Asianet Suvarna News Asianet Suvarna News

Healthy Food: ಇಷ್ಟ ಅಂತಾ ಬದನೆಕಾಯಿ ಬೇಕಾಬಿಟ್ಟಿ ತಿನ್ಬೇಡಿ

ಬದನೆಕಾಯಿ ಅಂದ್ರೆ ಕೆಲವರಿಗೆ ಬಲು ಪ್ರೀತಿ. ದಿನಕ್ಕೆ ಮೂರು ಹೊತ್ತು ಅದ್ರ ಖಾದ್ಯ ನೀಡಿದ್ರೂ ತಿನ್ನುವವರಿದ್ದಾರೆ. ಆದ್ರೆ ಅತಿಯಾಗಿ ಬದನೆಕಾಯಿ ತಿನ್ನೋದು ಅಪಾಯಕಾರಿ. ಕೆಲ ರೋಗಿಗಳು ಹಾಗೆ ಕೆಲ ರೋಗಕ್ಕೆ ಆಹ್ವಾನ ನೀಡಬಾರದು ಎನ್ನುವವರು ಇತಿಮಿತಿಯಲ್ಲಿ ಇದನ್ನು ಸೇವನೆ ಮಾಡ್ಬೇಕು.
 

Brinjal Side Effects Eating Brinjal Can Also Be Harmful For Health
Author
First Published Mar 27, 2023, 4:58 PM IST

ಬದನೆಕಾಯಿ ಬಜ್ಜಿ, ಬದನೆಕಾಯಿ ಎಣ್ಣಗಾಯಿ, ವಾಂಗಿಬಾತ್  ಹೀಗೆ ಬದನೆಕಾಯಿಯಿಂದ ನಾನಾ ಆಹಾರ ತಯಾರಿಸಬಹುದು. ಕೆಲವರಿಗೆ ಬದನೆಕಾಯಿ ಅಂದ್ರೆ ತುಂಬಾ ಇಷ್ಟ. ವರ್ಷದ ಎಲ್ಲ ಋತುವಿನಲ್ಲಿ  ಬದನೆಕಾಯಿ ಸಿಗೋದ್ರಿಂದ ವರ್ಷವಿಡಿ ಅದನ್ನು ಬಳಸುವವರಿದ್ದಾರೆ. ಬದನೆಕಾಯಿ ಬಜ್ಜಿ ಅಂದ್ರೆ ಕೆಲವರಿಗೆ ಬಾಯಲ್ಲಿ ನೀರು ಬರುತ್ತದೆ. ಇನ್ನು ಕೆಲವರಿಗೆ ಬದನೆಕಾಯಿ ಅಂದ್ರೆ ಸ್ವಲ್ಪವೂ ಇಷ್ಟವಿರೋದಿಲ್ಲ. ನೀವು ಎಷ್ಟೇ ರುಚಿಯಾದ ಅಡುಗೆ ಮಾಡಿದ್ರೂ ಬದನೆಕಾಯಿಯಿಂದ ತಯಾರಾಗಿದ್ದು ಅಂತಾ ಗೊತ್ತಾದ ತಕ್ಷಣ ಅದನ್ನು ಬದಿಗೊತ್ತುತ್ತಾರೆ.  

