ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ನಟ ಝೈದ್ ಖಾನ್ ದಿಢೀರನೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ. ಇತ್ತೀಚೆಗೆ ವಿಜಯಲಕ್ಷ್ಮೀ ಮತ್ತು ನಟ ಧನ್ವೀರ್ ನಡುವೆ ವಿವಾದ ಭುಗಿಲೆದ್ದಿದ್ದು, ಪರಸ್ಪರ ಪೊಲೀಸ್ ದೂರು ದಾಖಲಾಗಿವೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಝೈದ್ ಖಾನ್ ಜೈಲಿಗೆ ಭೇಟಿ ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ.

ಬೆಂಗಳೂರು: ದಿಢೀರ್ ಬೆಳವಣಿಗೆ ಒಂದರಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ನಟ ಝೈದ್ ಖಾನ್ ಭೇಟಿ ನೀಡಿದ್ದಾರೆ. ವಿಜಯಲಕ್ಷ್ಮೀ ಅವರು ಝೈದ್ ಖಾನ್ ಜೊತೆ ದರ್ಶನ್ ಅವರನ್ನು ಭೇಟಿ ಮಾಡಲು ಆಗಮಿಸಿರೋದು ತೀವ್ರ ಕುತೂಹಲ ಮೂಡಿಸಿದೆ.

ವಿಜಯಲಕ್ಷ್ಮೀ ಹಾಗೂ ಧನ್ವೀರ್ ನಡುವೆ ಜಟಾಪಟಿ

ಕಳೆದ ಒಂದು ವಾರದಿಂದ ವಿಜಯಲಕ್ಷ್ಮೀ ಹಾಗೂ ಧನ್ವೀರ್ ಮಧ್ಯೆ ವಿವಾದ ಭುಗಿಲೆದ್ದಿದೆ. ಮತ್ತೊಂದು ಕಡೆ ಧನ್ವೀರ್ ಅವರು ಝೈದ್ ಖಾನ್ ವಿರುದ್ಧ ಮಾತನ್ನಾಡಿದ್ದಾರೆ ಎನ್ನಲಾಗಿರುವ ಆಡಿಯೋ ಒಂದು ವೈರಲ್ ಆಗಿ, ಸಂಚಲನ ಮೂಡಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ವಿಜಯಲಕ್ಷ್ಮೀ ಹಾಗೂ ಝೈದ್ ಖಾನ್ ಒಟ್ಟಿಗೆ ದರ್ಶನ್ ಅವರನ್ನು ನೋಡಲು ಜೈಲಿಗೆ ಆಗಮಿಸಿರೋದು ಕುತೂಹಲ ಮೂಡಿಸಿದೆ.

ಧನ್ವೀರ್ ವೈರಲ್ ಆಡಿಯೋದಲ್ಲಿ ಏನಿದೆ..?

ಧನ್ವೀರ್ ಅವರು ಮಾತನ್ನಾಡಿದ್ದು ಎನ್ನಲಾಗುತ್ತಿರುವ ಆಡಿಯೋದಲ್ಲಿ ಝೈದ್ ಖಾನ್ ವಿರುದ್ಧ ಅವಹೇಳನಕಾರಿಯಾಗಿ ಮಾತನ್ನಾಡಲಾಗಿದೆ. ಏಕವಚನದಲ್ಲೇ ಮಾತನ್ನಾಡಿರುವ ಆಡಿಯೋದಲ್ಲಿ ಝೈದ್ ಖಾನ್ ನನ್ನ ಕಾಲಿನ ಧೂಳಿಗೂ ಸಮನಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ ಝೈದ್ ಖಾನ್ ಅವರು, ಚಲನಚಿತ್ರ ವಾಣಿಜ್ಯ ಮಂಡಳಿಗೆ ಧನ್ವೀರ್ ವಿರುದ್ಧ ದೂರು ನೀಡಿದ್ದಾರೆ. ನನ್ನ ಬಗ್ಗೆ ಕೀಳು ಮಟ್ಟದ ಹೇಳಿಕೆಯನ್ನ ಧನ್ವೀರ್ ನೀಡಿದ್ದಾರೆ. ಅವರ ವಿರುದ್ಧ ನೀವು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ದೂರು ನೀಡಿದ್ದಾರೆ.

ಇನ್ನು, ಒಂದು ಕಾಲದಲ್ಲಿ ದರ್ಶನ್ ಹಾಗೂ ಅವರ ಕುಟುಂಬದ ಜೊತೆ ಧನ್ವೀರ್ ಗೌಡ ಅತ್ಯಾಪ್ತರಾಗಿದ್ದರು. ಅದೇನು ಆಗಿದೆಯೋ ಗೊತ್ತಿಲ್ಲ. ಧನ್ವೀರ್ ಗೌಡ ಹಾಗೂ ವಿಜಯಲಕ್ಷ್ಮೀ ನಡುವಿನ ವಿವಾದ ದಿಢೀರ್ ಮುನ್ನೆಲೆಗೆ ಬಂದಿದೆ. ವಿಜಯಲಕ್ಷ್ಮೀ ಅವರು ತಮ್ಮ ಮ್ಯಾನೇಜರ್ ಮೂಲಕ ಧನ್ವೀರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಧನ್ವೀರ್ ಅವರ ತಂದೆ ವಿಜಯಲಕ್ಷ್ಮೀ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ವಿಜಯಲಕ್ಷ್ಮೀ ಕಡೆಯವರು ನಮ್ಮ ಮನೆಗೆ ರೌಡಿಗಳನ್ನು ಕಳುಹಿಸಿ ಬೆದರಿಸಿದ್ದಾರೆ. ಮಗನ ಜೊತೆ ಮಾತನ್ನಾಡಬೇಕು ಎಂದು ಬೆದರಿಸಿದ್ದಾರೆ. ದೂರು, ಪ್ರತಿದೂರುಗಳನ್ನ ಸ್ವೀಕರಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇವತ್ತು ಜೈಲಿಗೆ ಭೇಟಿ ನೀಡಿರುವ ವಿಜಯಲಕ್ಷ್ಮೀ ಧನ್ವೀರ್ ಜೊತೆಗಿನ ವಿವಾದಗಳ ಬಗ್ಗೆ ದರ್ಶನ್‌ಗೆ ಮಾಹಿತಿ ನೀಡುವ ಸಾಧ್ಯತೆ ಇದೆ.

ಒಂದು ವಾರದಲ್ಲಿ ನಡೆದ ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ವಿಜಯಲಕ್ಷ್ಮೀ ಅವರು ಸಚಿವ ಜಮೀರ್ ಪುತ್ರ ಝೈದ್ ಖಾನ್ ಜೊತೆ ಜೈಲಿಗೆ ಭೇಟಿ ನೀಡಿರೋದು ಕುತೂಹಲಕಾರಿ ಆಗಿದೆ. ಝೈದ್ ಖಾನ್ ದಿಢೀರ್ ದರ್ಶನ್ ನೋಡಲು ಜೈಲಿಗೆ ಬಂದಿರೋದು ಯಾಕೆ? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಈ ಹಿಂದೆ ವಿಜಯಲಕ್ಷ್ಮೀ ಜೊತೆ ಧನ್ವೀರ್ ಗೌಡ ದರ್ಶನ್ ನೋಡಲು ಜೈಲಿಗೆ ಬರುತ್ತಿದ್ದರು.