Bagalkote: ದೇವಿಯ ಹೆಸರಲ್ಲಿ ತಲೆಗೆ ತೆಂಗಿನಕಾಯಿ ಒಡೆದುಕೊಳ್ತಾರೆ: ಇದು ದುರ್ಗಾದೇವಿ ವಿಶೇಷ ಜಾತ್ರೆ!
ಇಂದು ಆಧುನಿಕ ಯುಗ, ವಿಜ್ಞಾನ, ತಂತ್ರಜ್ಞಾನ ಅದೆಷ್ಟೇ ಮುಂದುವರೆದರೂ ಕೂಡಾ ಗ್ರಾಮೀಣ ಭಾಗದಲ್ಲಿ ಸಂಪ್ರದಾಯಗಳಿಗೆ ಮಾತ್ರ ಕೊನೆ ಇಲ್ಲ. ಸಾಲದ್ದಕ್ಕೆ ದೈವತ್ವದಲ್ಲಿ ನಂಬಿಕೆ ಇಟ್ಟಿರೋ ಭಕ್ತ ಸಮೂಹದಿಂದ ಅಚ್ಚರಿಯ ಆಚರಣೆಗಳು ಸಹ ಇಂದಿಗೂ ನಡೆಯುತ್ತಿವೆ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಜೂ.02): ಇಂದು ಆಧುನಿಕ ಯುಗ, ವಿಜ್ಞಾನ, ತಂತ್ರಜ್ಞಾನ ಅದೆಷ್ಟೇ ಮುಂದುವರೆದರೂ ಕೂಡಾ ಗ್ರಾಮೀಣ ಭಾಗದಲ್ಲಿ ಸಂಪ್ರದಾಯಗಳಿಗೆ ಮಾತ್ರ ಕೊನೆ ಇಲ್ಲ. ಸಾಲದ್ದಕ್ಕೆ ದೈವತ್ವದಲ್ಲಿ ನಂಬಿಕೆ ಇಟ್ಟಿರೋ ಭಕ್ತ ಸಮೂಹದಿಂದ ಅಚ್ಚರಿಯ ಆಚರಣೆಗಳು ಸಹ ಇಂದಿಗೂ ನಡೆಯುತ್ತಿವೆ. ಇದಕ್ಕೆ ಸಾಕ್ಷಿಯಾಗೋದು ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದ ದುರ್ಗಾದೇವಿ ಜಾತ್ರೆಯಲ್ಲಿ ನಡೆಯುವ ಅರ್ಚಕರಿಂದ ತಲೆಗೆ ತೆಂಗಿನಕಾಯಿಗಳನ್ನ ಒಡೆಯುವ ಪದ್ದತಿ.
ಹೌದು! ಪ್ರತಿವರ್ಷದಂತೆ ಈ ವರ್ಷವೂ ಸಹ ಕಲಾದಗಿ ಗ್ರಾಮದಲ್ಲಿ ಸಂಭ್ರಮದಿಂದ ದುರ್ಗಾದೇವಿಯ ಜಾತ್ರೆಯನ್ನ ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಯಿತು. ದುರ್ಗಾದೇವಿ ಜಾತ್ರೆಯ ನಿಮಿತ್ಯ ಬೆಳಿಗ್ಗಿನಿಂದಲೇ ಭಕ್ತರು ದೇವಿ ಗುಡಿಗೆ ಆಗಮಿಸಿ ವಿಶೇಷ ಪೂಜೆ ಪುನಸ್ಕಾರದಲ್ಲಿ ಬ್ಯೂಸಿಯಾಗಿದ್ದು ಕಂಡು ಬಂತು. ಇನ್ನು ದುರ್ಗಾದೇವಿ ಜಾತ್ರೆಯ ನಿಮಿತ್ಯ ಗ್ರಾಮದ ತುಂಬೆಲ್ಲಾ ಭಂಡಾರವನ್ನ ಎರಚುತ್ತಾ ಭಕ್ತರು ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಎಲ್ಲೆಲ್ಲೂ ಡೊಳ್ಳು ಕುಣಿತ ಸೇರಿದಂತೆ ವಿವಿಧ ವಾದ್ಯಗಳ ಮಜಲಿನೊಂದಿಗೆ ಅಪಾರ ಭಕ್ತರು ಸೇರಿ ದುರ್ಗಾದೇವಿ ಜಾತ್ರೆಯಲ್ಲಿ ತಲ್ಲೀನರಾಗಿದ್ದರು.
