Asianet Suvarna News Asianet Suvarna News

Diwali 2021: ಬಲಿ ಪಾಡ್ಯಮಿಯ ವಿಶೇಷ, ಭೂಮಿಗೆ ಬರುತ್ತಾನೇಕೆ ಬಲಿ ಚಕ್ರವರ್ತಿ?

ಬಲಿ ಚಕ್ರವರ್ತಿಯು(Bali Chakravarthy) ಮಹಾ ಪರಾಕ್ರಮಿ. ಈತ ರಸಾತಳಕ್ಕೆ ತೆರಳಿದ, ಹಾಗೇ ಮರಳಿ ಬಂದು ತನ್ನ ಜನಗಳಿಂದ ಪೂಜೆ ಸ್ವೀಕರಿಸುವ ದಿನವೂ ಇಂದು. ಈ ಕತೆಯನ್ನು ಇಂದು ಓದೋಣ.

 

Why Bali chakravarthy comes to earth in this Bali padyami
Author
Bengaluru, First Published Nov 5, 2021, 3:27 PM IST

ಹಿರಣ್ಯಕಶ್ಯಪನ ಮಗ ಹರಿಭಕ್ತ ಪ್ರಹ್ಲಾದ. (Prahlada) ಆತನ ಮಗ ವಿರೋಚನ. ವಿರೋಚನನ ನಂತರ ಅವನ ಮಗ ಬಲಿ (Bali chakravarthy) ಪಟ್ಟಕ್ಕೆ ಬಂದು ತನ್ನ ಪರಾಕ್ರಮದಿಂದ ಇಡೀ ಜಗತ್ತಿನ ಚಕ್ರವರ್ತಿಯಾಗಿ ರಾಜ್ಯಪಾಲನೆ ಮಾಡತೊಡಗಿದನು. ರಾಕ್ಷಸರ (Rakshasa) ಶಿಲ್ಪಿಯಾದ ಮಯನು (Maya) ಬಲಿಗೆ ನೀರ ಮೇಲೆಯೂ, ನೆಲದ ಮೇಲೆಯೂ, ಅಂತರಿಕ್ಷದಲ್ಲಿಯೂ ಪ್ರಯಾಣ ಮಾಡಬಲ್ಲ ದೊಡ್ಡ ವಾಹನವನ್ನು ನಿರ್ಮಾಣ ಮಾಡಿ ಕೊಟ್ಟನು.

ಅಮೃತವು ತಮಗೆ ದಕ್ಕದಂತೆ ಮಾಡಿದ ದೇವತೆಗಳ (Gods) ಮೇಲೆ ರಾಕ್ಷಸರಿಗೆ, ಬಲಿಯಲ್ಲೂ ಕೂಡ ಪ್ರತೀಕಾರ ವಾಂಛೆ ಇತ್ತು. ಹೀಗಾಗಿ ಬಲಿಯು ಇಂದ್ರನ ಜೊತೆಗೆ ಯುದ್ಧಕ್ಕೆ ಇಳಿದ. ಮಾಯಾವಿಮಾನವನ್ನೇರಿ ಮಾಯಾಯುದ್ಧವನ್ನೇ ಹೂಡಿದ. ಇದನ್ನು ಎದುರಿಸಲಾರದ ದೇವತೆಗಳು ಶ್ರೀಹರಿಯ ಮೊರೆಹೋದರು. ಶ್ರೀಹರಿಯ ಕೃಪೆಯಿಂದ ಮಾಯೆ ಹರಿದುಹೋದಾಗ ಬಲೀಂದ್ರನನ್ನು ಇಂದ್ರನು ಕೊಂದುಹಾಕಿದನು.

