ಮಹಾಕುಂಭಮೇಳದಲ್ಲಿ ಸ್ಟೀವ್ ಜಾಬ್ಸ್ ಪತ್ನಿಯ ಕಲ್ಪವಾಸ ವ್ರತ! ಏನಿದರ ಮಹತ್ವ?
ಆಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪಾವೆಲ್ ಜಾಬ್ಸ್, ಮಹಾ ಕುಂಭ ಮೇಳದಲ್ಲಿ ಭಾಗವಹಿಸಿ ಕಲ್ಪವಾಸ ವ್ರತ ಆಚರಿಸಲಿದ್ದಾರೆ. ಪ್ರಯಾಗರಾಜ್‌ನಲ್ಲಿ ನಡೆಯುವ ಈ ಮೇಳದಲ್ಲಿ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ, ತಾತ್ಕಾಲಿಕ ಡೇರೆಗಳಲ್ಲಿ ವಾಸಿಸಿ, ಜಪ, ಧ್ಯಾನಗಳಲ್ಲಿ ನಿರತರಾಗಲಿದ್ದಾರೆ.
ಆಪಲ್ ಸಂಸ್ಥೆಯ ಸಹ ಸಂಸ್ಥಾಪಕ ದಿವಂಗತ ಸ್ಟೀವ್ ಜಾಬ್ಸ್ ಪತ್ನಿ ಲಾರೆನ್ ಪಾವೆಲ್ ಅವರು ಭಾರತದ ಅತ್ಯಂತ ಪ್ರಸಿದ್ಧ ಧಾರ್ಮಿಕ ಸಮಾವೇಶ ಮಹಾ ಕುಂಭ ಮೇಳದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಅವರು ಕಲ್ಪವಾಸ ವ್ರತವನ್ನು ಕೂಡ ಮಾಡಲಿದ್ದಾರಂತೆ. ಕೋಟ್ಯಾಂತರ ಸಂಖ್ಯೆಯಲ್ಲಿ ಸಾಧುಗಳು ಸಂತರು ನಾಗಾ ಬಾಬಾಗಳು ಅಗೋರಿಗಳು ಭಕ್ತರು ಸೇರುವ ಹಿಂದೂ ಧಾರ್ಮಿಕ ಕಾರ್ಯಕ್ರಮಕ್ಕೆ ಈಗ ಈ ಮೂಲಕ ಅಂತಾರಾಷ್ಟ್ರೀಯ ಸ್ಟಾರ್ ಟಚ್ ಕೂಡ ದೊರೆತಿದೆ.
ಕುಂಭಮೇಳದಲ್ಲಿ ಮಾಡಲಾಗುವ ಕಲ್ಪವಾಸ ವ್ರತಕ್ಕೆ ವಿಶೇಷ ಮಹತ್ವ ಇದೆ. ಪುರಾತನ ಹಿಂದೂ ಗ್ರಂಥಗಳಾದ ಮಹಾಭಾರತ ಮತ್ತು ರಾಮಚರಿತಮಾನಸಗಳಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಇದು ಸ್ವಯಂ ಶುದ್ಧೀಕರಣಕ್ಕಾಗಿ ಮತ್ತು ಆಳವಾದ ಆಧ್ಯಾತ್ಮಿಕ ಅಭ್ಯಾಸಕ್ಕಾಗಿ ಮಾಡುವ ಪವಿತ್ರ ಸಂಪ್ರದಾಯ. ಸ್ವಯಂ ಶಿಸ್ತು ಮತ್ತು ಆಧ್ಯಾತ್ಮಿಕ ಶುದ್ಧೀಕರಣದ ಸಮಯವಿದು.
ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಅವರು ಜನವರಿ 13 ರಂದು ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಮಹಾಕುಂಭಕ್ಕೆ ಆಗಮಿಸುವ ಸಾಧ್ಯತೆಯಿದೆ ಮತ್ತು ಅವರು ನಿರಂಜನಿ ಅಖಾರದ 'ಮಹಾಮನಾದ್ಲೇಶ್ವರ' ಸ್ವಾಮಿ ಕಲಿಯಾಶಾನಂದ ಅವರ ಶಿಬಿರದಲ್ಲಿ ತಂಗಲಿದ್ದಾರೆ. ಕೆಲ ವರದಿಗಳ ಪ್ರಕಾರ ಅವರು ಜನವರಿಯವರೆಗೂ ಈ ಮಹಾಕುಂಭ ಮೇಳದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೇ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಈ ವ್ರತವನ್ನು ಮಾಡುವ ಭಕ್ತರನ್ನು ʼಕಲ್ಪವಾಸಿʼಗಳೆಂದು ಕರೆಯಲಾಗುತ್ತದೆ. ಈ ಭಕ್ತರು ಪವಿತ್ರ ನದಿಗಳ ಸಂಗಮ ಸ್ಥಳಕ್ಕೆ ಆಗಮಿಸುವಾಗ ಈ ವ್ರತ ಪ್ರಾರಂಭವಾಗುತ್ತದೆ. ಇಲ್ಲಿ ಇವರು ತಾತ್ಕಾಲಿಕ ಡೇರೆಗಳಲ್ಲಿ ವಾಸಿಸುತ್ತಾರೆ. ಪ್ರಾಪಂಚಿಕ ವಿಶೇಷ ಸೌಕರ್ಯಗಳನ್ನು ತ್ಯಜಿಸುತ್ತಾರೆ. ಜಪ, ಧ್ಯಾನಗಳಲ್ಲಿ ನಿರತರಾಗುತ್ತಾರೆ. ವಿಶೇಷ ತಾಂತ್ರಿಕ ಪೂಜೆಗಳೂ ನಡೆಯಬಹುದು. ಕಲ್ಪವಾಸಿಗಳು ಪ್ರತಿದಿನ ಆಚರಿಸುವ ಪ್ರಮುಖ ಆಚರಣೆಗಳಲ್ಲಿ ಒಂದು ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವುದು. ಇದು ಶುದ್ಧೀಕರಣ ಮತ್ತು ಭಕ್ತಿಯನ್ನು ಸಂಕೇತಿಸುತ್ತದೆ. ಇದು ಭಕ್ತರ ಸಂಯಮ ಮತ್ತು ಆತ್ಮಾವಲೋಕನದ ಅವಧಿ. ಇದು ಭಕ್ತರಲ್ಲಿ ಆಧ್ಯಾತ್ಮಿಕ ಬೆಳವಣಿಗೆ ಮತ್ತು ಹೊಸತನವನ್ನು ತರುತ್ತದೆ.
ಸಾಮಾನ್ಯವಾಗಿ ಇದು ನಡೆಯುವುದು ಪುಷ್ಯ ಪೂರ್ಣಿಮೆಯಿಂದ ಮಾಘ ಪೂರ್ಣಿಮೆಯವರೆಗೆ. ಕಲ್ಪವಾಸವನ್ನು ಸಾಮಾನ್ಯವಾಗಿ ಗಂಗಾ ನದಿಯಂತಹ ಪವಿತ್ರ ನದಿಯ ದಡದಲ್ಲಿ ನೆರವೇರಿಸಲಾಗುತ್ತದೆ. ಕುಂಭಮೇಳದ ಸಮಯದಲ್ಲಿ ಇದನ್ನು ಮಾಡುವುದು ಮಹಾ ಪುಣ್ಯದಾಯಕ. ಕಲ್ಪವಾಸಿಗಳು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ತಾತ್ಕಾಲಿಕ ಡೇರೆಗಳನ್ನು ಸ್ಥಾಪಿಸಿ ಇರುತ್ತಾರೆ.
ಸಂಗಮದಲ್ಲಿ ಸ್ನಾನ ಮಾಡುವುದು, ಆಧ್ಯಾತ್ಮಿಕ ಪ್ರವಚನಗಳಿಗೆ ಹಾಜರಾಗುವುದು, ಕೀರ್ತನೆಗಳನ್ನು ಕೇಳುವುದು, ಭಜನೆ ಮಾಡುವುದು, ಪ್ರಾರ್ಥನೆ, ಧ್ಯಾನ ಮತ್ತು ಜಪ, ಬಂದ ಭಕ್ತರಿಗೆ ಯಾವುದಾದರೂ ಸೇವೆಗಳನ್ನು ಒದಗಿಸುವುದು ಮುಂತಾದ ದೈನಂದಿನ ಆಚರಣೆಗಳಲ್ಲಿ ಕಲ್ಪವಾಸ ಭಕ್ತರು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.
