ನಟಿ ಅದಿತಿ ಪ್ರಭುದೇವ ಅವರು ಕೆಲವು ಹೆಲ್ತ್​ ಟಿಪ್ಸ್​ ಜೊತೆಗೆ ಅವಲಕ್ಕಿ ಮತ್ತು ಬೆಂಡೇಕಾಯಿ ಫ್ರೈ ಮಾಡುವ ವಿಧಾನ ಹೇಳಿಕೊಟ್ಟಿದ್ದಾರೆ.  

ಬೇಗ ಮಲಗಿ ಬೇಗ ಏಳಬೇಕು ಎಂದು ಹಿರಿಯರು ಹೇಳುತ್ತಲೇ ಇರುತ್ತಾರೆ. ಸೂರ್ಯ ಮುಳುಗುವ ಮೊದಲೇ ಊಟ ಮಾಡಿ ಬೇಗನೇ ನಿದ್ದೆ ಮಾಡಿ, ಸೂರ್ಯ ಹುಟ್ಟುವ ಮುನ್ನವೇ ಏಳುವುದರಿಂದ ಸಂಪೂರ್ಣ ಆರೋಗ್ಯದ ಜೊತೆಗೆ ದೀರ್ಘಾಯಸ್ಸು ಕೂಡ ಲಭಿಸುತ್ತದೆ ಎನ್ನುವ ಮಾತಿದೆ. ಆದರೆ ಇಂದು ಅದನ್ನು ಫಾಲೋ ಮಾಡುವವರ ಸಂಖ್ಯೆ ತುಂಬಾ ಕಮ್ಮಿ ಎಂದೇ ಹೇಳಬಹುದು. ಆದರೆ ಫಿಟ್​ನೆಸ್​ ಮಂತ್ರ ಜಪಿಸುವವರು ಅದರಲ್ಲಿಯೂ ಹೆಚ್ಚಾಗಿ ಹಲವು ನಟ-ನಟಿಯರು ಹಾಗೂ ಸೌಂದರ್ಯ, ಫ್ಯಾಷನ್​ ಪ್ರಪಂಚದಲ್ಲಿ ಗುರುತಿಸಿಕೊಂಡಿರುವವರು ಈ ಟಿಪ್ಸ್​ಗಳನ್ನು ಇಂದಿಗೂ ಫಾಲೋ ಮಾಡಿಕೊಂಡೇ ಬಂದಿರುತ್ತಾರೆ. ಅಂಥವರಲ್ಲಿ ಒಬ್ಬರು ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ ಅವರೂ ಒಬ್ಬರು. 

ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ್​ (Aditi Prabhudev) ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ, ಸ್ಯಾಂಡಲ್‌ವುಡ್​ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಸಿನಿಮಾ ಜೊತೆಗೆ ವೈವಾಹಿಕ ಬದುಕನ್ನು ಬ್ಯಾಲೆನ್ಸ್ ಮಾಡ್ತಿದ್ದಾರೆ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಅದಿತಿ ಪ್ರಭುದೇವ ಅವರು ಸದ್ಯ ಗೃಹಿಣಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದವರು. ಇದರ ಹೊರತಾಗಿಯೂ ಅಡುಗೆಯಲ್ಲಿಯೂ ಇವರದ್ದು ಎತ್ತಿದ ಕೈ. ಅಡುಗೆ, ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಟಿಪ್ಸ್​ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಹಾಲು ಒಡೆಯದೇ ಬೆಲ್ಲದ ಟೀ ಮಾಡುವ ವಿಧಾನ ಹೇಳಿಕೊಟ್ಟ ನಟಿ ಅದಿತಿ ಪ್ರಭುದೇವ

ಇದೀಗ ಅವರು ಬೇಗ ಮಲಗಿ ಬೇಗ ಏಳುವ ಚಾಲೆಂಜ್​ ಸ್ವೀಕರಿಸಿದ್ದಾರೆ. ಅದೇ ರೀತಿ ಮುಂಜಾನೆ 4.45ಗೆ ಎದ್ದಿರುವ ಅದಿತಿ, ತಮ್ಮ ನಾಯಿ ಚಾಕಲೇಟ್​ಗೂ ಬೆಚ್ಚನೆ ಸ್ವೆಟ್ಟರ್​ ಧರಿಸಿಕೊಂಡು ವಾಕಿಂಗ್​ ಹೋಗಿದ್ದಾರೆ. ಅದಾದ ಬಳಿಕ ಮನೆಗೆ ಬಂದು ಸಿಂಪಲ್​ ಅವಲಕ್ಕಿ ಹಾಗೂ ಬೆಂಡೆಕಾಯಿ ಫ್ರೈ ಮಾಡಿದ್ದಾರೆ. ಅದರ ರೆಸಿಪಿಯನ್ನು ಹೇಳಿಕೊಟ್ಟಿದ್ದಾರೆ. ಬೆಳಿಗ್ಗೆ ಏಳೂವರೆ ಹೊತ್ತಿಗೆ ಸಂಪೂರ್ಣ ಬ್ರೇಕ್​ಫಾಸ್ಟ್​ ಮುಗಿಸಿದ್ದಾರೆ ನಟಿ.

