Holi 2023: ದುಷ್ಟಶಕ್ತಿಯನ್ನು ದಹಿಸುವ, ಪ್ರೀತಿಯನ್ನು ಹಂಚುವ ಪರ್ವ

ಹೋಳಿಯ ಮುನ್ನಾ ದಿನ ಚೋಟಿ ಹೋಳಿಯಂದು ಹೋಲಿಕಾ ದಹನ ಮಾಡಲಾಗುತ್ತದೆ. ಹೋಳಿಯ ದಿನ ಬಣ್ಣಗಳೊಂದಿಗೆ ಸಂಭ್ರಮಾಚರಣೆ. ಯಾವುದೇ ಕಾರಣಕ್ಕೆ ಮುನಿಸಿಕೊಂಡವರಿದ್ದರೆ, ಅವರನ್ನು ಆಲಂಗಿಸಿಕೊಂಡು, ಹಳೆಯ ಕಹಿ ಘಟನೆಯನ್ನು ಮರೆಯುತ್ತಾರೆ.

What is the story and significance of Holi 2023 skr

ನಾಗೇಶ ಜಿ. ವೈದ್ಯ, ಬೆಂಗಳೂರು

ಹಬ್ಬಗಳ ಭವ್ಯ ಪರಂಪರೆಯ ಈ ನಾಡಿನಲ್ಲಿ ಎಲ್ಲ ಹೃದಯಗಳಲ್ಲಿ ಪ್ರೀತಿ, ವಿಶ್ವಾಸವನ್ನು ಬಿತ್ತಿ, ವೈರತ್ವವನ್ನು ಕೊನೆಗೊಳಿಸಿ, ಸೌಹಾರ್ದತೆಯನ್ನು ಸಾರುವ ಹಬ್ಬ ಹೋಳಿ ಹಬ್ಬ. ಅದಕ್ಕಾಗಿ ಜನರೆಲ್ಲ ಫಾಲ್ಗುಣ ಮಾಸದ ಹುಣ್ಣಿಮೆಗಾಗಿ ಕಾಯುತ್ತಾರೆ. ಜಾತಿ, ಮತ, ಕುಟುಂಬ, ಹೆಣ್ಣು, ಗಂಡೆಂಬ ಯಾವುದೇ ಭೇದಭಾವವಿಲ್ಲದೇ ಎಲ್ಲರೂ ಒಟ್ಟಾಗಿ ಬಣ್ಣಗಳೊಂದಿಗೆ ಆಡುವ ಸಂತಸದ ಹಬ್ಬ ಇದು. ದೇಹದ ಪ್ರಜ್ಞೆಯನ್ನು ಕಳೆದುಕೊಂಡು ರಾಧಾ, ಕೃಷ್ಣರಂತೆ ಎಲ್ಲರೊಂದಿಗೆ ಕುಣಿಯುವ ಸಮಯ. ಹಳೆಯ ದ್ವೇಷವನ್ನು ಮರೆತು ಶತ್ರುಗಳನ್ನೂ ತಬ್ಬಿಕೊಳ್ಳುವ ಸುಸಮಯ.

