Asianet Suvarna News Asianet Suvarna News

Diwali 2022: 'ನೀರ್ ತುಂಬೋ ಹಬ್ಬ' ಏಕೆ, ಹೇಗೆ, ಯಾವಾಗ?

ದೀಪಾವಳಿ ಆರಂಭವಾಗೋದೇ ಎರ್ಕಳೋ ಹಬ್ಬದಿಂದ. ಏನಿದು ನೀರ್ ತುಂಬೋ ಹಬ್ಬ? ಈ ಆಚರಣೆಯ ಹಿನ್ನೆಲೆಯೇನು? ಈ ದಿನ ನೀವೇನು ಮಾಡಬೇಕು?

What is the purpose of 'neer tumbo habba' during Deepavali skr
Author
First Published Oct 18, 2022, 11:22 AM IST | Last Updated Oct 18, 2022, 11:22 AM IST

ನರಕ ಚತುರ್ದಶಿಯ ಹಿಂದಿನ ದಿನವನ್ನು ತಾಂತ್ರಿಕವಾಗಿ 'ಜಲ ಪೂರ್ಣ ತ್ರಯೋದಶಿ' ಎಂದು ಕರೆಯಲಾಗುತ್ತದೆ. ಇದನ್ನೇ ಕರ್ನಾಟಕದಲ್ಲಿ ನೀರ್ ತುಂಬೋ ಹಬ್ಬ ಎಂದು ಆಚರಿಸಲಾಗುತ್ತದೆ. ಇದಕ್ಕೆ ಎರ್ಕಳೋ ಹಬ್ಬ ಅಂತಲೂ ಹೇಳ್ತಾರೆ. ಆಶ್ವೀಜ ಶುದ್ಧ ತ್ರಯೋದಶಿಯಂದು ನೀರು ತುಂಬುವ ಈ ಹಬ್ಬದ ಆಚರಣೆ ಮಾಡಲಾಗುತ್ತದೆ. ಈ ದಿನ ಎಲ್ಲೆಡೆ ಜನರು ಬೇಗ ಎದ್ದು ಮೈಗೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುತ್ತಾರೆ. ಕೇವಲ ಸ್ನಾನ ಮಾಡುವುದಷ್ಟೇ ಅಲ್ಲ, ಈ ಹಬ್ಬದ ಹಿನ್ನೆಲೆ , ಆಚರಣೆ ವಿಧಾನ ಎಲ್ಲವೂ ವಿಶಿಷ್ಟವಾಗಿದ್ದು, ಅರ್ಥಪೂರ್ಣವಾಗಿದೆ. 

ದೀಪಾವಳಿ(Deepavali 2022)ಯ ಮೊದಲ ದಿನವಾದ ಈ ದಿನಕ್ಕೂ ಮೊದಲೇ ಮನೆಯೆಲ್ಲವನ್ನೂ ಜನರು ಸ್ವಚ್ಛ ಮಾಡಿರುತ್ತಾರೆ. ಕೆಲವರು ಸುಣ್ಣಬಣ್ಣ ಕೂಡಾ ಹೊಡೆಸಿ ಇಂದು ಮನೆಯನ್ನು ಮಾವಿನ ಎಲೆಗಳಿಂದ, ತಳಿರುತೋರಣ, ಹೂಗಳಿಂದ ಅಲಂಕರಿಸುತ್ತಾರೆ. ನಂತರ ಬೆಳಗ್ಗೆ ಬೇಗ ಎದ್ದು, ಹಂಡೆಯನ್ನು ಸ್ವಚ್ಛಗೊಳಿಸಿ, ಅಲಂಕರಿಸಲಾಗುತ್ತದೆ. ಈ ಹಂಡೆಯ ಪೂಜೆ ಮಾಡುವ ಮೂಲಕ ಸ್ನಾನಕ್ಕಾಗಿ ನೀರನ್ನು ಸಿದ್ಧಪಡಿಸುವ ಹಬ್ಬ ಇದಾಗಿದೆ. 

