ಜೀವನದಲ್ಲಿ ಎದುರಾಗುವ ಸುಖ-ದುಃಖಗಳನ್ನು ನಿಭಾಯಿಸುವ ಬಗ್ಗೆ ಶಾಸ್ತ್ರಗಳಲ್ಲಿ, ಪುರಾಣಗಳಲ್ಲಿ ತಿಳಿಸಿದ್ದಾರೆ. ಒಬ್ಬ ವ್ಯಕ್ತಿಯ ಗುಣಗಳು ಹೇಗಿರಬೇಕು? ಸಜ್ಜನರಾದವರ ಗುಣಗಳೇನು? ದುರ್ಜನರ ಸಹವಾಸಕ್ಕೆ ಬಿದ್ದವರ ವರ್ತನೆ ಹೇಗಿರುತ್ತದೆ? ಉತ್ತಮ ಪತಿ ಅಥವಾ ಪತ್ನಿಯ ನಡೆ-ನುಡಿ, ವರ್ತನೆ ಹೇಗಿದ್ದರೆ ಬದುಕು ಬಂಗಾರವಾಗುತ್ತದೆ? ಎಂಬ ಬಗ್ಗೆ ಪುರಾಣ ಗ್ರಂಥಗಳಲ್ಲಿ ಉಲ್ಲೇಖವಿದೆ.

ಗರುಡ ಪುರಾಣದಲ್ಲಿ ಯೋಗ್ಯ ಪತ್ನಿಯ ಗುಣಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ವಿವಾಹದ ನಂತರ ಪತ್ನಿಯು ಪತಿಯ ಅರ್ಧಾಂಗಿ ಎಂದು ಹೇಳಲಾಗುತ್ತದೆ. ವೈವಾಹಿಕ ಜೀವನವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವಲ್ಲಿ ಪತಿಯ ಪಾತ್ರ ಎಷ್ಟಿರುತ್ತದೆಯೋ ಅಷ್ಟೇ ಮಹತ್ವದ ಪಾತ್ರ ಪತ್ನಿಯದ್ದು ಸಹ ಆಗಿರುತ್ತದೆ. ಪತಿ-ಪತ್ನಿಯನ್ನು ಜೀವನ ರಥದ ಎರಡು ಚಕ್ರಗಳೆಂದು ಹೇಳಲಾಗುತ್ತದೆ.ವಿವಾಹದ ಸಮಯದಲ್ಲಿ ನೀಡಲಾದ ಏಳು ವಚನಗಳಲ್ಲಿ ಪತಿ - ಪತ್ನಿಯನ್ನು ಗೌರವಾದರಗಳಿಂದ ಕಾಣಬೇಕೆಂದು ಹೇಳಲಾಗುತ್ತದೆ. ಅದೇ ರೀತಿ ಪತ್ನಿಯು ಸಹ ಪತಿಗೆ ಗೌರವವನ್ನು ನೀಡುವುದರ ಜೊತೆಗೆ ಸುಖ-ದುಃಖಗಳಲ್ಲಿ ಸಮವಾಗಿ ಭಾಗಿಯಾಗುತ್ತೇನೆಂಬ ವಚನವನ್ನು ನೀಡಿರುತ್ತಾಳೆ. 

ಇದನ್ನು ಓದಿ: ಹೇಗಿರ್ತಾರೆ ನವೆಂಬರ್‌ನಲ್ಲಿ ಜನಿಸಿದವರು, ನೀವು - ನಿಮ್ಮವರಿದ್ದಾರಾ..?

ಅನೇಕ ಶಾಸ್ತ್ರ, ಪುರಾಣಗಳಲ್ಲಿ ಪತಿ ಮತ್ತು ಪತ್ನಿಯ ಕರ್ತವ್ಯದ ಬಗ್ಗೆ ಹೇಳಿದ್ದಾರೆ. ಹಾಗೆಯೇ ವಿಷ್ಣು ಪುರಾಣ ಮತ್ತು ಗರುಡ ಪುರಾಣಗಳಲ್ಲಿ ಸುಯೋಗ್ಯ ಪತ್ನಿಯ ಗುಣಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಶಾಸ್ತ್ರದ ಪ್ರಕಾರ ಪತ್ನಿಯು ಈ ನಾಲ್ಕು ಗುಣಗಳನ್ನು ಹೊಂದಿದ್ದರೆ ಅಂಥವರ ಪತಿ ಅತ್ಯಂತ ಅದೃಷ್ಟವಂತನೆಂದು ಹೇಳಲಾಗಿದೆ. ಹಾಗಾದರೆ ಆ ನಾಲ್ಕು ಗುಣಗಳು ಯಾವುದೆಂದು ತಿಳಿಯೋಣ...

