Asianet Suvarna News Asianet Suvarna News

Ganesh Chaturthi: ಗಜಮುಖನೆ ಗಣಪತಿಯೆ ನಿನಗೆ ವಂದನೆ

ಹೊಟ್ಟೆ ತುಂಬ ತಿಂದು ಸೊಂಟಕ್ಕೆ ಹಾವು ಬಿಗಿದುಕೊಂಡು, ಅದನ್ನು ನೋಡಿ ನಕ್ಕ ಚಂದ್ರನಿಗೆ ಶಾಪ ಕೊಟ್ಟು, ತನ್ನ ಒಂದು ಹಲ್ಲು ಮುರಿದುಕೊಂಡು ಒಂದೆರಡು ದಿನ ನಮ್ಮೊಡನಿದ್ದು, ನಂತರ ನೀರಲ್ಲಿ ಮುಳುಗಿ, ಮಣ್ಣಲ್ಲಿ ಮಣ್ಣಾಗುವ ಗಣೇಶ ನಮ್ಮ ಬದುಕಿನ ಕ್ಷಣಿಕ ಸಂಭ್ರಮ ಮತ್ತು ನಶ್ವರತೆಗೆಲ್ಲ ಸಾಕ್ಷಿ ಎಂದು ಈಗ ಅನ್ನಿಸುತ್ತಿದೆ. 

Writer Jogi Explores Cultural Aspects of Ganesha Chaturthi vcs
Author
First Published Aug 28, 2022, 12:02 PM IST

Jogi, Kannadaprabha

ದಕ್ಷಿಣ ಕನ್ನಡದವರಾದ ನಮಗೆ, ಗಣೇಶನ ಸ್ತುತಿಯಿಂದಲೇ ಎಲ್ಲವೂ ಆರಂಭವಾಗುವುದು. ನಾವು ಮೊದಲು ಕಂಡ ಗಣೇಶನೆಂದರೆ ಯಕ್ಷಗಾನದ ಚೌಕಿ ಗಣಪ. ಯಕ್ಷಗಾನ ಆರಂಭವಾಗುವುದು ಕೂಡ ಗಣೇಶನ ಪದ್ಯದಿಂದಲೇ. ಗಜಮುಖದವಗೆ ಗಣಪಗೆ ಆರತಿಯ ಎತ್ತಿರೇ... ಎಂದು ಭಾಗವತರು ಹಾಡಲು ಶುರುಮಾಡಿದ ನಂತರವೇ ನಾವು ಯಕ್ಷಗಾನ ಬಯಲಾಟ ನಡೆಯುತ್ತಿದ್ದ ಗದ್ದೆಯ ಕಡೆ ಕಾಲು ಹಾಕುತ್ತಿದ್ದದ್ದು.

ಸಿನಿಮಾ ಮಂದಿರಗಳಲ್ಲೂ ಪ್ರದರ್ಶನ ಆರಂಭವಾಗುತ್ತಿದ್ದದ್ದು ಗಜಮುಖನೆ ಗಣಪತಿಯೇ ನಿನಗೆ ವಂದನೆ ಎಂಬ ಪಿಬಿ ಶ್ರೀನಿವಾಸ್‌ ಹಾಡಿನ ಮೂಲಕವೇ. ಎರಡೂ ದಿಕ್ಕಿಗೆ ತೆರೆದಿಟ್ಟಲೌಡ್‌ ಸ್ಪೀಕರುಗಳಲ್ಲಿ ಗಣೇಶನ ಗೀತೆ ಇಡೀ ಹಳ್ಳಿಯನ್ನೇ ಎಚ್ಚರಿಸುತ್ತಿತ್ತು.

