2025ರ ವರ್ಷ ಯಾವ ರಾಶಿಯವರಿಗೆ ತರಲಿದೆ ಅದೃಷ್ಟ, ಯಶಸ್ಸು, ಧನಯೋಗ
ವರ್ಷಭವಿಷ್ಯ: ಕ್ರೋಧಿ ಮತ್ತು ವಿಶ್ವಾವಸು ನಾಮ ಸಂವತ್ಸರದ ದ್ವಾದಶರಾಶಿಗಳ ಫಲಾಫಲಗಳು.
ಈ ವರ್ಷದ ಆದಿಯಲ್ಲಿ ಅಂದರೆ ಮಾರ್ಚ್ 29, 2025 ರಂದು ಶನಿ ತಾನು ಇದುವರೆಗೂ ಇದ್ದ ಕುಂಭರಾಶಿಯನ್ನು ಬಿಟ್ಟು ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ. ತಾ. 14.05.25ರಂದು ಗುರು ತಾನು ಇದುವರೆಗೂ ಇದ್ದ ವೃಷಭ ರಾಶಿಯನ್ನು ಬಿಟ್ಟು ಮಿಥುನ ರಾಶಿಗೆ ಪ್ರವೇಶ ಮಾಡುತ್ತಾನೆ. ರಾಹುಕೇತುಗಳು 20.05.24 ರಂದು ತಾವು ಇದುವರೆಗೂ ಇದ್ದ ಮೀನ-ಕನ್ಯಾ ರಾಶಿಯನ್ನು ಬಿಟ್ಟು ಕುಂಭ-ಸಿಂಹರಾಶಿಗೆ ಪ್ರವೇಶ ಮಾಡುತ್ತಾರೆ.
ಈ ವರ್ಷದ ಆರಂಭದಲ್ಲೇ ಮಕರ ರಾಶಿಗೆ ಸಾಡೆಸಾತಿ ಶನಿುಂದ ಮುಕ್ತಿ ದೊರೆತು ಈ ರಾಶಿಯವರು ಮೋಡಕಳೆದ ಸೂರ್ಯನಂತೆ ಪ್ರಕಾಶಿಸುತ್ತೀರಿ. ಈ ವರ್ಷದ ಅದೃಷ್ಟದ ರಾಶಿಗಳು ವೃಷಭ, ತುಲಾ, ಧನಸ್ಸು, ಮಕರ. ಮಧ್ಯಮಫಲದ ರಾಶಿಗಳು ಮೇಷ, ಮಿಥುನ ಸಿಂಹ, ಕನ್ಯಾ, ಕುಂಭ. ಯಾವ ಗ್ರಹಗಳ ಬಲವೂ ಇಲ್ಲದ ರಾಶಿಗಳು ಕಟಕ, ವೃಶ್ಚಿಕ, ಮೀನ.
ಮೇಷ ರಾಶಿ: ಈಗ ಐದು ತಿಂಗಳು ಮೇಷರಾಶಿಗೆ ಗುರುಬಲ ಇದ್ದು ಎಲ್ಲ ಕೆಲಸಗಳೂ ಸುಲಭವಾಗಿ ನಡೆಯುತ್ತದೆ, ಶನಿ ಕೂಡ ಮುಂದಿನ ಯುಗಾದಿಯ ವರೆಗೆ ಲಾಭಸ್ಥಾನದಲ್ಲಿ ಇರುವುದರಿಂದ ಹಣದ ಹರಿವೂ ಉತ್ತಮವಾಗಿದೆ. ಈಗ ಕೇತು ಕೂಡ ಆರನೇ ಮನೆಯಲ್ಲಿ ಇದ್ದು ನಿಮಗೆ ಹಣದ ಹರಿವನ್ನು ಉತ್ತಮಪಡಿಸುತ್ತಾನೆ. ಮಾರ್ಚ್ ನಂತರ ಶನಿಯ 12ನೇ ಮನೆಯ ಪ್ರವೇಶದಿಂದ ನಿಮಗೆ ಸಾಡೆಸಾತಿಯ ಪ್ರಭಾವಕ್ಕೆ ಒಳಗಾಗುವುದರಿಂದ ಕೊಂಚ ಜಾಗರೂಕತೆ ಅವಶ್ಯ. ಹಣಕಾಸಿನ ಏರುಪೇರು ಆಗಬಹುದು. ಯೋಜಿಸಿದ ಕೆಲಸಗಳು ನಿಧಾನಗತಿಯಲ್ಲಿ ಸಾಗಬಹುದು. ಮೇ 2025ಕ್ಕೆ ರಾಹು 12ನೇ ಮನೆಯಿಂದ ಹನ್ನೊಂದನೇ ಮನೆಗೆ ಪ್ರವೇಶವಾದಾಗ ಇನ್ನೂ ಹೆಚ್ಚಿನ ಧನಲಾಭ ಅನುಕೂಲ ದೊರೆಯುತ್ತದೆ. ಹನುಮಾನ್ ಪೂಜೆ ಮಾಡಿ.