ಹಿಂದಿನ ದಿನಗಳಲ್ಲಿ ಬಾಯ್ಲರ್ ಅಥವಾ ಸೋಲಾರ್ ವಾಟರ್ ಹೀಟರ್ ಇರಲಿಲ್ಲ. ಆಗ ಜನರು 'ಹಂಡೆ' ಎಂಬ ಬೆಂಕಿಯ ಒಲೆಗೆ ಶಾಶ್ವತವಾಗಿ ಜೋಡಿಸಲಾದ ಮಣ್ಣಿನ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡುತ್ತಿದ್ದರು. ಈಗ ನಗರಗಳಲ್ಲಿ ನಲ್ಲಿಯನ್ನು ಇಲ್ಲವೇ ಬಕೆಟ್‌ನಲ್ಲಿ ನೀರು ಹಿಡಿದು ಪೂಜೆ ಮಾಡಬಹುದು. 

ಎರ್ಕಳೋ ಹಬ್ಬ
ಹಬ್ಬದ ಹಿಂದಿನ ದಿನ ರಾತ್ರಿಯೇ ಹಂಡೆ ಇಲ್ಲವೇ ಬಕೆಟ್‌ಗೆ ನೀರು ತುಂಬಿಸಿ ಸುತ್ತಲೂ ಅರಿಶಿನಣದ ಬೇರಿನ ದಾರ ಕಟ್ಟಬೇಕು. ಈ ನೀರಿಗೆ ತುಳಸಿ, ಗೋಮಯ ಹಾಕಬೇಕು. ಇದರಿಂದ ನೀರನ್ನು ತೆಗೆದುಕೊಂಡು ಗಂಗೆಪೂಜೆ ಮಾಡಬೇಕು. ದೇವರ ಎದುರು ಪಾತ್ರೆಯಲ್ಲಿ ನೀರಿಟ್ಟು ಅದು ಗಂಗೆಯ ಸ್ವರೂಪ ಎಂದು ಭಾವಿಸಿ ಪೂಜಿಸಬೇಕು. ಈ ಪಾತ್ರೆಯನ್ನು ಅಲಂಕರಿಸಿ ತುಳಸಿ ಮತ್ತು ದೇವರ ಮುಂದೆ ದೀಪ ಹಚ್ಚಿ ಪೂಜೆ ನೆರವೇರಿಸಿಬೇಕು. ಬಳಿಕ ಉತ್ತಮ ಆರೋಗ್ಯ, ಸಮೃದ್ಧಿ ಮತ್ತು ಭರತ ಖಂಡದ ಮೇಲೆ ಶಾಂತಿಗಾಗಿ ಪ್ರಾರ್ಥಿಸಿ.

ಗ್ರಹಣ ಕಾಲದಲ್ಲಿ ಮಾಡುವ ದಾನದ ಪುಣ್ಯ ಸಹಸ್ರ ಪಟ್ಟಾಗುವುದು!

 ಮನೆಯ ಹಿರಿಯ ಮಹಿಳೆ ಇಲ್ಲವೆ ವಿವಾಹಿತ ಮಹಿಳೆಯು ಮರುಬೆಳಗ್ಗೆ ಮೊದಲು ಮೈಗೆ ಎಣ್ಣೆ ಹಚ್ಚಿಕೊಂಡು ನಂತರ ಸ್ನಾನ ಮಾಡಬೇಕು. ಇದನ್ನು 'ನಾರೀ ಕೃತ ನೀರಾಜನ' ಎಂದು ಕರೆಯಲಾಗುತ್ತದೆ. ನಂತರ ಮನೆಯ ಎಲ್ಲ ಸದಸ್ಯರೂ ಮೈಗೆ ಎಣ್ಣೆ ಹಚ್ಚಿಕೊಂಡು ಬಿಸಿಯಾದ ನೀರಿನಲ್ಲಿ ಸ್ನಾನ ಮಾಡಬೇಕು. ಸಾಂಪ್ರದಾಯಿಕವಾಗಿ ಮೈಯ್ಯ ಎಣ್ಣೆ ತೆಗೆಯಲು ಅಂಟ್ವಾಳ ಸೀಗೇಕಾಯಿ ಬಳಸಲಾಗುತ್ತದೆ. 