ದೀಪಾವಳಿ: ದ್ವಾದಶ ರಾಶಿಗಳ ಫಲಗಳು, ಅದೃಷ್ಟ ಸಂಖ್ಯೆ ತಿಳಿದುಕೊಳ್ಳಿ

ರಾಕ್ಷಸರು ಬಲೀಂದ್ರನ ದೇಹವನ್ನು ಹೊತ್ತುಕೊಂಡು ತಮ್ಮ ಸ್ವಸ್ಥಾನವಾದ ಆಸ್ತಗಿರಿಗೆ ಹಿಂದಿರುಗಿದರು. ಅಲ್ಲಿ ರಾಕ್ಷಸರ ಪುರೋಹಿತರಾದ ಶುಕ್ರಾಚಾರ್ಯರು (Shukracharya) ಸತ್ತ ಬಲೀಂದ್ರನನ್ನು ತಮ್ಮ ಸಂಜೀವಿನೀ ವಿದ್ಯೆಯಿಂದ ಮತ್ತೆ ಬದುಕಿಸಿದರು. ಮಹಾಜ್ಞಾನಿಯಾದ ಬಲೀಂದ್ರನು ‘ಸೋಲು ಗೆಲುವು, ಸುಖ ದುಃಖ– ಇವೆಲ್ಲಾ ಪೂರ್ವಜನ್ಮದ ಕರ್ಮ’ ಎಂದುಕೊಂಡು ಸಮಾಧಾನವನ್ನು ಪಡೆದ. 
ಮುಂದೆ ಶುಕ್ರಾಚಾರ್ಯರ ಬೆಂಬಲದಿಂದ ಬಲೀಂದ್ರನು ‘ವಿಶ್ವಜಿತ್’ ಯಾಗವನ್ನು ಮಾಡಿ ಅಜೇಯನಾಗಿ ಪುನಃ ಸ್ವರ್ಗಲೋಕದ ಮೇಲೆ ದಂಡೆತ್ತಿ ಹೋದ.

ಬಲೀಂದ್ರನ ಶಂಖ ದ್ವನಿಯನ್ನು ಕೇಳಿಯೇ ಸ್ವರ್ಗಲೋಕ ನಡುಗಿಹೋಯಿತು. ದೇವಗುರು ಬ್ರಹಸ್ಪತಿ ಇಂದ್ರನಿಗೆ ಹೇಳಿದರು: ‘ಅಯ್ಯಾ, ಶುಕ್ರಾಚಾರ್ಯರು ತಮ್ಮ ತಪಸ್ಸನ್ನು ಇವನಲ್ಲಿ ತುಂಬಿ ಕಳುಹಿಸಿದ್ದಾರೆ. ಶ್ರೀಹರಿಯೊಬ್ಬನ ಹೊರತು ಮತ್ತಾರೂ ಈಗ ಇವನನ್ನು ಎದುರಿಸಲಾರರು. ನೀನು ನಿನ್ನ ಅನುಯಾಯಿಗಳೊಂದಿಗೆ ತಲೆ ಮರೆಸಿಕೊಳ್ಳುವುದೊಂದೇ ಉಪಾಯ.” ಬಲಿಯ ರಭಸವನ್ನು ತಾಳಿಕೊಳ್ಳಲಾಗದೆ, ಇಂದ್ರಾದಿ ದೇವತೆಗಳೆಲ್ಲಾ ಸ್ವರ್ಗವನ್ನು ಬಿಟ್ಟುಕೊಟ್ಟು ಗುಡ್ಡಗಾಡುಗಳಿಗೆ ಓಡಿಹೋದರು. ದಿಕ್ಪಾಲಕರು ಬಲಿಗೆ ವಶವರ್ತಿ ಗಳಾಗಿ ತಲೆ ತಗ್ಗಿಸಿ ತಿರುಗತೊಡಗಿದರು.