ಪತ್ನಿಯ ಯೋಗ್ಯ ಗುಣಗಳನ್ನು ಈ ಶ್ಲೋಕವೊಂದರಲ್ಲಿ ವಿವರಿಸಲಾಗಿದೆ.
ಸಾ ಭಾರ್ಯಾ ಯಾ ಗೃಹೇ ದಕ್ಷಾ ಸಾ ಭಾರ್ಯಾ ಯಾ ಪ್ರಿಯಂವದಾ/ ಸಾ ಭಾರ್ಯಾ ಯಾ ಪತಿಪ್ರಾಣಾ ಸಾ ಭಾರ್ಯಾ ಯಾ ಪತಿವ್ರತಾ//

ಅರ್ಥ:   
ಸಾ ಭಾರ್ಯಾ ಯಾ ಗೃಹೇ ದಕ್ಷಾ
ಗೃಹ ಕಾರ್ಯಗಳಲ್ಲಿ ಕುಶಲಳಾಗಿರುವ ಪತ್ನಿ, ಅಂದರೆ ಮನೆಯ ಸ್ವಚ್ಛತೆ, ಉತ್ತಮವಾಗಿ ಅಡುಗೆ ಮಾಡುವವಳು, ಮನೆಯನ್ನು ಸಿಂಗರಿಸುವವಳು, ಕಡಿಮೆ ವೆಚ್ಚದಲ್ಲಿಯೂ ಮನೆಯನ್ನು ಉತ್ತಮವಾಗಿ ನಿಭಾಯಿಸುವವಳು ಉತ್ತಮ ಗೃಹಿಣಿಯಾಗುತ್ತಾಳೆ. ಅಷ್ಟೇ ಅಲ್ಲದೇ ಮಕ್ಕಳನ್ನು ಜವಾಬ್ದಾರಿಯಿಂದ ಬೆಳೆಸಿ, ಉತ್ತಮ ಸಂಸ್ಕಾರ ನೀಡುವವಳು ಮತ್ತು ಅತಿಥಿಗಳನ್ನು ಉತ್ತಮವಾಗಿ ಆದರಿಸುವವಳು, ಇತ್ಯಾದಿ ಮನೆಯ ಸಕಲ ಕಾರ್ಯಗಳನ್ನು ದಕ್ಷತೆಯಿಂದ ನಿಭಾಯಿಸುವುದು ನಾಲ್ಕು ಯೋಗ್ಯ ಗುಣಗಳಲ್ಲೊಂದಾಗಿದೆ. 

ಇದನ್ನು ಓದಿ: ಹಸ್ತಸಾಮುದ್ರಿಕಾ ಶಾಸ್ತ್ರ: ಹಸ್ತದಲ್ಲಿ ಹೀಗಿದ್ದರೆ ವ್ಯಾಪಾರದಲ್ಲಿ ಲಾಭ-ನಷ್ಟ..! 

ಸಾ ಭಾರ್ಯಾ ಯಾ ಪ್ರಿಯಂವದಾ
ಪತ್ನಿಯು ಪ್ರೇಮಪೂರ್ವಕವಾಗಿ ಮಾತನಾಡುವವಳಾಗಿದ್ದರೆ ಉತ್ತಮ ಗೃಹಿಣಿಯ ಯೋಗ್ಯ ಗುಣವಾಗಿದೆ ಎಂಬುದನ್ನು ಇದೇ ಶ್ಲೋಕದಲ್ಲಿ ಮುಂದೆ ಹೇಳಲಾಗಿದೆ. ಮನೆಯ ಸದಸ್ಯರೊಂದಿಗೆ ಹಿತವಾಗಿ ಮಾತನಾಡುವವಳು ಮತ್ತು ಅವರನ್ನು ಗೌರವಾದರಗಳಿಂದ ನಡೆಸಿಕೊಳ್ಳುವ ಪತ್ನಿಯನ್ನು ಹೊಂದಿದ ಪತಿ ಭಾಗ್ಯಶಾಲಿಯಾಗಿರುತ್ತಾನೆ.
ಹಿತ-ಮಿತವಾಗಿ ಮತ್ತು ಮಧುರವಾಗಿ ಮಾತನಾಡುವುದನ್ನು ಅತೀ ಉತ್ತಮ ಗುಣವೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಗೃಹಿಣಿಯು ಉತ್ತಮ ಸ್ವಭಾವದ ಜೊತೆಗೆ ಉತ್ತಮವಾಗಿ ಮಾತನಾಡುವವಳಾಗಿದ್ದರೆ ಅಂಥ ಮನೆಯಲ್ಲಿ ಸದಾ ಸಂತೋಷದ ವಾತಾವರಣವಿರುತ್ತದೆ. ಯಾವ ಮನೆಯಲ್ಲಿ ಪರಸ್ಪರ ಮಾತನಾಡುವಾಗ ಕಟುವಾದ ಶಬ್ಧಗಳ ಬಳಕೆ ಮಾಡುತ್ತಾರೋ ಅಂಥ ಮನೆಯಲ್ಲಿ ಸಮೃದ್ಧಿಯಿದ್ದರೂ ಅದು ನರಕಕ್ಕೆ ಸಮವಾಗಿರುತ್ತದೆ ಎಂದು ಹೇಳಲಾಗಿದೆ.

