ವರಮಹಾಲಕ್ಷ್ಮಿ ಹಬ್ಬ: ಚಿನ್ನಾಭರಣ ಫೋಟೋ ಶೇರ್ ಮಾಡುವ ಮುನ್ನ ಎಚ್ಚರ!
ವರಮಹಾಲಕ್ಷ್ಮಿ ಹಬ್ಬದಂದು ಲಕ್ಷ್ಮಿ ದೇವಿಯನ್ನು ಅಲಂಕರಿಸಿದ ಚಿನ್ನಾಭರಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮುನ್ನ ಎಚ್ಚರವಹಿಸುವಂತೆ ಬೆಂಗಳೂರು ಪೊಲೀಸರು ಸೂಚಿಸಿದ್ದಾರೆ.
ಬೆಂಗಳೂರು (ಆ.16): ವರ ಮಹಾಲಕ್ಷ್ಮಿ ಹಬ್ಬದಲ್ಲಿ ಲಕ್ಷ್ಮಿಯನ್ನು ಚಿನ್ನಾಭರಣಗಳಿಂದ ಅಲಂಕಾರ ಮಾಡಿ ಇನ್ಸ್ಟಾಗ್ರಾಂ , ಫೇಸ್ ಬುಕ್ ಶೇರ್ ಮಾಡುವ ಮುನ್ನ ಎಚ್ಚರವಾಗಿರಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಾದ್ಯಂತ ವರಮಹಾಲಕ್ಷ್ಮೀ ಹಬ್ಬದ ನಿಮಿತ್ತ ಮನೆಯಲ್ಲಿ ಕೂರಿಸುವ ಲಕ್ಷ್ಮೀ ದೇವಿಯ ಮೈ ಮೇಲೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನ ಹಾಕಿ, ಗರಿ ಗರಿ ಎನ್ನುವ ನೋಟುಗಳ ಕಂತೆಯನ್ನು ದೇವರ ಮುಂದಿಟ್ಟು ಪೂಜೆ ಮಾಡುವುದಕ್ಕೆ ಬೇಡ ಎನ್ನುವುದಿಲ್ಲ. ಹೀಗೆ ಅದ್ಧೂರಿಯಾಗಿ ಅಲಂಕಾರ ಮಾಡಿ ವಿಜೃಂಭಣೆಯಿಂದ ಹಬ್ಬ ಮಾಡಿದ ನಂತರ ಅದನ್ನು ನೆನಪಿನಲ್ಲಿ ಒಟ್ಟುಕೊಳ್ಳುವುದಕ್ಕೆ ಫೋಟೋ ಮತ್ತು ವಿಡಿಯೋಗಳನ್ನು ಮಾಡುವುದು ಸಾಮಾನ್ಯ. ಆದರೆ, ಈ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮುನ್ನ ಎಚ್ಚರವಾಗಿರಿ ಎಂದು ಪೊಲೀಸರು ಸೂಚನೆ ನೀಡಿದ್ದಾರೆ.
ನಗರದಲ್ಲಿ ಕಳ್ಳತನ, ಕಾಡಿನಲ್ಲಿ ವಾಸ: ಐನಾತಿ ಕಳ್ಳನ ಬಂಧನ
ಇದೇಕೆ ಫೋಟೋ ಶೇರ್ ಮಾಡಬಾರದು ಗೊತ್ತಾ.?
ಅದ್ಧೂರಿಯಾಗಿ ಪೂಜೆ ಮಾಡಿದ ವೇಳೆ ಫೋಟೋ ಮತ್ತು ವಿಡಿಯೋ ಮಾಡಿಕೊಂಡಲ್ಲಿ ನಿಮ್ಮ ಮನೆಯಲ್ಲಿ ಯಾವಾವ ಆಭರಣಗಳಿವೆ? ಎಷ್ಟು ಮೌಲ್ಯದ ಆಭರಣಗಳು ಇವೆ? ಪ್ರಸ್ತುತ ಎಷ್ಟು ಹಣ ನಿಮ್ಮ ಮನೆಯಲ್ಲಿದೆ ಎಂಬುದು ಕಳ್ಳರಿಗೂ ಕೂಡ ನೋಡಲು ಅನುಕೂಲ ಆಗುತ್ತದೆ. ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ರೀಲ್ಸ್, ಫೇಸ್ ಬುಕ್ ರೀಲ್ಸ್ ಹಾಗೂ ಇತರೆ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಫೋಟೋ ಮತ್ತು ವಿಡಿಯೋಗಳನ್ನು ನೋಡಿ ನಿಮ್ಮ ಮನೆಯಲ್ಲಿ ಕಳ್ಳತನ ಮಾಡಲು ಬರಬಹುದು. ಈ ಹಿನ್ನೆಲೆಯಲ್ಲಿ ನೀವು ಎಚ್ಚರಿಕೆಯಿಂದ ಇರಿ. ವರಮಹಾಲಕ್ಷ್ಮಿ ಹಬ್ಬದ ಫೊಟೋಗಳನ್ನು ಹಂಚಿಕೊಳ್ಳದಿರುವುದೇ ಉತ್ತಮ ಎಂದು ಪೊಲೀಸರು ಸಲಹೆ ನಿಡಿದ್ದಾರೆ.