ಸ್ವರ್ಗ ಮರ್ತ್ಯ ಪಾತಾಳಗಳೆಂಬ ಮೂರು ಲೋಕಗಳನ್ನೂ ಬಲಿಯು ಆಳತೊಡಗಿದನು. ಆಗ ಇಂದ್ರನ ತಾಯಿಯಾದ ಅದಿತಿಯು ತನ್ನ ಗಂಡ ಕಶ್ಯಪ ಪ್ರಜಾಪತಿಯ ಬಳಿಗೆ ಹೋಗಿ, ತನ್ನ ಸಂತತಿಯವರಾದ ದೇವತೆಗಳೂ, ಇಂದ್ರನೂ, ಶಚೀದೇವಿಯೂ ಅರಣ್ಯದಲ್ಲಿ ಪಡುವ ಕಷ್ಟಗಳನ್ನು ಹೇಳಿಕೊಂಡು, ಅವರ ರಾಜ್ಯವು ಅವರಿಗೆ ಸಿಗುವ ಹಾಗೆ ಮಾಡ ಬೇಕೆಂದು ಪ್ರಾರ್ಥಿಸಿಕೊಂಡಳು. ಅದಕ್ಕೆ ಕಶ್ಯಪನು ತನ್ನ ಹೆಂಡತಿಯೊಂದಿಗೆ ವಿಷ್ಣು ವ್ರತವನ್ನು ಶ್ರದ್ದೆಯಿಂದ ಆಚರಿಸುವಂತೆ ಹೇಳಿದನು. ಅದಿತಿಯ ಪೂಜಾರಾಧನೆಗಳಿಂದ ವಿಷ್ಣುವು ಪರಮ ಪ್ರೀತನಾದನು. ತಾನು ಅವಳ ಹೊಟ್ಟೆಯಲ್ಲಿ ಹುಟ್ಟಿ ಕಷ್ಟ ಪರಿಹಾರ ಮಾಡುವೆನೆಂದು ಆಭಯವನ್ನಿತ್ತನು. ಹಾಗೆಯೇ ವಿಷ್ಣುವು ಅದಿತಿಕಶ್ಯಪರಿಗೆ ಮಗುವಾಗಿ ಹುಟ್ಟಿದನು. ಇದು ವಿಷ್ಣುವಿನ ಮುಖ್ಯವಾದ ದಶಾವತಾರಗಳಲ್ಲಿ ಐದನೆಯದಾದ ವಾಮನಾವತಾರ.

ಒಮ್ಮೆ ಬಲಿಚಕ್ರವರ್ತಿಯು ನರ್ಮದಾ ನದಿಯ ತೀರದಲ್ಲಿ ಯಾಗಗಳೊಳಗೆಲ್ಲಾ ದೊಡ್ಡದಾದ ವಿಶ್ವಜಿತ್ ಯಾಗವನ್ನು ಶುಕ್ರಾಚಾರ್ಯನ ಪೌರೋಹಿತ್ಯದಲ್ಲಿ ಪ್ರಾರಂಭಿಸಿದ್ದನು. ಅದರ ಅಂಗವಾಗಿ ದೊಡ್ಡ ದೊಡ್ಡ ದಾನಗಳನ್ನು ಮಾಡಿಕೊಂಡಿದ್ದನು. ಆಗ ವಾಮನನು ಬಾಲ ವಟುವಾಗಿ ಬಲಿಚಕ್ರವರ್ತಿಯ ಬಳಿಗೆ ಬಂದ. ವಾಮನನನ್ನು ನೋಡಿದ ಕೂಡಲೇ ಬಲೀಂದ್ರನಿಗೆ ಅತ್ಯಾನಂದವಾಯಿತು. ‘‘ಬಾ ಪುಟ್ಟ ವಟು. ಯಾರು ನೀನು? ನಿನಗೇನು ಬೇಕು?’’ ಎಂದು ಕೇಳಿದನು.