ವೃಷಭ ರಾಶಿ: ಈಗ ನಿಮಗೆ ರಾಹುವಿನ ಬಲ ಇದೆ. ರಾಹು ಲಾಭಸ್ಥಾನದಲ್ಲಿ ಧನಲಾಭ ನಿರಂತರವಾಗಿ ಕೊಡುತ್ತಿದ್ದಾನೆ. ಮಾರ್ಚ್‌ಗೆ ಶನಿಬಲ ಮತ್ತು ಮೇ 14ಕ್ಕೆ ಗುರುಬಲವೂ ಸಿಗಲಿದೆ. ಶನಿ ಲಾಭಸ್ಥಾನಕ್ಕೆ ಪ್ರವೇಶ ಮಾಡಿ ನಿಮಗೆ ಅನೇಕ ಒಳ್ಳೆಯ ಸಂಗತಿಗಳನ್ನು ಕೊಡುತ್ತಾನೆ. ರಾಜಯೋಗವೆಂದೇ ತಿಳಿಯಿರಿ. ಗುರು ಕೂಡ ಎರಡನೇ ಮನೆಗೆ ಪ್ರವೇಶವಾಗಿ ಸಕಲ ಕಲ್ಯಾಣವನ್ನೂ ಮಾಡುತ್ತಾನೆ. ಒಳ್ಳೆಯ ಕೀರ್ತಿ ಅಭಿವೃದ್ಧಿ ಇದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಒಳ್ಳೆಯ ಸ್ಥಾನಮಾನ ದೊರೆಯುತ್ತದೆ. ಶತ್ರುಗಳು ದೂರವಾಗುತ್ತಾರೆ. ಹಣದ ಹರಿವು ಉತ್ತಮವಾಗುತ್ತದೆ. ದುರ್ಗಾ ಪೂಜೆ ಮಾಡಿ
ಮಿಥುನ ರಾಶಿ: ಈ ವರ್ಷ ಪೂರ್ತಿ ನಿಮಗೆ ಗುರುಬಲ ಶನಿಬಲ ಎರಡೂ ಇಲ್ಲ. ಮಾರ್ಚ್‌ನಲ್ಲಿ ಶನಿ ಹತ್ತನೇ ಮನೆಗೆ ಪ್ರವೇಶವಾದಾಗ ಹೆಚ್ಚಿನ ತೊಂದರೆ ಇಲ್ಲದಿದ್ದರೂ ಅನುಕೂಲವೂ ಕಡಿಮೆ. ಮೇ ತಿಂಗಳಲ್ಲಿ ಗುರು ನಿಮ್ಮ ರಾಶಿಗೇ ಬರುತ್ತಾನೆ. ಇದು ಕೊಂಚ ಒತ್ತಡಗಳನ್ನು ಕೊಡುತ್ತದೆ. ಆದರೆ ಮೇ 2025 ರಲ್ಲಿ ಹೊತ್ತಿಗೆ ಕೇತು ಮೂರನೇ ಮನೆಗೆ ಪ್ರವೇಶವಾದಾಗ ನಿಮಗೆ ಹೆಚ್ಚಿನ ಧನಲಾಭ ಅನುಕೂಲ ಇದೆ. ಹೂಡಿಕೆಗಳಲ್ಲಿ ಲಾಭ ದೊರೆಯುತ್ತದೆ. ಶತ್ರುಗಳು ದೂರವಾಗುತ್ತಾರೆ. ಕಾರ್ಯಕ್ಷೇತ್ರದಲ್ಲಿ ಇರುವ ಒತ್ತಡಗಳು ಕೊಂಚಮಟ್ಟಿಗೆ ಕಡಿಮೆಯಾಗುತ್ತದೆ. ಆರೋಗ್ಯವೂ ಸುಧಾರಿಸುತ್ತದೆ. ನಿಮ್ಮ ಗುರುಗಳ ಆಶೀರ್ವಾದ ಪಡೆಯಿರಿ.