ಬಾಗಲಕೋಟೆ: ಕುಡಿವ ನೀರಿನ ಮೂಲಕ್ಕೆ ವೆಟ್‌ವೆಲ್ ಕೊಳೆ?
ತಲೆಗೆ ತೆಂಗಿನಕಾಯಿ ಒಡೆದುಕೊಳ್ಳುವ ಅರ್ಚಕರು: ದುರ್ಗಾದೇವಿಗೆ ನಡೆಯುವ ಜಾತ್ರೆ ದಿನದಂದು ಕಲಾದಗಿ ಗ್ರಾಮದಲ್ಲಿ ಎಲ್ಲೆಲ್ಲೂ ಹಬ್ಬವೋ ಹಬ್ಬದ ವಾತಾವರಣ. ಅಂದು ಎಲ್ಲರಿಗೂ ಅಚ್ಚರಿಗೆ ಕಾರಣವಾಗೋದು ದೇವಿ ಎದುರು ಅರ್ಚಕರು ತಲೆಗೆ ತೆಂಗಿನಕಾಯಿ ಒಡೆದುಕೊಳ್ಳುವ ಸಂಪ್ರದಾಯದ ಪದ್ದತಿ. ಹೌದು. ದುರ್ಗಾದೇವಿ ಗುಡಿಯ ಎದುರು 25 ರಿಂದ 30 ತೆಂಗಿನಕಾಯಿಗಳನ್ನ ಗುಂಪಾಗಿ ಹಾಕಲಾಗುತ್ತದೆ. ಈ ಮಧ್ಯೆ ಇಡೀ ಊರಿನ ದೈವವೇ ದೇಗುಲದ ಹತ್ತಿರ ಸೇರುತ್ತದೆ. ಮೊದಲ ಹಿರಿಯ ಅರ್ಚಕರು ದೇವಿಗೆ ದೀಪಾರತಿ ಬೆಳಗಿ ಬಳಿಕ ತೆಂಗಿನಕಾಯಿ ಒಡೆದುಕೊಳ್ಳಲು ಅಣಿಯಾಗುತ್ತಾರೆ.
ಅದರಲ್ಲಿ ಮುಖ್ಯವಾಗಿ ಅರ್ಚಕರಾಗಿರುವ ದಲ್ಲಪ್ಪ ಮತ್ತು ನಾಗಪ್ಪ ಎಂಬುವವರು ಈ ತೆಂಗಿನಕಾಯಿಗಳನ್ನ ತಲೆಗೆ ಒಡೆದುಕೊಳ್ಳಲು ಮುಂದಾಗುತ್ತಾರೆ. ಅವರು ಕಾಯಿಗಳನ್ನ ತಲೆಗೆ ಒಡೆದುಕೊಳ್ಳುವಾಗ ಎಲ್ಲರೂ ಶಾಂತಚಿತ್ತರಾಗಿ ಕುಳಿತು ದೇವಿಯ ಮೊರೆ ಹೋಗಿ ಅತ್ಯಂತ ಶೃದ್ದಾಭಕ್ತಿಯಿಂದ ಅರ್ಚಕರು ತಲೆಗೆ ತೆಂಗಿನಕಾಯಿ ಒಡೆದುಕೊಳ್ಳುವುದನ್ನು ವೀಕ್ಷಿಸುತ್ತಾರೆ. ಅಚ್ಚರಿಯ ಸಂಗತಿ ಅಂದ್ರೆ ಕಳೆದ 28 ವರ್ಷಗಳಿಂದ ತಲೆಗೆ ತೆಂಗಿನಕಾಯಿ ಒಡೆದುಕೊಳ್ಳುವ ಸಂಪ್ರದಾಯ ನಡೆದಿದ್ದರೂ ಯಾವ ವರ್ಷವೂ ಅರ್ಚಕರ ತಲೆಗೆ ಗಾಯಗಳಾಗದೇ ಇರೋದು ಒಂದು ವಿಶೇಷವಾಗಿದೆ. ಯಾಕಂದ್ರೆ ಅಂತಹವೊಂದು ನಂಬಿಕೆ ಇಲ್ಲಿದೆ. ಏನೇ ಆದರೂ ದೇವಿ ನಮ್ಮನ್ನು ರಕ್ಷಣೆ ಮಾಡುತ್ತಾಳೆ ಅನ್ನೋ ನಂಬಿಕೆ ಇಲ್ಲಿದೆ. ಹೀಗಾಗಿ ಪ್ರತಿವರ್ಷವೂ ತಲೆಗೆ ತೆಂಗಿನಕಾಯಿ ಒಡೆದುಕೊಳ್ಳುವ ಸಂಪ್ರದಾಯ ಇಲ್ಲಿ ನಡೆಯುತ್ತೆ.