ನಮ್ಮಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಬದನೆಕಾಯಿ (Brinjal) ಬಳಕೆ ಹೆಚ್ಚಿದೆ. ನೇರಳೆ ಬಣ್ಣ (Color) ಮಾತ್ರವಲ್ಲದೆ ಹಸಿರು ಮತ್ತು ಬಿಳಿ ಬಣ್ಣಗಳಲ್ಲಿಯೂ ಬದನೆಕಾಯಿ ಲಭ್ಯವಿದೆ. ಬದನೆಕಾಯಿ ಸೇವನೆ ಮಾಡೋದ್ರಿಂದ ಸಾಕಷ್ಟು ಪ್ರಯೋಜವಿದೆ. ಬದನೆಕಾಯಿಯಲ್ಲಿ ವಿಟಮಿನ್‌ (Vitamins) ಗಳು, ಫೀನಾಲಿಕ್ಸ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು ಬದನೆಕಾಯಿ ಔಷಧವಾಗಿ ಕೆಲಸ ಮಾಡುತ್ತದೆ. ಆದ್ರೆ ಬದನೆಕಾಯಿ ಸೇವನೆಯಿಂದ ಸಾಕಷ್ಟು ಅನಾನುಕೂಲವೂ ಇದೆ. ನಾವಿಂದು ಬದನೆಕಾಯಿ ಸೇವನೆಯಿಂದಾಗುವ ನಷ್ಟ ಮತ್ತು ಲಾಭವನ್ನು ನಿಮಗೆ ಹೇಳ್ತೇವೆ.

ಬದನೆಕಾಯಿ ಸೇವನೆಯಿಂದಾಗುವ ನಷ್ಟ :  
ಮೂತ್ರಪಿಂಡ (Kidney) ದಲ್ಲಿ ಕಲ್ಲಾಗುವ ಸಾಧ್ಯತೆ : ಬದನೆಕಾಯಿಯನ್ನು ಅತಿಯಾಗಿ ಸೇವನೆ ಮಾಡಿದ್ರೆ ಕಿಡ್ನಿಯಲ್ಲಿ ಕಲ್ಲಾಗುವ ಸಾಧ್ಯತೆಯಿರುತ್ತದೆ. ಈಗಾಗಲೇ ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಬದನೆಕಾಯಿಯನ್ನು ತಿನ್ನಬಾರದು. ಬದನೆ ಬೀಜಗಳು ಹೆಚ್ಚುವರಿ ಕಲ್ಲುಗಳ ಉತ್ಪತ್ತಿಗೆ ಕಾರಣವಾಗುತ್ತವೆ. ನಿಧಾನವಾಗಿ ಮೂತ್ರಪಿಂಡಕ್ಕೆ ಹಾನಿಯುಂಟು ಮಾಡುತ್ತವೆ. 

ಮೂಳೆ (Bones) ಗಳಿಗೆ ಯೋಗ್ಯವಲ್ಲ ಬದನೆ : ಬದನೆಕಾಯಿಯಲ್ಲಿ ಆಕ್ಸಲೇಟ್ ಅಂಶ ಕಂಡುಬರುತ್ತದೆ. ಇದು, ದೇಹ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಕ್ಯಾಲ್ಸಿಯಂ ಕಡಿಮೆಯಾದ್ರೆ  ಮೂಳೆ ಆರೋಗ್ಯ ಹದಗೆಡುತ್ತದೆ. ಮೂಳೆಗಳು ದುರ್ಬಲಗೊಳ್ಳುತ್ತವೆ. ಈಗಾಗಲೇ ಮೂಳೆ ದುರ್ಬಲವಾಗಿರುವವರು ಬದನೆಕಾಯಿ ಸೇವನೆ ಮಾಡಬಾರದು. 

ಪೈಲ್ಸ್ ಸಮಸ್ಯೆಯಿದ್ರೆ ಬದನೆಕಾಯಿ ಬೇಡ : ಹೇಳಿಕೊಳ್ಳಲಾಗದ, ಅನುಭವಿಸಲೂ ಸಾಧ್ಯವಾಗದ ರೋಗದಲ್ಲಿ ಮೂಲವ್ಯಾಧಿ ಒಂದು. ಪೈಲ್ಸ್ ರೋಗಿ ಬದನೆಕಾಯಿ ಸೇವನೆ ಮಾಡಬಾರದು. ರಕ್ತಹೀನತೆಯಿಂದ ಬಳಲುವ ವ್ಯಕ್ತಿ ಕೂಡ ಇದ್ರಿಂದ ದೂರವಿರಬೇಕು. ಇಲ್ಲವೆಂದ್ರೆ ಸಮಸ್ಯೆ ಹೆಚ್ಚಾಗುತ್ತದೆ. 