ಕಟಕ ರಾಶಿ: ಈಗ ನಿಮಗೆ ಗುರು ಮೇ ವರೆಗೂ ಒಂಭತ್ತನೇ ಮನೆಯಲ್ಲಿ ಇದ್ದು ಭಾಗ್ಯಗಳನ್ನು ಕೊಡುತ್ತಾನೆ. ನೀವು ಮಾಡುವ ಕೆಲಸಕ್ಕೆ ಗುರುವಿನ ಅನುಗ್ರಹ ದೊರೆಯುತ್ತದೆ. ಮಾರ್ಚಿನಲ್ಲಿ ಅಷ್ಟಮ ಶಣಿಯಿಂದ ಸಂಪೂರ್ಣ ಬಿಡುಗಡೆ ದೊರೆತು ನೀವು ಸಂಕಟಗಳಿಂದ ಹೊರಬರುತ್ತೀರಿ. ಮನಸ್ಸಿಗೆ ಆಹ್ಲಾದತೆ ದೊರೆಯುತ್ತದೆ. ನಿಂತು ಹೋದ ಕೆಲಸ ಕಾರ್ಯಗಳು ಚಾಲನೆ ಪಡೆದುಕೊಳ್ಳುತ್ತದೆ. ಆದರೆ 2025 ಮೇ ಗುರು 12 ನೇ ಮನೆಗೆ ಪ್ರವೇಶವಾದಾಗ ಖರ್ಚುಗಳು ಹೆಚ್ಚಾಗುತ್ತದೆ. ಒತ್ತಡಗಳು ಸೃಷ್ಟಿಯಾಗಬಹುದು. ಮೇ ತಿಂಗಳಲ್ಲಿ ರಾಹುವಿನ ಎಂಟನೇ ಮನೆ ಪ್ರವೇಶದಿಂದ ನಿಮಗೆ ಲಾಭ ಇದೆ. ಎಂಟನೇ ಮನೆಯಲ್ಲಿ ದುಷ್ಟಗ್ರಹ ಇದ್ದರೆ ಒಳಿತನ್ನೇ ಮಾಡುತ್ತದೆ. ದತ್ತಾತ್ರೇಯ ದರ್ಶನ ಮಾಡಿ.
ಸಿಂಹ ರಾಶಿ: ನಿಮಗೆ ಈ ವರ್ಷ ಪೂರ್ತಿ ಕೊಂಚ ಆತಂಕದ ವಾತಾವರಣ ಇರುತ್ತದೆ. ಮಾರ್ಚಿನಲ್ಲಿ ಶನಿ ಅಷ್ಟಮ ಸ್ಥಾನ ಪ್ರವೇಶ ಮಾಡಲಿದ್ದು ಹಣಕಾಸು ಆರೋಗ್ಯ ಕುಟುಂಬಸೌಖ್ಯ, ವೃತ್ತಿ ಎಲ್ಲದಕ್ಕೂ ಒತ್ತಡ ಬೀಳಲಿದೆ. ಬಹಳ ಜವಾಬ್ದಾರಿಯಿಂದ ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು. ಮೇ 2025ಕ್ಕೆ ಗುರುಬಲ ಬಂದರೂ ಅಷ್ಟಮ ಶನಿಯ ಪ್ರಭಾವವೇ ಮೇಲುಗೈ ಆಗಿರುತ್ತದೆ. ನಿಮ್ಮ ರಾಶಿಗೇ ಕೇತು ಪ್ರವೇಶ ಹಾಗೂ ರಾಹು ಏಳನೇ ಮನೆಗೆ ಪ್ರವೇಶ ಕೂಡಾ ಅಷ್ಟು ಹಿತ ಕೊಡುವುದಿಲ್ಲ. ಮನೆ ದೇವರ ಪ್ರಾರ್ಥನೆ ಪೂಜೆ ಅವಶ್ಯ. ಸುಬ್ರಹ್ಮಣ್ಯನನ್ನು ಆರಾಧಿಸಿ.