ಶಾಲೆಗಳಲ್ಲೂ ಬೆಳಗಿನ ಪ್ರಾರ್ಥನೆಯ ಆರಂಭಕ್ಕೆ ನಾವು ಶುಕ್ಲಾಂಬರಧರಂ ಹೇಳಬೇಕಿತ್ತು. ಮನೆಯಲ್ಲೂ ಅಗಜನಾನ ಪದ್ಮಾರ್ಕಂ ಗಜಾನನಮಹರ್ನಿಶಂ ತಪ್ಪದೇ ಹಾಡಬೇಕಾಗಿತ್ತು. ಹೀಗಾಗಿ ನಮಗೆ ಗೊತ್ತಿದ್ದ, ಎಲ್ಲರಿಗೂ ಗೊತ್ತಿದ್ದ ಏಕೈಕ ದೇವರೆಂದರೆ ಗಣೇಶ. ಮಿಕ್ಕ ದೇವರನ್ನು ನಾವು ನೋಡುತ್ತಿದ್ದದ್ದು ಜಾತ್ರೆಯ ಸಂದರ್ಭದಲ್ಲಿ ಆದರೆ ಗಣೇಶನದು ಮಾತ್ರ ನಿತ್ಯದರ್ಶನ. ಯಾವುದೇ ದೇವಸ್ಥಾನಕ್ಕೆ ಹೋದರೂ ನಮಗೆ ಗುರುತು ಸಿಗುತ್ತಿದ್ದದ್ದು ಗಣೇಶನದು. ನಂತರ ಒಳಗೆ ಹೋದರೆ ಹೂವಿನ ಅಲಂಕಾರದಲ್ಲಿ ಮುಳುಗಿದ ಸದಾಶಿವ, ಮಹಾಲಕ್ಷ್ಮಿ, ಕೃಷ್ಣ, ಸಹಸ್ರಲಿಂಗೇಶ್ವರ ಮುಂತಾದ ದೇವರುಗಳು ಅರೆಬರೆಯಾಗಿ ಕಾಣಿಸುತ್ತಿದ್ದರು.

Writer Jogi Explores Cultural Aspects of Ganesha Chaturthi vcs

ಹೀಗೆ ನಮ್ಮ ದೈನಂದಿನ ಭಕ್ತಿ ರೋಮಾಂಚನಕ್ಕೆ ಕಾರಣನಾಗಿದ್ದ ಎಂಬ ಕಾರಣಕ್ಕೆ ಗಣೇಶನ ಮೇಲೆ ನಮಗೆ ವಿಶೇಷ ಪ್ರೀತಿಯೂ ಇತ್ತು. ಗಣೇಶನಿಗೆ ಇಪ್ಪತ್ತೊಂದು ನಮಸ್ಕಾರ ಮಾಡಬೇಕು ಅನ್ನುವುದರಿಂದ ಹಿಡಿದು, ಗಣೇಶನಿಗೆ ನಮಸ್ಕಾರ ಮಾಡಿ ಪರೀಕ್ಷೆ ಬರೆದರೆ ಪಾಸಾಗುತ್ತೇವೆ ಎಂದೆಲ್ಲ ನಂಬಲಾಗುತ್ತಿತ್ತು.