ಯಮದೀಪ ದಾನ
ಇದೇ ದಿನ ಸಂಜೆ ಮಣ್ಣಿನ ಹಣತೆಯನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿಟ್ಟು ಹಚ್ಚಬೇಕು. ಈ ದೀಪ ಮಾರನೇ ದಿನ ಅರುಣೋದಯ ಕಾಲದತನಕ ಉರಿಯುವಂತೆ ನೋಡಿಕೊಳ್ಳಬೇಕು. ಮನೆಯ ಎತ್ತರದ ಭಾಗದಲ್ಲಿ ಇದನ್ನು ಹಚ್ಚುವುದರಿಂದ ಇದನ್ನು ಆಕಾಶದೀಪ ಎನ್ನುತ್ತಾರೆ. ಗಗನಮಾರ್ಗದಲ್ಲಿ ಸಂಚರಿಸುವ ಪಿತೃದೇವತೆಗಳಿಗೆ ದಾರಿ ತೋರಿಸುವ ಉದ್ದೇಶ ಈ ದೀಪದ್ದು. ಅಲ್ಲದೆ ಅಕಾಲ ಮೃತ್ಯುವಿನಿಂದ ಕಾಪಾಡುವಂತೆ ಯಮನಲ್ಲಿ ಕೋರಿ ಹಚ್ಚುವುದಾಗಿದೆ. ಇದೊಂದೇ ಸಂದರ್ಭದಲ್ಲಿ ದೀಪವನ್ನು ದಕ್ಷಿಣ ದಿಕ್ಕಿನಲ್ಲಿಟ್ಟು ಹಚ್ಚಲಾಗುತ್ತದೆ. ನಂತರ, 
ಮೃತ್ಯುನಾ ಪಾಶದಂಡಾಭ್ಯಾಂ ಕಾಲೇನ ಶ್ಯಾಮಯಾಸಹ |
ತ್ರಯೋದಶ್ಯಾಂ ದೀಪದಾನಾತ್ ಸೂರ್ಯಜಃ ಪ್ರೀಯತಾಂ ಮಮ |
ಎಂಬ ಮಂತ್ರ ಹೇಳಿಕೊಳ್ಳಿ. 

Diwali 2022: ಲಕ್ಷ್ಮೀ ಪೂಜೆಯ ರಾತ್ರಿ ಈ ರೀತಿ ಮಾಡಿದ್ರೆ ಪೂರ್ಣಫಲ

ಉತ್ತರ ಕರ್ನಾಟಕದ ಕಡೆ ನೀರು ತುಂಬೋ ಹಬ್ಬದ ದಿನ ಸಂಜೆ ಭರಮನನ್ನು ಪೂಜಿಸಲಾಗುತ್ತದೆ. ಭರಮನು ನಾಗದೇವನ ಅವತಾರಗಳಲ್ಲಿ ಒಂದೆಂದೂ, ಪ್ರತಿ ಕುಟುಂಬವನ್ನು ರಕ್ಷಿಸಲು ಆತನಿದ್ದಾನೆಂಬ ನಂಬಿಕೆ ಇಲ್ಲಿದ್ದು, ಈ ಸಮಯದಲ್ಲಿ ಆತನ ಕಾರ್ಯಕ್ಕೆ ಕೃತಜ್ಞತೆ ಅರ್ಪಿಸಲಾಗುತ್ತದೆ. 