ಕನ್ಯಾ ರಾಶಿ: ಈಗ ನಿಮಗೆ ಗುರುಬಲ ಶನಿಬಲ ಎಲ್ಲವೂ ಇದೆ. ಈಗ ಸಮಯ ಆಹ್ಲಾದಕರವಾಗಿದೆ. ಆದರೆ ರಾಹು ಕೇತುಗಳ ಪ್ರಭಾವ ನಿಮ್ಮ ರಾಶಿಯ ಮೇಲೆ ಇರುವುದರಿಂದ ಅನಾರೋಗ್ಯ ಕಾಡುತ್ತದೆ. ಮಾರ್ಚಿನಲ್ಲಿ ಶನಿಯ ಬದಲಾವಣೆ ಹಾಗೂ ಮೇ ತಿಂಗಳಲ್ಲಿ ಗುರು ಬದಲಾವಣೆ ನಿಮಗೆ ಅಷ್ಟೊಂದು ಶುಭದಾಯಕವಾಗಿಲ್ಲ. ಕಾರ್ಯಕ್ಷೇತ್ರದಲ್ಲಿ ಒತ್ತಡಗಳು ಸೃಷ್ಟಿಯಾಗುತ್ತದೆ. ಅಧಿಕಾರದಿಂದ ಕೆಳಗಿಳಿಯುವುದು, ಹಣಕಾಸಿನ ಒತ್ತಡ ಮುಂತಾದ ಅಹಿತಕರ ಸಂಗತಿಗಳು ಇರುತ್ತದೆ. ಮೇ ತಿಂಗಳಲ್ಲಿ ರಾಹುವಿನ ಆರನೇ ಮನೆಗೆ ಪ್ರವೇಶ ನಿಮಗೆ ಸ್ವಲ್ಪ ಮಟ್ಟಿಗೆ ವಾತಾವರಣ ತಿಳಿಯಾಗುತ್ತದೆ. ಜೀವನ ಹಗುರ ಎನಿಸುತ್ತದೆ. ಹಣಕಾಸು ಸ್ಥಿತಿ ಸುಧಾರಿಸುತ್ತದೆ. ವಿಷ್ಣುವನ್ನು ಆರಾಧಿಸಿ.
ತುಲಾರಾಶಿ: ಈಗ ನಿಮಗೆ ಗುರು ಅಷ್ಟಮದಲ್ಲಿ ಹಾಗೂ ಶನಿ ಪಂಚಮದಲ್ಲಿ ಇರುವುದು ಬಹಳ ತ್ರಾಸದಾಯಕವಾಗಿದೆ. ಮಾನಸಿಕ ಅಶಾಂತಿ, ಗೃಹಶಾಂತಿಗೆ ಧಕ್ಕೆ ಬಂದಿದೆ. ಬಹಳ ಕಷ್ಟನಷ್ಟಗಳನ್ನು ಅನುಭವಿಸುತ್ತಿದ್ದೀರಿ. ಆದರೆ ಮಾರ್ಚ್ ತಿಂಗಳಲ್ಲಿ ಪಂಚಮ ಶನಿಯಿಂದ ಮುಕ್ತಿ ದೊರೆತು ಹಗುರವಾಗುತ್ತೀರಿ. ಹಾಗೂ ಮೇ ತಿಂಗಳಲ್ಲಿ ಗುರುವಿನ ಭಾಗ್ಯಸ್ಥಾನ ಪ್ರವೇಶದಿಂದ ಸಕಲ ವಿಷಯದಲ್ಲೂ ಶುಭಫಲಗಳು ಸಿಗಲಿದೆ. ಹಾಗೆಯೇ ಕೇತುವಿನ ಲಾಭಸ್ಥಾನದ ಪ್ರವೇಶ ನಿಮಗೆ ಹೆಚ್ಚಿನ ಧನಲಾಭ ಕಾರ್ಯಸಿದ್ಧಿಗೆ ಕಾರಣವಾಗುತ್ತದೆ. ಕಾರ್ಯಸಿದ್ಧಿ, ಅವಿವಾಹಿತರಿಗೆ ವಿವಾಹ ಪ್ರಾಪ್ತಿ, ಅಧಿಕಾರ ಪ್ರಾಪ್ತಿ, ಆಸ್ತಿ ಕೊಳ್ಳುವುದು ಮುಂತಾದ ಶುಭಫಲಗಳು ದೊರೆಯಲಿದೆ.
