Asianet Suvarna News

ಶಕುನಿ ಮೋಸ ಮಾಡಿದ್ದು ಧರ್ಮರಾಯನಿಗೋ, ಕೌರವನಿಗೋ?

ಮಹಾಭಾರತದ ಶಕುನಿ‌ ನಿಮಗೆ ಗೊತ್ತು. ಕಪಟದ ಜೂಜಾಟ ಆಡಿ ಪಾಂಡವರನ್ನು ಸೋಲಿಸಿದ, ಕುರುಕ್ಷೇತ್ರ ಯುದ್ಧಕ್ಕೆ ಕಾರಣನಾದ ಎಂಬ ಕತೆ ಇದೆ. ಇಲ್ಲಿ ಇವನು ಮೋಸದ ಜೂಜು ಆಡಿ ಸೋಲಿಸಿದ್ದು ಪಾಂಡವರನ್ನು. ಆದರೆ ಅವನ ಒಳ ಉದ್ದೇಶ ಬೇರೆಯೇ ಇತ್ತು. ಅದನ್ನೀಗ ತಿಳಿಯೋಣ.

 

Was Shakuni of Mahabharata was a good character or bad
Author
Bengaluru, First Published Jul 2, 2021, 5:24 PM IST
  • Facebook
  • Twitter
  • Whatsapp

ಮಹಾಭಾರತದ ಶಕುನಿ‌ ನಿಮಗೆ ಗೊತ್ತು. ಕಪಟದ ಜೂಜಾಟ ಆಡಿ ಪಾಂಡವರನ್ನು ಸೋಲಿಸಿದ, ಕುರುಕ್ಷೇತ್ರ ಯುದ್ಧಕ್ಕೆ ಕಾರಣನಾದ ಎಂಬ ಕತೆ ಇದೆ. ಇಲ್ಲಿ ಇವನು ಮೋಸದ ಜೂಜು ಆಡಿ ಸೋಲಿಸಿದ್ದು ಪಾಂಡವರನ್ನು. ಆದರೆ ಅವನ ಒಳ ಉದ್ದೇಶ ಬೇರೆಯೇ ಇತ್ತು. ಅದನ್ನೀಗ ತಿಳಿಯೋಣ.
ಶಕುನಿಯ ತಂದೆ ಸುಬಲ. ಸುಬಲನು ಗಾಂಧಾರ ದೇಶದ ರಾಜನಾಗಿದ್ದ. ಇವನಿಗೆ ನೂರು ಮಕ್ಕಳು. ಕೊನೆಯವನು ಶಕುನಿ. ಅವರಲ್ಲಿ ಒಬ್ಬಳೇ ಹೆಣ್ಣು. ಹೆಸರು ಗಾಂಧಾರಿ. ಇವಳು ಪರಮ ರೂಪವಂತೆ. ಗುಣವಂತೆ. ಈಕೆ ಶಿವಭಕ್ತಳೂ ಹೌದು. ಯವ್ವನದ ವೇಳೆಯಲ್ಲಿ ಈಕೆ ಶಿವನನ್ನು ಕುರಿತು ತಪಸ್ಸು ಮಾಡಿ, ಆತನನ್ನು ಒಲಿಸಿಕೊಂಡು, ತನಗೆ ನೂರು ಮಕ್ಕಳು ಬೇಕು ಎಂಬ ವರವನ್ನು ಪಡೆಯುತ್ತಾಳೆ.

ನಿಮ್ಮ ಜನ್ಮರಾಶಿಯ ಪ್ರಕಾರ ನೀವು ಯಾವ ಪೌರಾಣಿಕ ಪ್ರಾಣಿ ಗೊತ್ತೆ? ...

