Breakfast Recipe: ಬೆಳಗಿನ ಉಪಾಹಾರಕ್ಕೆ ಪ್ರತಿದಿನ ಏನು ಮಾಡುವುದು? ಎಂಬ ಚಿಂತೆ ಹಲವರಿಗಿರುತ್ತದೆ. ಅದರಲ್ಲೂ ಸಮಯ ಕಡಿಮೆ ಇದ್ದಾಗ ಸುಲಭವಾಗಿ ತಯಾರಿಸಬಹುದಾದ ತಿಂಡಿ ಬೇಕಾಗುತ್ತದೆ.

Breakfast Recipe: ಬೆಳಗಿನ ಉಪಾಹಾರಕ್ಕೆ ಪ್ರತಿದಿನ ಏನು ಮಾಡುವುದು ಎಂಬ ಚಿಂತೆ ಹಲವರಿಗಿರುತ್ತದೆ. ಅದರಲ್ಲೂ ಸಮಯ ಕಡಿಮೆ ಇದ್ದಾಗ ಸುಲಭವಾಗಿ ತಯಾರಿಸಬಹುದಾದ ತಿಂಡಿ ಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಮನೆಯಲ್ಲಿರುವ ಬಾಳೆಹಣ್ಣಿನಿಂದಲೇ ರುಚಿಯಾದ ಬಾಳೆಹಣ್ಣಿನ ದೋಸೆ ತಯಾರಿಸಬಹುದು.

ಹೆಚ್ಚು ಸಮಯ ಬೇಕಾಗದ ಈ ದೋಸೆಯನ್ನು ಗೋಧಿ ಹಿಟ್ಟು, ಬಾಳೆಹಣ್ಣು, ತೆಂಗಿನಕಾಯಿ ಮತ್ತು ಬೆಲ್ಲ ಬಳಸಿ ಸುಲಭವಾಗಿ ಮಾಡಬಹುದು. ಸಿಹಿ ರುಚಿ ಇರುವುದರಿಂದ ಮಕ್ಕಳಿಗೂ ಈ ದೋಸೆ ಇಷ್ಟವಾಗುತ್ತದೆ. ಹಾಗಾದರೆ ಬಾಳೆಹಣ್ಣಿನ ದೋಸೆ ಮಾಡುವುದು ಹೇಗೆ? ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ ಇಲ್ಲಿದೆ.

ಬಾಳೆಹಣ್ಣಿನ ದೋಸೆಗೆ ಬೇಕಾಗುವ ಸಾಮಗ್ರಿಗಳು

ಬಾಳೆಹಣ್ಣು - 4

ಗೋಧಿ ಹಿಟ್ಟು - 1 ಕಪ್

ತೆಂಗಿನಕಾಯಿ ತುರಿ - 1/2 ಕಪ್

ಬೆಲ್ಲ - 1/2 ಕಪ್

ಉಪ್ಪು - 1/2 ಟೀ ಸ್ಪೂನ್

ಹಾಲು ಅಥವಾ ನೀರು - 1 ಕಪ್

ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು

ಬಾಳೆಹಣ್ಣಿನ ದೋಸೆ ಮಾಡುವ ವಿಧಾನ

ಮೊದಲಿಗೆ ನಾಲ್ಕು ಬಾಳೆಹಣ್ಣುಗಳನ್ನು ಸಿಪ್ಪೆ ತೆಗೆದು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಿವುಚಿಕೊಳ್ಳಿ. ಇದಕ್ಕೆ ಅರ್ಧ ಕಪ್ ಬೆಲ್ಲ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ ಒಂದು ಕಪ್ ಗೋಧಿ ಹಿಟ್ಟು ಮತ್ತು ಅರ್ಧ ಕಪ್ ತೆಂಗಿನಕಾಯಿ ತುರಿ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎಲ್ಲವನ್ನೂ ಚೆನ್ನಾಗಿ ಕಲಸಿ. ಈ ಮಿಶ್ರಣಕ್ಕೆ ನಿಧಾನವಾಗಿ ಒಂದು ಕಪ್ ಹಾಲು ಅಥವಾ ನೀರನ್ನು ಸೇರಿಸುತ್ತಾ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಹಿಟ್ಟು ತುಂಬಾ ದಪ್ಪವಾಗಿಯೂ ಅಥವಾ ತೆಳುವಾಗಿಯೂ ಇರದಂತೆ ನೋಡಿಕೊಳ್ಳಿ.

ತವಾ ಬಿಸಿ ಮಾಡಿ ಸ್ವಲ್ಪ ಎಣ್ಣೆ ಸವರಿ. ನಂತರ ಸಿದ್ಧಪಡಿಸಿಕೊಂಡ ಹಿಟ್ಟನ್ನು ತವಾದ ಮೇಲೆ ಹಾಕಿ ದೋಸೆಯಂತೆ ಹರಡಿ. ದೋಸೆಯ ಅಂಚಿಗೆ ಸ್ವಲ್ಪ ಎಣ್ಣೆ ಹಾಕಿ ಎರಡೂ ಬದಿಗಳನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ದೋಸೆ ಎರಡೂ ಬದಿಯಲ್ಲಿ ಹೊಂಬಣ್ಣಕ್ಕೆ ಬಂದ ಬಳಿಕ ತವಾದಿಂದ ತೆಗೆದುಕೊಳ್ಳಿ.

ಬಿಸಿ ಬಿಸಿಯಾಗಿ ಸವಿಯಿರಿ

ಹೀಗೆ ಸುಲಭವಾಗಿ ರುಚಿಯಾದ ಬಾಳೆಹಣ್ಣಿನ ದೋಸೆ ಸಿದ್ಧ. ಬೆಳಗಿನ ಉಪಾಹಾರ ಮಾತ್ರವಲ್ಲದೆ ಸಂಜೆ ತಿಂಡಿಯಾಗಿಯೂ ಇದನ್ನು ಸವಿಯಬಹುದು. ಬಾಳೆಹಣ್ಣಿನ ಸಿಹಿ, ಬೆಲ್ಲ ಮತ್ತು ತೆಂಗಿನಕಾಯಿಯ ರುಚಿ ದೋಸೆಗೆ ವಿಶೇಷ ಸ್ವಾದ ನೀಡುತ್ತದೆ.

ಮನೆಯಲ್ಲಿರುವ ಅತಿಯಾಗಿ ಹಣ್ಣಾದ ಬಾಳೆಹಣ್ಣುಗಳನ್ನು ವ್ಯರ್ಥ ಮಾಡದೆ ಈ ರೀತಿ ರುಚಿಯಾದ ದೋಸೆ ತಯಾರಿಸಬಹುದು. ಕಡಿಮೆ ಸಮಯದಲ್ಲಿ ತಯಾರಾಗುವ ಈ ರೆಸಿಪಿ ಬ್ಯುಸಿ ಬೆಳಗ್ಗಿನ ಸಮಯಕ್ಕೆ ಉತ್ತಮ ಆಯ್ಕೆಯಾಗಿದೆ.