ಹೋಳಿ ಹಬ್ಬದ ಹಿನ್ನೆಲೆ
ಎರಡು ದಿನಗಳ ಈ ಹಬ್ಬದ ಮೊದಲ ದಿನ ಸಣ್ಣ ಹೋಳಿ. ಆ ದಿನ ಹೋಲಿಕಾ ದಹನವನ್ನು ಮಾಡಲಾಗುತ್ತದೆ. ಅದಕ್ಕೊಂದು ಹಿನ್ನೆಲೆಯಿದೆ. ಹಿರಣ್ಯಕಶಿಪು ಒಬ್ಬ ರಾಕ್ಷಸ ರಾಜ. ಆತ ಪಡೆದಿದ್ದ ವರದಿಂದಾಗಿ, ತನಗೆ ಯಾರೂ ಸರಿಸಮರಲ್ಲವೆಂಬ ಅಹಂಕಾರ. ಹಾಗಾಗಿ, ಪ್ರತಿಯೊಬ್ಬರೂ ದೇವತೆಗಳ ಬದಲು ತನ್ನನ್ನೇ ಆರಾಧಿಸಬೇಕೆಂದು ನಿಯಮವನ್ನು ಜಾರಿಗೊಳಿಸಿದ್ದ. ಲೋಕದ ಜನಗಳು ಭಯದಿಂದ ಈ ನಿಯಮವನ್ನು ಪಾಲಿಸಿದರೂ, ಅವನ ಮಗ ಪ್ರಹ್ಲಾದ ಮಾತ್ರ ಇದನ್ನು ಒಪ್ಪಿಕೊಳ್ಳಲಿಲ್ಲ. ಅವನಿಗೆ ವಿಷ್ಣುವೇ ಸರ್ವಶ್ರೇಷ್ಠ. ತಂದೆಯನ್ನು ಬಿಟ್ಟು ವಿಷ್ಣುವನ್ನು ಪೂಜಿಸುತ್ತಿದ್ದ. ಹಿರಣ್ಯಕಶಿಪು ತನ್ನ ಮಗನಿಗೆ ಬುದ್ಧಿ ಹೇಳಿದ. ಗದರಿಸಿ ನೋಡಿದ. ಯಾವುದಕ್ಕೂ ಬಾಲಕ ಪ್ರಹ್ಲಾದ ಜಗ್ಗಲಿಲ್ಲ. ತನ್ನೆದುರೇ ತನ್ನ ವೈರಿಯಾದ ವಿಷ್ಣುವನ್ನು ಪೂಜಿಸುವ ಮಗನ ನಡತೆಯ ಬಗ್ಗೆ ಕೋಪಗೊಂಡ ಹಿರಣ್ಯಕಶಿಪು, ಮಗನನ್ನೇ ಕೊಲ್ಲಲು ನಿರ್ಧರಿಸಿದ. ಆದರೆ ಏನು ಮಾಡಿದರೂ ಪ್ರಹ್ಲಾದ ಸಾಯಲಿಲ್ಲ. ಸೋಲೊಪ್ಪದ ಹಿರಣ್ಯಕಶಿಪುವು ಕೊನೆಯಲ್ಲಿ ತನ್ನ ಸಹೋದರಿ ಹೋಲಿಕಾಳನ್ನು ಕರೆದ. ಆಕೆಗೆ ಉರಿವ ಬೆಂಕಿಯಲ್ಲಿ ನಿಲ್ಲಬಹುದಾದ ಶಕ್ತಿಯಿತ್ತು. ಪ್ರಹ್ಲಾದನನ್ನು ಬೆಂಕಿಯಲ್ಲಿ ಸುಟ್ಟುಬಿಡಲು ಆಜ್ಞೆ ಮಾಡಿದ. ಆದರೆ ಪ್ರಹ್ಲಾದನನ್ನು ಎತ್ತಿಕೊಂಡು ಬೆಂಕಿಗೆ ಹೋದಾಗ ಅವಳೇ ಸುಟ್ಟು ಬೂದಿಯಾದಳು. ಪ್ರಹ್ಲಾದ ಬೆಂಕಿಯಿಂದ ಸುರಕ್ಷಿತವಾಗಿ ಹೊರಬಂದ. ಅಂದಿನಿಂದ ಪ್ರತಿವರ್ಷವೂ ದುಷ್ಟತೆಯ ನಿರ್ಮೂಲನೆಯ ಸಾಂಕೇತಿಕವಾಗಿ ಹೋಲಿಕಾ ದಹನ ಹಾಗೂ ಬಣ್ಣಗಳೊಂದಿಗೆ ಸಂಭ್ರಮಿಸುವುದು ಆರಂಭವಾಯಿತು.

Holi 2023 Wishes: ಸರ್ವರಿಗೂ ಹೋಳಿ ಹಬ್ಬದ ಶುಭಾಶಯಗಳು..