ಕಲ್ಪವಾಸಿಗಳಿಗೆ ಕಟ್ಟುನಿಟ್ಟಾದ ಆಹಾರದ ವಿಧಿ ಇದೆ. ಕೆಲವರು ಉಪವಾಸ ಮಾಡಬಹುದು, ಕೆಲವರು ದಿನಕ್ಕೆ ಒಮ್ಮೆ ಮಾತ್ರ ತಿನ್ನಬಹುದು, ಕೆಲವರಿಗೆ ನೀರಿನ ವ್ರತ ಇರಬಹುದು. ಅಂದರೆ ನೀರು ಮಾತ್ರ ಕುಡಿಯಬಹುದು. ಆಹಾರ ಸೇವಿಸುವವರು ಸಾತ್ವಿಕ ಆಹಾರ ಮಾತ್ರ ಸೇವಿಸಬೇಕು. ಮಾಘ ಪೂರ್ಣಿಮೆಯಂದು, ಕೊನೆಯ ಪ್ರಮುಖ ಸ್ನಾನದ ದಿನ, ಕಲ್ಪವಾಸಿಗಳು ಕೆಲವು ವಿಶೇಷ ಆಚರಣೆಗಳನ್ನು ಮಾಡಿ ವ್ರತವನ್ನು ದೇವರಿಗೆ ಸಮರ್ಪಿಸುತ್ತಾರೆ.
ಒಂದು ತಿಂಗಳ ಕಾಲ ಮಹಾಕುಂಭ ಮೇಳದಲ್ಲಿ ಭಾಗಿಯಾಗಲಿರುವ ದಿ. ಸ್ಟೀವ್ ಜಾಬ್ ಪತ್ನಿ
ಈ ವ್ರತದ ಅರ್ಥ ಹಗೂ ಮಹತ್ವ ಏನು? ʼಕಲ್ಪʼ ಎಂದರೆ ಬ್ರಹ್ಮನ ಜೀವನದಲ್ಲಿ ಒಂದು ದಿನ. ಅಂದರೆ ಸಾವಿರಾರು ಕೋಟಿ ವರ್ಷಗಳಾಗುತ್ತವೆ. ಕಲ್ಪವನ್ನು ಆಚರಿಸುವುದರಿಂದ ಭಕ್ತರು ತಮ್ಮ ಹಿಂದಿನ ಜನ್ಮಜನ್ಮಾಂತರಗಳ ಪಾಪದಿಂದಲೂ ಮುಕ್ತರಾಗುತ್ತಾರೆ ಎನ್ನಲಾಗಿದೆ. ಇದು ಪಾಪಗಳನ್ನು ಜಯಿಸಲು ಮತ್ತು ಜನ್ಮ ಮತ್ತು ಕ್ರಿಯೆಗಳ ಚಕ್ರದಿಂದ ಪಾರಾಗಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಮಹಾಭಾರತ ಮತ್ತು ರಾಮಚರಿತಮಾನಸ ಸೇರಿದಂತೆ ಹಲವಾರು ಪ್ರಾಚೀನ ಹಿಂದೂ ಗ್ರಂಥಗಳಲ್ಲಿ ಕಲ್ಪವಾಸ್ ಅನ್ನು ಹೈಲೈಟ್ ಮಾಡಲಾಗಿದೆ. ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹತ್ವದ ಆಧ್ಯಾತ್ಮಿಕ ಘಟನೆಯಾದ ಕುಂಭಮೇಳದ ಸಮಯದಲ್ಲಿ ಇದು ವಿಶೇಷವಾಗಿ ಪ್ರಾಮುಖ್ಯತೆಯನ್ನು ಹೊಂದಿದೆ.
ಕುಂಭಮೇಳದ ವಿಚಿತ್ರ ಸಾಧುಗಳು: 32 ವರ್ಷಗಳಿಂದ ಕೈ ಎತ್ತಿರುವ ಸಾಧು, ಸ್ನಾನವನ್ನೇ ಮಾಡದ ಬಾಬಾ!