ಇತ್ತ ಹಸ್ತಿನಾಪುರದಲ್ಲಿ ಧೃತರಾಷ್ಟ್ರನು ಹುಟ್ಟುಕುರುಡ. ಅವನ ತಮ್ಮ ಪಾಂಡು, ಪಾಂಡುರೋಗಿ. ಇನ್ನೊಬ್ಬ ತಮ್ಮ ವಿದುರ ದಾಸಿಪುತ್ರ. ಹಿಂದಿನ ರಾಜಕುಮಾರರಲ್ಲಿ ಪಟ್ಟಕ್ಕೆ ಸರಿಯಾದ ಮಕ್ಕಳಿಲ್ಲ. ಚಕ್ರವರ್ತಿ ಪೀಠವನ್ನು ರಕ್ಷಣೆ ಮಾಡುತ್ತಿದ್ದ ಭೀಷ್ಮಾಚಾರ್ಯರಿಗೆ ಚಿಂತೆ- ಹೀಗೇ ಆದರೆ ಮುಂದೆ ಪಟ್ಟಕ್ಕೆ ಸರಿಯಾದ ಹಕ್ಕುದಾರರು ಸಿಗದೇ ಹೋದರೆ? ಆಗ ಗಾಂಧಾರಿಯ ಚೆಲುವಿಕೆ ಹಾಗೂ ವರದ ಸುದ್ದಿ ಅವನ ಕಿವಿಗೆ ಬಿದ್ದಿತು. ಕೂಡಲೇ ಗಾಂಧಾರಕ್ಕೆ ಬಂದು, ಧೃತರಾಷ್ಟ್ರನಿಗೆ ಗಾಂಧಾರಿಯನ್ನು ನೀಡುವಂತೆ ಸುಬಲನ ಮನ ಒಲಿಸಿದ. ಕುರುಡನಿಗೆ ಮಗಳನ್ನು ಕೊಡಲು ಸುಬಲನಿಗೆ ಎಳ್ಳಷ್ಟೂ ಇಷ್ಟವಿರಲಿಲ್ಲ. ಶಕುನಿಗೂ ಇರಲಿಲ್ಲ. ಆದರೂ ಭೀಷ್ಮನ ಪರಾಕ್ರಮಕ್ಕೆ ಬೆದರಿ ಒಪ್ಪಬೇಕಾಯಿತು. 
ಇನ್ನೂ ಒಂದು ಜನಪದ ಕಥೆಯಿದೆ. ಅದೇನೆಂದರೆ, ಧೃತರಾಷ್ಟ್ರನಿಗೆ ಮಗಳನ್ನು ಕೊಡಲು ಒಪ್ಪದ ಗಾಂಧಾರದ ಮೇಲೆ ಭೀಷ್ಮ ದಂಡೆತ್ತಿ ಹೋಗುತ್ತಾನೆ. ಅಲ್ಲಿ ಸುಬಲನನ್ನೂ ಅವನ ಎಲ್ಲ ನೂರು ಮಕ್ಕಳನ್ನೂ ಸೆರೆಯಲ್ಲಿಟ್ಟು, ಗಾಂಧಾರಿಯನ್ನು ಕರೆತಂದು ಧೃತರಾಷ್ಟ್ರನಿಗೆ ಮದುವೆ ಮಾಡಿಸುತ್ತಾನೆ. ಇತ್ತ ಸೆರೆಮನೆಯಲ್ಲಿ ಸರಿಯಾದ ಆಹಾರ ಗಾಳಿ ಬೆಳಕುಗಳಿಲ್ಲದೆ ಶಕುನಿಯ ಅಣ್ಣಂದಿರು ಒಬ್ಬೊಬ್ಬರೇ ಸಾಯುತ್ತಾರೆ. ಅವರು ತಮ್ಮ ಆಹಾರವನ್ನು ಶಕುನಿಗೆ ಉಳಿಸಿ, ನಮ್ಮ ಸಾವಿಗೆ ಪ್ರತೀಕಾರವನ್ನು ತೀರಿಸಿಕೋ ಎಂದು ಹೇಳಿ ಶಕುನಿಯನ್ನು ಪ್ರತೀಕಾರಕ್ಕೆ ಸಿದ್ಧಪಡಿಸುತ್ತಾರೆ.    

ದ್ರೌಪದಿ ವಸ್ತ್ರಾಪಹರಣ ವಿರೋಧಿಸಿದ ಒಬ್ಬನೇ ಒಬ್ಬ ಕೌರವ ಯಾರು ಗೊತ್ತೆ? ...