ಸಂಧಿವಾತ ರೋಗಿಗಳು ಬದನೆಕಾಯಿ ತಿನ್ನಬೇಡಿ :  ಸಂಧಿವಾತ  ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ಬದನೆಕಾಯಿ ಎಷ್ಟೇ ರುಚಿ ಎನ್ನಿಸಿದ್ರೂ ಅದನ್ನು ತಿನ್ನಬೇಡಿ. ನಿಮ್ಮ ಸಂಧಿವಾತ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಂಭವವಿರುತ್ತದೆ. 

ಬದನೆಕಾಯಿ ತಿಂದ್ರೆ ಈ ಸಮಸ್ಯೆ ಕಾಡುತ್ತೆ :  ಬದನೆಕಾಯಿಯನ್ನು ಇಂದು ಪ್ರಮಾಣದಲ್ಲಿ ಸೇವನೆ ಮಾಡಬಹುದು. ಇಷ್ಟ ಎನ್ನುವ ಕಾರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತಿನ್ನಬಾರದು. ಅತಿಯಾಗಿ ಸೇವನೆ ಮಾಡಿದ್ರೆ ಹೊಟ್ಟೆ ನೋವು, ವಾಂತಿ, ತಲೆನೋವು, ತುರಿಕೆ ಮುಂತಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಬದನೆಕಾಯಿ ಸೇವನೆಯಿಂದಾಗುವ ಲಾಭ : ಮಧುಮೇಹದ ಸಮಸ್ಯೆಯಿಂದ ಬಳಲುತ್ತಿರುವವರು ಬದನೆಕಾಯಿ ಬಳಕೆ ಮಾಡಬೇಕು.  ಇದರಲ್ಲಿ ಕಂಡುಬರುವ ಫಿನಾಲಿಕ್ಸ್,  ಟೈಪ್-2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ : ತಜ್ಞರ ಪ್ರಕಾರ, ವಿಟಮಿನ್-ಎ, ವಿಟಮಿನ್-ಸಿ ಜೊತೆಗೆ ಬಿ-ಕ್ಯಾರೋಟಿನ್ ಮತ್ತು ಪಾಲಿಫಿನಾಲಿಕ್  ಬದನೆ ಕಾಯಿಯಲ್ಲಿ ಕಂಡುಬರುತ್ತವೆ. ಇವು ಹೃದಯಕ್ಕೆ ರಕ್ಷಣೆ ನೀಡುತ್ತವೆ. 

ನೆನಪಿನ ಶಕ್ತಿ ವೃದ್ಧಿ : ಬದನೆಕಾಯಿಯ ಬಳಕೆಯು ನೆನಪಿನ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಕಬ್ಬಿಣ, ಸತು, ಫೋಲೇಟ್ ಮತ್ತು ವಿಟಮಿನ್ ಎ, ಬಿ ಮತ್ತು ಸಿ ಇದ್ರಲ್ಲಿದ್ದು, ಇದು ಮಾನಸಿಕ ಆರೋಗ್ಯಕ್ಕೆ ಉಪಯುಕ್ತವೆಂದು ಪರಿಗಣಿಸಲಾಗಿದೆ.  

ಜೀರ್ಣಕ್ರಿಯೆಗೆ ಸಹಕಾರಿ : ಬದನೆಕಾಯಿ ತಿನ್ನುವುದ್ರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ.  ಆಹಾರವನ್ನು ಜೀರ್ಣಿಸುವಲ್ಲಿ ಜೀರ್ಣಕಾರಿ ರಸಗಳು ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ, ಬದನೆಕಾಯಿಯ ಬಳಕೆಯು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಧಾರಿಸುವಲ್ಲಿ ಸಹಾಯಕವಾಗಿದೆ.

Follow Us:
Download App:
  • android
  • ios