'ಆರ್‌ಎಸ್‌ಎಸ್ ಟೀಕಿಸೋದನ್ನ ಸಿದ್ದರಾಮಯ್ಯ ನಿಲ್ಲಿಸದಿದ್ದರೆ ಪರಿಸ್ಥಿತಿ ಸರಿಯಿರಲ್ಲ'
* ಮಾಜಿ ಸಿಎಂ ಸಿದ್ದರಾಮಯ್ಯಗೆ ಮತಿಭ್ರಮಣೆ
* ಅಲ್ಪಸಂಖ್ಯಾತರ ತುಷ್ಟೀಕರಣ, ಓಲೈಕೆ ಬಹಳ ದಿನ ನಡೆಯಲ್ಲ
* ಹಿಂದೂತ್ವ ವಿರೋಧಿಸುವುದೇ ಸೆಕ್ಯುಲರ್ ಅಲ್ಲ
ಬಾಗಲಕೋಟೆ(ಜೂ.01): ಅಲ್ಪಸಂಖ್ಯಾತರ ತುಷ್ಟೀಕರಣ ಹಾಗೂ ಓಲೈಕೆ ರಾಜಕಾರಣದಲ್ಲಿ ತೇಲಾಡುತ್ತಿರುವ ಸಿದ್ದರಾಮಯ್ಯನವರಿಗೆ ಬಹುಶಃ ಮತಭ್ರಮಣೆಯಾಗಿದೆ. ಅಲ್ಪಸಂಖ್ಯಾತರ ತುಷ್ಟೀಕರಣ, ಓಲೈಕೆ ಬಹಳ ದಿನ ನಡೆಯುವುದಿಲ್ಲ ಎಂದು ಬಾಗಲಕೋಟೆ ಬಿಜೆಪಿಯ ಜಿಲ್ಲಾ ಘಟಕದ ಪದಾಧಿಕಾರಿಗಳು ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಬಿಜೆಪಿಯ ಜಿಲ್ಲಾ ಮಾಧ್ಯಮ ವಕ್ತಾರ ಸತ್ಯನಾರಾಯಣ ಹೇಮಾದ್ರಿ, ಉಪಾಧ್ಯಕ್ಷರಾದ ರಾಜು ರೇವಣಕರ, ಜಿಲ್ಲಾ ಕಾರ್ಯದರ್ಶಿ ರಾಜು ನಾಯ್ಕರ ಅವರು ಮಾತನಾಡಿ ದೇಶಭಕ್ತಿಗೆ ಮೊತ್ತೊಂದು ಹೆಸರೇ ಅರ್‌ಎಸ್‌ಎಸ್. ಅಂಥ ಸಂಘಟನೆಯನ್ನು ವಾಚಾಮಗೋಚರವಾಗಿ ಟೀಕಿಸುವುದನ್ನೇ ಬಹಳ ಜಾಣತನವೆಂದು ತಿಳಿದುಕೊಂಡಿರುವ ಸಿದ್ದರಾಮಯ್ಯನವರ ನಡೆಯನ್ನು ಖಂಡಿಸುವುದಾಗಿ ತಿಳಿಸಿದರು.
Karnataka Politics: ಮುಸ್ಲಿಮರ ರಾಜಕೀಯ ನರಮೇಧಕ್ಕೆ ಸಿದ್ದು ರಣತಂತ್ರ: ಎಚ್‌ಡಿಕೆ
ಆರ್‌ಎಸ್‌ಎಸ್ ಭಾರತದ ಮೂಲದ್ದಲ್ಲಾ ಆರ್ಯರಿಂದ ಬಂದದ್ದು, ಅಪಘಾನಿಸ್ತಾನದಿಂದ ಬಂದದ್ದು ಎಂದು ಏನೇನೋ ಮಾತನಾಡಿ ಮುಂದುವರಿದು ನಪುಂಸಕ ಎಂಬ ಹೀನಾಯವಾದ ಶಬ್ದ ಪದಪ್ರಯೋಗ ಮಾಡಿರುವ ಸಿದ್ದರಾಮಯ್ಯ ಅವರೇ ನಿಮ್ಮ ಕಾಂಗ್ರೆಸ್ ಪಕ್ಷದ ಸಂಸ್ಥಾಪಕರ ಮೂಲವೇನಾದರೂ ಗೊತ್ತೇ? ಈಗಿನ ನಿಮ್ಮ ಪಕ್ಷದ ಅನಾಯಕಿಯ ಮೂಲ ಯಾವುದು ಗೊತ್ತೇ? ಸ್ವಲ್ಪ ತಿಳಿದುಕೊಂಡು ಮಾತನಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಈ ಪುಣ್ಯಭೂಮಿಯಲ್ಲಿ 1925ರ ಯುಗಾದಿಯಂದು ಡಾ.ಕೇಶವ ಹೆಡಗೆವಾರರವರು ಆರಂಭಿಸಿದರು. ನಂತರ ದ್ವಿತೀಯ ಸರಸಂಘ ಚಾಲಕ ಪ್ರಾತಃಸ್ಮರಣೀಯ ಗುರೂಜಿ (ಗೋಳವಲಕರ) ರವರು ಆದಿಯಾಗಿ ಇವತ್ತಿನ ಸರಸಂಘಚಾಲಕ ಮೋಹನಜಿ ಭಾಗವತವರೆಗೆ ಯಾರೂ ವಿದೇಶಿಗರಾಗಿರದೇ ಭಾರತ ಮಾತೆಯ ಹೆಮ್ಮೆಯ ಸುಪುತ್ರರೆಂದು ಸಿದ್ದರಾಮಯ್ಯನವರಿಗೆ ತಿಳಿಯದೇ ಇರುವುದು ದುರ್ದೈವ. ಸಮಾಜವಾದಿ ಎಂದು ಹೇಳುತ್ತಾ ವಾಸ್ತವದಲ್ಲಿ ಮಜಾವಾದಿ ಆಗಿರುವ ಸಿದ್ದರಾಮಯ್ಯ ಮೂಲತಃ ಪ್ರಬಲ ಜಾತಿವಾದಿ ಆಗಿದ್ದಾರೆ ಎಂದು ಹೇಳಿದರು.