ದುರ್ಗಾ ದೇವಿ ಜಾತ್ರೆಯಲ್ಲಿ ಭಕ್ತರ ಇಷ್ಟಾರ್ಥ ಸಿದ್ದಿಯಂತೆ ದೇವಿಗೆ ಹರಕೆ: ಇನ್ನು ಕಲಾದಗಿ ಗ್ರಾಮದಲ್ಲಿ ನಡೆಯುವ ಜಾತ್ರೆಯ ದಿನ ಭಕ್ತರು ತಮ್ಮ ವಿಶೇಷ ಇಷ್ಠಾರ್ಥ ಸಿದ್ದಿಯಾದ ಪ್ರಯುಕ್ತ ದೇವಿಗೆ ವಿಶೇಷ ಹರಕೆಗಳನ್ನ ಸಲ್ಲಿಸುತ್ತಾರೆ. ಅಂದರೆ ವರ್ಷದಲ್ಲಿ ತಮಗೆ ಮಕ್ಕಳಿಲ್ಲದವರಿಗೆ ಮಕ್ಕಳಾದರೆ, ನೌಕರಿ ಇಲ್ಲದವರಿಗೆ ನೌಕರಿಯಾದರೆ, ವ್ಯಾಜ್ಯಗಳು ಬಗೆ ಹರಿದರೆ ಹೀಗೆ ವಿಭಿನ್ನವಾಗಿ ಭಕ್ತರು ತಮ್ಮ ಬೇಡಿಕೊಂಡ ಇಷ್ಟಾರ್ಥ ಈಡೇರಿದರೆ ಅದರ ಪ್ರಯುಕ್ತ ಜಾತ್ರೆಯ ದಿನ ಹರಕೆ ಈಡೇರಿಸುತ್ತಾರೆ. ಕೆಲವರು ವಿಶೇಷ ಪೂಜೆ ಮೂಲಕ ಮಾಡಿದರೆ ಇನ್ನೂ ಕೆಲವರು ದೀರ್ಘ ದಂಡ ನಮಸ್ಕಾರ ಸೇರಿದಂತೆ ಬೇರೆ ಬೇರೆ ರೂಪದಲ್ಲಿ ಹರಕೆಯನ್ನ ತೀರಿಸಲು ಮುಂದಾಗುತ್ತಾರೆ.
'ಆರ್‌ಎಸ್‌ಎಸ್ ಟೀಕಿಸೋದನ್ನ ಸಿದ್ದರಾಮಯ್ಯ ನಿಲ್ಲಿಸದಿದ್ದರೆ ಪರಿಸ್ಥಿತಿ ಸರಿಯಿರಲ್ಲ'
ದುರ್ಗಾದೇವಿ ಜಾತ್ರೆಗೆ ರಾಜ್ಯ ಹೊರರಾಜ್ಯಗಳಿಂದ ಭಕ್ತರ ದಂಡು: ದುರ್ಗಾದೇವಿ ಜಾತ್ರೆ ಅಂದರೆ ಸಾಕು ರಾಜ್ಯವಲ್ಲದೆ ಹೊರರಾಜ್ಯಗಳಿಂದಲೂ ಸಹ ಭಕ್ತರ ದಂಡು ಇಲ್ಲಿ ಆಗಮಿಸುತ್ತದೆ. ಮುಖ್ಯವಾಗಿ ಹುಬ್ಬಳ್ಳಿ, ಧಾರವಾಡ, ಗದಗ ಸೇರಿದಂತೆ ಸೋಲ್ಹಾಪೂರ, ಕೋಲ್ಹಾಪೂರ ಹೀಗೆ ರಾಜ್ಯ ಹೊರರಾಜ್ಯಗಳಿಂದಲೂ ಸಹ ಭಕ್ತರು ಈ ಜಾತ್ರೆಗೆ ಬರುತ್ತಾರೆ. ಯಾಕಂದರೆ ಅಂತಹ ನಂಬಿಕೆ ಇರೋದೆ ಇಲ್ಲಿನ ವಿಶೇಷ.