Asianet Suvarna News Asianet Suvarna News

Hindu Rituals: ದೇವಾಲಯದ ಮುಖ್ಯ ಮೆಟ್ಟಿಲಿಗೆ ನಮಸ್ಕಾರ ಯಾಕೆ ಮಾಡ್ಬೇಕು?

ದೇವಸ್ಥಾನಕ್ಕೆ ಪ್ರವೇಶ ಮಾಡುವ ಸಂದರ್ಭದಲ್ಲಿ ಮುಖ್ಯ ದ್ವಾರದ ಮೆಟ್ಟಿಲನ್ನು ಸ್ಪರ್ಶಿಸಿ ನಮಸ್ಕಾರ ಮಾಡಿರ್ತೇವೆ. ಮಕ್ಕಳಿಗೂ ನಮಸ್ಕಾರ ಮಾಡುವಂತೆ ಸೂಚಿಸ್ತೇವೆ. ಆದ್ರೆ ಯಾಕೆ ಹೀಗೆ ಮಾಡ್ತಿದ್ದೇವೆ ಎಂಬುದೇ ನಮಗೆ ತಿಳಿದಿರೋದಿಲ್ಲ. ಇಂದು ಇದಕ್ಕೆ ಕಾರಣವೇನು ಅಂತಾ ನಾವು ಹೇಳ್ತೆವೆ. 
 

Why Do We Touch Steps Of Temple Before Entering
Author
First Published Jan 16, 2023, 12:50 PM IST

ದೇವರು ನಮ್ಮ ನಿಮ್ಮೆಲ್ಲರಲ್ಲಿ, ನಮ್ಮ ಸುತ್ತಿರುವ ವಸ್ತುವಿನಲ್ಲಿ ಎಲ್ಲದ್ರಲ್ಲೂ ಇದ್ದಾನೆ ಎನ್ನಲಾಗುತ್ತದೆ. ಆದ್ರೂ ಹಿಂದೂ ಧರ್ಮದಲ್ಲಿ ವಿಗ್ರಹ ಪೂಜೆಗೆ ಪ್ರದಾನ್ಯತೆಯಿದೆ. ಪ್ರತಿ ನಿತ್ಯ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆಯುವವರಿದ್ದಾರೆ. ದೇವರ ಪೂಜೆ ಮಾಡುವುದ್ರಿಂದ ಹಿಡಿದು ದೇವಸ್ಥಾನಕ್ಕೆ ಹೋಗುವವರೆಗೆ ಅನೇಕ ನಿಯಮಗಳಿವೆ. ಹಿಂದೂ ಧರ್ಮದಲ್ಲಿ ದೇವಸ್ಥಾನವನ್ನು ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ದೇವಸ್ಥಾನಕ್ಕೆ ಹೋಗುವ ವೇಳೆ ನಿಯಮ ಪಾಲನೆ ಮಾಡಬೇಕೆಂದು ಶಾಸ್ತ್ರಗಳಲ್ಲಿಯೂ ಹೇಳಲಾಗಿದೆ.

ದೇವಸ್ಥಾನ (Temple) ಪವಿತ್ರ ಸ್ಥಳವಾದ ಕಾರಣ ಚಪ್ಪಲಿ (Slippers) ಯನ್ನು ದೇವಸ್ಥಾನದ ಒಳಗೆ ಹಾಕುವುದಿಲ್ಲ. ಹಾಗೆಯೇ ದೇವಸ್ಥಾನ ಪ್ರವೇಶಿಸಿದ ನಂತ್ರ ಗಂಟೆ ಬಾರಿಸಲಾಗುತ್ತದೆ. ದೇವರಿಗೆ ನಮ್ಮ ಪ್ರಾರ್ಥನೆ (prayer) ಕೇಳಲಿ ಎನ್ನುವ ಕಾರಣ ಇದಕ್ಕಿದೆ. ಇದಲ್ಲದೆ ಪೂಜೆ ವೇಳೆ ತಲೆ ಮೇಲೆ ಸೆರಗು ಹಾಕಿಕೊಳ್ಳುವ ಪದ್ಧತಿ ಕೆಲವು ಕಡೆಯಿದೆ. ಹಾಗೆಯೇ ದೇವಸ್ಥಾನವನ್ನು ಪ್ರವೇಶಿಸುವ ಮೊದಲು ಮುಖ್ಯ ದ್ವಾರ (Main Entrance) ದ ಮೆಟ್ಟಿಲಿಗೆ ನಮಸ್ಕಾರ ಮಾಡ್ತೇವೆ. ಮುಖ್ಯ ದ್ವಾರದ ಮೆಟ್ಟಿಲನ್ನು ಸ್ಪರ್ಶಿಸಿ ನಮಸ್ಕಾರ ಮಾಡಲು ಕಾರಣವೇನು ಎಂಬುದನ್ನು ನಾವಿಂದು ನಿಮಗೆ ಹೇಳ್ತೇವೆ.