ವೃಶ್ಚಿಕ ರಾಶಿ: ಈಗ ನಿಮಗೆ ಏಳರಲ್ಲಿ ಗುರು ಹಾಗೂ ಲಾಭಸ್ಥಾನದಲ್ಲಿ ಕೇತು ಇದ್ದು ಬಹಳಷ್ಟು ಶುಭಫಲಗಳನ್ನು ಅನುಭವಿಸುತ್ತಿದ್ದೀರಿ. ಹಣದ ಹರಿವು ಕೂಡಾ ಉತ್ತಮವಾಗಿದೆ. ನಿಮ್ಮ ಕೆಲಸಕಾರ್ಯಗಳು ಉತ್ತಮ ಫಲ ನೀಡುತ್ತಿದೆ. ಕಾರ್ಯಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಇದೆ. ಆದರೆ ಮಾರ್ಚ್ ತಿಂಗಳಲ್ಲಿ ಶನಿ ಪಂಚಮ ಸ್ಥಾನಕ್ಕೂ ಮೇ ತಿಂಗಳಲ್ಲಿ ಗುರು ಅಷ್ಠಮ ಸ್ಥಾನಕ್ಕೂ ಪ್ರವೇಶವಾಗುತ್ತಾನೆ. ಆಗ ಕೊಂಚ ಒತ್ತಡಗಳು ಇರುತ್ತದೆ. ಹಣಕಾಸಿನ ಅಡಚಣೆ, ಷೇರು ಮಾರುಕಟ್ಟೆ ಮುಂತಾದ ವ್ಯವಹಾರದಲ್ಲಿ ನಷ್ಟ, ಎಲ್ಲ ರೀತಿಯಿಂದಲೂ ನಿಧಾನ ಪ್ರಗತಿ ಇರುತ್ತದೆ. ನೀವು ಈ ವರ್ಷಪೂರ್ತಿ ಎಚ್ಚರಿಕೆಯಿಂದ ಇರಬೇಕು. ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳದೆ ವಿವೇಚನೆಯಿಂದ ವರ್ತಿಸಬೇಕು. ಹಿನ್ನಡೆಗಳನ್ನು ಸಕಾರಾತ್ಮಕವಾಗಿ ಬದಲಿಸಿಕೊಳ್ಳಬೇಕು. ತಾಳ್ಮೆ ಸಹನೆ ಅಗತ್ಯ. ದುರ್ಗೆಯನ್ನು ಆರಾಧಿಸಿ.
