ಕನ್ಯಾ ಸಂಸ್ಕಾರದ ವಿಶೇಷವೇನು? ಮಂತ್ರ ಪಠಣದಿಂದ ಹೆಣ್ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕೆ ಒಳ್ಳೇದಾ?
ವೇದ ಕಾಲದಲ್ಲಿ ಜಾರಿಯಲ್ಲಿದ್ದ ಅನೇಕ ಪದ್ಧತಿ ಈಗ ನಶಿಸಿ ಹೋಗಿದೆ. ಅದ್ರಲ್ಲಿ ಕನ್ಯೆಯರಿಗೆ ನೀಡುವ ಕನ್ಯಾಸಂಸ್ಕಾರ ಕೂಡ ಒಂದು. ಈಗ ಮತ್ತೆ ಈ ಪದ್ಧತಿ ಶುರುವಾಗ್ತಿದ್ದು, ಹಾಗಂದ್ರೆ ಏನು,ಅದರ ಲಾಭವೇನು ಎಂಬ ವಿವರ ಇಲ್ಲಿದೆ.
ಹೆಣ್ಣು ಸಂಸಾರದ ಕಣ್ಣು ಎನ್ನುವ ಮಾತಿದೆ. ಹೆಣ್ಣಿಗೆ ನಮ್ಮ ಸಮಾಜದಲ್ಲಿ ದೊಡ್ಡ ಸ್ಥಾನ ನೀಡಲಾಗಿದೆ. ಹೆಣ್ಣೊಬ್ಬಳು ಕಲಿಯೋದು ಎಷ್ಟು ಮುಖ್ಯವೋ ಆಕೆ ಸಂಸ್ಕಾರವಂತೆ ಆಗೋದು ಕೂಡ ಅಷ್ಟೇ ಮುಖ್ಯ ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ಮಕ್ಕಳಿಗೆ ಸಂಸ್ಕಾರ ಮನೆಯಿಂದ ಬರುವಂತಹದ್ದು. ಮನೆಯಲ್ಲಿರುವ ಮಹಿಳೆ ಸಂಸ್ಕಾರವಂತಳಾದ್ರೆ ಆಕೆಯನ್ನು ನೋಡಿಯೇ ಮಕ್ಕಳು ಕಲಿಯುತ್ತಾರೆ. ಪ್ರತಿ ದಿನ ಬೆಳಿಗ್ಗೆ ಬೇಗ ಏಳುವುದ್ರಿಂದ ಹಿಡಿದು ಮನೆಯ ಹಿರಿಯರಿಗೆ ತಗ್ಗಿಬಗ್ಗಿ ನಡೆಯುವುದು, ಅವರನ್ನು ಗೌರವಿಸುವುದು ಎಲ್ಲವೂ ಸಂಸ್ಕಾರದಲ್ಲಿ ಬರುತ್ತದೆ. ಸದಾ ಮನೆಯಲ್ಲಿ ಲವಲವಿಕೆಯಿಂದ ಹೆಣ್ಮಕ್ಕಳು ಓಡಾಡ್ತಿದ್ದರೆ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎನ್ನುವ ಮಾತಿದೆ. ಈಗಿನ ದಿನಗಳಲ್ಲಿ ನಾವು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗ್ತಿದ್ದೇವೆ. ನಮ್ಮ ಸಂಸ್ಕೃತಿಯನ್ನು ನಾವು ಸಂಪೂರ್ಣ ಮರೆಯುತ್ತಿದ್ದೇವೆ. ಮನೆ ಮುಂದೆ ರಂಗೋಲಿ ಹಾಕೋದ್ರಿಂದ ಹಿಡಿದು ದೇವರ ಪೂಜೆ ಮಾಡುವವರೆಗೆ ಎಲ್ಲವನ್ನೂ ಜನರು ಗೊಡ್ಡು ಸಂಪ್ರದಾಯವೆಂದು ದೂರ ತಳ್ತಿದ್ದಾರೆ. ಆದ್ರೆ ಇದೆಲ್ಲವೂ ನಮ್ಮ ಅರಿವಿಲ್ಲದೆ ನಮಗೆ ಜ್ಞಾನ, ಮನೋಬಲ, ಚೈತನ್ಯ, ವಿವೇಕವನ್ನು ಕಲಿಸುತ್ತದೆ ಎಂಬ ಅರಿವು ನಮಗಿಲ್ಲ.