‘‘ನಿನ್ನ ಕೀರ್ತಿ ಕೇಳಿ ನಿನ್ನ ಬಳಿಗೇ ಬಂದಿದ್ದೇನೆ. ಯಾಚಿಸಲಿಕ್ಕೆ ಬಂದಿದ್ದೇನೆ.’’ ಎಂದನು ವಾಮನ. ‘‘ಕೇಳು ಕೇಳು, ನೀನು ಏನು ಕೇಳಿದರೂ ಕೊಡುತ್ತೇನೆ’’ ಎಂದ ಬಲಿ ಚಕ್ರವರ್ತಿಯು. ಆಗ ಇದನ್ನೆಲ್ಲಾ ಗಮನಿಸಿಕೊಂಡಿದ್ದ ಶುಕ್ರಾಚಾರ್ಯ, ಬಲಿ ಚಕ್ರವರ್ತಿಯನ್ನು ಕರೆದು, ‘‘ರಾಜಾ, ಈ ವಾಮನನು ಬೇರೆ ಯಾರೂ ಅಲ್ಲ. ಮಹಾವಿಷ್ಣುವೇ ನಿನ್ನನ್ನು ವಂಚಿಸಿ ನಿನ್ನ ಸರ್ವಸ್ವವನ್ನೂ ಅಪಹರಿಸಲು ಬಂದಿದ್ದಾನೆ. ಅವನಿಗೆ ಯಾವ ಬಗೆಯ ದಾನ ಪ್ರದಾನವನ್ನೂ ಕೊಡಬಾರದು!’’ ಎಂದು ಎಚ್ಚರಿಸಿದ.

ಅದಕ್ಕೆ ಬಲಿಚಕ್ರವರ್ತಿಯು ‘‘ಹಾಗೇನು! ಸಾಕ್ಷಾತ್ ವಿಷ್ಣುವೇ ನನ್ನ ಮುಂದೆ ಬಂದು ಭಿಕ್ಷಾಂದೇಹಿ ಎಂದು ಕೈ ನೀಡಿದರೆ, ನನ್ನ ಕೈ ಮೇಲಾಗಿ ದಾನ ಕೊಡುವುದೆಂದರೆ ದೊಡ್ಡ ಅದೃಷ್ಟ ಮಾತ್ರವಲ್ಲ, ನನ್ನ ಘನವಿಜಯವನ್ನೇ ಸಾರುವಂತಹುದು. ಕೊಡುತ್ತೇನೆಂದ ಮೇಲೆ ಕೊಡಲಾರೆನೆಂದು ಹೇಳಲಾರೆ. ಹಾಗೆ ಮಾಡಿದರೆ ಅಸತ್ಯದ ದೋಷಕ್ಕೀಡಾಗುತ್ತೇನೆ.'' ಎಂದ. ‘‘ಆತ್ಮರಕ್ಷಣೆಗಾಗಿ ಮಾತು ತಪ್ಪಿದರೆ ಅಸತ್ಯ ದೋಷವು ಬಾರದು.’’ ಎಂದ ಶುಕ್ರಾಚಾರ್ಯ.

Diwali: ಲಕ್ಷ್ಮಿದೇವಿಯ ಕೃಪೆ ಪಡೆಯಲು ಗೂಬೆಯನ್ನು ಆರಾಧಿಸಿ!

‘‘ಗುರುಗಳೇ! ಯಾವುದು ಏನಾದರೂ, ಅವನು ನನ್ನನ್ನು ಏನು ಮಾಡಿದರೂ ಅದು ನನಗೆ ಸಮ್ಮತವೇ. ಕೇಳಿದವರಿಗೆ ಕೇಳಿದುದನ್ನು ಕೊಡುವಂತಹ ಯಾಗ ದೀಕ್ಷೆಯಲ್ಲಿರುವ ನಾನು ಕೊಡುತ್ತೇನೆಂದು ಹೇಳಿದ ಮೇಲೆ, ಭೀರುವಾಗಿ ತಪ್ಪಿಸಿಕೊಳ್ಳಲಾರೆ.’’ ಎಂದು ಹೇಳಿಬಿಟ್ಟ ಬಲಿ.