ನಟಿ ಹೇಳಿದ ಅವಲಕ್ಕಿ ರೆಸಿಪಿ ಹೀಗಿದೆ: ಮೊದಲಿಗೆ ಕೊಬ್ಬರಿ ಎಣ್ಣೆಗೆ ಸಾಸಿವೆ, ಕರಿಬೇವಿನ ಸೊಪ್ಪು, ಕಡಲೆ ಬೇಳೆ, ಉದ್ದಿನ ಬೇಳೆ, ಒಂದಿಷ್ಟು ಶೇಂಗಾ ಬೀಜ, ಮೆಣಸಿನ ಕಾಯಿ, ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿದ್ದಾರೆ. ಇದಕ್ಕೆ ಟೊಮ್ಯಾಟೋ ಹಾಕಿದರೆ ಟೇಸ್ಟಿ ಎನ್ನುವುದು ನಟಿಯ ಅನಿಸಿಕೆ. ಇದಕ್ಕೆ ಸ್ವಲ್ಪ ಉಪ್ಪು, ಅರಿಶಿಣ ಪೌಡರ್​ ಹಾಕಿ ಅದಕ್ಕೆ ಯಾವುದೇ ರೀತಿಯ ಮಸಾಲೆ ಪೌಡರ್​ ಇಲ್ಲವೇ ಸಾಂಬಾರ್​ ಪೌಡರ್​ ಮಿಕ್ಸ್ ಮಾಡಿ ಎಂದು ಟಿಪ್ಸ್​ ಕೊಟ್ಟಿದ್ದಾರೆ. ಜೀರಿಗೆ ಪೌಡರ್​ ಹಾಕಿ ಮಿಕ್ಸ್​ ಮಾಡಬೇಕು. ಈಗ ನೆನೆಸಿಟ್ಟ ಅವಲಕ್ಕಿ ಹಾಕಿ ಮಿಕ್ಸ್​ ಮಾಡಬೇಕು. ಅವಲಕ್ಕಿಗೆ ಟೇಸ್ಟ್​ ಬರಲು ಹುರಿಗಡಲೆ (ಪುಟಾಣಿ) ಪೌಡರ್​ ಹಾಕುವಂತೆ ನಟಿ ಹೇಳಿದ್ದಾರೆ. ಇದರ ಮೇಲೆ ಬೇಕಾದರೆ ಕಾಯಿ ತುರಿ ಹಾಕಿದರೆ ಇನ್ನಷ್ಟು ಟೇಸ್ಟ್​ ಬರುತ್ತದೆ.

ಬೆಂಡೇಕಾಯಿ ಫ್ರೈಮಾಡುವುದು ಹೀಗೆ: ನಾರ್ಮಲ್​ ಗರಂ ಮಸಾಲಾ ಇಲ್ಲವೇ ಮ್ಯಾಜಿಕ್​ ಮಸಾಲಾ ಅಥವಾ ಮ್ಯಾಗಿ ಮ್ಯಾಜಿಕ್​ ಮಸಾಲಾ ಪೌಡರ್​ ಎರಡು ಚಮಚ ಹಾಕಿಕೊಳ್ಳಬೇಕು. ಇದಕ್ಕೆ ಎರಡು ಚಮಚ ಗುರೆಳ್ಳು ಪೌಡರ್​ ಹಾಕಬೇಕು (ಗುರೆಳ್ಳು ತಂದು ಫ್ರೈ ಮಾಡಿ ಅದನ್ನು ಪೌಡರ್​ ಮಾಡುವುದು), ಉಪ್ಪು, ಖಾರದ ಪುಡಿ, ಸ್ವಲ್ಪ ಜೀರಿಗೆ ಪುಡಿ ಹಾಕಿ ಮಿಕ್ಸ್​ ಮಾಡಿದರೆ ಮಸಾಲೆ ಪೌಡರ್​ ರೆಡಿ. ಈಗ ಬೆಂಡೆ ಕಾಯಿ ತೊಳೆದು ಒರೆಸಿ ಅದನ್ನು ಸೀಳಿ ಅದರ ಒಳಗೆ ಈ ಮಿಶ್ರಣ ತುಂಬಬೇಕು. ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಫ್ರೈ ಮಾಡಿದರೆ ಟೇಸ್ಟಿ ಟೇಸ್ಟಿ ಬೆಂಡೇಕಾಯಿ ಫ್ರೈ ರೆಡಿ. 

ಎರಡೇ ಎರಡು ದೊಡ್ಡಪತ್ರೆ- ಹತ್ತಾರು ಮಾತ್ರೆಗಳು ಮನೆಯಿಂದ ​ಔಟ್​: ನಟಿ ಅದಿತಿ ಅಮ್ಮನ ಟಿಪ್ಸ್​