ದೇವರು ಎಲ್ಲ ಕಡೆ ಇದ್ದಾನೆ ಅಂತ ಭಕ್ತರು ನಂಬ್ತಾರೆ. ಆದ್ರೂ ನೂಕು ನುಗ್ಗಲಾದ್ರೂ ತೀರ್ಥಯಾತ್ರೆಗೆ ಏಕೆ ಹೋಗ್ತಾರೆ? ಅಲ್ಲಿರುವ ವಿಶೇಷ ಏನು?
ದೇವರು (god) ಎಲ್ಲ ಕಡೆ ಇದ್ದಾನೆ. ಇಲ್ಲೂ ಇದ್ದಾನೆ, ಅಲ್ಲೂ ಇದ್ದಾನೆ, ಈ ಕಂಬದಲ್ಲೂ ಇದ್ದಾನೆ.. ಇದನ್ನು ಓದಿದ್ರೆ ತಕ್ಷಣ ನಮಗೆ ಪ್ರಹ್ಲಾದನ ರೂಪದಲ್ಲಿದ್ದ ಪುನಿತ್ ರಾಜ್ ಕುಮಾರ್ ನೆನಪಿಗೆ ಬರ್ತಾರೆ. ವಿಷ್ಣುವಿನ ಭಕ್ತ ಪ್ರಹ್ಲಾದ, ದೇವರನ್ನು ಕಂಬದೊಳಗೆ ತೋರಿಸಿದ್ದ. ದೇವರು ಎಲ್ಲ ಕಡೆ ಇದ್ದಾನೆ, ನಮ್ಮೊಳಗೂ ಇದ್ದಾನೆ, ನಮ್ಮ ಕೆಲಸದಲ್ಲೂ ಇದ್ದಾನೆ ಅಂತ ಅನೇಕರು ನಂಬ್ತಾರೆ. ದೇವರು ನಮ್ಮ ಬಳಿಯೇ ಇದ್ದಾನೆ ಅಂದ್ಮೇಲೆ ತೀರ್ಥಯಾತ್ರೆಗೆ ಏಕೆ ಹೋಗ್ಬೇಕು? ಪುಣ್ಯ ಸ್ನಾನವನ್ನು ಏಕೆ ಮಾಡ್ಬೇಕು? ಮನೆಯಲ್ಲೇ ದೇವರನ್ನು ಕಲ್ಪಿಸಿಕೊಂಡು ಪೂಜೆ ಮಾಡ್ಬಹುದಲ್ಲ. ಮನೆಯಲ್ಲಿರುವ ನೀರನ್ನೇ ಪವಿತ್ರ ಅಂದ್ಕೊಂಡು ಸ್ನಾನ ಮಾಡ್ಬುದಲ್ಲ. ಅನೇಕರಿಗೆ ಈ ಪ್ರಶ್ನೆ ಬರೋದು ಸಹಜ. ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ (Virat Kohli) ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma)ರ ಗುರು ಪ್ರೇಮಾನಂದ ಜಿ ಮಹಾರಾಜರ ಭಕ್ತರೊಬ್ಬರಿಗೂ ಇದೇ ಪ್ರಶ್ನೆ ಕಾಡಿದೆ. ಅದನ್ನು ಪ್ರೇಮಾನಂದರ ಮುಂದೆ ಇಟ್ಟಿದ್ದಾರೆ. ಭಕ್ತನ ಗೊಂದಲಕ್ಕೆ ಪ್ರೇಮಾನಂದ ಮಹಾರಾಜ ಉತ್ತರ ನೀಡಿದ್ದಾರೆ.
ಮೆಹಂದಿ ಮರದಲ್ಲಿ ಕೆಂಪು ಕಾಣುತ್ತಾ? : ಪ್ರೇಮಾನಂದ ಮಹಾರಾಜರು ಅತ್ಯಂತ ಸರಳವಾಗಿ ಭಕ್ತನ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ. ನೀವು ಮೆಹಂದಿಯನ್ನು ಕೈಗೆ ಹಚ್ಚಿಕೊಂಡಾಗ ಕೈ ಕೆಂಪಾಗುತ್ತದೆ. ಅದೇ ಮೆಹಂದಿ ಗಿಡವನ್ನು ಕಡಿದಾಗ ಕೆಂಪು ಕಾಣಿಸೋದಿಲ್ಲ. ಅದೇ ರೀತಿ, ತೀರ್ಥಯಾತ್ರೆಯು ಆಧ್ಯಾತ್ಮಿಕತೆಯ ಶಕ್ತಿಯಾಗಿದೆ. ಅದು ನಮ್ಮ ಕಣ್ಣಿಗೆ ಕಾಣಿಸೋದಿಲ್ಲ ಎಂದಿದ್ದಾರೆ.