ಶುಕ್ರಾಚಾರ್ಯನು ಕೋಪದಿಂದ, ‘‘ನಿನ್ನ ಗುರುವಾದ ನಾನು ನಿನ್ನ ಹಿತಕ್ಕಾಗಿ ಹೇಳುವುದನ್ನು ಕೇಳದೆ ನಿನ್ನ ಸರ್ವಸ್ವವನ್ನೂ ಕಳೆದುಕೊಳ್ಳುವಿ!’’ ಎಂದ. ಬಲೀಂದ್ರನು ಕೈ ಮುಗಿದು ‘‘ಗುರುದೇವಾ! ನಿಮ್ಮ ಶಾಪವನ್ನು ಸಂತೋಷವಾಗಿ ಸ್ವೀಕರಿಸಿದ್ದೇನೆ!’’ ಎಂದ.
ನಂತರ ವಾಮನನ ಬಳಿಗೆ ಹೋಗಿ, ''ಏನು ಬೇಕೋ ಕೇಳಿಕೋ'' ಎಂದ. ‘‘ಮಹಾಬಲೀ, ನನಗೆ ಕೃಷ್ಣಾಜಿನ ಹರಡಿ ಕುಳಿತುಕೊಂಡು ಬ್ರಹ್ಮಾನುಷ್ಠಾನ ಮಾಡಲು ನನ್ನ ಪಾದಗಳ ಅಳತೆಯ ಮೂರು ಅಡಿ ಸ್ಥಳ ಮಾತ್ರ ನನಗೆ ಸಾಕು. ಅಷ್ಟು ಮಾತ್ರ ಕೊಡು.’’ ಎಂದನು ಗಿಡ್ಡ ವಾಮನ.

ಆ ಮೂರಡಿಗಳ ಜಾಗ ಕೊಟ್ಟಿದ್ದೇನೆ. ತೆಗೆದುಕೋ’’ ಎಂದು ಬಲಿ ಚಕ್ರವರ್ತಿಯು ಗಿಂಡಿಯ ನೀರಿನಿಂದ ಧಾರೆಯೆರೆದು ನೀಡಲು ಹೊರಟಾಗ, ನೀರಿಳಿಯಲಿಲ್ಲ. ಯಾಕೆಂದರೆ ಶುಕ್ರಾಚಾರ್ಯ ಸೂಕ್ಷ್ಮರೂಪದಲ್ಲಿ ಗಿಂಡಿಯ ಕೊಂಬಿನ ಬಾಯಿಗೆ ಅಡ್ಡಗಟ್ಟಿ ಕುಳಿತಿದ್ದ. ಇದನ್ನು ತಿಳಿದ ವಾಮನ ದರ್ಭೆಯ ಕಡ್ಡಿ ತೆಗೆದುಕೊಂಡು ಗಿಂಡಿಯ ಕೊಂಬಿನೊಳಗೆ ಹಾಕಿ ಚುಚ್ಚಿದ. ಆಗ ಶುಕ್ರಾಚಾರ್ಯನ ಒಂದು ಕಣ್ಣು ತೂತಾಗಿ, ಅಲ್ಲಿಂದ ಮಾಯವಾದನು. ಅವನ ಒಂದು ಕಣ್ಣು ಕುರುಡಾಯಿತು. ಗಿಂಡಿಯಿಂದ ಜಲಧಾರೆ ಸರಾಗವಾಗಿ ಹರಿಯಿತು. ದಾನವಿಧಿ ಪೂರ್ತಿಯಾಯಿತು.