ಪೂಜೆಯ ವೇಲೆ ಅಪರಿಚಿತರ ಪ್ರವೇಶ ಬೇಡ:
ವರ ಮಹಾಲಕ್ಷ್ಮಿ ಹಬ್ಬದ ವೇಳೆ ಅರಿಶಿಣ, ಕುಂಕುಮಕ್ಕೆ ಮಹಿಳೆಯನ್ನು ಕರೆಯುವುದು ಸಾಮಾನ್ಯ. ಈ ವೇಳೆ ಲಕ್ಷ್ಮೀ ದೇವಿಯ ಮೇಲೆ ಚಿನ್ನಾಭರಣ ಮತ್ತು ಮುಂದೆ ಹಣವನ್ನು ಇಟ್ಟು ಪೂಜೆ ಮಾಡಿರುವುದು ನಿಮ್ಮ ಮನೆಗೆ ಬರುವ ಅತಿಥಿಗಳ ಕಣ್ಣಿಗೂ ಬೀಳುತ್ತದೆ. ಇಂತಹ ಸಂದರ್ಭಗಳನ್ನೇ ದುರುಪಯೋಗ ಮಾಡಿಕೊಳ್ಳುವ ಕೆಲವರು ನಿಮ್ಮ ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಣವನ್ನೂ ಕದಿಯಬಹುದು. ಆದ್ದರಿಂದ ವರ ಮಹಾಲಕ್ಷ್ಮಿ ಹಬ್ಬದ ವೇಳೆ ನಿಮ್ಮ ಮನೆಗೆ ಬರುವ ಎಲ್ಲರ ಮೇಲೂ ಗಮನವಿರಲಿ. ಯಾರೇ ಅಪರಿಚಿತರನ್ನು ಮನೆಯೊಳಗೆ ಬಿಟ್ಟುಕೊಳ್ಳಬೇಡಿ. ಒಂದು ವೇಳೆ ಅಪರಿಚಿತರು ಬಂದಲ್ಲಿ ಅವರನ್ನು ಪ್ರಶ್ನೆ ಮಾಡಿ, ಪೂರ್ವಾಪರ ವಿಚಾರಿಸಿ. ಒಂದು ವೇಳೆ ಅವರ ಮೇಲೆ ಅನುಮಾನ ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.
ಬೆಂಗಳೂರು: ಇನ್‌ಸ್ಟಾಗ್ರಾಂ ಗೆಳೆಯನ ಮಾತು ನಂಬಿ 1.21 ಕೋಟಿ ಕಳೆದುಕೊಂಡ ಯುವಕ..!
ಜೀವಮಾನವಿಡೀ ನೀವು ದುಡಿದು ಕಷ್ಟಪಟ್ಟು ಸಂಪದಾನೆ ಮಾಡಿದ ಹಣ ಮತ್ತು ಖರೀದಿಸಿದ ಆಭರಣಗಳನ್ನು ತೋರ್ಪಡಿಕೆ ಮಾಡಿ ಕಳ್ಳರ ಪಾಲಾಗುವಂತೆ ಮಾಡಬೇಡಿ. ನೀವು ಪೂಜೆ ಮಾಡಿದ ವೇಳೆ ಲಕ್ಷ್ಮೀಯನ್ನು ಕೂರಿಸಿ ರಾತ್ರಿ ಹಾಗೆಯೇ ಬಿಟ್ಟಲ್ಲಿ ಕಿಟಕಿಗಳು ಹಾಗೂ ಕಿಂಡಿಗಳು ಇಲ್ಲದಂತೆ ಎಚ್ಚರಿಕೆವಹಿಸಿ. ನೀವು ಮಲಗಿದಾಗ ಕಿಟಕಿಗಳು ಅಥವಾ ಕಿಂಡಿಗಳು ಇದ್ದಲ್ಲಿ ಅಲ್ಲಿಂದ ಕಳ್ಳರು ದೇವರ ಮೇಲಿರುವ ಆಭರಣ ಮತ್ತು ಹಣವನ್ನು ಕದಿಯುವ ಸಾಧ್ಯತೆಯೂ ಇರಲಿದೆ. ಹೀಗಾಗಿ, ಕಿಟಕಿ ಮತ್ತು ಬಾಗಿಲನ್ನು ಭದ್ರವಾಗಿ ಮುಚ್ಚಿಕೊಳ್ಳಬೇಕು ಎಂದು ಪೊಲೀಸರು ಸೂಚನೆ ನಿಡಿದ್ದಾರೆ.