ಪ್ರೇಮಾನಂದ ಮಹಾರಾಜರ ಪ್ರಕಾರ, ಪ್ರತಿಯೊಂದು ತೀರ್ಥಯಾತ್ರೆ ತನ್ನದೇ ಆದ ಮಹತ್ವವನ್ನು ಹೊಂದಿದೆ. ಗಂಗಾ ನದಿಗೆ ಹೋದಾಗ ಆ ಅನುಭವವನ್ನು ನೀವು ಪಡೆಯುತ್ತೀರಿ. ಗಂಗಾ ನದಿಯಲ್ಲಿ ಸ್ನಾನ ಮಾಡಿದಾಗ, ಮನಸ್ಸು ನೆಮ್ಮದಿಯಾಗೋದು ನಿಮ್ಮ ಅನುಭವಕ್ಕೆ ಬರುತ್ತದೆ. ಆದ್ರೆ ನಿಯಮದ ಪ್ರಕಾರ ನೀವು ಸ್ನಾನವನ್ನು ಮಾಡ್ಬೇಕು ಎನ್ನುತ್ತಾರೆ ಪ್ರೇಮಾನಂದ ಮಹಾರಾಜರು. ಪವಿತ್ರ ನದಿಯಲ್ಲಿ ಸ್ನಾನ ಮಾಡಿ ನಿಮ್ಮ ದೇಹ ಹಾಗೂ ಮನಸ್ಸು ಶುದ್ಧವಾಗಬೇಕು, ಶಾಂತಿಯ ಅನುಭವ ನಿಮಗೆ ಆಗಬೇಕು ಅಂದ್ರೆ ನೀವು ಸೋಪ್ ಹಚ್ಚಿ ಸ್ನಾನ ಮಾಡಿ ಅಲ್ಲೇ ಉಗುಳೋದಲ್ಲ. ಗಂಗಾ ನದಿಯಲ್ಲಿ 5 ರಿಂದ 7 ಬಾರಿ ಮುಳುಗಿ ಏಳಬೇಕು. ಗಂಗಾ ನೀರನ್ನು ನಿಮ್ಮ ಹಣೆಯ ಮೇಲೆ ಹಚ್ಚಿ ಸಾಷ್ಟಾಂಗ ನಮಸ್ಕಾರವನ್ನು ಮಾಡಬೇಕು. ನಿಮ್ಮ ಕೆಲಸ ಶುದ್ಧವಾಗಿರಬೇಕು ಎಂದು ಪ್ರೇಮಾನಂದ ಮಹಾರಾಜರು ಹೇಳಿದ್ದಾರೆ. ಅದೇ ವೃಂದಾವನಕ್ಕೆ ಹೋದ್ರೆ ಪರಿಕ್ರಮ ಮಾಡಿ ಮತ್ತು ಬಂಕೆ ಬಿಹಾರಿಯ ದರ್ಶನ ಮಾಡಿ. ಮಂತ್ರವನ್ನು ಜಪಿಸಿ. ಅಲ್ಲಿ ಯಾರು ಏನೇ ಕೊಟ್ಟರೂ ತಿನ್ನಬೇಡಿ. ಕೊನೆಯಲ್ಲಿ ಫಲಿತಾಂಶ ನೋಡಿ. ನಿಮ್ಮ ಮನಸ್ಸು ಎಷ್ಟು ಉಲ್ಲಾಸಿತಗೊಂಡಿರುತ್ತದೆ ಎಂಬುದು ನಿಮ್ಮ ಅನುಭವಕ್ಕೆ ಬರುತ್ತದೆ ಎಂದು ಪ್ರೇಮಾನಂದ ಮಹಾರಾಜ ಹೇಳಿದ್ದಾರೆ. ಈ ಎಲ್ಲಾ ತೀರ್ಥಯಾತ್ರೆಯ ಸ್ಥಳಗಳು ಆಧ್ಯಾತ್ಮಿಕತೆಯ ಬೆಂಬಲವನ್ನು ಪಡೆಯುವ ಸಲುವಾಗಿ ಮಾಡಲಾಗಿದೆ. ಅಲ್ಲಿಗೆ ಹೋಗಿ ಸ್ನಾನ ಮಾಡಿ ಪೂಜೆ ಮಾಡಿದಾಗ ನಾವು ಮಾಡಿದ ತಪ್ಪುಗಳು ಮತ್ತು ಪಾಪಗಳು ಅಳಿಸಿ
ಹೋಗುತ್ತವೆ. ತೀರ್ಥಯಾತ್ರೆಯ ಸ್ಥಳಗಳಿಗೆ ಹೋಗುವುದರಿಂದ ನಾವು ಶುದ್ಧವಾಗುತ್ತೇವೆ. ಪ್ರತಿಯೊಂದು ತೀರ್ಥಸ್ಥಳಕ್ಕೆ ಹೋಗುವ ಮುನ್ನ ನೀವು ಒಂದು ದಿನ ಉಪವಾಸ ಮಾಡಬೇಕು. ಒಂದು ಸ್ಥಳದಲ್ಲಿ ಮೂರು ದಿನ ಉಳಿದುಕೊಳ್ಳುವವರಾಗಿದ್ದರೆ ಒಂದು ದಿನ ಉಪವಾಸ ಮಾಡಿ. ಇನ್ನೊಂದು ದಿನ ಫಲಾಹಾರ ಸೇವನೆ ಮಾಡಬೇಕು. ಮೂರನೇ ದಿನ ಅನ್ನಹಾರ ಸೇವನೆ ಮಾಡಿ, ಕಷ್ಟವನ್ನು ಎದುರಿಸಿದಾಗ್ಲೇ ಮುಂದಿನ ದಿನಗಳು ಸುಖಕರವಾಗಿರುತ್ತವೆ ಎಂದು ಪ್ರೇಮಾನಂದ ಮಹಾರಾಜರು ಹೇಳಿದ್ದಾರೆ.