ಧನಸ್ಸು ರಾಶಿ: ಈಗ ನಿಮಗೆ ಶನಿ ಮೂರನೇ ಮನೆಯಲ್ಲಿ, ಗುರು ಆರನೇ ಮನೆಯಲ್ಲಿ ರಾಹುಕೇತುಗಳು ನಾಲ್ಕನೇ-ಹತ್ತನೇ ಮನೆಯಲ್ಲಿ ಇದ್ದಾರೆ. ಗುರುಬಲ ಈಗ ಸದ್ಯಕ್ಕೆ ಇಲ್ಲ. ಆದ್ದರಿಂದ ಒತ್ತಡಗಳು ಇರುತ್ತದೆ. ಆದರೆ 2025ಮೇ ತಿಂಗಳಲ್ಲಿ ಗುರು ಏಳನೇ ಪ್ರವೇಶವಾಗುತ್ತಾನೆ ಹಾಗೂ ರಾಹು ಮೂರನೇ ಮನೆಗೆ ಪ್ರವೇಶವಾಗುತ್ತಾನೆ ಮತ್ತು ಶನಿ ಮಾರ್ಚಿನಲ್ಲಿ ನಾಲ್ಕನೇ ಮನೆಗೆ ಪ್ರವೇಶವಾಗುತ್ತಾನೆ. ಶನಿಯ ಬಲ ಕಡಿಮೆಯಾದರೂ ರಾಹು ಮತ್ತು ಗುರುವಿನ ಬಲ ನಿಮಗೆ ವರ್ಷಪೂರ್ತಿ ಕಾಪಾಡುತ್ತದೆ. ಧನ ಸಂಗ್ರಹ ಚೆನ್ನಾಗಿದೆ. ಗುರುವಿನ ಅನುಗಹ್ರದಿಂದ ನಿಮಗೆ ಎಲ್ಲ ವಿಧದಲ್ಲೂ ಶುಭಫಲಗಳು ದೊರೆಯುತ್ತದೆ. ಬಡ್ತಿ, ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ವೆಂಕಟೇಶ್ವರನನ್ನು ಆರಾಧಿಸಿ.
ಮಕರ ರಾಶಿ: ಈಗ ಗುರುಬಲ ರಾಹು ಬಲ ಚೆನ್ನಾಗಿದೆ. ಜೀವನದಲ್ಲಿ ಇರುವ ಅಡೆತಡೆಗಳು ದೂರವಾಗಿ ಜೀವನ ಸರಾಗವಾಗಿ ನಡೆಯುತ್ತದೆ. ನೌಕರಿ ಸಿಗುವುದು, ವಿವಾಹ, ಮನೆ ಕಟ್ಟುವುದು, ಆಸ್ತಿ ಕೊಳ್ಳುವುದು ಮುಂತಾದ ಸಕಾರಾತ್ಮಕ ಕೆಲಸಗಳಿಗೆ ಗುರುವಿನ ಅನುಗ್ರಹ ದೊರೆತು ಎಲ್ಲವೂ ಸರಾಗವಾಗಿ ನೆರವೇರುತ್ತದೆ. ಮಾರ್ಚಿನಲ್ಲಿ ಶನಿ ಸಹ ನಿಮ್ಮ ರಾಶಿಯಿಂದ ಮೂರನೇ ಮನೆಗೆ ಪ್ರವೇಶವಾಗಿ ಇನ್ನೂ ಹೆಚ್ಚಿನ ಶಕ್ತಿ ಸಾಮರ್ಥ್ಯ ಕೊಟ್ಟು ಕಾಪಾಡುತ್ತಾನೆ. ಸಾಡೆಸಾತಿನಿಂದ ಮುಕ್ತರಾಗುತ್ತೀರಿ. ಶನಿ ನಿಮ್ಮ ಅಭಿವೃದ್ಧಿಗೆ ಇರುವ ಅಡೆತಡೆಗಳನ್ನು ದೂರ ಮಾಡುತ್ತಾನೆ. ಶತ್ರುಗಳು ದೂರವಾಗುತ್ತಾರೆ. ನಿಮ್ಮ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ಅವಕಾಶಗಳು ನಿಮ್ಮಬಳಿ ಅರಸಿ ಬರುತ್ತದೆ.