ಸಮಾಜದಲ್ಲಿ ಪುರುಷರ ಸಮಾನ ನಡೆಯುತ್ತಿರುವ ಮಹಿಳೆ (Women) ಗೆ ಶಿಕ್ಷಣದ ಜೊತೆ ಸಂಸ್ಕಾರ ಸಿಕ್ಕಲ್ಲಿ ಆಕೆ ಮತ್ತಷ್ಟು ಬಲಗೊಳ್ಳುತ್ತಾಳೆ ಎನ್ನುವುದು ನೂರಕ್ಕೆ ನೂರು ಸತ್ಯ. ಸಂಸ್ಕಾರವಂತ ಮಹಿಳೆ ತನ್ನ ಜೊತೆ ತನ್ನ ಸಮಾಜವನ್ನೂ ಉದ್ಧರಿಸುವ ಮಹಾನ್ ಕೆಲಸಕ್ಕೆ ಕೈ ಹಾಕ್ತಾಳೆ. ತಪ್ಪುಗಳನ್ನು ಆಕೆ ಸುಲಭವಾಗಿ ಅರ್ಥೈಸಿಕೊಳ್ತಾಳೆ. ಸರಿಯಾದ ಪಥದಲ್ಲಿ ನಡೆಯುವುದಲ್ಲದೆ ತನ್ನ ಮಕ್ಕಳಿಗೆ ಸರಿಯಾದ ನಡವಳಿಕೆ ಕಲಿಸುತ್ತಾಳೆ ಎನ್ನುವ ಕಾರಣಕ್ಕೆ ಹಿಂದಿನಿಂದ ರೂಢಿಯಲ್ಲಿದ್ದ ಆದ್ರೆ ಕೆಲ ವರ್ಷಗಳಿಂದ ನಶಿಸಿ ಹೋಗಿದ್ದ ಕನ್ಯಾಸಂಸ್ಕಾರ (Kanyasanskara) ಪದ್ಧತಿ ಮತ್ತೆ ಜಾರಿಗೆ ಬಂದಿದೆ.
ಸಾಲದ ಸುಳಿಯಲ್ಲಿ ಸಿಲುಕಿದ್ದೀರಾ? ಸಾಲವನ್ನು ತೊಡೆದುಹಾಕಲು ಈ ವಾಸ್ತು ಅನುಸರಿಸಿ
ಗಂಡು ಮಕ್ಕಳಿಗೆ ನಡೆಯುವ ಉಪನಯನಕ್ಕೆ ಸಮನಾದದ್ದು ಕನ್ಯಾ ಸಂಸ್ಕಾರ. ವೇದಕಾಲದಿಂದಲೂ ಈ ಪದ್ಧತಿ ಜಾರಿಯಲ್ಲಿತ್ತು. ಹೆಣ್ಣು ಮಕ್ಕಳಿಗೆ ಕನ್ಯಾ ಸಂಸ್ಕಾರ ಮಾಡಲಾಗ್ತಾಯಿತ್ತು. ಆದ್ರೆ ಕೆಲ ವರ್ಷಗಳಿಂದ ಆ ಪದ್ಧತಿ ನಶಿಸಿಹೋಗಿತ್ತು. ಈ ಕನ್ಯಾಸಂಸ್ಕಾರದ ಬಗ್ಗೆ ಬೋಧಾಯನ ಗೃಹ್ಯಸೂತ್ರದಲ್ಲೂ ವಿವರಣೆ ಇದೆ ಎನ್ನಲಾಗುತ್ತದೆ. ಬೋಧಾಯನ ಗೃಹ್ಯಸೂತ್ರವು ವೈದಿಕ ಸಂಸ್ಕೃತ ಪಠ್ಯಗಳ ಗುಂಪಾಗಿದೆ.