ದೇವಾಲಯದ ಮೆಟ್ಟಿಲಿ (Steps) ನಲ್ಲೇನಿದೆ? : ಧರ್ಮಗ್ರಂಥಗಳ ಪ್ರಕಾರ, ದೇವಾಲಯದ ದ್ವಾರದ ಮೆಟ್ಟಿಲು, ನಮ್ಮನ್ನು ದೇವಾಲಯ ಮತ್ತು ವಿಗ್ರಹಗಳಿಗೆ ಸಂಪರ್ಕಿಸುತ್ತದೆ. ಹಿಂದೂ ದೇವಾಲಯಗಳ ಮೆಟ್ಟಿಲುಗಳಲ್ಲಿ ದೇವತೆಗಳು ನೆಲೆಸಿದ್ದಾರೆ ಎಂದು ನಂಬಲಾಗಿದೆ. ಆದ್ದರಿಂದ ಪೂಜೆಯನ್ನು ಪ್ರಾರಂಭಿಸುವ ಮೊದಲ ಹೆಜ್ಜೆ ಎಂದು ಮೆಟ್ಟಿಲನ್ನು ಪರಿಗಣಿಸಲಾಗುತ್ತದೆ.  

ಗೌರವ ಸಲ್ಲಿಸುವ ವಿಧಾನ : ನಮಸ್ಕರಿಸುವುದು ಅಥವಾ ಪಾದಗಳನ್ನು ಮುಟ್ಟಿ ವಂದಿಸುವುದು ಗೌರವ ಸೂಚಕವಾಗಿದೆ. ಹಾಗೆಯೇ ದೇವಸ್ಥಾನವನ್ನು ಪ್ರವೇಶಿಸುವಾಗ ನಾವು ಮೆಟ್ಟಿಲುಗಳಿಗೆ ನಮಸ್ಕರಿಸುತ್ತೇವೆ. ಮೆಟ್ಟಿಲುಗಳಿಗೆ ನಮಸ್ಕರಿಸುವುದು ಅಂದ್ರೆ ದೇವರಿಗೆ ಗೌರವ ನೀಡಿದಂತೆ ಅರ್ಥ.

SHANI GOCHAR 2023: ಈ ರಾಶಿಗಳಿಗೆ ಸಾಡೇಸಾತಿ, ಧೈಯ್ಯಾ ಶುರು; ಧನು, ತುಲಾ, ಮಿಥುನ ಬಿಡಬಹುದು ನಿಟ್ಟುಸಿರು

ಮನಸ್ಸಿನ ಶುದ್ಧಿ : ನಾವು ಮೆಟ್ಟಿಲುಗಳನ್ನು ಮುಟ್ಟಿದಾಗ ನಮ್ಮ ಮನಸ್ಸು ಶುದ್ಧವಾಗುತ್ತದೆ. ಹೊರಗಿನ ಎಲ್ಲ ಅನಿಷ್ಟಗಳು ಓಡಿ ಹೋಗುತ್ತದೆ ಎಂದು ನಂಬಲಾಗಿದೆ. ದೇವಸ್ಥಾನಕ್ಕೆ ಹೋಗಲು ಶುಭ್ರ ಮನಸ್ಸು ಅಗತ್ಯ.  