ದಲಿತರ ಬಗ್ಗೆ ಕಾಳಜಿ ಇದ್ದಿದ್ರೆ ಖರ್ಗೆರನ್ನ ಯಾಕೆ ಸಿಎಂ ಮಾಡಲಿಲ್ಲ? ಸಿದ್ದುಗೆ ಬಿ.ಸಿ. ಪಾಟೀಲ್ ಪ್ರಶ್ನೆ
ಲಿಂಗಾಯತ ಧರ್ಮ ಒಡೆಯಲು ಹೊರಟು ಅದರ ಫಲ ಉಂಡಾದ ಮೇಲೂ ಸಿದ್ದರಾಮಯ್ಯನವರಿಗೆ ಬುದ್ಧಿ ಬರದೇ ಇದ್ದುದು ಅವರ ದೌರ್ಭಾಗ್ಯ. ಗೋಹತ್ಯಾ ನಿಷೇಧ ಕಾನೂನು, ದೇವಸ್ಥಾನಗಳ ಸ್ವಾಯತ್ತತೆ ಕಾನೂನು, ಮತಾಂತರ ನಿಷೇಧ ಕಾನೂನು, ವಿರೋಧಿಸುತ್ತ, ನಾನು ಹಿಂದೂತ್ವದ ವಿರೋಧಿ, ನಾನೊಬ್ಬ ಸೆಕ್ಯೂಲರ್ ಎನ್ನುತ್ತಾರೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಈ ಸೆಕ್ಯೂಲರ್ ಪದವೇ ಇರಲಿಲ್ಲ. 1975ರ ತುರ್ತು ಪರಿಸ್ಥಿತಿಯಲ್ಲಿ ಅವಕಾಶವಾದಿ ರಾಜಕಾರಣದ ಭಾಗವಾಗಿ ಸೆಕ್ಯೂಲರ್ ಶಬ್ದವನ್ನು ಸಂವಿಧಾನದಲ್ಲಿ ಸೇರಿಸಲಾಯಿತು ಎಂದು ತಿಳಿಸಿದರು.
ಹಿಂದೂತ್ವ ವಿರೋಧಿಸುವುದೇ ಸೆಕ್ಯುಲರ್ ಅಲ್ಲ
ಕೇವಲ ಆರ್‌ಎಸ್‌ಎಸ್ ಹಾಗೂ ಹಿಂದೂತ್ವ ವಿರೋಧಿಸುವುದೊಂದೇ ಸೆಕ್ಯುಲರ್ ಅಂದುಕೊಂಡಿರುವ ಸಿದ್ದರಾಮಯ್ಯನವರು ಕಾಂಗ್ರೆಸ್ ಅವನತಿಗೆ ಕಾರಣರಾಗುತ್ತಿದ್ದಾರೆ. ಆರ್ಯ, ದ್ರಾವಿಡ ಪದಗಳಿಂದ ಆರ್‌ಎಸ್‌ಎಸ್ ವಿರೋಧಿಸುತ್ತಾ ಬ್ರಿಟಿಷ ಅಧಿಕಾರಿಯಾಗಿದ್ದ ಮೆಕಾಲೆಯ ವಾರಸುದಾರನಂತೆ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ. ಸಿದ್ದರಾಮಯ್ಯನವರು ಆರ್‌ಎಸ್‌ಎಸ್ ಟೀಕಿಸುವುದನ್ನು ಬಿಟ್ಟು ವಿರೋಧ ಪಕ್ಷದ ಒಬ್ಬ ಸಕಾರಾತ್ಮಕ ನಾಯಕನಾಗಿ ಬಿಜೆಪಿಯನ್ನು, ಬಿಜೆಪಿ ಸರ್ಕಾರವನ್ನು ವಿರೋಧಿಸಲಿ, ಟೀಕಿಸಲಿ, ಪ್ರಶ್ನಿಸಲಿ ಅದನ್ನು ಬಿಟ್ಟು ಸುಖಾಸುಮ್ಮನೇ ಆರ್‌ಎಸ್‌ಎಸ್ ಟೀಕಿಸುವುದನ್ನು ಸಿದ್ದರಾಮಯ್ಯನವರು ನಿಲ್ಲಿಸದಿದ್ದರೆ ಪರಿಸ್ಥಿತಿ ಸರಿಯಾಗಿರುವುದಿಲ್ಲ ಎಂದು ಹೇಮಾದ್ರಿ ಎಚ್ಚರಿಸಿದರು.