ಕನ್ಯಾ ಸಂಸ್ಕಾರದಲ್ಲಿ ಗಂಡು ಮಕ್ಕಳಿಗೆ ಮಾಡಿದಂತೆ ಉಪನಯನ ವಿಧಾನವನ್ನು ಅನುಸರಿಸಲಾಗುವುದಿಲ್ಲ. ಇಲ್ಲಿ ಮೊದಲು ಪಂಚಗವ್ಯ ಹವನವನ್ನು ಮಾಡಲಾಗುತ್ತದೆ. ನಂತ್ರ ಬೋಧಾಯನ ಗೃಹ್ಯಸೂತ್ರದ ಒಂದು ಮಂತ್ರವನ್ನು ಹೆಣ್ಣು ಮಕ್ಕಳಿಗೆ ಉಪದೇಶಿಸಲಾಗುತ್ತದೆ. ಇದನ್ನು ಆದಿತ್ಯ ಹೃದಯಂ ಎಂದು ಕರೆಯಲಾಗುತ್ತದೆ. ಈ ಮಂತ್ರೋಪದೇಶದ ನಂತ್ರ ಹೆಣ್ಣು ಮಕ್ಕಳು ಪ್ರತಿ ದಿನ ಈ ಮಂತ್ರವನ್ನು ಹೇಳಬೇಕು. ಪ್ರತಿ ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಎರಡೂ ಸಮಯ ಹೆಣ್ಣು ಮಕ್ಕಳು 108 ಬಾರಿ ಈ ಮಂತ್ರವನ್ನು ಹೇಳಬೇಕಾಗುತ್ತದೆ.
ಕನ್ಯಾ ಸಂಸ್ಕಾರದ ನಂತ್ರ ಹೆಣ್ಣು ಮಕ್ಕಳು ಪ್ರತಿ ದಿನ ಈ ಮಂತ್ರವನ್ನು ಜಪಿಸೋದ್ರಿಂದ ಸಾಕಷ್ಟು ಲಾಭವಿದೆ. ಅವರಲ್ಲಿ ನೀವು ಹೊಸ ಬದಲಾವಣೆಯನ್ನು ಕಾಣಬಹುದು. ಬೆಳಿಗ್ಗೆ ಹಾಗೂ ಸಂಜೆ ಸ್ನಾನ ಮಾಡಿ ಈ ಮಂತ್ರವನ್ನು ಹೇಳುವ ಹೆಣ್ಮಕ್ಕಳಲ್ಲಿ ತಾಳ್ಮೆ ಹೆಚ್ಚಾಗುತ್ತದೆ. ಎಲ್ಲ ಮಂತ್ರದಲ್ಲೂ ವಿಶೇಷ ಶಕ್ತಿ ಇರುತ್ತದೆ. ಕನ್ಯಾ ಸಂಸ್ಕಾರದ ಸಂದರ್ಭದಲ್ಲಿ ಬೋಧಿಸುವ ಈ ಮಂತ್ರ ಹೆಣ್ಣು ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ. ಅವರು ವಿದ್ಯೆಯಲ್ಲಿ ಒಂದು ಹೆಜ್ಜೆ ಮುಂದಿರುತ್ತಾರೆ. ಅವರ ನೆನಪಿನ ಶಕ್ತಿ (Memory Power) ಹೆಚ್ಚಾಗುತ್ತದೆ. ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲೂ ಸಾಕಷ್ಟು ಬದಲಾವಣೆಯನ್ನು ಅವರು ಕಾಣುತ್ತಾರೆ. ಸಾಮಾನ್ಯವಾಗಿ ಪಿರಿಯಡ್ಸ್ (Periods) ಆಗದ ಚಿಕ್ಕ ಮಕ್ಕಳಿಗೆ ಈ ಮಂತ್ರೋಪದೇಶ ನಡೆಯುತ್ತದೆ. ಬಾಲ್ಯದಿಂದಲೇ ಮಕ್ಕಳನ್ನು ಸಂಸ್ಕಾರದೆಡೆ ಸೆಳೆದ್ರೆ ಅವರ ಬಾಳು ಚೆನ್ನಾಗಿರುತ್ತದೆ ಎಂಬ ನಂಬಿಕೆ ಹಿಂದುಗಳದ್ದು.
ಈ ರಾಶಿಗೆ ತುಂಬಾ ಕೋಪವಂತೆ, ಅನಗತ್ಯವಾಗಿ ಸಮಸ್ಯೆ ಸಿಲುಕಬಹುದು