ನಮ್ಮೂರಿನಲ್ಲಿ ಹೆಚ್ಚೂ ಕಮ್ಮಿ ಪ್ರತಿ ಮನೆಯಲ್ಲೂ ಗಣಹೋಮ ನಡೆಯುತ್ತಿತ್ತು. ಅದಕ್ಕೊಂದು ವಿಶಿಷ್ಟವಾದ ಪಂಚಕಜ್ಜಾಯ ಮಾಡುತ್ತಿದ್ದರು. ಅದನ್ನು ಅಷ್ಟದ್ರವ್ಯ ಎಂದು ಕರೆಯುತ್ತಿದ್ದರು. ಅದರ ಅರ್ಥವಾಗಲೀ, ಆ ಪದವನ್ನು ಸರಿಯಾಗಿ ಉಚ್ಚರಿಸುವುದಾಗಲೀ ಗೊತ್ತಿಲ್ಲದ ನಮಗೆ ಅದರ ರುಚಿಯಂತೂ ಚಿರಪರಿಚಿತವಾಗಿತ್ತು. ನಾವೆಲ್ಲ ಅದನ್ನು ಅಷ್ಟೋದ್ರ ಎಂದು ನಮ್ಮ ಸ್ಲಾಂಗಿನಲ್ಲಿ ಕರೆಯುತ್ತಿದ್ದೆವು. ಎಷ್ಟೋ ವರುಷಗಳ ನಂತರವಷ್ಟೇ ಅದು ಅಷ್ಟದ್ರವ್ಯವೆಂದೂ ಅದನ್ನು ಮಾಡುವುದಕ್ಕೆ ಎಷ್ಟುದ್ರವ್ಯಗಳನ್ನು ಬಳಸುತ್ತಾರೆಂದೂ ಗೊತ್ತಾದದ್ದು. ಆದರೆ ನಮ್ಮ ದೇವಸ್ಥಾನದ ಮುಂದೆ, ಗಣಹೋಮ ನಡೆದ ಮನೆಗಳಲ್ಲಿ ಕೈಯಲ್ಲಿ ಮುಷ್ಟಿಮುಷ್ಟಿಹಂಚುತ್ತಿದ್ದ ಆ ಪ್ರಸಾದ ಕೂಡ ಗಣೇಶನ ಮೇಲೆ ವಿಶೇಷ ಪ್ರೀತಿ ಹುಟ್ಟಲು ಕಾರಣವಾಗಿರಬಹುದು ಎಂಬುದು ನಮ್ಮ ನಂಬಿಕೆ.

ಗಣೇಶ ಪ್ರತಿಷ್ಠಾಪನೆಯ ವಿಧಿ- ವಿಧಾನಗಳೇನು?

ಗಣೇಶ ಮಡಿವಂತ ದೇವರಾಗಿರಲಿಲ್ಲ. ಮಿಕ್ಕ ದೇವರುಗಳನ್ನು ಮುಟ್ಟುವುದಕ್ಕೆ ನಮಗೆ ಸರ್ವಥಾ ಅಧಿಕಾರ ಇರಲಿಲ್ಲ. ಆದರೆ ಗಣೇಶನನ್ನು ನಾವು ಸೊಂಟದಲ್ಲಿಟ್ಟುಕೊಂಡು, ಹೆಗಲ ಮೇಲೆ ಹೊತ್ತುಕೊಂಡು ಓಡಾಡಬಹುದಿತ್ತು. ಗಣೇಶನ ಮೂರ್ತಿಯನ್ನು ಹೊತ್ತುಕೊಂಡು ನರ್ತಿಸುತ್ತಾ ಮನೆಯಿಂದ ಮನೆಗೆ ಹೋಗುವುದಂತೂ ನಮಗೆಲ್ಲ ಸಂತೋಷ ಕೊಡುವ ಕೆಲಸ. ಯಾಕೆಂದರೆ ಪ್ರತಿ ಮನೆಯಲ್ಲೂ ವಿಶೇಷವಾದ ತಿಂಡಿಗಳನ್ನು ಮಾಡುತ್ತಿದ್ದರು. ಕಜ್ಜಾಯ, ಮೋದಕ, ಚಕ್ಕುಲಿ, ಕರ್ಜಿಕಾಯಿ, ಲಾಡು, ಹೆಸರು ಬೇಳೆಯಿಂದ ಮಾಡಿದ ಪಂಜಕಜ್ಜಾಯದ ಜೊತೆಗೆ ಕಡುಬು ಕೂಡ ಸಿಗುತ್ತಿತ್ತು.