ಶಿವನು ಕಾಮನನ್ನು ಸುಟ್ಟ ದಿನ
ಅದೇ ದಿನ ಶಿವನು ತನ್ನ ತಪಸ್ಸನ್ನು ಭಂಗಗೊಳಿಸಿದ ಕಾಮನನ್ನು ಸುಟ್ಟದಿನವೆನ್ನುತ್ತದೆ ಇನ್ನೊಂದು ದಂತ ಕತೆ. ತನ್ನ ತಂದೆಯು ಆಯೋಜಿಸಿದ್ದ ಯಾಗಕ್ಕೆ ಪತಿ ಶಿವನನ್ನು ಅಮಂತ್ರಿಸದಿದ್ದುದರಿಂದ ಅವಮಾನಿತಳಾಗಿ, ಸತಿಯು ಯಾಗದ ಬೆಂಕಿಗೆ ಹಾರಿ ಆತ್ಮಾಹುತಿ ಮಾಡಿಕೊಳ್ಳುತ್ತಾಳೆ. ಶಿವ ಕ್ರೋಧಗೊಳ್ಳುತ್ತಾನೆ. ದೇವತೆಗಳು ಮನವೊಲಿಸಿ ಅವನನ್ನು ಶಾಂತವಾಗಿಸುತ್ತಾರೆ. ಆತ ಗಂಗಾ ತೀರದಲ್ಲಿ ತಪಸ್ಸಿಗೆ ಕೂರುತ್ತಾನೆ. ಈ ನಡುವೆ ತಾರಕಾಸುರನೆಂಬ ರಾಕ್ಷಸನು ಬ್ರಹ್ಮನಿಂದ ತನಗೆ ಸಾವು ಬರುವುದಾದರೆ, ಅದು ಶಿವನ ಮಗನಿಂದ ಮಾತ್ರ ಬರೆಬೇಕೆಂದು ವರ ಪಡೆದು, ದೇವತೆಗಳನ್ನೇ ಹಿಂಸಿಸುತ್ತಾನೆ. ತಮ್ಮನ್ನು ಕಾಪಾಡಲು ಶಿವನೊಬ್ಬನಿಗೇ ಸಾಧ್ಯವೆಂದರಿತ ದೇವತೆಗಳು ಶಿವನನ್ನು ತಪಸ್ಸಿನಿಂದ ಎಬ್ಬಿಸಲು ಕಾಮದೇವನನ್ನು ಕಳಿಸುತ್ತಾರೆ. ಆತ ಶಿವನ ಎದೆಗೆ ಹೂವಿನ ಬಾಣವನ್ನು ಹೂಡುತ್ತಾನೆ. ಇದರಿಂದ ಶಿವನ ತಪಸ್ಸು ಭಂಗವಾಗುತ್ತದೆ. ಸಿಟ್ಟಿನಿಂದ ಶಿವ, ಮೂರನೇ ಕಣ್ಣನ್ನು ತೆರೆದು ಕಾಮದೇವನನ್ನು ಸುಟ್ಟು ಬೂದಿ ಮಾಡುತ್ತಾನೆ. ಬಳಿಕ ಕಾಮದೇವನ ಪತ್ನಿ ರತಿಯು ಇದರಲ್ಲಿ ಕಾಮನ ತಪ್ಪೇನೂ ಇಲ್ಲ, ಆತ ತನಗೆ ವಹಿಸಿದ್ದ ಜವಾಬ್ದಾರಿಯನ್ನು ಮಾತ್ರ ನಿರ್ವಹಿಸಿದ್ದಾನೆ. ಹಾಗಾಗಿ ತನ್ನ ಪತಿಯ ಪ್ರಾಣವನ್ನು ಉಳಿಸಿ ಎಂದು ಅಂಗಲಾಚುತ್ತಾಳೆ. ಕರುಣೆಗೊಂಡ ಶಿವ ಅವನನ್ನು ಜೀವಿತನನ್ನಾಗಿಸುತ್ತಾನೆ. ಕಾಮನನ್ನು ಸುಟ್ಟದ್ದಕ್ಕಾಗಿ ಹಾಗೂ ಅವನಿಗೆ ಮರಳಿ ಜೀವ ಕರುಣಿಸಿದ್ದಕ್ಕಾಗಿ ಜನ ಪರಸ್ಪರ ಬಣ್ಣ ಎರಚಿ ಸಂಭ್ರಮಿಸುವ ಸಂಪ್ರದಾಯ ಅಂದಿನಿಂದಲೇ ಆರಂಭವಾಯಿತಂತೆ.