ಆ ಕ್ಷಣದಿಂದ ವಾಮನನು ಬೆಳೆಯ ತೊಡಗಿ ವಿಶ್ವರೂಪಿಯಾಗಿ ಭೂಮ್ಯಾಕಾಶಗಳ ಆಧಾರ ಸ್ತಂಭವಾದನು. ಅವನ ಅಗಲವು ಭೂಮಿಯನ್ನೆಲ್ಲಾ ಆಕ್ರಮಿಸಿತು. ಅವನ ಒಂದು ಪಾದದ ಅಳತೆಗೆ ಇಡೀ ಭೂಮಂಡಲವು ಸರಿ ಹೋಯಿತು. ತ್ರಿವಿಕ್ರಮನಾದ ವಿಷ್ಣು ಪಾದವನ್ನು ಮೇಲೆತ್ತಿ ಆ ಒಂದೇ ಪಾದದಿಂದ ಆಕಾಶವನ್ನೂ, ಸೂರ್ಯಚಂದ್ರಾದಿ ಗ್ರಹ ನಕ್ಷತ್ರಮಂಡಲಗಳನ್ನೆಲ್ಲಾ ಅಳೆದ. 

ದೀಪಾವಳಿಯಲ್ಲಿ ಜೇಡಿಮಣ್ಣಿನ ಈ ವಸ್ತುಗಳನ್ನು ಮನೆಗೆ ತನ್ನಿ, ಅದೃಷ್ಟವಂತರಾಗಿ...!

‘‘ಬಲೀಂದ್ರ, ಮೂರನೇ ಹೆಜ್ಜೆಗೆ ಜಾಗವೆಲ್ಲಿದೆ? ತೋರಿಸುವೆಯಾ?’’ ಎಂದು ವಾಮನ ಕೇಳಿದ. ಬಲಿ ಹೆಚ್ಚೇನೂ ಯೋಚಿಸದೆ '‘ಇಗೋ, ನನ್ನ ತಲೆಯಿದೆ. ಅದರ ಮೇಲೆ ಇಡು ಸ್ವಾಮೀ!’’ ಎಂದು ತಲೆ ಬಾಗಿದ.

ವಾಮನನು ಅವನ ತಲೆಯ ಮೇಲೆ ಪಾದವನ್ನಿಟ್ಟ. ನಂತರ ಹೇಳಿದ: ‘‘ಬಲಿಚಕ್ರವರ್ತೀ, ನಿನಗೆ ಸಾಟಿಯಾದವನು ಇನ್ನೊಬ್ಬನಿಲ್ಲ. ನಿನ್ನನ್ನು ಸುತಳಕ್ಕೆ ಕಳುಹಿಸುತ್ತೇನೆ. ಅಧೋಲೋಕಗಳಿಗೆ ಅಧಿಪತಿಯಾಗಿ ಶಾಂತಿ ಸೌಖ್ಯಗಳಿಂದ ಅಲ್ಲಿ ಚಿರಂಜೀವಿಯಾಗಿರುವಿ. ಸುತಳದ ದ್ವಾರವನ್ನು ದಂಡಧಾರಿಯಾಗಿ ಕಾವಲು ಕಾಯುತ್ತಾ ನಿನಗೆ ರಕ್ಷಕನಾಗಿರುತ್ತೇನೆ. ಇನ್ನೊಂದು ವರ ನೀಡುತ್ತೇನೆ. ಅದೇನೆಂದರೆ ಆಶ್ವೀಜ ಮಾಸದಲ್ಲಿ ಮೂರು ದಿವಸಗಳ ಕಾಲ ನೀನು ಭೂಲೋಕಕ್ಕೆ ಬರಬಹುದು. ಅಲ್ಲಿ ನಿನ್ನನ್ನು ಜನತೆ ಪೂಜೆಗೈಯುವರು.'' ಇದರ ಫಲವಾಗಿಯೇ ದೀಪಾವಳಿ ಸಮಯದಲ್ಲಿ ಎಲ್ಲರೂ ದೀಪ ಹಚ್ಚಿ ಬಲೀಂದ್ರ ಪೂಜೆ ಕೈಗೊಳ್ಳುತ್ತಾರೆ.

Follow Us:
Download App:
  • android
  • ios