ಸಾ ಭಾರ್ಯಾ ಯಾ ಪತಿಪ್ರಾಣಾ
ಈ ಗುಣಗಳ ಜೊತೆಗೆ ಪತ್ನಿಯು ಪತಿಯನ್ನು ಆಧರಿಸುವುದು, ಆತನೇ ತನ್ನ ಸರ್ವಸ್ವವೆಂದು ನಂಬಿರುವವಳು, ಪತಿಯ ಮಾತಿಗೆ ಬೆಲೆ ನೀಡುವವಳು, ಪತಿಯ ಇಷ್ಟಕ್ಕೆ ತಕ್ಕಂತೆ ನಡೆಯುವವಳು ಉತ್ತಮ ಪತ್ನಿಯೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಇವು ಗೃಹಿಣಿಯ ಯೋಗ್ಯ ಗುಣಗಳಲ್ಲೊಂದಾಗಿದೆ.
ಇದರ ಜೊತೆ ಜೊತೆಗೆ ಪತಿಯ ಕರ್ತವ್ಯವು ಮುಖ್ಯವಾಗುತ್ತದೆ. ಪತ್ನಿಯನ್ನು ಆದರಿಸುವುದು, ಪತ್ನಿ ಇಷ್ಟವನ್ನರಿಯುವುದು, ಬೇಸರವಾಗುವಂಥ ಕಾರ್ಯವನ್ನು ಮಾಡದಿರುವುದು ಪತಿಯ ಕರ್ತವ್ಯಗಳಾಗಿವೆ. ಅಷ್ಟೇ ಅಲ್ಲದೇ ಪತಿ-ಪತ್ನಿ ಪರಸ್ಪರರ ಉತ್ತಮ ಕಾರ್ಯಗಳನ್ನು ಪ್ರಶಂಸಿಸುವುದು, ಪ್ರೋತ್ಸಾಹಿಸುವುದು ಉತ್ತಮ ವೈವಾಹಿಕ ಜೀವನಕ್ಕೆ ಮುಖ್ಯವಾಗುತ್ತದೆ.

ಇದನ್ನು ಓದಿ: ಈ ನಾಲ್ಕು ರಾಶಿಯವರು ಹೆಚ್ಚು ಧೈರ್ಯವಂತರಂತೆ! 

ಸಾ ಭಾರ್ಯಾ ಯಾ ಪತಿವ್ರತಾ
ಗರುಡ ಪುರಾಣದಲ್ಲಿ ಪತ್ನಿಯ ನಾಲ್ಕನೇ ಯೋಗ್ಯ ಗುಣವು ಧರ್ಮಪಾಲನೆ ಮತ್ತು ಪತಿವ್ರತಾ ಧರ್ಮವನ್ನು ಪಾಲಿಸುವುದಾಗಿದೆ. ಪತಿ ಮತ್ತು ಕುಟುಂಬದವರ ಒಳಿತಿಗೆ ಶ್ರಮಿಸುವುದು, ಜೀವನದಲ್ಲಿ ಉತ್ತಮ ಕಾರ್ಯಗಳನ್ನು ನಿರ್ವಹಿಸುವುದು ಮತ್ತು ಪತ್ನಿಧರ್ಮವನ್ನು ಪಾಲಿಸುವುದು. ಈ ಎಲ್ಲ ಗುಣಗಳನ್ನುಳ್ಳ ಪತ್ನಿಯನ್ನು ಪಡೆದ ಪತಿ ದೇವರಾಜ ಇಂದ್ರನಷ್ಟೇ ಭಾಗ್ಯಶಾಲಿಯೆಂದು ಹೇಳಲಾಗುತ್ತದೆ.