ಹೀಗಾಗಿ, ಅನೇಕ ಕಡೆಗಳಲ್ಲಿ ಹೋಲಿಕಾ ಜೊತೆಗೆ ಕಾಮನ ಮೂರ್ತಿಯನ್ನೂ ದಹಿಸುತ್ತಾರೆ. ಹೀಗೆ ಬೆಂಕಿ ಹಾಕುವುದು, ವೈಜ್ಞಾನಿಕವಾಗಿ ಚಳಿಗಾಲ ದುರ್ಬಲಗೊಂಡು, ಬೇಸಿಗೆ ಆರಂಭವಾಗುವ ಸಂಧಿ ಕಾಲದಲ್ಲಿ ಚಳಿಗಾಲದ ಕ್ರಿಮಿ, ಕೀಟಗಳನ್ನು ನಾಶಪಡಿಸಲು ಕೂಡ ಸಹಕಾರಿ.

700 ವರ್ಷಗಳ ಬಳಿಕ 5 ರಾಜಯೋಗಗಳ ಸಮ್ಮಿಲನ; 4 ರಾಶಿಗಳ ಆಸ್ತಿಯಲ್ಲಿ ಏರಿಕೆ

ಆಚರಣೆ ಮಾಡುವುದು ಹೇಗೆ?
ಹೋಳಿಯ ಮುನ್ನಾ ದಿನ ಚೋಟಿ ಹೋಳಿಯಂದು ಹೋಲಿಕಾ ದಹನ ಮಾಡಲಾಗುತ್ತದೆ. ಇದಕ್ಕಾಗಿ ಮನೆ ಮಂದಿಯೆಲ್ಲ ಒಟ್ಟಿಗೆ ಸೇರಿ ಕಟ್ಟಿಗೆಗಳನ್ನು ಜೋಡಿಸಿ, ಬೆಂಕಿ ಹಾಕುತ್ತಾರೆ. ಹೋಳಿಯ ಸುತ್ತ ಪ್ರದಕ್ಷಿಣೆ ಹಾಕುತ್ತ, ಅಕ್ಕಿ, ಗೋಧಿ, ಅರಿಶಿನ, ಬತ್ತಾಸುಗಳನ್ನು ಅಗ್ನಿಗೆ ಅರ್ಪಿಸುತ್ತಾರೆ. ಡೋಲು ಬಾರಿಸುತ್ತ, ಹಾಡು ಹೇಳುತ್ತ, ನೃತ್ಯ ಮಾಡುತ್ತಾರೆ. ಇದು ನಡು ರಾತ್ರಿಯವರೆಗೆ ಸಾಗುತ್ತದೆ. ಹೋಲಿಕಾ ದಹನದ ಬೂದಿಯನ್ನು ಹಣೆಗೆ ಹಚ್ಚಿಕೊಳ್ಳುತ್ತಾರೆ, ಮನೆಗೂ ಕೊಂಡೊಯ್ಯುತ್ತಾರೆ.

ಹೋಳಿಯ ದಿನ ಬಣ್ಣಗಳೊಂದಿಗೆ ಸಂಭ್ರಮಾಚರಣೆ. ಹಿರಿಯರು, ಕಿರಿಯರೆನ್ನದೆ ಎಲ್ಲರೂ ಬಣ್ಣಗಳ ಪೊಟ್ಟಣಗಳನ್ನು ಹಿಡಿದು ಮನೆ, ಮನೆಗೆ ಸಾಗುತ್ತಾರೆ. ಕಿರಿಯರು ಬಲೂನು, ಪಿಚಕಾರಿಗಳಲ್ಲೂ ಬಣ್ಣದ ನೀರನ್ನು ತುಂಬಿಕೊಂಡು ದಾರಿಹೋಕರ ಮೇಲೆಯೂ ರಂಗಿನ ಅಭಿಷೇಕ ಮಾಡುತ್ತಾರೆ. ಅದೇ ಸಮಯದಲ್ಲಿ ಮಕ್ಕಳು, ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಕೇಳುತ್ತಾರೆ. ಯಾವುದೇ ಕಾರಣಕ್ಕೆ ಮುನಿಸಿಕೊಂಡವರಿದ್ದರೆ, ಅವರನ್ನು ಆಲಿಂಗಿಸಿಕೊಂಡು, ಹಳೆಯ ಕಹಿ ಘಟನೆಯನ್ನು ಮರೆಯುತ್ತಾರೆ.

Latest Videos
Follow Us:
Download App:
  • android
  • ios