ಟೇಬಲ್ ಮ್ಯಾನರ್ಸ್ ಬಗ್ಗೆ ಕೇಳಿದ್ದೇವೆ. ಊಟವೆಂಬುದು ಸ್ವಂತಕ್ಕಾಗಿಯೇ ಆದರೂ, ಸುತ್ತಲಿರುವವರಿಗೆ ತೊಂದರೆಯಾಗದಂತೆ ಶಿಸ್ತುಬದ್ಧವಾಗಿ ಊಟ ಮಾಡುವುದನ್ನು ಟೇಬಲ್ ಮ್ಯಾನರ್ಸ್ ಎನ್ನಬಹುದು. ಭಾರತೀಯ ಆಹಾರ ಹಾಗೂ ಸೇವನೆಯ ಶಿಷ್ಠಾಚಾರ ಪಾಶ್ಚಾತ್ಯರಿಗಿಂತ ಭಿನ್ನ. ಆದರೆ, ಇದರ ಹಿಂದೆ ಧಾರ್ಮಿಕ ನಂಬಿಕೆಗಳು, ಸಾಮಾಜಿಕ ಸಂಪ್ರದಾಯಗಳು, ವೈಜ್ಞಾನಿಕ ವ್ಯಾಖ್ಯಾನಗಳು, ಆರೋಗ್ಯ ಲಾಭಗಳು ಹಾಗೂ ಶಿಸ್ತು ಒಟ್ಟಾಗಿವೆ. ಅಂಥ ಕೆಲವು ಭಾರತೀಯ ಆಹಾರ ಶಿಷ್ಠಾಚಾರಗಳ ಬಗ್ಗೆ ಇಲ್ಲಿ ವಿವರಣೆ ನೀಡಲಾಗಿದೆ.

ಮಕ್ಕಳಿಗೆ ತಿನ್ನೋ ಸ್ವಾತಂತ್ರ್ಯವೂ ಬೇಕು, ಯಾಕೆ ಅಂತ ತಿಳ್ಕೊಳಿ  

ಕೈ ಬಳಸಿ ಆಹಾರ ಸೇವನೆ

ಆಯುರ್ವೇದದ ಪ್ರಕಾರ, ನಮ್ಮ ಐದು ಬೆರಳುಗಳು ಭೂಮಿ, ನೀರು, ವಾಯು, ಅಗ್ನಿ ಹಾಗೂ ಆಕಾಶವನ್ನು ಪ್ರತಿನಿಧಿಸುತ್ತವೆ. ಹಾಗಾಗಿ, ಅವು ಜೀರ್ಣಕ್ರಿಯೆ ಸುಲಭವಾಗುವಂತೆ ಅಗತ್ಯವಿರುವ ಜೀರ್ಣರಸಗಳನ್ನು ಒದಗಿಸುತ್ತವೆ. ವೇದಗಳ ಪ್ರಕಾರ, ಕೈಯಿಂದ ಊಟ ಮಾಡುವುದರಿಂದ ನೇರವಾಗಿ ನಮ್ಮ ಚಕ್ರಗಳ ಲಾಭವನ್ನು ಪಡೆಯಬಹುದು. ಜೊತೆಗೆ, ಇದರಿಂದ ರಕ್ತ ಸಂಚಲನ ಕೂಡಾ ಹೆಚ್ಚುತ್ತದೆ. ನಾವು ಬೆರಳುಗಳನ್ನು ಬಳಸಿ ಆಹಾರ ತೆಗೆದುಕೊಳ್ಳುವುದರಿಂದ ಬೆರಳ ತುದಿಯಲ್ಲಿರುವ ನರಗಳು ಹೊಟ್ಟೆಗೆ ಚೆನ್ನಾಗಿ ಸಿಗ್ನಲ್ ಕಳುಹಿಸುತ್ತವೆ. ಇದರಿಂದ ಆಹಾರದ ರುಚಿ, ವಿನ್ಯಾಸ, ಪರಿಮಳ ಎಲ್ಲವನ್ನೂ ಚೆನ್ನಾಗಿ ಗ್ರಹಿಸಬಹುದು. ಹೀಗೆ ಕೈಯ್ಯಲ್ಲಿ ಊಟ ಮಾಡುವುದು ಭಾರತ ಬಿಟ್ಟರೆ ಆಫ್ರಿಕಾ ಮತ್ತು ಮಧ್ಯಪೂರ್ವ ದೇಶಗಳ ಕೆಲ ಭಾಗಗಳಲ್ಲಿ ಚಾಲ್ತಿಯಲ್ಲಿದೆ. 