ಅಹಂಕಾರದ ನಾಶ : ದೇವಸ್ಥಾನದ ಮೆಟ್ಟಿಲುಗಳನ್ನು ಮುಟ್ಟಿ ನಮಸ್ಕರಿಸುವುದರಿಂದ ನಮ್ಮೊಳಗಿನ ಅಹಂಕಾರವೆಲ್ಲ ಕೊನೆಗೊಳ್ಳುತ್ತದೆ. ದೇವಾಲಯವನ್ನು ಪ್ರವೇಶಿಸುವಾಗ ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಅಹಂ ಇದ್ದರೂ ಅದು ನೀವು ಮಾಡಿದ ಪೂಜೆಯ ಫಲವನ್ನು ನೀಡುವುದಿಲ್ಲ. ಅಹಂಕಾರ ನಾಶವಾಗ್ಬೇಕೆಂದ್ರೆ ದೇವಸ್ಥಾನದ ಮೆಟ್ಟಿಲನ್ನು ಸ್ಪರ್ಶಿಸಬೇಕು. ಆದ್ದರಿಂದ ಪ್ರವೇಶದ್ವಾರದಲ್ಲಿರುವ ಮೆಟ್ಟಿಲುಗಳಿಗೆ ನಮಸ್ಕರಿಸುವಂತೆ ಸಲಹೆ ನೀಡಲಾಗುತ್ತದೆ. 

ದೇವರನ್ನು ಪ್ರಾರ್ಥಿಸುವ ವಿಧಾನ : ದೇವಾಲಯದ ಮೆಟ್ಟಿಲುಗಳು ದೇವರಿರುವ ಪವಿತ್ರ ಸ್ಥಳವನ್ನು ಪ್ರವೇಶಿಸುವ ಸ್ಥಳವಾಗಿದೆ. ನಾವು ಆರಂಭದಲ್ಲಿಯೇ ದೇವರಿಗೆ ನಮಸ್ಕರಿಸಿದಾಗ ಅದು ಕೂಡ ನಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ನಾವು ದೇವರನ್ನು ಪ್ರಾರ್ಥಿಸಿದಂತೆ ಆಗುತ್ತದೆ. ದೇವಸ್ಥಾನದ ಮೆಟ್ಟಿಲು ನಮ್ಮನ್ನು ದೇವರೊಂದಿಗೆ ಸಂಪರ್ಕಿಸುವ ಮಾರ್ಗವಾಗಿದೆ. ನಾವು ದೇವಸ್ಥಾನದ ಮುಖ್ಯ ಮೆಟ್ಟಿಲನ್ನು ಸ್ಪರ್ಶಿಸಿ ನಮಸ್ಕಾರ ಮಾಡಿದ್ರೆ ದೇವರು ನಮಗೆ ಅನುಗ್ರಹ ತೋರುತ್ತಾನೆ.

ರಾಹುಕಾಲದಲ್ಲಿ ಶುಭ ಕಾರ್ಯಗಳೇಕೆ ನಡೆಯುವುದಿಲ್ಲ?

ಶರಣಾಗತಿಯ ಚಿಹ್ನೆ : ದೇವಾಲಯವನ್ನು ಪ್ರವೇಶಿಸುವ ಮೊದಲು, ನಾವು ಮೆಟ್ಟಿಲುಗಳ ಮುಂದೆ ನಮಸ್ಕರಿಸಿದಾಗ ಮತ್ತು ಮೆಟ್ಟಿಲುಗಳನ್ನು ಸ್ಪರ್ಶಿಸಿದಾಗ  ಅದು ನಮ್ಮ ಶರಣಾಗತಿಯನ್ನು ಸೂಚಿಸುತ್ತದೆ. ದೇವಸ್ಥಾನವನ್ನು ಪ್ರವೇಶಿಸುವ ಮೊದಲು ನಿಮ್ಮ ಆತ್ಮ ಮತ್ತು ದೇಹ ಎಲ್ಲವನ್ನೂ ನೀವು ದೇವರಿಗೆ ಒಪ್ಪಿಸುತ್ತಿದ್ದೀರಿ ಎಂಬುದನ್ನು ಇದು ಸೂಚಿಸುತ್ತದೆ. ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಶರಣಾಗತಿಯ ಭಾವನೆ ಅಗತ್ಯವಾಗಿದೆ. ಇದ್ರಿಂದ ನೀವು ಪೂಜೆಯ ಫಲಿತಾಂಶವನ್ನು ಪಡೆಯುತ್ತೀರಿ. ದೇವರ ಭಕ್ತಿಯಲ್ಲಿ ನಾವು ನಮ್ಮದು ಎಂಬುದನ್ನೆಲ್ಲ ತ್ಯಾಗ ಮಾಡಿದಾಗ, ನಮಗೆ ದೇವರ ಕೃಪೆ ಸಿಗುತ್ತದೆ ಎಂದು ನಂಬಲಾಗಿದೆ.  

Follow Us:
Download App:
  • android
  • ios