ಕುಂಭರಾಶಿ: ಈಗ ನಿಮಗೆ ಚತುರ್ಥದಲ್ಲಿ ಇರುವ ಗುರು, ನಿಮ್ಮ ರಾಶಿಯಲ್ಲೇ ಇರುವ ಶನಿಯಿಂದ ಬರೀ ಅಡೆತಡೆಗಳು ನಕಾರಾತ್ಮಕ ಸಂಗತಿಗಳೇ ಕಾಣುತ್ತಿವೆ. ಯಾವ ಕೆಲಸಕ್ಕೆ ಕೈಹಾಕಿದರೂ ಮುಂದುವರೆಯುವುದಿಲ್ಲ. ಕೋರ್ಟು ಕಚೇರಿ ಅಲೆದಾಟ ಧನಹಾನಿ ಮಾನಹಾನಿ ಮೊದಲಾದ ಮನಸ್ಸಿಗೆ ನೋವು ಕೊಡುವಂಥ ಘಟನೆಗಳು ನಡೆಯುತ್ತಿವೆ. ಆದರೆ ಮುಂದೆ 2025 ಮೇ ತಿಂಗಳಿಗೆ ಗುರುಬಲ ಬಂದು ಪರಿಸ್ಥಿತಿಗಳು ತಿಳಿಯಾಗುತ್ತವೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಗುತ್ತದೆ. ಶನಿ ಕೂಡ ಮಾರ್ಚಿನಲ್ಲಿ ನಿಮ್ಮ ರಾಶಿಯಿಂದ ಮುಂದಿನ ರಾಶಿಗೆ ಚಲಿಸುತ್ತಾನೆ. ಆಗ ನೀವು ಸಾಡೆಸಾತಿ ಶನಿಯ ಎರಡನೇ ಭಾಗದಿಂದ ಕೊನೆಯ ಭಾಗಕ್ಕೆ ಹೋಗುತ್ತೀರಿ. ಕೊನೆಯ ಭಾಗದಲ್ಲಿ ಹೆಚ್ಚು ತೊಂದರೆಗಳು ಇರುವುದಿಲ್ಲ. ಆದರೆ ರಾಹು ಆಗ ನಿಮ್ಮ ರಾಶಿಗೇ ಬರುವುದರಿಂದ ಅನಾರೋಗ್ಯ ಕಾಡಬಹುದು. ಎಚ್ಚರಿಕೆ ವಹಿಸಿ. ಮೇ ಇಂದ ಈ ವರ್ಷಪೂರ್ತಿ ಗುರುಬಲ ನಿಮ್ಮನ್ನು ಕಾಪಾಡಲಿದೆ. ಗಣೇಶನನ್ನು ಆರಾಧಿಸಿ.
ಮೀನ ರಾಶಿ: ಈಗ ಸಾಡೆಸಾತಿಯ ಮೊದಲ ಭಾಗದಲ್ಲಿ ಇದ್ದು ಬಹಳ ಕಷ್ಟನಷ್ಟ ಅನುಭವಿಸುತ್ತಿದ್ದೀರಿ. ಗುರುಬಲವೂ ಈ ವರ್ಷಪೂರ್ತಿ ಇರುವುದಿಲ್ಲ. ಈಗ ಮೂರನೇ ಮನೆಯಲ್ಲಿ ಇರುವ ಗುರು ಮುಂದಿನ ಮೇ ತಿಂಗಳಲ್ಲಿ ನಾಲ್ಕನೇ ಮನೆಗೆ ಪ್ರವೇಶವಾಗುತ್ತಾನೆ. ಇದು ಕೂಡ ನಿಮಗೆ ಹೆಚ್ಚಿನ ಅನುಕೂಲ ಕೊಡುವುದಿಲ್ಲ. ಕೌಟುಂಬಿಕ ಜೀವನ, ವಿದ್ಯಾಭ್ಯಾಸ ಹಣಕಾಸು ಸ್ಥಿತಿ ಎಲ್ಲವೂ ಕೊಂಚ ಕಷ್ಟಕರವಾಗಿ ಇರುತ್ತದೆ. ಕೇತು ಆರನೇ ಮನೆಗೆ ಪ್ರವೇಶವಾದಾಗ ನಿಮಗೆ ಹಣಕಾಸಿನ ಸ್ತಿತಿ ಕೊಂಚಮಟ್ಟಿಗೆ ಸುಧಾರಿಸುತ್ತದೆ. ಏನೇ ಆದರೂ ಕೊಂಚ ಯೋಚಿಸಿ ವಿವೇಚಿಸಿ ಮುಂದಡಿ ಇಡಿ. ಯಾವುದೇ ನಿರ್ಧಾರಗಳನ್ನು ಸರಿಯಾಗಿ ಯೋಚಿಸಿ ತೆಗೆದುಕೊಳ್ಳಿ. ಮನೆದೇವರ ದರ್ಶನ ಮಾಡಿಬನ್ನಿ. ಸವಾಲುಗಳನ್ನು ಧೈರ್ಯದಿಂದ ಎದುರಿಸಿ.