್ರೆ ಖಾರದ ಕೋತು ಚಪಾತಿ ತಿನ್ನಲು ರೆಡಿ.
ನೀವು ನೂಡಲ್ಸ್ ಪ್ರಿಯರಾಗಿದ್ರೆ ನೂಡಲ್ಸ್ ರೀತಿಯಲ್ಲೂ ಮಾಡಿಕೊಂಡು ತಿನ್ನಬೇಕು. ಮೊದಲು ಚಪಾತಿಗಳನ್ನು ಉದ್ದ ಮತ್ತು ತೆಳುವಾಗಿ ಪೀಸ್ ಮಾಡಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಂ ಮತ್ತು ಎಲೆಕೋಸು ಮುಂತಾದ ತರಕಾರಿಗಳನ್ನು ಹುರಿಯಿರಿ. ನಂತರ ಮೆಣಸಿನ ಪುಡಿ, ಸ್ವಲ್ಪ ಸೋಯಾ ಸಾಸ್ ಮತ್ತು ಉಪ್ಪು ಸೇರಿಸಿ. ನಂತರ ಚಪಾತಿ ಪೀಸ್ಗಳನ್ನ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ತರಕಾರಿಗಳಿಂದ ತುಂಬಿದ ನಿಮ್ಮ ಇಷ್ಟದ 'ಚಪಾತಿ ನೂಡಲ್ಸ್' ತಿನ್ನಲು ಸಿದ್ಧವಾಗುತ್ತದೆ.
ಪಿಜ್ಜಾ ಮಾಡೋದು ಹೇಗೆ?
ಚಪಾತಿಯ ಮೇಲೆ ಸ್ವಲ್ಪ ಟೊಮೆಟೊ ಕೆಚಪ್ ಅಥವಾ ಪಿಜ್ಜಾ ಸಾಸ್ ಹರಡಿ. ಅದರ ಮೇಲೆ ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಂ, ಟೊಮೆಟೊ ಮತ್ತು ತುರಿದ ಚೀಸ್ ಹಾಕಿ. ಮುಚ್ಚಿದ ಪ್ಯಾನ್ ಮೇಲೆ ಚೀಸ್ ಕರಗುವವರೆಗೆ ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಗರಿಗರಿಯಾದ ಬೇಸ್ ಮತ್ತು ಚೀಸೀ ಟಾಪ್ ಹೊಂದಿರುವ ನಿಮ್ಮ ಚಪಾತಿ ಪಿಜ್ಜಾ ತಿನ್ನಲು ರೆಡಿ ಆಗುತ್ತದೆ.
ಚಪಾತಿ ರೋಲ್
ತರಕಾರಿ ಮಸಾಲ, ಪನೀರ್ ಅಥವಾ ಮೊಟ್ಟೆಗಳನ್ನು ಬಳಸಿ ಚಪಾತಿ ರೋಲ್ ಮಾಡಬಹುದು. ಮೊದಲು ಈರುಳ್ಳಿ, ಟೊಮೆಟೊ, ತರಕಾರಿಗಳು ಮತ್ತು ನಿಮ್ಮ ನೆಚ್ಚಿನ ಮಸಾಲೆಗಳನ್ನು ಬೇಯಿಸಿಕೊಳ್ಳಿ. ಬಳಿಕ ಚಪಾತಿಯನ್ನು ತವಾ ಮೇಲೆ ಸ್ವಲ್ಪ ಬಿಸಿ ಮಾಡಿ ಮತ್ತು ಮಸಾಲವನ್ನು ಮಧ್ಯದಲ್ಲಿ ಇರಿಸಿ. ಎರಡೂ ಬದಿಗಳನ್ನು ಮಡಚಿ ಬಿಗಿಯಾಗಿ ಸುತ್ತಿಕೊಳ್ಳಿ. ಇದು ಮಕ್ಕಳಿಗೆ ಸೂಕ್ತವಾದ ತಿಂಡಿ ಮತ್ತು ಪ್ರಯಾಣಕ್ಕೆ ಉತ್ತಮ ತಿಂಡಿಯಾಗಿದೆ.
ಚಪಾತಿ ಚಿಪ್ಸ್
ಕುರುಕಲು ತಿಂಡಿ ಪ್ರಿಯರು ಖಂಡಿತವಾಗಿಯೂ ಚಪಾತಿ ಚಿಪ್ಸ್ ಇಷ್ಟಪಡುತ್ತಾರೆ. ಚಪಾತಿಯನ್ನು ತ್ರಿಕೋನ ಆಕಾರದಲ್ಲಿ ಕತ್ತರಿಸಿ. ಎಣ್ಣೆ, ಮೆಣಸಿನ ಪುಡಿ, ಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ಬೆರಸಿ. ನಂತರ ತವಾದಲ್ಲಿ ಇಟ್ಟು ಗರಿಗರಿ ಆಗುವವರೆಗೆ ಹುರಿಯಬೇಕು. ಹೆಚ್ಚು ಎಣ್ಣೆ ಬಳಸದೆಯೇ ನೀವು ಈ ತಿಂಡಿಯನ್ನು ಸಿದ್ಧಪಡಿಸಿಕೊಳ್ಳಬಹುದು.
ಚಪಾತಿ ಉಪ್ಮಾ
ಉಳಿದ ಚಪಾತಿಯಿಂದ ಉಪ್ಮಾ ಕೂಡ ಮಾಡಬಹುದು. ಉಳಿದ ಚಪಾತಿಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಉದ್ದಿನ ಬೇಳೆ, ಈರುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಕರಿಬೇವು ಹಾಕಿ. ಈರುಳ್ಳಿ ಮೃದುವಾದ ನಂತರ ಕತ್ತರಿಸಿದ ಚಪಾತಿ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕೆಲವು ನಿಮಿಷಗಳ ಕಾಲ ಬಿಸಿ ಮಾಡಿ, ನಿಮ್ಮ ರುಚಿಕರವಾದ ಚಪಾತಿ ಉಪ್ಮಾ ಸಿದ್ಧವಾಗುತ್ತದೆ.