ಬಾಳೆಲೆ ಮೇಲೆ ಊಟ

ಬಾಳೆಲೆಯಲ್ಲಿ ಪಾಲಿಫಿನಾಲ್ ಆ್ಯಂಟಿಆಕ್ಸಿಡೆಂಟ್ ಹೇರಳವಾಗಿದ್ದು, ಇದು ಡಯಾಬಿಟೀಸ್, ಕ್ಯಾನ್ಸರ್, ಹೃದಯ ಸಮಸ್ಯೆಗಳು ಮುಂತಾದವು ಹೆಚ್ಚದಂತೆ ನೋಡಿಕೊಳ್ಳುವುದರಲ್ಲಿ ಸಹಾಯಕ. ಈ ಬಾಳೆಲೆಯ ಮೇಲೆ ಬಿಸಿ ಅಡುಗೆ ಬಡಿಸಿದಾಗ ಈ ಪಾಲಿಫಿನಾಲ್ ಹಾಗೂ ಆಹಾರ ಬೆರೆತು ಹಲವಾರು ಪೋಷಕಸತ್ವಗಳು ಬಿಡುಗಡೆಯಾಗುತ್ತವೆ. ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಈ ಅಭ್ಯಾಸ ಕೇರಳದಲ್ಲಿ ಆರಂಭವಾಗಿ ದಕ್ಷಿಣ ಭಾರತದುದ್ದಕ್ಕೂ ಹರಡಿದೆ. ಇದೀಗ ಹೋಟೆಲ್‌ಗಳು, ದೊಡ್ಡ ರೆಸ್ಟೋರೆಂಟ್‌ಗಳು ಸಹ ಬಾಳೆಲೆ ಅಭ್ಯಾಸ ರೂಢಿಸಿಕೊಳ್ಳುತ್ತಿರುವುದು ಆರೋಗ್ಯಕರ ಬೆಳವಣಿಗೆ. 

ಫಲವತ್ತತೆ ಹೆಚ್ಚಿಸುವ ಆಹಾರಗಳಿವು!

ನೆಲದ ಮೇಲೆ ಕುಳಿತು ಆಹಾರ ಸೇವನೆ

ಭಾರತದ ಹಳ್ಳಿಗಳಲ್ಲಿ ಹೆಚ್ಚಾಗಿ ಈ ಅಭ್ಯಾಸ ನಡೆದುಕೊಂಡು ಬರುತ್ತಿದೆ. ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ತಿನ್ನುವ ಆಹಾರಕ್ಕೆ ಗೌರವ ನೀಡಿದಂತಾಗುವ ಜೊತೆಗೆ, ಪದೇ ಪದೆ ಬೆನ್ನು ಹುರಿ ಬೆಂಡ್ ಆಗುವುದರಿಂದ ರಕ್ತ ಪರಿಚಲನೆ ಉತ್ತಮಗೊಳ್ಳುತ್ತದೆ. ಜೊತೆಗೆ, ಮೆಟಬಾಲಿಸಂ ಹೆಚ್ಚುತ್ತದೆ. 

ಭಾರತೀಯ ಥಾಲಿ

ಭಾರತದ ಪ್ರತಿ ರಾಜ್ಯಗಳಲ್ಲೂ ಥಾಲಿ ಕಾಣಸಿಗುತ್ತದೆ. ಇದೊಂದು ಸಂಪೂರ್ಣ ಆಹಾರ ಎಂದು ಪರಿಗಣಿತವಾಗಿದೆ. ಈ ಥಾಲಿಗಳು ಸ್ಥಳೀಯ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು, ಸ್ಥಳೀಯ ಆಹಾರ ಸಾಮಗ್ರಿಗಳುಹಾಗೂ ಫ್ಲೇವರ್ ಬಳಸಿ ವಿನ್ಯಾಸಗೊಂಡಿರುತ್ತವೆ. ಇವುಗಳು ಪ್ರೋಟೀನ್, ವಿಟಮಿನ್, ಹೆಲ್ದೀ ಫ್ಯಾಟ್, ಕಾರ್ಬೋಹೈಡ್ರೇಟ್‌ಗಳ ಒಟ್ಟು ಮಿಶ್ರಣ. ಹಾಗಾಗಿ, ಭಾರತದ ಸಮತೋಲಿತ ಆಹಾರವೆಂದು ಇದು ಕರೆಸಿಕೊಳ್ಳುತ್ತದೆ. 