ಇದನ್ನೆಲ್ಲ ನಾವು ಗಣೇಶನ ಕುರಿತ ಹಾಡಿನಲ್ಲೂ ಕೇಳಬಹುದಿತ್ತು. ಮೂಷಕವಾಹನ ಮೋದಕ ಹಸ್ತ ಎಂಬ ಸಾಲಲ್ಲೇ ಗಣೇಶ ನಮಗೆ ಆಪ್ತನಾಗುತ್ತಿದ್ದ. ನಮ್ಮಂತೆಯೇ ಗಣೇಶ ಕೂಡ ತಿಂಡಿಪೋತನೆಂದು ಖುಷಿಯಾಗುತ್ತಿತ್ತು. ಹೊಟ್ಟೆತುಂಬ ತಿಂದು ಸೊಂಟಕ್ಕೆ ಹಾವು ಬಿಗಿದುಕೊಂಡು, ಅದನ್ನು ನೋಡಿ ನಕ್ಕ ಚಂದ್ರನಿಗೆ ಶಾಪ ಕೊಟ್ಟು, ತನ್ನ ಒಂದು ಹಲ್ಲು ಮುರಿದುಕೊಂಡು ಒಂದೆರಡು ದಿನ ನಮ್ಮೊಡನಿದ್ದು, ನಂತರ ನೀರಲ್ಲಿ ಮುಳುಗಿ, ಮಣ್ಣಲ್ಲಿ ಮಣ್ಣಾಗುವ ಗಣೇಶ ನಮ್ಮ ಬದುಕಿನ ಕ್ಷಣಿಕ ಸಂಭ್ರಮ ಮತ್ತು ನಶ್ವರತೆಗೆಲ್ಲ ಸಾಕ್ಷಿ ಎಂದು ಈಗ ಅನ್ನಿಸುತ್ತಿದೆ. ಅದಕ್ಕೆ ಇರಬೇಕು, ಗಣೇಶನೆಂದರೆ ಎಲ್ಲರಿಗೂ ಪ್ರೀತಿಪಾತ್ರ. ಈಗಲೂ ಗಣೇಶನ ದೇವಸ್ಥಾನ ಕಂಡಾಗ ಕಾರಿನಲ್ಲಿ ಹೋಗುವವರು ಕೂಡ ಸ್ಟೀರಿಂಗ್‌ ವೀಲ್‌ ಬಿಟ್ಟು ಕೈ ಮುಗಿಯುತ್ತಾರೆ. ನಡೆದುಕೊಂಡು ಹೋಗುವವರು ಚಪ್ಪಲಿ ತೆಗೆದಂತೆ ಮಾಡಿ ನಿಂತಲ್ಲಿಂದಲೇ ವಂದನೆ ಸಲ್ಲಿಸುತ್ತಾರೆ.

ಗಣೇಶನ ಕುರಿತು ಬಹಳ ಮೆಚ್ಚುಗೆಯಾದ ಕತೆಯೆಂದರೆ ಅವನು ಹೆತ್ತವರನ್ನು ಯಾಮಾರಿಸಿದ ಕತೆ. ಒಮ್ಮೆ ಗಣೇಶನಿಗೂ ಸುಬ್ರಹ್ಮಣ್ಯನಿಗೂ ಜಗಳವಾಗುತ್ತದೆ. ಇಬ್ಬರಲ್ಲಿ ಯಾರು ಶ್ರೇಷ್ಠರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆಗ ಶಿವ ಒಂದು ಸವಾಲು ಹಾಕುತ್ತಾನೆ. ಯಾರು ಇಡೀ ಜಗತ್ತನ್ನು ಬೇಗ ಸುತ್ತಿ ಬರುತ್ತಾರೋ ಅವರು ಶ್ರೇಷ್ಠ ಎನ್ನುತ್ತಾನೆ. ಸ್ಪರ್ಧೆ ಆರಂಭವಾಗುತ್ತಿದ್ದಂತೆ ಸುಬ್ರಹ್ಮಣ್ಯ ತನ್ನ ನವಿಲು ಹತ್ತಿಕೊಂಡು ಜಗವನ್ನು ಸುತ್ತಲು ಹೊರಡುತ್ತಾನೆ. ಗಣೇಶ ಮಾತ್ರ ಅಷ್ಟೇನೂ ಕಷ್ಟಪಡದೇ ತನ್ನ ತಂದೆ ತಾಯಿಯರಾದ ಶಿವಪಾರ್ವತಿಯರಿಗೇ ಮೂರು ಸುತ್ತು ಬಂದು, ತಂದೆತಾಯಿಗಿಂತ ದೊಡ್ಡ ಜಗತ್ತು ಯಾವುದಿದೆ ಎಂದು ಕೇಳಿ ಪಂದ್ಯ ಗೆಲ್ಲುತ್ತಾನೆ. ಮುಂದೆ ಸಾಹಿತ್ಯದಲ್ಲೂ ಇದು ಷಣ್ಮುಖ ಪ್ರಜ್ಞೆ ಮತ್ತು ವಿನಾಯಕ ಪ್ರಜ್ಞೆ ಎಂದು ಹೆಸರಾಯಿತು. ಇಡೀ ಜಗತ್ತನ್ನು ಸುತ್ತಿ ಬಂದು ಬರೆಯುವುದು ಷಣ್ಮುಕ ಪ್ರಜ್ಞೆ, ಕೂತಲ್ಲೇ ಇಡೀ ಜಗತ್ತನ್ನು ಗ್ರಹಿಸುವುದು ವಿನಾಯಕ ಪ್ರಜ್ಞೆ.