ಎರ್ಕಳೋ ಹಬ್ಬಕ್ಕೂ ಉಂಟು ಪೌರಣಿಕ ಹಿನ್ನೆಲೆ
ಜನರು, ಗೋವುಗಳು ಮತ್ತು ಗೋಪಿಕರನ್ನು ಪೀಡಿಸುತ್ತಿದ್ದ ನರಕಾಸುರನೊಡನೆ ಕೃಷ್ಣನು ಹೋರಾಡಿ ಸಂಹರಿಸಿದನು. ನರಕಾಸುರನ ಮರಣದ ನಂತರ, ನರಕಾಸುರನ ಬಲವಂತದ ಪ್ರಭಾವದಿಂದ ಸಂಪಾದಿಸಿದ ಯಾವುದೇ ಪಾಪಗಳನ್ನು ತೊಡೆದು ಹಾಕಲು, ಸಕಲವನ್ನೂ ಶುದ್ಧೀಕರಿಸುವ ಅಗತ್ಯವನ್ನು ಕೃಷ್ಣನು ಭಾವಿಸಿದನು. ಆಗ ಅವನು ಅಭ್ಯಂಜನವನ್ನು ಪ್ರಸ್ತಾಪಿಸಿದನು. ಹೀಗಾಗಿ ನರಕ ಚತುರ್ದಶಿಗೂ ಮುನ್ನ ನಮ್ಮ ಸುತ್ತಮುತ್ತ ಸ್ವಚ್ಛಗೊಳಿಸುವ ಜೊತೆಗೆ, ನಮ್ಮನ್ನೂ ಹೆಚ್ಚು ಶುದ್ಧರಾಗಿಸಿಕೊಳ್ಳುವ ಅಭ್ಯಂಜನ ಸ್ನಾನ ಚಾಲ್ತಿಗೆ ಬಂತೆನ್ನಲಾಗುತ್ತದೆ. ಇನ್ನು, ವೈಜ್ಞಾನಿಕವಾಗಿ ನೋಡಿದರೆ ಚಳಿಗಾಲದ ಆರಂಭ ಕಾಲ ಇದಾದ್ದರಿಂದ ಈ ಸಮಯದಲ್ಲಿ ದೇಹ, ಮನಸ್ಸು ತಾಜಾವಾಗಿರಲು, ಶುಷ್ಕ ತ್ವಜೆಯಿಂದ ರಕ್ಷಿಸಿಕೊಳ್ಳಲು ಎಣ್ಣೆ ಸ್ನಾನ ಉತ್ತಮ ಮಾರ್ಗವಾಗಿದೆ. ಇದರ ಬಳಿಕ ತಾಜಾತನದ ಉತ್ಸಾಹದಲ್ಲಿ ಹಬ್ಬದಲ್ಲಿ ಭಾಗಿಯಾಗಬಹುದು. 

27 ವರ್ಷಗಳ ನಂತರ ದೀಪಾವಳಿಯಂದು ಸೂರ್ಯಗ್ರಹಣ… ಪರಿಣಾಮವೇನು?

ಎಲ್ಲಾ ಹಬ್ಬಗಳ ಉದ್ದೇಶವು ನೆರೆಹೊರೆಯವರನ್ನು ಭೇಟಿಯಾಗುವುದು, ಎಲ್ಲ ಕಹಿ ಅನುಭವಗಳು, ಜಗಳಗಳನ್ನು ಮರೆತು ಜನರ ತಪ್ಪುಗಳನ್ನು ಕ್ಷಮಿಸುವುದು, ಸಂತೋಷವನ್ನು ತರಲು ಮತ್ತು ಒಗ್ಗಟ್ಟಿನ ಭಾವನೆಯನ್ನು ನೀಡವುದಾಗಿದೆ.  ದೀಪಾವಳಿ ಕೂಡಾ ಇದಕ್ಕೆ ಪೂರಕವಾಗಿದೆ. 

Latest Videos
Follow Us:
Download App:
  • android
  • ios