ತಾವರೆಗೊಳದಿ ಅವಿತ ಮಖಾನ ಬಲು ರುಚಿ!

ಮೊಸರು ಸಕ್ಕರೆ

ಯಾವುದೇ ಹೊಸ ಕೆಲಸ ಆರಂಭಿಸುವಾಗ ತಾಯಂದಿರು ಒಳ್ಳೆಯದಾಗಲಿ ಎಂದು ಹಾರೈಸಿ ಬಾಯಿಗೆ ಮೊಸರು ಸಕ್ಕರೆ ಹಾಕುವುದು ಸಂಪ್ರದಾಯ. ಯಾಕೆ? ಮನೆಯಿಂದ ಹೊರ ಹೋಗುವಾಗ ಮೊಸರು ಸೇವಿಸಿದರೆ ಅದು ದೇಹವನ್ನು ತಂಪಾಗಿರಿಸುತ್ತದೆ. ಸಕ್ಕರೆಯು ತಕ್ಷಣಕ್ಕೆ ಶಕ್ತಿ ನೀಡುತ್ತದೆ. 

ವೀಳ್ಯ

ಊಟ ಮುಗಿದ ಮೇಲೆ ವೀಳ್ಯ ಹಾಕುವುದು ಭಾರತೀಯರ ಸಂಪ್ರದಾಯ. ಈ ವೀಳ್ಯದೆಲೆಯು ಜೀರ್ಣಕ್ರಿಯೆ ಸರಾಗಗೊಳಿಸುವ ಜೊತೆಗೆ ಆಹಾರದ ವಾಸನೆಯಿಂದ ಕೂಡಿದ ಬಾಯಿಯನ್ನು ಸ್ವಚ್ಛಗೊಳಿಸಿ ಸುವಾಸಿತವಾಗಿಡುತ್ತದೆ. ಮಲಬದ್ಧತೆ ತಡೆದು ಹೊಟ್ಟೆ ಗೊಡಗೊಡ ಎನ್ನದಂತೆ ನೋಡಿಕೊಳ್ಳುತ್ತದೆ. ಇವಿಷ್ಟೇ ಅಲ್ಲ, ಕರುಳಿನ ಜಂತುಗಳನ್ನು ಕೊಲ್ಲುತ್ತದೆ ಕೂಡಾ. 

ಊಟಕ್ಕಾಗಿ ಪರದಾಡಿ ತಲೆಸುತ್ತು ಬಂದು ಬೀಳುತ್ತಿರುವ ವಿದ್ಯಾರ್ಥಿನಿಯರು!

ರಾತ್ರಿ ಮಲಗುವ ಮುನ್ನ ಹಾಲು

ಬಹುತೇಕ ಭಾರತೀಯ ಮನೆಗಳಲ್ಲಿ ಪ್ರತಿ ರಾತ್ರಿ ಮಲಗುವ ಮುನ್ನ ಹಾಲು ಕುಡಿವ ಅಭ್ಯಾಸವಿರುತ್ತದೆ. ಮಧುಮಕ್ಕಳಿಗಂತೂ ಪ್ರಥಮ ರಾತ್ರಿ ಹಾಲು ಕುಡಿಯಲು ಕೊಡುವುದು ಕಡ್ಡಾಯವೆಂಬಷ್ಟು ನಡೆದುಕೊಂಡು ಬರುತ್ತಿದೆ. ಇದರ ಹಿಂದಿರುವ ಲಾಜಿಕ್ ಎಂದರೆ ಹಾಲು ಒತ್ತಡ ತಗ್ಗಿಸಿ ಒಳ್ಳೆಯ ನಿದ್ದೆ ನೀಡತ್ತದೆ. ಜೊತೆಗೆ ಹಾಲು ರಿಪ್ರೊಡಕ್ಟಿವ್ ಟಿಶ್ಯೂಗಳಿಗೆ ಬಲ ನೀಡುತ್ತದೆ. ರೋಗ ನಿರೋಧಕ ವ್ಯವಸ್ಥೆ ಬಲಗೊಳಿಸಿ ನೆನಪಿನ ಶಕ್ತಿ ಹೆಚ್ಚಿಸುತ್ತದೆ. ಹಾಲನ್ನು ದೇಹ ಜೀರ್ಣಿಸಿಕೊಳ್ಳುವುದು ಸುಲಭ ಕೂಡಾ. ಹಾಗಾಗಿ, ರಾತ್ರಿ ಕುಡಿದರೆ ಸಮಸ್ಯೆಯಾಗದು.