ಅವರೆಲ್ಲ ಸತ್ತ ನಂತರ ಶಕುನಿ ಸೆರೆಮನೆಯಿಂದ ಬಿಡಿಸಿಕೊಂಡು ಹಸ್ತಿನಾಪುರಕ್ಕೇ ಬರುತ್ತಾನೆ. ಗಾಂಧಾರಿಯ ಮಗನಾದ ದುರ್ಯೋಧನನನ್ನು ಮರುಳು ಮಾತುಗಳಿಂದ ಒಲಿಸಿಕೊಳ್ಳುತ್ತಾನೆ. ಪಾಂಡವರ ವಿರುದ್ಧ ಎತ್ತಿ ಕಟ್ಟುತ್ತಾನೆ. ಪಾಂಡವರನ್ನು ಉಪಾಯದಿಂದ ಕೊಲ್ಲಲು ಕೌರವನಿಗೆ ಕುತಂತ್ರಗಳನ್ನು ಹೇಳಿ ಕೊಡುತ್ತಿರುತ್ತಾರೆ. ಅದ್ಯಾವುದೂ ಸಫಲವಾಗದೆ ಹೋದಾಗ, ಪಾಂಡವರನ್ನು ಮೋಸದ ಜೂಜಾಟಕ್ಕೆ ಕರೆಯುವಂತೆ ಪ್ರೇರೇಪಿಸುತ್ತಾನೆ. ಹಾಗೇ ಕೌರವ ಅವರನ್ನು ಜೂಜಿಗೆ ಕರೆಯುತ್ತಾನೆ. ಜೂಜಿನಲ್ಲಿ ದುರ್ಯೋಧನನ ಪರವಾಗಿ ಶಕುನಿಯೇ ಆಡುತ್ತಾನೆ. ದಾಳಗಳು ಶಕುನಿ ಹೇಳಿದಂತೆಯೇ ಬೀಳುತ್ತವೆ. ಅದೇಕೆ ಎಂದರೆ, ಆ ದಾಳಗಳು ಶಕುನಿಯ ಸಹೋದರರ ಎಲುಬಿನಿಂದಲೇ ಮಾಡಲ್ಪಟ್ಟುದಾಗಿದ್ದು, ಅವನು ಹೇಳಿದಂತೆಯೇ ಕೇಳುತ್ತವೆ. ಹೀಗೆ ಪಾಂಡವರನ್ನು ಗೆದ್ದ ನಂತರ ದ್ರೌಪದಿಯನ್ನು ಅವಮಾನಿಸುವುದನ್ನೂ ಪ್ರೋತ್ಸಾಹಿಸುತ್ತಾನೆ. ಇದರಿಂದ ರೊಚ್ಚಿಗೆದ್ದ ಭೀಮಾರ್ಜುನ ನಕುಲ ಸಹದೇವರು, ಯುದ್ಧದಲ್ಲಿ ದುರ್ಯೋಧನ- ದುಶ್ಶಾಸನ- ಕರ್ಣ- ಶಕುನಿಯರನ್ನು ಕೊಲ್ಲುವುದಾಗಿ ಪ್ರತಿಜ್ಞೆ ಮಾಡುತ್ತಾರೆ. ಹಾಗೆಯೇ ನಡೆದುಕೊಳ್ಳುತ್ತಾರೆ ಕೂಡ.
 


ಇಷ್ಟೊಂದು ಕುತಂತ್ರ, ಮೋಸವನ್ನು ಮಾಡಿ, ದುರ್ಯೋಧನನನ್ನು ಯುದ್ಧಕ್ಕೆ ಪ್ರೇರೇಪಿಸಿ, ಇಡೀ ಕುರುಕುಲವೇ ನಾಶವಾಗುವಂತೆ ಮಾಡಿದವನು ಶಕುನಿ. ಭೀಷ್ಮರಿಂದ ತನ್ನ ಗಾಂಧಾರ ನಾಶವಾದಂತೆ, ಹಸ್ತಿನಾಪುರದಲ್ಲೂ ರಕ್ತದ ಕೋಡಿ ಹರಿಯಲಿ, ಕುರುವಂಶ ನಾಶವಾಗಲಿ ಎಂಬುದು ಅವನ ಉದ್ದೇಶವಾಗಿತ್ತು ಎಂದೇ ಜನಪದ ಕತೆ ಹೇಳುತ್ತದೆ. ಮುಂದೆ ಇವನೂ ಕುರುಕ್ಷೇತ್ರ ಯುದ್ಧದಲ್ಲಿ ಸಹದೇವನ ಜೊತೆ ಯುದ್ಧ ಮಾಡಿ, ಸಾಯುತ್ತಾನೆ. ಆದರೆ ತನ್ನ ಆಸೆಯನ್ನು ತೀರಿಸಿಕೊಳ್ಳುತ್ತಾನೆ. ಧರ್ಮಾತ್ಮರಾದ ಪಾಂಡವರು ಸೋಲುವುದಿಲ್ಲ ಎಂದು ಆತನಿಗೆ ಗೊತ್ತಿದ್ದೇ ಇತ್ತು. ನಿಜಕ್ಕೂ ಆತ ಮೋಸ ಮಾಡಿದ್ದು ಧರ್ಮರಾಯನಿಗಲ್ಲ, ಕುರುವಂಶಕ್ಕೆ- ದುರ್ಯೋಧನ, ಧೃತರಾಷ್ಟ್ರರಿಗೆ. 

ಯಾವ ರಾಶಿಯವರಿಗೆ ಯಾವ ವೃತ್ತಿಯಲ್ಲಿ ಕೈತುಂಬಾ ಹಣ ಬರುತ್ತೆ? ...
 

Follow Us:
Download App:
  • android
  • ios