ಗೌರಿ ಪೂಜೆ ಬಾಗಿನ ಎಷ್ಟು ಜನರಿಗೆ ಕೊಡಬೇಕು?

ಗಣೇಶನೆಂದರೆ ಗಮ್ಮತ್ತು ಕೂಡ. ನಮ್ಮೂರಿನಲ್ಲಿ ಗಣೇಶೋತ್ಸವ ಬಂದರೆ ಮೆರವಣಿಗೆ.ಅಲ್ಲಿ ಚೆಂಡೆ ಡಮರು ಕಹಳೆ ಕೊಂಬು ಜಿಗಿಜಿಗಿ ಲೈಟು. ಜತೆಗೆ ಡಾನ್ಸು. ಹೀಗೆ ಕುಣಿಯುತ್ತಲೇ ಗಣೇಶನನ್ನು ಮೆರವಣಿಗೆಯಲ್ಲಿ ಒಯ್ದು ನೀರಿಗೆ ಹಾಕುವುದು ಯಾವ ದೇಶದ ಯಾವ ಸಂಸ್ಕೃತಿಯಲ್ಲಿ ನಮಗೆ ಕಂಡೀತು. ಇಷ್ಟುಉದಾರಿಯಾದ ದೇವರು ಮತ್ತೆಲ್ಲಿ ಸಿಗಬೇಕು?

ಮಹಾಭಾರತವನ್ನು ಬರೆದ, ಆತ್ಮಲಿಂಗವನ್ನು ಒಯ್ಯುತ್ತಿದ್ದ ರಾವಣನಿಗೆ ಕೈ ಕೊಟ್ಟ, ಶತ್ರುಸಂಹಾರ ಮಾಡಿದ, ಮಣ್ಣಿನಿಂದ ಹುಟ್ಟಿದ, ಮಣ್ಣಾಗಿ ಹೋಗುವ, ಮತ್ತೆ ಉದ್ಭವಿಸುವ, ಬಡವರ ಬಂಧು, ಮಡಿವಂತರಿಗೆ ಮಾತ್ರವಲ್ಲದೇ ಯಾರು ಬೇಕಾದರೂ ಸ್ಪರ್ಶಿಸಬಲ್ಲ, ಕೋರೆದಾಡೆಯ, ತಿಂಡಿಪೋತನಾದರೂ ಪ್ರಥಮವಂದಿತನಾದ ಗಣೇಶನನ್ನು ಮೆಚ್ಚಲು ಆಸ್ತಿಕರೇ ಆಗಬೇಕಾಗಿಲ್ಲ. ಗಣೇಶ ಎಂದರೆ ದೇವರು, ಗಣೇಶನೆಂದರೆ ಕಲೆ, ಗಣೇಶನೆಂದರೆ ತಾಯಿಯ ಮುಖದಲ್ಲಿ ನಗು ಚಿಮ್ಮಿಸಿದವನು. ಅಗಜಾನನ ಪದ್ಮಾರ್ಕಂ..!

Follow Us:
Download App:
  • android
  • ios